‘ಅಪ್ಪುಕಪ್‌’ ನಲ್ಲಿ ಸಿನಿರಸಿಕರ ಮನ ಗೆಲ್ಲಲಿದೆ ‘ಯುವರತ್ನ ಚಾಂಪಿಯನ್ಸ್‌’ ತಂಡ

111 (33)

ಬೆಂಗಳೂರು: ದಿವಂಗತ ನಟ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಸ್ಮರಣಾರ್ಥ ಆಯೋಜಿಸುವ ʼಅಪ್ಪುಕಪ್‌ ಸೀಸನ್‌ 3ʼರ ಪಂದ್ಯಾವಳಿಗಳು ಇದೇ ವಾರಾಂತ್ಯದಲ್ಲಿ ಆರಂಭಗೊಳ್ಳಲಿದೆ. ತೆರೆ ಮೇಲೆ ಕಂಗೊಳಿಸುವ ತಾರೆಯರು ರಾಕೆಟ್‌ ಹಿಡಿದು ಬ್ಯಾಡ್ಮಿಂಟನ್‌ ಅಂಗಳದಲ್ಲಿ ಭರ್ಜರಿ ಪ್ರದರ್ಶನ ತೋರಲು ಸಜ್ಜಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ʼಯುವರತ್ನ ಚಾಂಪಿಯನ್ಸ್‌ʼ ತಂಡವು ಭರ್ಜರಿಯಾಗಿ ಸಿದ್ಧತೆಯನ್ನು ನಡೆಸಿದೆ.

ADVERTISEMENT
ADVERTISEMENT

ಇಂದು ನಗರದ ಕರ್ನಾಟಕ ರಾಜ್ಯ ಬಿಲಿಯರ್ಡ್ಸ್‌ ಅಸೋಸಿಯೇಷನ್‌ನಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ʼಯುವರತ್ನ ಚಾಂಪಿಯನ್ಸ್‌ʼ ತಂಡದ ಮುಂದಾಳತ್ವವನ್ನು ವಹಿಸಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಈ ಕುರಿತು ಮಾತನಾಡಿ, ಮುಂಬರುವ ಅಪ್ಪು ಕಪ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲು ನಮ್ಮ ತಂಡ ಅತ್ಯಂತ ಶ್ರದ್ಧೆಯಿಂದ ಸಿದ್ಧತೆಯನ್ನು ನಡೆಸುತ್ತಿದೆ. ಯುವರತ್ನ ತಂಡವು ಹಿಂದೆಯೂ ಉತ್ತಮ ಪ್ರದರ್ಶನ ನೀಡಿದೆ ಅದೇ ರೀತಿ ಮುಂಬರುವ ಟೂರ್ನಿಗಾಗಿ ನಾವು ಮಾನಸಿಕ ಮತ್ತು ದೈಹಿಕವಾಗಿ ತರಬೇತಿ ಪಡೆದಿದ್ದು, ಯಶಸ್ಸನ್ನು ಕಾಣಲು ಸಿದ್ಧರಾಗಿದ್ದೇವೆ ಎಂದರು.

ಯುವರತ್ನ ತಂಡದಲ್ಲಿ ಮಹೇಶ್, ಸಿದ್ಧೇಶ್, ಮಂಜು, ಸ್ಪೂರ್ತಿ, ಕಾರ್ತಿಕ್ (ನಿರ್ದೇಶಕ), ರಂಜನ್, ಅರ್ಪಿತಾ ಗೌಡ, ರಿತ್ವಿ ಜಗದೀಶ್, ಹರಿ, ಲಾವಣ್ಯ, ಮತ್ತು ಐಶ್ವರ್ಯ ಸೇರಿದಂತೆ ಇನ್ನೂ ಹಲವಾರು ಕಲಾವಿದರಿದ್ದಾರೆ. ಅವರ ಪಾಲ್ಗೊಳ್ಳುವಿಕೆಯಿಂದ ತಂಡ ಬಲಿಷ್ಟವಾಗಿದೆ ಮತ್ತು ನಮ್ಮ ತಂಡವು ರಾಜ್ಯದಾದ್ಯಂತ ಅಭಿಮಾನಿಗಳನ್ನು ಸೆಳೆಯುವ ನಿರೀಕ್ಷೆಯಿದೆ ಎಂದು ಲಂಕೇಶ್‌ ಅವರು ತಿಳಿಸಿದರು.

ಇಂದಿನ ಅಭ್ಯಾಸ ಪಂದ್ಯಕ್ಕೆ ʼಯುವರತ್ನ ಚಾಂಪಿಯನ್ಸ್‌ʼ ತಂಡವನ್ನು ಹುರಿದುಂಬಿಸಲು ಆಗಮಿಸಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಅವರು ಪಂದ್ಯಾವಳಿಯಲ್ಲಿ ಭಾಗವಹಿಸುವ ಸ್ಪರ್ಧಿಗಳನ್ನು ಭೇಟಿ ಮಾಡಿ ಶುಭ ಹಾರೈಸಿದರು. ಈ ವೇಳೆ ಸಚಿವರಾದ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಅವರ ಮಾಧ್ಯಮ ಸಲಹೆಗಾರರಾದ ಲಕ್ಷ್ಮೀ ನಾರಾಯಣ್ ಅವರೂ ಉಪಸ್ಥಿತರಿದ್ದರು.

ಯುವರತ್ನ ತಂಡದ ಮಾಲೀಕತ್ವವನ್ನು ಮೀಡಿಯಾ ಕನೆಕ್ಟ್ ಸಂಸ್ಥೆಯ ಸಂಸ್ಥಾಪಕಿ ಹಾಗೂ ಸಿಇಒ ಡಾ. ದಿವ್ಯಾ ರಂಗೇನಹಳ್ಳಿ ಮತ್ತು ಹರ್ಷ ವಹಿಸಿಕೊಂಡಿದ್ದರು. ಶೀಘ್ರದಲ್ಲಿ ಪಂದ್ಯ ಆರಂಭಗೊಳ್ಳಲಿದ್ದು, ಕ್ರೀಡಾಪಟುಗಳು ಹೆಚ್ಚು ಉತ್ಸಾಹದಿಂದ ಕಾಯುತ್ತಿದ್ದಾರೆ. ʼಅಪ್ಪು ಕಪ್‌ʼ ಟೂರ್ನಿಯು ಸಿನಿ ರಸಿಕರಿಗೆ ಹಬ್ಬವನ್ನುಂಟು ಮಾಡುವುದರಲ್ಲಿ ಎರಡು ಮಾತಿಲ್ಲ ಎಂದು ಅವರು ಹೇಳಿದರು.

Exit mobile version