ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಬಿಡುಗಡೆಗೂ ಮುನ್ನವೇ ಭಾರೀ ವಿವಾದಗಳಲ್ಲಿ ಸಿಲುಕಿದ್ದು, ಇದೀಗ ಈ ಚಿತ್ರದ ಟೀಸರ್ ವಿರುದ್ಧ ಮಕ್ಕಳ ಹಕ್ಕುಗಳ ಆಯೋಗಕ್ಕೆ ಅಧಿಕೃತ ದೂರು ಸಲ್ಲಿಕೆಯಾಗಿದೆ. ಟೀಸರ್‌ನಲ್ಲಿ ಅಶ್ಲೀಲ ಹಾಗೂ ಬೋಲ್ಡ್ ದೃಶ್ಯಗಳು ಇದ್ದು, ಇದು ಮಕ್ಕಳ ಮಾನಸಿಕ ಸ್ವಾಸ್ಥ್ಯಕ್ಕೆ ಹಾನಿ ಉಂಟುಮಾಡುವ ಸಾಧ್ಯತೆ ಇದೆ ಎಂದು ಆರೋಪಿಸಿ ಹೈಕೋರ್ಟ್ ವಕೀಲ ಹನುಮಂತ ಲೋಹಿನಾಪುರ ಅವರು ಆಯೋಗದ ಮೆಟ್ಟಿಲೇರಿದ್ದಾರೆ.
ಟಾಕ್ಸಿಕ್ ಚಿತ್ರದ ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, 24 ಗಂಟೆಗಳೊಳಗೆ 200 ಮಿಲಿಯನ್ ವೀಕ್ಷಣೆ ಗಳಿಸುವ ಮೂಲಕ ದಾಖಲೆ ಬರೆದಿತ್ತು. ಆದರೆ ಅದೇ ಸಮಯದಲ್ಲಿ ಟೀಸರ್‌ನಲ್ಲಿರುವ ಕೆಲವು ದೃಶ್ಯಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ.
ಟೀಸರ್‌ನಲ್ಲಿ ಬಳಸಿರುವ ದೃಶ್ಯಗಳು ಯಾವುದೇ ವಯೋಮಿತಿಯ ಎಚ್ಚರಿಕೆ ಇಲ್ಲದೆ ಸಾರ್ವಜನಿಕವಾಗಿ ಪ್ರದರ್ಶಿಸಲಾಗಿದ್ದು, ಮಕ್ಕಳು ಹಾಗೂ ವಿದ್ಯಾರ್ಥಿಗಳ ಮೇಲೆ ಕೆಟ್ಟ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ದೂರುದಾರರು ತಿಳಿಸಿದ್ದಾರೆ. “ಕುಟುಂಬದೊಂದಿಗೆ ಕೂತು ವೀಕ್ಷಿಸಲು ಅಸಾಧ್ಯವಾದಂತಹ ದೃಶ್ಯಗಳು ಟೀಸರ್‌ನಲ್ಲಿ ಇವೆ. ಸಮಾಜಕ್ಕೆ, ವಿಶೇಷವಾಗಿ ಮಕ್ಕಳಿಗೆ ಯಾವ ಸಂದೇಶ ನೀಡಲು ಪ್ರಯತ್ನಿಸುತ್ತಿದ್ದಾರೆ?” ಎಂದು ವಕೀಲ ಹನುಮಂತ ಲೋಹಿನಾಪುರ ಪ್ರಶ್ನಿಸಿದ್ದಾರೆ.
ಈ ವಿಚಾರವನ್ನು ಮುಂದಿಟ್ಟುಕೊಂಡು ಕೆಲ ದಿನಗಳ ಹಿಂದೆಯೇ ವಕೀಲರೊಬ್ಬರು ಸಾರ್ವಜನಿಕವಾಗಿ ಟೀಸರ್ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಆ ವಿವಾದ ಇನ್ನಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಆಮ್ ಆದ್ಮಿ ಪಕ್ಷ (AAP) ಕೂಡ ಟಾಕ್ಸಿಕ್ ಟೀಸರ್ ವಿರುದ್ಧ ಕಿಡಿಕಾರಿದೆ. ಆಪ್‌ನ ಮಹಿಳಾ ಘಟಕದ ಕಾರ್ಯಕರ್ತರು ಟೀಸರ್‌ನಲ್ಲಿರುವ ಅಶ್ಲೀಲ ದೃಶ್ಯಗಳನ್ನು ತಕ್ಷಣವೇ ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ರಾಜ್ಯ ಮಹಿಳಾ ಕಾರ್ಯದರ್ಶಿ ಉಷಾ ಮೋಹನ್ ಮಾತನಾಡಿ, “ಯಶ್ ಅವರಂತಹ ಖ್ಯಾತ ನಟರು ಸಮಾಜಕ್ಕೆ ಮಾದರಿಯಾಗಬೇಕು. ಆದರೆ ಇಂತಹ ದೃಶ್ಯಗಳ ಮೂಲಕ ತಪ್ಪು ಸಂದೇಶ ನೀಡುತ್ತಿರುವುದು ಬೇಸರದ ಸಂಗತಿ. ಮಹಿಳೆಯರ ಘನತೆಗೂ, ಸಾಮಾಜಿಕ ಸ್ವಾಸ್ಥ್ಯಕ್ಕೂ ಧಕ್ಕೆ ಉಂಟುಮಾಡುವ ದೃಶ್ಯಗಳನ್ನು ನಾವು ಖಂಡಿಸುತ್ತೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಿಳಾ ಘಟಕದ ಸದಸ್ಯರು ರಾಜ್ಯ ಮಹಿಳಾ ಆಯೋಗದ ಕಚೇರಿಗೆ ಭೇಟಿ ನೀಡಿ, ಟಾಕ್ಸಿಕ್ ಚಿತ್ರದ ಟೀಸರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ. ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ಸಾರ್ವಜನಿಕ ವೇದಿಕೆಗಳಲ್ಲಿ ಬಿಡುಗಡೆಯಾಗಿರುವ ಈ ದೃಶ್ಯಗಳು ಕನ್ನಡ ಸಂಸ್ಕೃತಿ ಹಾಗೂ ಮೌಲ್ಯಗಳಿಗೆ ಅವಮಾನವಾಗಿದೆ ಎಂಬ ಆರೋಪವೂ ಕೇಳಿಬರುತ್ತಿದೆ.
ಟಾಕ್ಸಿಕ್ ಚಿತ್ರವು ಭಾರೀ ನಿರೀಕ್ಷೆ ಹುಟ್ಟಿಸಿದ್ದರೂ, ಅದರ ಟೀಸರ್ ಇದೀಗ ವಿವಾದದಲ್ಲಿ ಸಿಲುಕಿದೆ. ಮಕ್ಕಳ ಹಕ್ಕುಗಳ ಆಯೋಗ ಹಾಗೂ ಮಹಿಳಾ ಆಯೋಗ ಈ ಕುರಿತು ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದು ಕಾದು ನೋಡಬೇಕಾಗಿದೆ.
