“ಬೆಳ್ಳಿತೆರೆಯ ಮೇಲೆ ರಾಕಿ ಭಾಯ್ ಅಬ್ಬರಿಸಿದರೆ ಜಗತ್ತೇ ಜೈಕಾರ ಹಾಕುತ್ತೆ. ಆದ್ರೆ ಅದೇ ರಾಕಿ ಭಾಯ್ ತೆರೆಮೇಲೆ ರಾವಣನಾಗಿ ಜಟಾಯು ಪಕ್ಷಿಯನ್ನು ಕೊಂದಿದ್ದಕ್ಕೆ ಸ್ವತಃ ಅವರ ಪುಟ್ಟ ಮಗನೇ ಅಪ್ಪನ ಮೇಲೆ ಬೇಸರವಾಗಿ ಕಣ್ಣೀರು ಹಾಕಿದ್ದಾನೆ. ಯೆಸ್, ‘ರಾಮಾಯಣ’ ಚಿತ್ರದ ವರ್ಲ್ಡ್ ಪ್ರೀಮಿಯರ್ನಲ್ಲಿ ಯಶ್ ಮಗ ಯಥರ್ವ್ ಬಿಕ್ಕಿ ಬಿಕ್ಕಿ ಅತ್ತ ಘಟನೆ ಈಗ ಸಾಯಿಪಲ್ಲವಿ ಹೇಳಿದ್ದಾರೆ. ‘ಸಿನಿಮಾ ಆದ್ರೂ ಸರಿ ಅಪ್ಪಾ, ನೀನು ರಾವಣ ಆಗಬಾರದಿತ್ತು ಅಂತ ಯಥರ್ವ್ ಹೇಳಿರೋ ಈ ಸ್ವಾರಸ್ಯಕರ ರಿಯಲ್ ಕಥೆಯ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.
- ರಾವಣನಾಗಿ ಯಶ್ ಎಂಟ್ರಿ.. ಮಗನ ಕಣ್ಣಲ್ಲಿ ನೀರು
- ಜಟಾಯುವನ್ನು ಕೊಂದ ರಾವಣನಿಗೆ ಯಥರ್ವ್ ಪಾಠ
- ಯಶ್ ಅಭಿನಯದ ಬಗ್ಗೆ ಮಗನಿಂದ ಅನ್ಫಿಲ್ಟರ್ಡ್ ರಿವ್ಯೂ
- ರಾಮಾಯಣ ಪ್ರೀಮಿಯರ್ನ ಇಂಟರೆಸ್ಟಿಂಗ್ ಘಟನೆಗೆ ಸಾಯಿ ಪಲ್ಲವಿ ಸಾಕ್ಷಿ
ನವೆಂಬರ್ 5ರ ದೀಪಾವಳಿ ಧಮಾಕಾಗೆ ಸಜ್ಜಾಗಿರುವ ನಿತೀಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾದ ಗ್ರಾಂಡ್ ಪ್ರೀಮಿಯರ್ ಶೋ ಇತ್ತೀಚೆಗಷ್ಟೇ ಲಾಸ್ ಏಂಜಲೀಸ್ನ ಅಕಾಡೆಮಿ ಮ್ಯೂಸಿಯಂನಲ್ಲಿ ಅದ್ದೂರಿಯಾಗಿ ನಡೆದಿದೆ. ಈ ರೆಡ್ ಕಾರ್ಪೆಟ್ ಈವೆಂಟ್ನಲ್ಲಿ ನಟ ಯಶ್ ತಮ್ಮ ಧರ್ಮಪತ್ನಿ ರಾಧಿಕಾ ಪಂಡಿತ್ ಹಾಗೂ ಮಕ್ಕಳಾದ ಆಯಿರಾ ಮತ್ತು ಯಥರ್ವ್ ಜೊತೆ ಭಾಗವಹಿಸಿದ್ದರು. ವಿಶೇಷ ಎಂದರೆ, ಯಶ್ ಮಕ್ಕಳಿಗಿಡೀ ಜೀವನದಲ್ಲೇ ಥಿಯೇಟರ್ನಲ್ಲಿ ಸಿನಿಮಾ ನೋಡಿದ ಮೊದಲ ಅನುಭವ ಇದಾಗಿತ್ತು. ಬಿಗ್ ಸ್ಕ್ರೀನ್ ಮೇಲೆ ತಮ್ಮ ಪ್ರೀತಿಯ ಅಪ್ಪ ರಾವಣನಾಗಿ ಎಂಟ್ರಿ ಕೊಟ್ಟಾಗ ಮಕ್ಕಳು ಸಂಭ್ರಮಿಸಿದರೂ, ಆ ಕ್ಷಣದಲ್ಲೇ ಒಂದು ಅನಿರೀಕ್ಷಿತ ಟ್ವಿಸ್ಟ್ ಎದುರಾಯಿತು.
ಸಿನಿಮಾದ ಅತ್ಯಂತ ಪ್ರಮುಖ ಹಾಗೂ ಭೀಕರ ಸನ್ನಿವೇಶದಲ್ಲಿ ರಾವಣನಾಗಿ ನಟಿಸಿರುವ ಯಶ್, ಸೀತೆಯನ್ನು ಅಪಹರಿಸಿ ಒಯ್ಯುವಾಗ ತಡೆಯಲು ಬರುವ ಜಟಾಯು ಪಕ್ಷಿಯ ರೆಕ್ಕೆಗಳನ್ನು ಕತ್ತರಿಸಿ ವಧಿಸುವ ದೃಶ್ಯ ಬರುತ್ತದೆ. ಸ್ಕ್ರೀನ್ ಮೇಲೆ ಈ ಭೀಕರ ದೃಶ್ಯ ಬಂದಿದ್ದೇ ತಡ, ಅದನ್ನು ನೋಡಿದ ಯಶ್ ಪುತ್ರ ಯಥರ್ವ್ಗೆ ತಡೆದುಕೊಳ್ಳಲು ಸಾಧ್ಯವಾಗದೆ ಕಣ್ಣೀರು ಹಾಕಲು ಶುರುಮಾಡಿದ್ದಾನೆ. ಅಪ್ಪ ಎಂದ ಮೇಲೆ ರಕ್ಷಕನಾಗಿರಬೇಕು, ಪಕ್ಷಿಯನ್ನು ಹೇಗೆ ಕೊಲ್ಲುತ್ತಾರೆ ಎನ್ನುವ ಮುಗ್ಧ ಭಾವನೆಯಿಂದ 7 ವರ್ಷದ ಯಥರ್ವ್ ಥಿಯೇಟರ್ನಲ್ಲೇ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ.
ಈ ಮುಗ್ಧ ಸನ್ನಿವೇಶವನ್ನು ಚಿತ್ರದ ಸೀತೆ, ನಟಿ ಸಾಯಿ ಪಲ್ಲವಿ ಮಾಧ್ಯಮ ಸಂವಾದದಲ್ಲಿ ಬಹಿರಂಗಪಡಿಸಿದ್ದಾರೆ. ಸಿನಿಮಾ ಮುಗಿದ ಬಳಿಕ ಯಥರ್ವ್ ನೇರವಾಗಿ ತಂದೆ ಯಶ್ ಬಳಿ ಹೋಗಿ, “ಅಪ್ಪಾ, ನನಗೆ ನೀನು ಆ ಪಕ್ಷಿಯನ್ನು ಕೊಂದಿದ್ದು ಸ್ವಲ್ಪವೂ ಇಷ್ಟವಾಗಲಿಲ್ಲ. ಅದು ಸಿನಿಮಾನೇ ಇರಲಿ, ನಟನೆನೇ ಇರಲಿ… ನೀನು ಆ ರೀತಿ ಪಕ್ಷಿಯನ್ನು ಕೊಲ್ಲಬಾರದಿತ್ತು” ಎಂದು ಹೇಳಿದ್ದಾನೆ. ಮಗನ ಈ ಮಾತುಗಳನ್ನು ಕೇಳಿ ಯಶ್ ಆಶ್ಚರ್ಯಚಕಿತರಾದರೆ, ಅಲ್ಲಿದ್ದ ಸಾಯಿ ಪಲ್ಲವಿ ಈ ಸುಂದರ ಕ್ಷಣಕ್ಕೆ ತಲೆಬಾಗಿದ್ದಾರೆ.
ಮಗನ ರಿಯಾಕ್ಷನ್ ಬಗ್ಗೆ ಪ್ರತಿಕ್ರಿಯಿಸಿದ ಯಶ್, “ಮಕ್ಕಳು ಈಗಷ್ಟೇ ಜಗತ್ತನ್ನು, ಸರಿ-ತಪ್ಪನ್ನು ಅರ್ಥೈಸಿಕೊಳ್ಳುತ್ತಿದ್ದಾರೆ. ನನ್ನ ಮಗನ ಈ ಪ್ರತಿಕ್ರಿಯೆ ನನಗೆ ನಿಜಕ್ಕೂ ಆಶ್ಚರ್ಯ ತಂದಿತು” ಎಂದಿದ್ದಾರೆ. ರಾವಣನ ಪಾತ್ರವನ್ನು ಕೇವಲ ವಿಲನ್ ಆಗಿ ತೋರಿಸದೆ, ಆತನಲ್ಲಿರುವ ಪಾಂಡಿತ್ಯ, ಅಹಂಕಾರದ ಜೊತೆಗೆ ವೈವಿಧ್ಯಮಯ ಮುಖಗಳನ್ನು ಪ್ರೇಕ್ಷಕರ ಮುಂದೆ ಇಡುವುದು ತಮಗೆ ದೊಡ್ಡ ಸವಾಲಾಗಿತ್ತು ಎಂದು ಯಶ್ ಹಂಚಿಕೊಂಡಿದ್ದಾರೆ. ಆದರೆ ಮಗನ ಕಣ್ಣೀರು ರಾವಣನ ಪಾತ್ರದ ತೀವ್ರತೆ ಎಷ್ಟರಮಟ್ಟಿಗೆ ಮೂಡಿಬಂದಿದೆ ಎಂಬುದಕ್ಕೆ ರಿಯಲ್ ಸಾಕ್ಷಿಯಾಗಿದೆ.
ಇನ್ನೊಂದೆಡೆ ನವೆಂಬರ್ 5ಕ್ಕೆ ಬಿಡುಗಡೆಯಾಗಲಿರುವ ಈ ದೃಶ್ಯಕಾವ್ಯಕ್ಕೆ ಪ್ರಪಂಚಾದ್ಯಂತ ಬಿಡುಗಡೆಗೂ ಮುನ್ನವೇ ಅಕ್ಷರಶಃ ಮುಗಿಬೀಳುವಿಕೆ ಶುರುವಾಗಿದೆ. ಈಗಾಗಲೇ ವರ್ಲ್ಡ್ವೈಡ್ ಅಡ್ವಾನ್ಸ್ ಬುಕಿಂಗ್ನಲ್ಲಿ ಬರೋಬ್ಬರಿ ₹40 ಕೋಟಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ‘ರಾಮಾಯಣ’ ಬಾಕ್ಸ್ ಆಫೀಸ್ ಸುನಾಮಿ ಎಬ್ಬಿಸಿದೆ. ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಸನ್ನಿ ಡಿಯೋಲ್ ಹನುಮಂತನಾಗಿ ಹಾಗೂ ಯಶ್ ರಾವಣನಾಗಿ ಅಬ್ಬರಿಸಿರುವ ಈ ಚಿತ್ರ ನವೆಂಬರ್ 5ರಂದು ಬೆಳ್ಳಿಪರದೆ ಮೇಲೆ ಹೊಸ ಇತಿಹಾಸ ಬರೆಯುವುದು ಪಕ್ಕಾ ಆಗಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
