ಬೆಂಗಳೂರು: ಖ್ಯಾತ ಕನ್ನಡ ಚಿತ್ರನಟ ದಿವಂಗತ ಟಿ.ಎನ್. ಬಾಲಕೃಷ್ಣ ಅವರಿಗೆ ಸ್ಟುಡಿಯೋ ನಿರ್ಮಾಣಕ್ಕಾಗಿ ಮಂಜೂರು ಮಾಡಿದ್ದ ಭೂಮಿಯ ಷರತ್ತುಗಳನ್ನು ಉಲ್ಲಂಘಿಸಲಾಗಿದೆ. ಈ ಭೂಮಿಯನ್ನು ಅರಣ್ಯ ಇಲಾಖೆಗೆ ಮರಳಿಸುವಂತೆ ಕಂದಾಯ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ್ ಬಿ. ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ವಿಕಾಸಸೌಧದಲ್ಲಿ ಡಾ. ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರಿಂದ ವಿಷ್ಣುವರ್ಧನ್ ಸ್ಮಾರಕಕ್ಕೆ ಸಂಬಂಧಿಸಿದ ಮನವಿ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಈಶ್ವರ್ ಬಿ. ಖಂಡ್ರೆ, ಮೈಲಸಂದ್ರ ಗ್ರಾಮದ ಸರ್ವೆ ನಂ. 26ರಲ್ಲಿ 62 ಎಕರೆ 20 ಗುಂಟೆ ಭೂಮಿಯನ್ನು 1935ರಲ್ಲಿ ಮೈಸೂರು ಸರ್ಕಾರ ‘ತುರಹಳ್ಳಿ ರಾಜ್ಯ ಅರಣ್ಯ’ ಎಂದು ಘೋಷಿಸಿ ಅಧಿಸೂಚನೆ ಹೊರಡಿಸಿತ್ತು ಎಂದು ತಿಳಿಸಿದರು.
1980ರ ಅರಣ್ಯ ಸಂರಕ್ಷಣಾ ಕಾಯಿದೆ ಜಾರಿಗೆ ಬರುವ ಮುನ್ನ, ಈ ಅರಣ್ಯ ಭೂಮಿಯಲ್ಲಿ 20 ಎಕರೆಯನ್ನು 1969ರಲ್ಲಿ ಟಿ.ಎನ್. ಬಾಲಕೃಷ್ಣ ಅವರಿಗೆ ಸ್ಟುಡಿಯೋ ನಿರ್ಮಾಣಕ್ಕಾಗಿ ಷರತ್ತುಬದ್ಧವಾಗಿ ಮಂಜೂರು ಮಾಡಲಾಗಿತ್ತು. ಒಂದು ಎಕರೆಗೆ 300 ರೂಪಾಯಿಗಳಂತೆ ಒಟ್ಟು 6,000 ರೂಪಾಯಿಗಳಿಗೆ ಈ ಭೂಮಿ ನೀಡಲಾಗಿತ್ತು ಎಂದು ಸಚಿವ ಈಶ್ವರ್ ಬಿ. ಖಂಡ್ರೆ ಹೇಳಿದರು.
2003ರಲ್ಲಿ ಬಾಲಕೃಷ್ಣ ಅವರ ಮಕ್ಕಳು ಸರ್ಕಾರದ ಅನುಮತಿ ಪಡೆದು 10 ಎಕರೆ ಭೂಮಿಯನ್ನು ಮಾರಾಟ ಮಾಡಿದ್ದರು. ಮಾರಾಟಕ್ಕೆ ಅನುಮತಿ ನೀಡುವಾಗಲೂ ಸ್ಟುಡಿಯೋ ಅಭಿವೃದ್ಧಿಗೆ ಹಣ ಬಳಸುವಂತೆ ಷರತ್ತು ವಿಧಿಸಲಾಗಿತ್ತು. ಆದರೆ, ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಬದಲಿಗೆ, ಉಳಿದ 10 ಎಕರೆಯನ್ನೂ ಮಾರಾಟಕ್ಕೆ ಮುಂದಾಗಿರುವುದು ಷರತ್ತುಗಳ ಉಲ್ಲಂಘನೆಯಾಗಿದ್ದು, ಈ ಭೂಮಿಯನ್ನು ಅರಣ್ಯ ಇಲಾಖೆಗೆ ಮರಳಿಸುವಂತೆ ಕಂದಾಯ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಸಚಿವ ಈಶ್ವರ್ ಬಿ. ಖಂಡ್ರೆ ತಿಳಿಸಿದರು.
ಈ ಭೂಮಿ ಮರಳಿ ಬಂದರೆ ಅಲ್ಲಿ ಸಸ್ಯೋದ್ಯಾನ ನಿರ್ಮಾಣ ಮಾಡಲಾಗುವುದು ಎಂದು ಸಚಿವ ಖಂಡ್ರೆ ತಿಳಿಸಿದರು. ಬೆಂಗಳೂರು ನಗರ ವಿಸ್ತರಣೆಯಿಂದ ಶ್ವಾಸತಾಣಗಳ ಅಗತ್ಯ ಹೆಚ್ಚಿದ್ದು, ಈ ಉದ್ಯಾನ ನಿರ್ಮಾಣದಿಂದ ಪರಿಸರ ಸಂರಕ್ಷಣೆಗೆ ಸಹಾಯವಾಗಲಿದೆ ಎಂದರು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠ ಮೇ 15ರಂದು ಕಂದಾಯ ಇಲಾಖೆಯಲ್ಲಿರುವ ಅರಣ್ಯ ಭೂಮಿಯನ್ನು ಅನ್ಯ ಉದ್ದೇಶಕ್ಕೆ ಬಳಸುತ್ತಿದ್ದರೆ ಪರಿಶೀಲನೆಗೆ ವಿಶೇಷ ತಂಡ ರಚಿಸುವಂತೆ ಸೂಚಿಸಿದೆ ಎಂದು ಸಚಿವ ಖಂಡ್ರೆ ತಿಳಿಸಿದರು.
ಡಾ. ವಿಷ್ಣುವರ್ಧನ್ ಸ್ಮಾರಕಕ್ಕೆ ಭೂಮಿ ನೀಡುವ ಬಗ್ಗೆ ಕೇಳಿದ ಪ್ರಶ್ನೆಗೆ, ಮುಖ್ಯಮಂತ್ರಿ ಮತ್ತು ಸರ್ಕಾರ ನಿಯಮಾನುಸಾರ ತೀರ್ಮಾನ ಕೈಗೊಳ್ಳಲಿದೆ ಎಂದು ಈಶ್ವರ್ ಖಂಡ್ರೆ ಉತ್ತರಿಸಿದರು.