ವೃಷಭ ಟ್ರೇಲರ್ ರಿಲೀಸ್‌: ಸಿನಿರಂಗದಲ್ಲಿ ಸಂಚಲನ ಮೂಡಿಸಿದ ಮೋಹನ್ ಲಾಲ್-ನಂದ ಕಿಶೋರ್ ಕಾಂಬಿನೇಷನ್!

Untitled design 2025 12 17T180058.488

ಕೊಚ್ಚಿ: ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಒಂದಾದ ‘ವೃಷಭ’ (Vrushabha) ಚಿತ್ರದ ಟ್ರೇಲರ್ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಕೇರಳದ ಕೊಚ್ಚಿಯಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಚಿತ್ರತಂಡವು ಹೈ-ವೋಲ್ಟೇಜ್ ಟ್ರೇಲರ್ ಅನ್ನು ಅನಾವರಣಗೊಳಿಸಿದೆ. ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ನಂದ ಕಿಶೋರ್ ಆ್ಯಕ್ಷನ್-ಕಟ್ ಹೇಳಿರುವ ಈ ಚಿತ್ರದಲ್ಲಿ ಮಲಯಾಳಂನ ಕಂಪ್ಲೀಟ್ ಆಕ್ಟರ್ ಮೋಹನ್ ಲಾಲ್ ಮತ್ತು ನವ ಪ್ರತಿಭೆ ಸಮರ್ಜಿತ್ ಲಂಕೇಶ್ ಮುಖ್ಯ ಪಾತ್ರದಲ್ಲಿ ಮಿಂಚಿದ್ದಾರೆ.

ತಂದೆ-ಮಗನ ಎಮೋಷನಲ್ ಮತ್ತು ಆ್ಯಕ್ಷನ್ ಕಥೆ

ವೃಷಭ‌ ಚಿತ್ರವು ಪ್ರೀತಿ, ವಿಧಿ ಮತ್ತು ತ್ಯಾಗದ ಕಥೆಯಾಗಿದೆ. ಮೋಹನ್ ಲಾಲ್ ಡಬ್ಬಲ್ ರೋಲ್ ನಲ್ಲಿ ಅಭಿನಯಿಸಿದ್ದಾರೆ. ಫ್ಲ್ಯಾಷ್‌ಬ್ಯಾಕ್‌ನಲ್ಲಿ, ಅವರು ರಾಜ ವಿಜಯೇಂದ್ರ ವೃಷಭನಾಗಿ ಕಾಣಿಸಿಕೊಳ್ಳುತ್ತಾರೆ, ಆದರೆ ಪ್ರಸ್ತುತ ದಿನಗಳಲ್ಲಿ, ಅವರು ಯಶಸ್ವಿ ಉದ್ಯಮಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಸಮರ್ಜಿತ್ ಲಂಕೇಶ್ ಅವರ ಮಗನಾಗಿ ನಟಿಸಿದ್ದಾರೆ. ತನ್ನ ತಂದೆಯನ್ನು ರಕ್ಷಿಸಲು ವಿಧಿ ಮತ್ತು ಭಯದೊಂದಿಗೆ ಸಮರ್ಜಿತ್ ಹೋರಾಡುತ್ತಾರೆ. ಟ್ರೇಲರ್ ಹೈ-ಆಕ್ಷನ್‌ ಅಂಶಗಳಿಂದ ಕೂಡಿದೆ.

ಈ ಚಿತ್ರದಲ್ಲಿ ಕನ್ನಡದ ನಟಿ ರಾಗಿಣಿ ದ್ವಿವೇದಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ನಯನ್ ಸಾರಿಕಾ, ಅಜಯ್ ಮತ್ತು ‘ಗರುಡ’ ಖ್ಯಾತಿಯ ರಾಮ್ ಟ್ರೇಲರ್‌ನಲ್ಲಿ ಪವರ್‌ಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಪ್ರತಿಯೊಂದು ಫ್ರೇಮ್ ಕೂಡ ರಿಚ್ ಆಗಿದ್ದು, ನಂದ ಕಿಶೋರ್ ಅವರ ಮೇಕಿಂಗ್ ಶೈಲಿ ಮತ್ತು ತಾಂತ್ರಿಕ ಶ್ರೀಮಂತಿಕೆ ಟ್ರೇಲರ್‌ನಲ್ಲಿ ಎದ್ದು ಕಾಣುತ್ತಿದೆ.

ಈ ಸಿನಿಮಾವನ್ನು ಬಾಲಿವುಡ್‌ನ ಖ್ಯಾತ ನಿರ್ಮಾಪಕಿ ಏಕ್ತಾ ಆರ್. ಕಪೂರ್ ಅವರ ಬಾಲಾಜಿ ಟೆಲಿಫಿಲ್ಮ್ಸ್ ಮತ್ತು ಕನೆಕ್ಟ್ ಮೀಡಿಯಾ ಬೃಹತ್ ಬಜೆಟ್‌ನಲ್ಲಿ ನಿರ್ಮಿಸಿವೆ. ಕಾರ್ಯಕ್ರಮದಲ್ಲಿ ಮಾತನಾಡಿದ ಏಕ್ತಾ ಕಪೂರ್, ವೃಷಭ ಕೇವಲ ಚಿತ್ರವಲ್ಲ, ಇದೊಂದು ಪ್ಯಾನ್ ಇಂಡಿಯಾ ಪ್ರಯಾಣದ ಮೈಲಿಗಲ್ಲು. ಮೋಹನ್ ಲಾಲ್ ಅವರಂತಹ ನಟರೊಂದಿಗೆ ಕೆಲಸ ಮಾಡುವುದು ನಮ್ಮ ಸೌಭಾಗ್ಯ ಎಂದರು.

ನಿರ್ದೇಶಕ ನಂದ ಕಿಶೋರ್ ಅವರು ಸಿನಿಮಾದ ಬಗ್ಗೆ ತಮ್ಮ ಉತ್ಸಾಹ ಹಂಚಿಕೊಳ್ಳುತ್ತಾ, ಮೋಹನ್ ಲಾಲ್ ಸರ್ ಪ್ರತಿಯೊಬ್ಬ ನಿರ್ದೇಶಕನ ಕನಸಿನ ನಟ. ಅವರು ಕಥೆಗೆ ಸಂಪೂರ್ಣ ಶರಣಾಗುತ್ತಾರೆ. ಈ ಚಿತ್ರದಲ್ಲಿ ಸಮರ್ಜಿತ್ ಲಂಕೇಶ್ ಮತ್ತು ನಯನ್ ಸಾರಿಕಾ ಎಂಬ ಅದ್ಭುತ ಪ್ರತಿಭೆಗಳನ್ನು ನಾವು ಪರಿಚಯಿಸುತ್ತಿದ್ದೇವೆ. ಇದು ಸಿನಿಮಾ ಪ್ರೇಮಿಗಳ ಹೃದಯ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶೋಭಾ ಕಪೂರ್, ಏಕ್ತಾ ಕಪೂರ್ ಸೇರಿದಂತೆ ದೊಡ್ಡ ನಿರ್ಮಾಪಕರ ತಂಡವೇ ಈ ಚಿತ್ರದ ಬೆನ್ನಿಗಿದೆ. ಈ ಚಿತ್ರವು ಕನ್ನಡ, ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಡಿಸೆಂಬರ್ 25ರಂದು ಕ್ರಿಸ್ಮಸ್ ಹಬ್ಬದ ಅಂಗವಾಗಿ ‘ವೃಷಭ’ ವಿಶ್ವದಾದ್ಯಂತ ಸಿನಿಮಾ ಮಂದಿರಗಳಲ್ಲಿ ಅಬ್ಬರಿಸಲಿದೆ.

Exit mobile version