ಯಶ್ ಚಿನ್ನ, ಅಲ್ಲು ಅರ್ಜುನ್ ರಕ್ತಚಂದನ‌ & ಅನುಷ್ಕಾ ಗಾಂಜಾ ಕಥೆಗಳು..!

ಎಲ್ಲರ ಬಾಯಲ್ಲಿ ಸಿಗಾರ್.. ಬಾಯಿ ಬಿಟ್ರೆ ಪಗಾರ್..!

Untitled design 2025 08 07t191855.426

ರಾಕಿಂಗ್ ಸ್ಟಾರ್ ಯಶ್ ಗೋಲ್ಡ್ ಸ್ಮಗ್ಲರ್ ಆಗಿ ಕಮಾಲ್ ಮಾಡಿದ ಬೆನ್ನಲ್ಲೇ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಕೂಡ ರೆಡ್ ಸ್ಯಾಂಡಲ್ ಸ್ಮಗ್ಲರ್ ಆಗಿ ಮಿಂಚಿದ್ರು. ಇದೀಗ ಅವರ ಹಾದಿಗೆ ನಮ್ಮ ಕರಾವಳಿ ಚೆಲುವೆ, ಬಾಹುಬಲಿ ಫೇಮ್ ಅನುಷ್ಕಾ ಶೆಟ್ಟಿ ಸಹ ಎಂಟ್ರಿ ಕೊಟ್ಟಿದ್ದಾರೆ. ಗಾಂಜಾ ಸ್ಮಗ್ಲರ್ ಆಗಿ ಎಲ್ಲರ ಹುಬ್ಬೇರಿಸಿದ್ದಾರೆ. ಕಣ್ಣು ಕುಕ್ಕುವಂತಹ ಸಮಾಜ ಘಾತುಕ ಪಾತ್ರಗಳಲ್ಲಿ ಸ್ಟಾರ್‌‌ಗಳು ಮಾಡ್ತಿರೋದೇನು ಅನ್ನೋದರ ಡೀಟೇಲ್ಸ್‌ ಇಲ್ಲಿದೆ.

ಯಶ್, ಅಲ್ಲು ಅರ್ಜುನ್ ಹಾಗೂ ಅನುಷ್ಕಾ ಶೆಟ್ಟಿ.. ಸದ್ಯ ಭಾರತೀಯ ಚಿತ್ರರಂಗದ ಈ ಮೂವರ ಸಿನಿಮಾಗಳ ಬಗ್ಗೆ ವರ್ಲ್ಡ್‌ ಸಿನಿದುನಿಯಾ ಮಾತಾಡಿಕೊಳ್ಳುವಂತಾಗಿದೆ. ಅದಕ್ಕೆ ಕಾರಣ ಇವರುಗಳು ಹೀರೋಗಳಾ ಅಥ್ವಾ ವಿಲನ್‌ಗಳಾ ಅನ್ನೋ ಬಿಗ್ಗೆಸ್ಟ್ ಡೌಟು. ಯೆಸ್.. ಸಮಾಜ ಘಾತುಕ ಕೆಲಸ ಮಾಡುವ ಹೀರೋಗಳಾಗಿ ಕೆಜಿಎಫ್, ಪುಷ್ಪ ಹಾಗೂ ಘಾಟಿ ಚಿತ್ರಗಳಲ್ಲಿ ಇವರುಗಳ ನಡೆ ನಿಜಕ್ಕೂ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಹಣಕ್ಕಾಗಿ ಇವರುಗಳು ಏನು ಬೇಕಾದ್ರೂ ಮಾಡೋಕೆ ರೆಡಿ. ಸರ್ಕಾರ, ಕಾನೂನು, ಕಟ್ಟಲೆಗಳನ್ನ ಬದಿಗಿಟ್ಟು, ಪೊಲೀಸ್ ವ್ಯವಸ್ಥೆಗೆ ಕೇರ್ ಮಾಡದೆ ಬಾಯಲ್ಲಿ ಸಿಗಾರ್‌ನೊಂದಿಗೆ ರೂಲ್ ಮಾಡುವ ರೂಲರ್ಸ್‌ ಆಗಿ ನೋಡುಗರ ಹುಬ್ಬೇರಿಸಿದ್ದಾರೆ. ಇವರುಗಳ ಬಗ್ಗೆ ಕೊಂಚ ಡಿಟೈಲ್ಡ್ ಆಗಿ ಹೇಳಿಬಿಡ್ತೀವಿ ನೋಡಿ.

ಬಡವನಾಗಿ ಹುಟ್ಟಿದ್ದು ತಪ್ಪಲ್ಲ. ಆದ್ರೆ ಶ್ರೀಮಂತನಾಗಿ, ಬಹುದೊಡ್ಡ ಮನುಷ್ಯನಾಗಿಯೇ ಸಾಯಬೇಕು ಅನ್ನೋ ತಾಯಿಯ ಮಾತಿಗೋಸ್ಕರ ರಾಕಿ ಅನ್ನೋ ಹುಡ್ಗ ರಾಕಿಭಾಯ್ ಆಗುವ ಕಥೆ ಕೆಜಿಎಫ್. ಪ್ರಶಾಂತ್ ನೀಲ್ ನಿರ್ದೇಶನದ, ಯಶ್ ನಟನೆಯ ಹಾಗೂ ಹೊಂಬಾಳೆ ಫಿಲಂಸ್ ನಿರ್ಮಾಣದ ಈ ಸಿನಿಮಾ ಕೆಜಿಎಫ್‌‌ನಲ್ಲಿ ಚಿನ್ನದ ಗಣಿಗಾರಿಕೆ ಮಾಡುವವರ ಮೇಲೆ ಕೇಂದ್ರೀಕೃತವಾಗಿದೆ. ನರಾಚಿಯಲ್ಲಿ ರಾಕ್ಷಸರಂತೆ ವರ್ತಿಸೋ ಅಲ್ಲಿನ ವ್ಯವಸ್ಥೆ, ಅಕ್ಷರಶಃ ಗಣಿಗಾರಿಕೆ ಮಾಡೋರನ್ನ ಒತ್ತೆಯಾಳುಗಳಾಗಿಸಿಕೊಂಡಿರ್ತಾರೆ.

ಅಂತವರ ಪಾಲಿನ ಆಶಾಕಿರಣ, ಭರವಸೆಯ ಬೆಳಕು, ಆ ನೊಂದ ಜೀವಗಳ ನಂದಾದೀಪ ಆಗಿ ರಾಕಿಭಾಯ್ ಯಶ್ ಹಂತ ಹಂತವಾಗಿ ಬೆಳೆಯುವ ವಿಧಾನ ಮೈಂಡ್ ಬ್ಲೋಯಿಂಗ್. ಮೊದಲ ಭಾಗದ ಕ್ಲೈಮ್ಯಾಕ್ಸ್‌ನಲ್ಲಿ ಗರುಡನ ರುಂಡ ಚೆಂಡಾಡುವ ರಾಕಿಭಾಯ್, ನಂತ್ರ ಅಧೀರನ ಹುಟ್ಟಡಗಿಸೋ ಕಾರ್ಯ ಕೂಡ ಮಾಡ್ತಾರೆ. ಮಧ್ಯೆ ಎಷ್ಟೇ ದೊಡ್ಡ ಆನೆಗಳು ಬಂದ್ರೂ ಅವುಗಳನ್ನ ಹೊಡೆದುರುಳಿಸುವ ಕಾರ್ಯ ಮಾಡ್ತಾರೆ. ಆದ್ರೆ ಇದಕ್ಕೆಲ್ಲಾ ಮೂಲ ಚಿನ್ನ. ಪವರ್. ಶ್ರೀಮಂತಿಕೆ. ಸುಖತ ಸುಪ್ಪೊತ್ತಿಗೆ. ಅದೆಲ್ಲವೂ ರಾಕಿಭಾಯ್ ಪಾಲಾಗುತ್ತೆ.

ಇಂಡಿಯನ್ ಸಿಇಓ ಅಂತ ಹೇಳಿ ಪ್ರಧಾನಿ ಬಳಿಯೇ ಹೋಗಿ ವಾರ್ನ್‌ ಮಾಡಿ ಬರೋ ರೇಂಜ್‌ಗೆ ಬೆಳೆದ ಗೋಲ್ಡ್ ಸ್ಮಗ್ಲರ್ ಮೇಲೆ ಪ್ರೈಮ್ ಮಿನಿಸ್ಟರ್ ದಾಳಿ ಮಾಡಿಸ್ತಾರೆ. ದೊಡ್ಡ ಹಡಗಿನಲ್ಲಿ ಟನ್‌ಗಟ್ಟಲೆ ಚಿನ್ನದ ಬಿಸ್ಕೆಟ್‌‌ಗಳನ್ನ ಹೊತ್ತು ವಿದೇಶಕ್ಕೆ ಪಲಾಯನ ಆಗ್ತಿದ್ದ ರಾಕಿಭಾಯ್‌ ಮೇಲೆ ಇಂಡಿಯನ್ ಗೌವರ್ನಮೆಂಟ್ ಮಿಸೈಲ್ ದಾಳಿ ನಡೆಸುತ್ತೆ. ಚಿನ್ನದ ಬಿಸ್ಕೆಟ್ಸ್ ಜೊತೆ ರಾಕಿಭಾಯ್ ಕೂಡ ಕೆಜಿಎಫ್ ಚಾಪ್ಟರ್-2ನಲ್ಲಿ ನೀರು ಪಾಲಾಗ್ತಾರೆ. ಎಲ್‌ಡೊರಾಡೋ ಕಥೆ ಮುಗೀತಾ..? ನೋ. ಆತ ಸತ್ತನಾ ನೋ. ಬರಲಿದೆ ಕೆಜಿಎಫ್-3 ಅನ್ನೋ ಹಿಂಟ್ ಕೂಡ ಸಿಕ್ಕಾಗಿದೆ.

ಕಾಡಲ್ಲಿ ರಕ್ತಚಂದನ ಮರಗಳನ್ನ ಕಡಿಯೋ ಅಂತಹ ಒಬ್ಬ ಸಾಮಾನ್ಯ ಕೂಲಿಕಾರ ಪುಷ್ಪ. ತಾನೇ ಮಾಲೀಕ ಆಗ್ಬೇಕು. ಸಿಂಡಿಕೇಟ್ ನಡೆಸಬೇಕು ಅನ್ನೋ ಮಹದಾಸೆಯಿಂದ ಒಂದು ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿ, ಅದನ್ನ ರೂಲ್ ಮಾಡುವ ಪುಷ್ಪರಾಜ್ ಆಗಿ ಮಿಂಚೋ ಕಥೆ. ಯೆಸ್.. ಸುಕುಮಾರ್ ನಿರ್ದೇಶನದ, ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಕೂಡ ಕೆಜಿಎಫ್ ರೀತಿ ಒಂದಲ್ಲ ಎರಡೆರಡು ಭಾಗಗಳಲ್ಲಿ ಪ್ರೇಕ್ಷಕರ ಮುಂದೆ ಬಂತು. ರೆಡ್ ಸ್ಯಾಂಡಲ್ ಸ್ಮಗ್ಲರ್ ಆಗಿ, ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿ ಅಲ್ಲು ಅರ್ಜುನ್ ಬಣ್ಣ ಹಚ್ಚಿದ್ದರು.

ಪುಷ್ಪ ಒಂದು ಬ್ರ್ಯಾಂಡ್ ಆದ್ರೂ ಸಹ ತಂದೆ ಇಂಥವ್ರೇ ಅಂತ ಕುಟುಂಬಸ್ಥರು ಒಪ್ಪಲ್ಲ. ಒಂದ್ಕಡೆ ಮನೆತನದ ಹೆಸರಿಲ್ಲದ ಪುಷ್ಪರಾಜ್ ಎಷ್ಟೇ ಎತ್ತರಕ್ಕೆ ಬೆಳೆದರೂ ನೆಮ್ಮದಿ ಇಲ್ಲದಂತಾಗುತ್ತೆ. ಸರ್ಕಾರವನ್ನೇ ಬದಲಿಸಿ, ತಾನು ಹೇಳಿದ ವ್ಯಕ್ತಿಯನ್ನ ಸಿಎಂ ಮಾಡೋ ರೇಂಜ್‌ಗೆ ಬೆಳೆಯುತ್ತಾರೆ. ಪುಷ್ಪ ನ್ಯಾಷನಲ್, ಇಂಟರ್‌ನ್ಯಾಷನಲ್ ಲೆವೆಲ್‌ಗೆ ಬೆಳೆದು ನಿಲ್ಲುತ್ತಾರೆ. ರಕ್ತಚಂದನ ಮರಗಳನ್ನ ಭನ್ವರ್ ಸಿಂಗ್ ಶೇಖಾವತ್ ಕಣ್ತಪ್ಪಿಸಿ, ಕಾಡುಗಳಿಂದ ಸೇರಬೇಕಾದ ಜಾಗಕ್ಕೆ ಸೇರಿಸೋಕೆ ಆತ ಅನುಸರಿಸೋ ವಾಮಮಾರ್ಗಗಳು ನಿಜಕ್ಕೂ ಹುಬ್ಬೇರಿಸುವಂತಿವೆ.

ಆದ್ರೆ ಪುಷ್ಪ-2 ಕ್ಲೈಮ್ಯಾಕ್ಸ್‌‌ನಲ್ಲಿ ತನ್ನ ಕುಟುಂಬ ಎಲ್ಲಾ ಒಂದಾಗಿ, ಖುಷಿ ಸಂಭ್ರಮದಲ್ಲಿರಬೇಕಾದ ಗಳಿಗೆಯಲ್ಲಿ ಬಾಂಬ್ ಬ್ಲಾಸ್ಟ್ ಆಗಲಿದೆ. ಒನ್ಸ್ ಅಗೈನ್ ಪುಷ್ಪರಾಜ್ ಚಾಪ್ಟರ್ ಮುಗೀತಾ..? ನೋ. ಪುಷ್ಪ-3 ಬರಲಿದೆ.

ಇದು ಕೆಜಿಎಫ್‌ನ ರಾಕಿಭಾಯ್, ಪುಷ್ಪದ ಪುಷ್ಪರಾಜ್‌‌ನ ಮೀರಿಸೋ ಅಂತಹ ಭಯಾನಕ ಕಥೆ ಘಾಟಿ. ಹೌದು.. ಬ್ರಿಟಿಷರ ಕಾಲದಲ್ಲಿ ಬೆಟ್ಟಗಳನ್ನ ಒಡೆದು ದಾರಿಗಳನ್ನ ಮಾಡಿದಂತಹ ಘಾಟಿ ಸಮುದಾಯವೊಂದು ಇದೀಗ ಗಾಂಜಾ ಸ್ಮಗ್ಲಿಂಗ್ ಮಾಡ್ತಾ ಜೀವನ ಸಾಗಿಸ್ತಿದೆ. ಅವ್ರನ್ನ ತಮ್ಮ ಲಾಭಕ್ಕೆ ಬಳಸಿಕೊಳ್ಳುವ ವ್ಯವಸ್ಥೆ, ಅದರ ವಿರುದ್ಧ ತಿರುಗಿ ಬೀಳುವ ನಾಯಕಿ ಅನುಷ್ಕಾ ಶೆಟ್ಟಿ, ಒಂದಲ್ಲ ಎರಡಲ್ಲ ಮೂರು ಶೇಡ್‌‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಯೆಸ್.. ಕ್ರಿಶ್ ಜಾಗರ್ಲಮುಡಿ ನಿರ್ದೇಶನದ ಘಾಟಿ ಅನ್ನೋ ಈ ಸಿನಿಮಾ ಗಾಂಜಾ ಸ್ಮಗ್ಲಿಂಗ್ ಮೇಲೆ ರೂಪಿತವಾಗಿದೆ. ಅನುಷ್ಕಾ ಇಲ್ಲಿ ಖತರ್ನಾಕ್ ಗಾಂಜಾ ಸ್ಮಗ್ಲರ್ ಆಗಿ, ಬಸ್ ಕಂಡಕ್ಟರ್ ಆಗಿಯೂ ಕಾಣಿಸಿಕೊಂಡಿದ್ದಾರೆ. ಒಮ್ಮೆ ಸಂತ್ರೆಸ್ತೆ ಮತ್ತೊಮ್ಮೆ ಕ್ರಿಮಿನಲ್ ಮಗದೊಮ್ಮೆ ಲೆಜೆಂಡ್ ಆಗಿ ಧೂಳೆಬ್ಬಿಸಲಿದ್ದಾರೆ ಅನುಷ್ಕಾ. ಅದ್ರಲ್ಲೂ ಗಾಂಜಾ ಸ್ಮಗ್ಲಿಂಗ್‌ ಮಾಡೋಕೆ ಅವರು ಮಾಡುವ ಐಡಿಯಾಗಳು, ಚೇಸಿಂಗ್‌ಗಳು ರೋಮಾಂಚನಕಾರಿಯಾಗಿವೆ. ಗಾಂಜಾ ಸೊಪ್ಪು ಕೊಯ್ಯುವುದು, ಅದನ್ನ ಸಾಗಿಸಿ ಹೊಟ್ಟೆ ತುಂಬಿಸಿಕೊಳ್ಳೋ ಅಂತಹ ಅಮಾಯಕ ಸಮುದಾಯದ ಮೇಲೆ ತಯಾರಾಗಿರೋ ಘಾಟಿ ಸಖತ್ ರಾ ಅಂಡ್ ರಗಡ್ ಆಗಿದೆ.

ಸೆಪ್ಟೆಂಬರ್ 5ಕ್ಕೆ ತೆರೆಗೆ ಬರ್ತಿರೋ ಘಾಟಿ ಸಿನಿಮಾದಲ್ಲಿ ಅನುಷ್ಕಾ ನಾಟಿ ಹೆಣ್ಣಾಗಿ ಕೊಡಲಿ ಹಿಡಿದು ಕತ್ತು ಕೊಯ್ಯುವ ದೃಶ್ಯ ಸೇರಿದಂತೆ ಸಾಕಷ್ಟು ಕ್ರೈಮ್ ಸೀನ್‌ಗಳಿವೆ. ಪುಷ್ಪ ಹಾಗೂ ರಾಕಿಭಾಯ್ ಕಥೆಗಳೂ ಇವೇ ಆಗಿವೆ. ಇವೆಲ್ಲವೂ ಸಮಾಜ ಘಾತುಕ ಕೃತ್ಯಗಳಾಗಿದ್ದು, ಇಂತಹ ಸಿನಿಮಾಗಳನ್ನ ಮಾಡೋದ್ರಿಂದ ಸಮಾಜಕ್ಕೆ ಇವರೆಲ್ಲಾ ಏನು ಸಂದೇಶ ನೀಡ್ತಿದ್ದಾರೆ ಅನ್ನೋ ಪ್ರಶ್ನೆ ಮೂಡಲಿದೆ.

ಕ್ರಿಮಿನಲ್‌‌ಗಳಿಗೆ ಇಂತಹ ಚಿತ್ರಗಳಿಂದ ಕೆಟ್ಟ ಸಂದೇಶ ರವಾನೆಯಾಗಲಿದ್ದು, ಕ್ರೈಂ ರೇಟ್ ಕೂಡ ಹೆಚ್ಚಾಗಲಿದೆ. ಪುಷ್ಪ ಬಂದ ಬಳಿಕ ಅದೇ ಶೈಲಿಯಲ್ಲಿ ರಕ್ತಚಂದನ ಮರಗಳ ಸ್ಮಗ್ಲಿಂಗ್ ನಡೆದಿತ್ತು. ರಾಕಿಭಾಯ್ ರೀತಿ ಶ್ರೀಮಂತನಾಗಲು ಅದೆಷ್ಟು ಮಂದಿ ಕನಸು ಕಂಡಿದ್ದಾರೋ..? ಅದಕ್ಕಾಗಿ ಏನೆಲ್ಲಾ ವಾಮಮಾರ್ಗಗಳನ್ನು ಅನುಸರಿಸಿದ್ದಾರೋ..? ಗೊತ್ತಿಲ್ಲ. ಇದೀಗ ಅನುಷ್ಕಾ ಗಾಂಜಾ ಸ್ಮಗ್ಲರ್ ಆಗಿ ಕಾಣಿಸಿಕೊಳ್ತಿದ್ದು, ಈ ಕಳ್ಳರ ಸಂತೆ ನಿಲ್ಲೋದು ಯಾವಾಗ..? ಇಂತಹ ಚಿತ್ರಗಳಿಗೆ ಬ್ರೇಕ್ ಹಾಕೋರು ಯಾರು ಇಲ್ವಾ ಅನ್ನೋ ಪ್ರಶ್ನೆ ಉದ್ಭವಿಸುತ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version