ಬೆಂಗಳೂರು: 30×40 ಸೈಟ್‌ನಲ್ಲಿ ನಿರ್ಮಾಣಗೊಂಡ ಮೂರು ಅಂತಸ್ತಿನ ಕಟ್ಟಡಗಳಿಗೆ ಸ್ವಾಧಿನಾನುಭವ ಪ್ರಮಾಣಪತ್ರ (ಓಸಿ) ವಿನಾಯಿತಿ ನೀಡುವ ಪ್ರಸ್ತಾವನೆಯನ್ನು ನಗರಾಭಿವೃದ್ಧಿ ಇಲಾಖೆಯು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಈ ತೀರ್ಮಾನವು ಲಕ್ಷಾಂತರ ಕಟ್ಟಡ ಮಾಲೀಕರಿಗೆ ದೊಡ್ಡ ರಿಲೀಫ್ ತಂದಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರಯತ್ನಕ್ಕೆ ಯಶಸ್ಸು ಸಿಕ್ಕಂತಾಗಿದೆ.
ಸುಪ್ರೀಂ ಕೋರ್ಟ್‌ನ ಆದೇಶದಂತೆ, ಕಟ್ಟಡ ನಿರ್ಮಾಣ ಪ್ರಮಾಣಪತ್ರ (ಸಿಸಿ) ಮತ್ತು ಓಸಿ ಇಲ್ಲದ ಕಟ್ಟಡಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಲ್ಪಿಸದಂತೆ ತಡೆಯಲಾಗಿತ್ತು. ಇದರಿಂದ ಬೆಂಗಳೂರಿನ ಸಾವಿರಾರು ಮನೆಗಳ ಮಾಲೀಕರು ತೊಂದರೆಗೆ ಸಿಲುಕಿದ್ದರು. ಓಸಿ ಇಲ್ಲದ ಕಾರಣ ಬೆಂಗಳೂರು ಜಲಮಂಡಳಿಯಿಂದ ನೀರಿನ ಸಂಪರ್ಕಕ್ಕೆ ದಂಡ ಸಹ ವಿಧಿಸಲಾಗುತ್ತಿತ್ತು. ಈ ಸಮಸ್ಯೆಗೆ ಪರಿಹಾರವಾಗಿ, 1,200 ಚದರಡಿ (30×40) ನಿವೇಶನದ ಮೂರು ಅಂತಸ್ತಿನ ಕಟ್ಟಡಗಳಿಗೆ ಓಸಿ ವಿನಾಯಿತಿ ನೀಡಲು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಕಾಯ್ದೆ ತಿದ್ದುಪಡಿಗೆ ಪ್ರಸ್ತಾವನೆ:
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ-2024, ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆ-1976, ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗಳ ಮಾದರಿ ಕಟ್ಟಡ ಬೈಲಾಗಳ ತಿದ್ದುಪಡಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ತಿದ್ದುಪಡಿಯ ಮೂಲಕ 30×40 ನಿವೇಶನದ ಕಟ್ಟಡಗಳಿಗೆ ಓಸಿ ಅಗತ್ಯವಿಲ್ಲದಂತೆ ನಿಯಮ ರೂಪಿಸಲಾಗುವುದು. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಡಿಸಿಎಂ, ಕಾನೂನು, ನಗರಾಭಿವೃದ್ಧಿ, ಕಂದಾಯ, ಇಂಧನ, ಪೌರಾಡಳಿತ, ಮತ್ತು ಕೈಗಾರಿಕೆ ಸಚಿವರೊಂದಿಗೆ ನಡೆದ ಸಭೆಯಲ್ಲಿ ಎಲ್ಲಾ ಕಾಯ್ದೆಗಳಲ್ಲಿ ಸಮಾನಾಂತರ ಅವಕಾಶ ಕಲ್ಪಿಸಬೇಕೆಂದು ಒಮ್ಮತದ ಅಭಿಪ್ರಾಯ ವ್ಯಕ್ತವಾಗಿತ್ತು.
ಮಾದರಿ ಕಟ್ಟಡ ಬೈಲಾ (ಎಂಬಿಬಿ) ತಿದ್ದುಪಡಿ:
ಸ್ಥಳೀಯ ಸಂಸ್ಥೆಗಳಲ್ಲಿ ಸಿಸಿ ಮತ್ತು ಓಸಿ ವಿತರಣೆಗೆ ಸಂಬಂಧಿಸಿದಂತೆ ಮಾದರಿ ಕಟ್ಟಡ ಬೈಲಾ (ಎಂಬಿಬಿ) ಅಸ್ತಿತ್ವದಲ್ಲಿದೆ. ಈ ಬೈಲಾಗಳಿಗೂ ತಿದ್ದುಪಡಿ ತರಲು ಆಯಾ ಇಲಾಖೆ ಸಚಿವರ ಸಲಹೆಯನ್ನು ಪಡೆದು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಜುಲೈ 3ರಂದು ನಡೆದ ಸಿಎಂ, ಡಿಸಿಎಂ, ಮತ್ತು ಪ್ರಮುಖ ಇಲಾಖೆ ಸಚಿವರ ಸಭೆಯಲ್ಲಿ ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿ ಎಲ್ಲ ಕಾಯ್ದೆಗಳಲ್ಲಿ ಸಮಾನ ಅವಕಾಶ ಕಲ್ಪಿಸುವ ಸಲಹೆ ಬಂದಿತ್ತು. ಈ ಆಧಾರದ ಮೇಲೆ ತಿದ್ದುಪಡಿಗೆ ನಿರ್ಧಾರ ಕೈಗೊಳ್ಳಲಾಗಿದೆ.