ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಹಾಗೂ ಅವರ ಕುಟುಂಬದಲ್ಲಿ ಈಗ ಭಾವನೆಗಳ ಕಡಲೇ ಹರಿದಿದೆ. 18ನೇ ವರ್ಷದ ವಸಂತಕ್ಕೆ ಕಾಲಿಟ್ಟ ಪುತ್ರ ವಿನೀಶ್ನನ್ನು ಜೈಲಿನಲ್ಲಿ ಭೇಟಿಯಾದ ದರ್ಶನ್, ಪ್ರೀತಿಯಿಂದ ಕೊಟ್ಟ ಆ ಗಿಫ್ಟ್ ಯಾವುದು..? ಪ್ರಪಂಚದ ಯಾವ ಐಷಾರಾಮಿ ಗಿಫ್ಟ್ಗಿಂತಲೂ ನೀವು ಕೊಟ್ಟ ಈ ಗಿಫ್ಟ್ ದೊಡ್ಡದು ಅಂದ ವಿನೀಶ್ ಆ ಭಾವುಕ ಕ್ಷಣಗಳು ಹಾಗೂ ಧನ್ವೀರ್ ಜಟಾಪಟಿಯ ಟ್ವಿಸ್ಟ್ಗಳೇನು? ಇದರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ…
- ವಿನೀಶ್ 18ನೇ ಹುಟ್ಟುಹಬ್ಬಕ್ಕೆ ದಚ್ಚು ಕಿಟ್ಕ್ಯಾಟ್ ಚಾಕೊಲೇಟ್ ಗಿಫ್ಟ್
- ಕೋಟಿ ಬೆಲೆಯ ಗಿಫ್ಟ್ಗಿಂತ ಅಪ್ಪನ ಪ್ರೀತಿಯೇ ದೊಡ್ಡದು ಎಂದ ವಿನೀಶ್
- ಕೋರ್ಟ್ ಆದೇಶದ ಬೆನ್ನಲ್ಲೇ ಧನ್ವೀರ್ ಸ್ಟೇಟಸ್ ವಾರ್
- “ಯಾವನು ಏನು ಮಾಡೋಕ್ ಆಗಲ್ಲ” ಎಂದ ಧನ್ವೀರ್
ಕೋಟಿ ಕೋಟಿ ಬೆಲೆಬಾಳುವ ಗಿಫ್ಟ್ಗಳು, ಅದ್ದೂರಿ ಪಾರ್ಟಿಗಳು ಹಾಗೂ ಫ್ಯಾನ್ಸ್ ನಡುವೆ ವಿಜೃಂಭಣೆಯಿಂದ ಬರ್ತ್ಡೇ ಆಚರಿಸಿಕೊಳ್ಳುತ್ತಿದ್ದ ನಟ ದರ್ಶನ್ ಪುತ್ರ ವಿನೀಶ್, ಈ ಬಾರಿ 18ನೇ ವರ್ಷದ ಹುಟ್ಟುಹಬ್ಬವನ್ನು ತಂದೆಯ ಜೊತೆ ಆಚರಿಸಲಾಗದೆ ಕಣ್ಣೀರಿಟ್ಟಿದ್ದಾರೆ. ರೇಣುಕಾಸ್ವಾಮಿ ಕೇಸ್ನಲ್ಲಿ ಸತತ ಜಾಮೀನು ಅರ್ಜಿ ವಜಾಗೊಂಡು ಜೈಲಿನಲ್ಲೇ ಉಳಿದಿರುವ ದರ್ಶನ್ ಭೇಟಿಗೆ ಮಗ ವಿನೀಶ್ ಜೈಲಿಗೆ ಆಗಮಿಸಿದ್ದರು. ಮಗನನ್ನು ಕಂಡೊಡನೆ ಬಿಗಿದಪ್ಪಿದ ದರ್ಶನ್ ಕಣ್ಣೀರಧಾರೆಯಲ್ಲೇ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ಜೈಲಿನಲ್ಲಿ ಕಷ್ಟಪಡುತ್ತಿರುವ ಅಸಹಾಯಕ ವಾತಾವರಣದಲ್ಲೂ ದರ್ಶನ್, ಅಲ್ಲಿ ಸಿಗುವ ಕಿಟ್ಕ್ಯಾಟ್ ಚಾಕೋಲೇಟ್ ಖರೀದಿಸಿ ಮಗನಿಗೆ ಅಕ್ಕರೆಯ ಉಡುಗೊರೆಯಾಗಿ ನೀಡಿದ್ದಾರೆ. ಅಪ್ಪ ಕೊಟ್ಟ ಆ ಸಣ್ಣ ಚಾಕೋಲೇಟ್ ಮತ್ತು ಪ್ರೀತಿಯ ಅಪ್ಪುಗೆಯಿಂದ ಕಂಪ್ಲೀಟ್ ಭಾವುಕನಾದ ವಿನೀಶ್, “ಪ್ರಪಂಚದಲ್ಲೇ ಇದಕ್ಕಿಂತ ದೊಡ್ಡ ಗಿಫ್ಟ್ ಮತ್ತೊಂದಿಲ್ಲ” ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾನೆ.
ಇತ್ತ ಜೈಲಿನ ಒಳಗೆ ದರ್ಶನ್ ಒಂದರ ಮೇಲೊಂದರಂತೆ ಹಿನ್ನಡೆಗಳನ್ನು ಎದುರಿಸುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆಪ್ತನಾಗಿದ್ದ ಪ್ರದೋಷ್ ಈಗ ಮಾಫಿ ಸಾಕ್ಷಿಯಾಗಿ ಬಂಡಾಯ ಎದ್ದಿದ್ದಾನೆ. ಪ್ರದೋಷ್ ಹೇಳಿಕೆ ತಡೆಯಲು ದರ್ಶನ್ ವಕೀಲರು ನಡೆಸಿದ ತೀವ್ರ ಯತ್ನ ವಿಫಲವಾಗಿದ್ದು, ಇತ್ತ ತಂದೆಯ ತಿಥಿಗಾಗಿ ಪ್ರದೋಷ್ ಕೋರಿದ್ದ ಜಾಮೀನನ್ನೂ ಕೋರ್ಟ್ ವಜಾಗೊಳಿಸಿದೆ. ಇದರ ನಡುವೆ ದರ್ಶನ್ಗೆ ಬೆನ್ನು ನೋವಿನ ಸಮಸ್ಯೆ ತೀವ್ರಗೊಂಡಿದ್ದು, ಚಿಕಿತ್ಸೆಗಾಗಿ ಮತ್ತೆ ಕೋರ್ಟ್ ಮೆಟ್ಟಿಲೇರಲು ಸಜ್ಜಾಗುತ್ತಿದ್ದಾರೆ.
ಮತ್ತೊಂದೆಡೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬದ ವಿರುದ್ಧ ಅವಹೇಳನಕಾರಿ ಆಡಿಯೋಗಳನ್ನು ಹರಿಬಿಟ್ಟಿದ್ದ ನಟ ಧನ್ವೀರ್ಗೆ ಕೋರ್ಟ್ ಬಿಗ್ ಶಾಕ್ ನೀಡಿದೆ. ವಿಜಯಲಕ್ಷ್ಮಿ ಮತ್ತು ದರ್ಶನ್ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ 59ನೇ ಸಿಸಿಎಚ್ ಕೋರ್ಟ್, ಕುಟುಂಬದ ವಿರುದ್ಧ ಯಾವುದೇ ಮಾಧ್ಯಮದಲ್ಲೂ ಸುಳ್ಳು ಹೇಳಿಕೆ ಅಥವಾ ಅವಹೇಳನ ಮಾಡಬಾರದು ಎಂದು ಧನ್ವೀರ್ಗೆ ನಿರ್ಬಂಧಕಾಜ್ಞೆ ಹೊರಡಿಸಿದೆ. ಆದರೆ ಕೋರ್ಟ್ ಆರ್ಡರ್ ಬಂದ ಬೆನ್ನಲ್ಲೇ ಧನ್ವೀರ್ ವಾಟ್ಸಾಪ್ ಸ್ಟೇಟಸ್ನಲ್ಲಿ “ಯಾವನು ಏನು ಮಾಡೋಕ್ ಆಗಲ್ಲ” ಎಂದು ಪೋಸ್ಟ್ ಹಾಕಿ ಮತ್ತೆ ಸವಾಲೆಸೆದಿದ್ದು, ವಿವಾದ ಇನ್ನಷ್ಟು ಕಾವು ಪಡೆದುಕೊಂಡಿದೆ.
ಒಂದೆಡೆ ಮಗನ ಹುಟ್ಟುಹಬ್ಬದ ಭಾವುಕ ಕ್ಷಣಗಳು ಕುಟುಂಬವನ್ನು ಕಣ್ಣೀರಲ್ಲಿ ಮುಳುಗಿಸಿದರೆ, ಮತ್ತೊಂದೆಡೆ ಹೊರಗಡೆ ಕಾನೂನು ಹೋರಾಟಗಳು ಮತ್ತು ವಿವಾದಗಳು ತೀವ್ರಗೊಳ್ಳುತ್ತಿವೆ. ನಟ ದರ್ಶನ್ ಜೈಲಿನಲ್ಲಿ ಕಾಲ ಕಳೆಯುತ್ತಿರಬೇಕಾದರೆ, ಆಪ್ತರೇ ಸಾಕ್ಷಿಯಾಗುತ್ತಿರುವುದು ಮತ್ತು ಹೊರಗೆ ನಡೆಯುತ್ತಿರುವ ಜಟಾಪಟಿಗಳು ದರ್ಶನ್ ಕುಟುಂಬಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿವೆ. ಈ ಎಲ್ಲಾ ಕಾನೂನು ತೊಡಕುಗಳ ನಡುವೆ ದರ್ಶನ್ ಹೊರಬರುವುದು ಯಾವಾಗ ಎಂಬ ಪ್ರಶ್ನೆಗೆ ಸದ್ಯಕ್ಕೆ ಯಾವುದೇ ಉತ್ತರ ಸಿಕ್ಕಿಲ್ಲದೆ, ಫ್ಯಾನ್ಸ್ ಕಣ್ಣೀರಿನಲ್ಲೇ ದಿನ ದೂಡುವಂತಾಗಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
