ಸ್ಟಾರ್ ನಟರೆಲ್ಲಾ ವಿಲನ್‌ಗಳಾದ್ರೆ ಕಲಾವಿದರ ಗತಿ ಏನು..?

ಕಮಲ್, ಫಹದ್, ಪೃಥ್ವಿ, ಸೂರ್ಯ ಸಾಲಿಗೆ ಯಶ್, NTR

213 (6)

ಸ್ಟಾರ್‌‌ಗಳೆಲ್ಲಾ ವಿಲನ್‌ಗಳು ಆಗೋಗ್ತಿದ್ದಾರೆ. ಇದು ಸದ್ಯ ಟ್ರೆಂಡ್ ಆದ್ರೂ ಸಹ, ಖಳನಾಯಕರಾಗಿ ಗುರ್ತಿಸಿಕೊಂಡಿರೋ ಕಲಾವಿದರ ಮೇಲೆ ಎಫೆಕ್ಟ್ ಆಗ್ತಿದೆ. ಸೂಪರ್ ಸ್ಟಾರ್‌‌ಗಳು ಕೂಡ ಅಂಜಿಕೆ ಇಲ್ಲದೆ ಖಳನಾಯಕರಾಗಿ ಮಿಂಚು ಹರಿಸ್ತಿರೋ ಒಂದಷ್ಟು ಇಂಟರೆಸ್ಟಿಂಗ್ ಪಾತ್ರಗಳ ಕಂಪ್ಲೀಟ್ ಕಹಾನಿ ನಿಮಗಾಗಿ ಕಾಯ್ತಿದೆ.

ಸಿನಿಮಾ ಅಂದ್ಮೇಲೆ ಹೀರೋ ಇದ್ದೇ ಇರ್ತಾರೆ. ಆ ಹೀರೋಗೆ ವಿಲನ್ ಕೂಡ ಇರಲೇ ಬೇಕು. ಅದು ಸಿನಿಮಾ ನಿಯಮವೂ ಹೌದು. ಹೀರೋಗೆ ಹೀರೋಯಿಸಂ ತೋರಿಸೋಕೆ ಅಥ್ವಾ ಹೀರೋಯಿಸಂ ತೋರಿಸುವಂತೆ ಪ್ರೇರೇಪಿಸುವ ವ್ಯಕ್ತಿ ಇಲ್ಲವಾದಲ್ಲಿ ಆ ಸಿನಿಮಾ ನೀರಸ ಆಗುತ್ತೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಹೀರೋ ಎಷ್ಟು ಪವರ್‌‌ಫುಲ್ ಆಗಿರ್ತಾರೋ, ವಿಲನ್ ಅವರಿಗಿಂತ ಪವರ್‌ಫುಲ್ ಆಗಿರಬೇಕು ಅನ್ನೋದು ಒಂದಷ್ಟು ಮಂದಿ ಡೈರೆಕ್ಟರ್‌‌ಗಳ ಥಿಯರಿ ಆಗಿದೆ.

ಯೆಸ್.. ಕಥಾನಾಯಕ ವಿರುದ್ಧ ತೊಡೆ ತಟ್ಟಿ ನಿಲ್ಲುವಂತಹ ಖಳನಾಯಕ ಕೂಡ ಹೀರೋ ಅಷ್ಟೇ ಪವರ್‌‌ಫುಲ್ ಹಾಗೂ ನೇಮು ಫೇಮು ಇರೋ ಮತ್ತೊಬ್ಬ ಸೂಪರ್ ಸ್ಟಾರ್ ಆದ್ರೆ ಕಲೆಕ್ಷನ್ ಡಬಲ್ ಆಗಲಿದೆ. ಆ ನಿಟ್ಟಿನಲ್ಲಿ ಸಿನಿಮಾ ಕೂಡ ದೊಡ್ಡ ಹೈಪ್ ಪಡೆದುಕೊಳ್ಳುತ್ತೆ. ಹೀಗಾಗಿಯೇ ಇತ್ತೀಚೆಗೆ ಸೂಪರ್ ಸ್ಟಾರ್‌ಗಳೇ ಖಳನಟರ ಪಾತ್ರಗಳನ್ನ ಪೋಷಿಸ್ತಿರೋದು ಟ್ರೆಂಡ್ ಆಗ್ತಿದೆ.

ಬಾಹುಬಲಿ ಚಿತ್ರದಲ್ಲಿ ರಾಣಾ ಮಿಂಚಿದ್ರು. ರಾಜಮೌಳಿಯ ಆ ಸಿನಿಮಾಗಳು ಸಾವಿರಾರು ಕೋಟಿ ಗಳಿಸಿದವು. ಅವುಗಳ ಬೆನ್ನಲ್ಲೇ ವಿಕ್ರಮ್ ಚಿತ್ರದಲ್ಲಿ ರೋಲೆಕ್ಸ್ ಪಾತ್ರದಲ್ಲಿನ ಸೂರ್ಯ ಇಂದಿಗೂ ನೋಡುಗರ ಕಣ್ಣಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.

ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜನ್ ವಿರುದ್ಧ ಫಹಾದ್ ಫಾಸಿಲ್ ನಟನೆ ಶಿಳ್ಳೆ, ಚಪ್ಪಾಳೆ ತರಿಸಿತ್ತು. ಭನ್ವರ್ ಸಿಂಗ್ ಶೇಖಾವತ್ ಆಗಿ ಖಾಕಿ ಖದರ್ ತೋರಿದ್ರು ಗುಂಡು ಬಾಸ್ ಫಹಾದ್. ಬಡೇಮಿಯಾ ಚೋಟೆಮಿಯಾ ಚಿತ್ರದಲ್ಲಿ ಖಳನಟನಾಗಿ ಪೃಥ್ವಿರಾಜ್ ಸುಕುಮಾರನ್ ಕಮಾಲ್ ಮಾಡಿದ್ರು.

ವಿಕ್ರಮ್ ಚಿತ್ರದಲ್ಲಿ ವಿಜಯ್ ಸೇತುಪತಿ, ಕಲ್ಕಿ ಚಿತ್ರದಲ್ಲಿ ಕಮಲ್ ಹಾಸನ್ ಕೂಡ ಖಳನಟನಾಗಿದ್ದು ಇಂಟರೆಸ್ಟಿಂಗ್. ಅದಕ್ಕಾಗಿ ತುಂಬಾನೇ ಡಿಫರೆಂಟ್ ಆಗಿರೋ ಏಸ್ಥೆಟಿಕ್ ಮೇಕಪ್ ಹಾಕಿದ್ರು ಯೂನಿವರ್ಸಲ್ ಸ್ಟಾರ್ ಕಮಲ್.

ಇದೀಗ ಅವರುಗಳ ಸಾಲಿಗೆ ರಾಕಿಭಾಯ್ ಯಶ್ ಹಾಗೂ ಜೂನಿಯರ್ ಎನ್‌ಟಿಆರ್ ಕೂಡ ಸೇರಿಕೊಳ್ತಿದ್ದಾರೆ. ಯೆಸ್.. ಬಹುನಿರೀಕ್ಷಿತ ಬಾಲಿವುಡ್‌ನ ರಾಮಾಯಣ ಚಿತ್ರದಲ್ಲಿ ರಾಮ ರಣ್‌ಬೀರ್‌ ವಿರುದ್ಧ ರಾವಣನಾಗಿ ನೆಗೆಟೀವ್ ಶೇಡ್ ನಲ್ಲಿ ಆರ್ಭಟಿಸಲಿದ್ದಾರೆ ನಮ್ಮ ಹೆಮ್ಮೆಯ ಕನ್ನಡಿಗ ಯಶ್. ಅಲ್ಲದೆ, ಆಗಸ್ಟ್ 14ಕ್ಕೆ ತೆರೆಗೆ ಬರ್ತಿರೋ ಬಾಲಿವುಡ್‌‌ನ ವಾರ್-2 ವೆಂಚರ್‌‌ನಲ್ಲಿ ಜೂನಿಯರ್ ಎನ್‌ಟಿಆರ್ ನಟ ಹೃತಿಕ್ ಜೊತೆ ವಿಲನ್ ಆಗಿ ಸೆಣಸಾಡಲಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ಹೀಗೆ ಇಬ್ಬರು ಸ್ಟಾರ್‌ಗಳು ನಟಿಸಿದಂತಹ ಬಹುತೇಕ ಎಲ್ಲಾ ಚಿತ್ರಗಳು ಗೆದ್ದಿವೆ. ಸೋತ ನಿದರ್ಶನಗಳು ತೀರಾ ವಿರಳ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

Exit mobile version