ರಿಯಲ್ ಲೈಫ್‌ನಲ್ಲೂ ಒಂದಾದ ರಾಣವ್-ರಾಧಾ: ನಿಶ್ಚಿತಾರ್ಥ ಫೋಟೋ ವೈರಲ್‌

Untitled design 2026 02 28T105044.447

ಕನ್ನಡ ಟಿವಿ ಲೋಕದಲ್ಲಿ ಮತ್ತೊಂದು ಹಾಟ್ ಸುದ್ದಿ ಹೊರಬಿದ್ದಿದೆ. ಅಮೃತಧಾರೆ ಧಾರಾವಾಹಿ ಮೂಲಕ ಮನೆಮಾತಾದ ರಾಣವ್ ಗೌಡ ಮತ್ತು ರಾಧಾ ಭಗವತಿ ಇದೀಗ ನಿಜ ಜೀವನದಲ್ಲೂ ಒಂದಾಗಲು ಮೊದಲ ಹೆಜ್ಜೆ ಇಟ್ಟಿದ್ದಾರೆ. ಅಭಿಮಾನಿಗಳು ‘ಜೆಡಿ–ಮಲ್ಲಿ’ ಎಂದು ಕರೆಯುತ್ತಿದ್ದ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ರಾಣವ್ ಗೌಡ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನಿಶ್ಚಿತಾರ್ಥದ ಫೋಟೋ ಹಂಚಿಕೊಂಡು ‘Finally’ ಎಂಬ ಒಂದೇ ಪದದ ಕ್ಯಾಪ್ಶನ್ ನೀಡಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು, ಅಭಿಮಾನಿಗಳು ಹಾಗೂ ಕಲಾವಿದರು ಹಾರೈಕೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

‘ಅಮೃತಧಾರೆ’ಯಲ್ಲಿ ಜಯದೇವ್ ದಿವಾನ್ (ಜೆಡಿ) ಪಾತ್ರದಲ್ಲಿ ಕಾಣಿಸಿಕೊಂಡ ರಾಣವ್ ಗೌಡ ಹಾಗೂ ಮಲ್ಲಿ ಪಾತ್ರದಲ್ಲಿ ನಟಿಸಿದ್ದ ರಾಧಾ ಭಗವತಿ ಅವರ ನಡುವೆ ಧಾರಾವಾಹಿ ಚಿತ್ರೀಕರಣದ ಸಮಯದಲ್ಲೇ ಆತ್ಮೀಯತೆ ಬೆಳೆದಿತ್ತು ಎನ್ನಲಾಗುತ್ತಿದೆ. ಪರದೆಯ ಮೇಲೆ ಇವರಿಬ್ಬರ ಜೋಡಿ ಅಪಾರ ಜನಪ್ರಿಯತೆ ಪಡೆದಿತ್ತು. ಇದೀಗ ಆ ಪ್ರೇಮ ಕಥೆ ನಿಜ ಜೀವನದಲ್ಲೂ ಸಾರ್ಥಕವಾಗಿದೆ.

ರಾಧಾ ಭಗವತಿ ಬಳಿಕ ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಪೋಷಕ ಪಾತ್ರವನ್ನು ಬಿಟ್ಟು, ನಾಯಕಿಯಾಗಿ ಅವಕಾಶ ಸ್ವೀಕರಿಸಿದ್ದ ಅವರು ತಮ್ಮ ಅಭಿನಯದಿಂದಲೇ ಹೊಸ ಅಭಿಮಾನಿಗಳನ್ನು ಗಳಿಸಿದ್ದಾರೆ.

ರಾಣವ್ ಗೌಡನ ವೃತ್ತಿಜೀವನ

ರಾಣವ್ ಗೌಡ ‘ಅಮೃತಧಾರೆ’ಯಲ್ಲಿಯೇ ಪ್ರಮುಖ ಪಾತ್ರದಲ್ಲಿ ಮುಂದುವರಿದಿದ್ದಾರೆ. ಜೊತೆಗೆ ಜೀ ವಾಹಿನಿಯ ಮತ್ತೊಂದು ಧಾರಾವಾಹಿಯಾದ ಶುಭಸ್ಯ ಶೀಘ್ರಂ ನಲ್ಲಿ ಕೂಡ ಅಭಿನಯಿಸುತ್ತಿದ್ದಾರೆ. ಅವರ ನಟನೆಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಇದೀಗ ವೈಯಕ್ತಿಕ ಜೀವನದಲ್ಲಿಯೂ ಹೊಸ ಅಧ್ಯಾಯ ಆರಂಭಿಸಿದ್ದಾರೆ.

ಕಲಾ ಹಿನ್ನಲೆಯ ರಾಧಾ

ರಾಧಾ ಭಗವತಿ ಮೂಲತಃ ವಿಜಯಪುರದವರು. ಅವರ ಕುಟುಂಬದಲ್ಲೇ ಕಲಾ ಪರಂಪರೆ ಇದೆ. ತಾತ ರಂಗಭೂಮಿ ಕಲಾವಿದರಾಗಿದ್ದು, ಹರಿಕಥೆ ದಾಸರೂ ಆಗಿದ್ದರು. ತಾಯಿ ಜಾನಪದ ಗಾಯಕಿ. ಹೀಗಾಗಿ ರಾಧಾಗೆ ಬಾಲ್ಯದಿಂದಲೇ ಕಲೆಯ ನಂಟು ಬೆಳೆದಿತ್ತು.

ನಟಿ ಮಾತ್ರವಲ್ಲ, ಅವರು ಹಿನ್ನೆಲೆ ಗಾಯಕಿಯೂ ಹೌದು. ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಹಾಡುಗಳನ್ನು ಹಾಡಿ ರೀಲ್ಸ್ ಹಂಚಿಕೊಳ್ಳುತ್ತಿರುತ್ತಾರೆ. ಅಭಿನಯಕ್ಕೂ ಮುನ್ನ ಅವರು ರಾಮಾಚಾರಿ ಧಾರಾವಾಹಿಯಲ್ಲಿ ಶೃತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕೂ ಮುನ್ನ ‘ಉಘೇ ಉಘೇ ಮಹಾದೇಶ್ವರ’ ಧಾರಾವಾಹಿಯಲ್ಲೂ ಅಭಿನಯಿಸಿದ್ದರು.

 ‘ಅಪಾಯವಿದೆ ಎಚ್ಚರಿಕೆ’ ಸಿನಿಮಾದಲ್ಲಿಯೂ ಅಭಿನಯಿಸಿರುವ ರಾಧಾ ತಮ್ಮ ಪ್ರತಿಭೆಯಿಂದಲೇ ಗುರುತಿಸಿಕೊಂಡಿದ್ದಾರೆ.

ಶುಭಾಶಯಗಳ ಮಹಾಪೂರ

ಈ ಜೋಡಿಯ ನಿಶ್ಚಿತಾರ್ಥ ಸುದ್ದಿಗೆ ನಟಿ ಸುಜಾತಾ ಅಕ್ಷಯ್ ಸೇರಿದಂತೆ ಅನೇಕ ಕಲಾವಿದರು ಹಾಗೂ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸಿದ್ದಾರೆ. “ಜೆಡಿ–ಮಲ್ಲಿ ಕೊನೆಗೂ ಒಂದಾದರು”, “ಈ ಜೋಡಿ ತುಂಬಾ ಚೆನ್ನಾಗಿದೆ”, “ದೇವರು ಒಳ್ಳೆಯದನ್ನೇ ಮಾಡಲಿ” ಎಂಬ ಕಾಮೆಂಟ್‌ಗಳು ಹರಿದು ಬರುತ್ತಿವೆ.

Exit mobile version