ವಿಷ್ಣುದಾದಾ ಪುಣ್ಯಭೂಮಿ ನಾಪತ್ತೆ.. ಫ್ಯಾನ್ಸ್ ಕೊತ ಕೊತ..!!

16ವರ್ಷ ಹೋರಾಟ ವಿಫಲ.. ಸಮಾಧಿ ರಾತ್ರೋರಾತ್ರಿ ಕಣ್ಮರೆ

Untitled design 2025 08 09t193725.172

‘ಚಾಮುಂಡಿ ತಾಯಿ ಆಣೆ ನಾನೆಂದು ನಿಮ್ಮವನು’ ಅಂತ ಹೆಮ್ಮೆಯಿಂದ ಇಡೀ ಕರುನಾಡಿಗೆ ಕೂಗಿ ಹೇಳಿದ್ದ  ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ಆತ್ಮಕ್ಕೆ ಕೊನೆಗೂ ಶಾಂತಿ ಸಿಗಲೇ ಇಲ್ಲ. ಬದುಕಿದ್ದಾಗ ಎಷ್ಟು ಅವಮಾನ, ಅಪಮಾನಗಳನ್ನ ಎದುರಿಸಿದ್ರೋ, ಈಗಲೂ ಅವು ತಪ್ಪುತ್ತಿಲ್ಲ ಅನ್ನೋದು ದುರಂತ. ಕುಟುಂಬಸ್ಥರ ಕೋರಿಕೆಯಂತೆ ಮೈಸೂರಿನಲ್ಲಿ ಸ್ಮಾರಕ ತಲೆ ಎತ್ತಿದೆ. ಆದ್ರೆ ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣು ಪುಣ್ಯಭೂಮಿ ನೆಲಸಮ ಆಗಿಬಿಟ್ಟಿದೆ. ಇದಕ್ಕೆ ನೇರ ಹೊಣೆ ಸರ್ಕಾರ ಹಾಗೂ ವಿಷ್ಣುದಾದಾ ಕುಟುಂಬ. ಈ ಕುರಿತು ಫುಲ್ ಡೀಟೇಲ್ಸ್‌ ಇಲ್ಲಿದೆ.

ಡಾ. ರಾಜ್​ಕುಮಾರ್​ರಷ್ಟೇ ಕನ್ನಡ ಚಿತ್ರರಂಗವನ್ನು ಶ್ರೀಮಂತವಾಗಿಸಿದ ಗರಿಮೆ ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್​ರಿಗೂ ಸಲ್ಲುತ್ತದೆ. ಅಭಿನಯದಲ್ಲಿ ಭಾರ್ಗವನಾಗಿ, ಸಾಹಸದಲ್ಲಿ ಸಿಂಹನಾಗಿ, ಗುಣದಲ್ಲಿ ಹೃದಯವಂತನಾಗಿ, ಸೇನೆ ಕಟ್ಟುವಲ್ಲಿ ವಿಷ್ಣು ಸೇನಾಧಿಪತಿಯಾಗಿ, ಕುಲಕೋಟಿ ಕನ್ನಡಿಗರಲ್ಲಿ ಕೋಟಿಗೊಬ್ಬನಾಗಿ, ಮಿತ್ರರಲ್ಲಿ ಆಪ್ತಮಿತ್ರನಾಗಿ, ಕನ್ನಡ ನಾಡು, ನುಡಿ, ಜಲ ಸಂರಕ್ಷಣೆಯ ವಿಚಾರದಲ್ಲಿ ಆಪ್ತರಕ್ಷಕನಾಗಿ ಮಿಂಚಿದ ಸ್ಫುರದ್ರೂಪಿ ತಾರೆ ವಿಷ್ಣುವರ್ಧನ್.

ವಿಷ್ಣುವರ್ಧನ್.. ಕನ್ನಡ ಸಿನಿ ಲೋಕದಲ್ಲಿ ಅಜರಾಮರವಾಗಿರೋ ಹೆಸರು. ತಮ್ಮ ವಿಶಿಷ್ಟ ನಟನೆಯಿಂದ, ಸಹೃದಯಿ ನಡವಳಿಕೆಗಳಿಂದ ಕನ್ನಡ ನಾಡಿನಲ್ಲಿ, ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಅತ್ಯದ್ಭುತ ಹಾಗೂ ಅಪರೂಪದ ಪ್ರತಿಭೆ. ಕನ್ನಡ ಚಿತ್ರರಂಗದಲ್ಲಿ ಸುಮಾರು 37 ವರ್ಷಗಳ ಕಾಲ ಮೇರು ನಟನಾಗಿ ಮೆರೆದ ಚಿತ್ರರಸಿಕರ ಕಣ್ಮಣಿ. ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ತಮ್ಮ ಅಭೂತಪೂರ್ವ ನಟನೆಗಾಗಿ, ಕರ್ನಾಟಕ ರಾಜ್ಯ ಸರ್ಕಾರದಿಂದ ಬರೋಬ್ಬರಿ ಏಳು ಬಾರಿ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾದಂತಹ ಸಾಹಸಸಿಂಹ.

ವಿಷ್ಣುದಾದ ಆ.. ಈ ಹೆಸರು ಕೇಳಿದ್ರೇನೆ ಸಾಕು, ಅಭಿಮಾನಿಗಳು ಇಂದಿಗೂ ಹುಚ್ಚೆದ್ದು ಕುಣೀತಾರೆ. ವಿಷ್ಣು ಅಗಲಿ ಒಂದೂವರೆ ದಶಕ ಕಳೆದಿದ್ರೂ, ಅವರ ಚಿತ್ರಗಳಿಂದ, ಅವರು ಬಿಟ್ಟು ಹೋಗಿರೋ ಆದರ್ಶಗಳಿಂದ ಇಂದಿಗೂ ಜೀವಂತವಾಗಿದ್ದಾರೆ. ತಮ್ಮ ನೆಚ್ಚಿನ ದಾದಾ ಹಾಕಿಕೊಟ್ಟಿರುವ ಹಾದಿಯಲ್ಲಿ ಲಕ್ಷಾಂತರ ಅಭಿಮಾನಿಗಳು ಹೆಜ್ಜೆ ಹಾಕ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಬದುಕು ಕಟ್ಟಿಕೊಂಡ ನೂರಾರು ಕುಟುಂಬಗಳು, ವಿಷ್ಣುರನ್ನ ಈಗಲೂ ಗೌರವಿಸ್ತಾರೆ, ಪೂಜಿಸ್ತಾರೆ. ವೃತ್ತಿ ಜೀವನದಲ್ಲಿ ಮುಗಿಲೆತ್ತರಕ್ಕೆ ಸಾಧನೆ ಮಾಡಿದ್ರೂ, ಅತಿ ಸರಳ ಬದುಕಿಗೆ ಮಾರು ಹೋಗಿದ್ದ ವಿಷ್ಣು, ನೂರಾರು ವರ್ಷಗಳು ಕಳೆದರೂ ಮಾಸಿ ಹೋಗದ ಇತಿಹಾಸ ಸೃಷ್ಟಿಸಿದ್ದಾರೆ.

ಚಿತ್ರರಂಗಕ್ಕೆ ಕಾಲಿಟ್ಟಾಗಿನಿಂದಲೂ ಒಮ್ಮೆಯೂ ಹಿಂತಿರುಗಿ ನೋಡದ ವಿಷ್ಣುವರ್ಧನ್​, ಯಶಸ್ಸಿನ ಉತ್ತುಂಗದಲ್ಲಿ ಮಿನುಗಿ, ಲಕ್ಷಾಂತರ ಅಭಿಮಾನಿಗಳನ್ನ ಅಗಲಿದ್ರು. ಆದ್ರೆ ಅಭಿಮಾನಿಗಳಿಗೆ ಹಾಗೂ ಯಜಮಾನರ ಕುಟುಂಬದವರಿಗೆ ಅದೊಂದು ಕೊರಗು ನಿರಂತರವಾಗಿ ಕಾಡ್ತಾನೇ ಇತ್ತು. ಅದೇ ಸ್ಮಾರಕ. ಬರೋಬ್ಬರಿ 10 ವರ್ಷಗಳ ನಂತ್ರ ಮೈಸೂರಿನಲ್ಲಿ ಡಾ. ವಿಷ್ಣು ಸ್ಮಾರಕಕ್ಕೆ 5 ಎಕರೆ ಭೂಮಿ, 11 ಕೋಟಿ ಹಣ ಮೀಸಲಿಟ್ಟಿತ್ತು ರಾಜ್ಯ ಸರ್ಕಾರ. ಅದ್ರಂತೆ ಭವ್ಯ ಸ್ಮಾರಕ ಕೂಡ ಎಲೆ ಎತ್ತಿದೆ. ಕುಟುಂಬಸ್ಥರ ಕೋರಿಕೆ ಈಡೇರಿದೆ. ಆದ್ರೆ ಅಭಿಮಾನಿಗಳ ಅಭಿಮಾನಕ್ಕೆ ಬೆಲೆ ಇಲ್ಲವೇ..?

2009ರ ಡಿಸೆಂಬರ್ 30ರಂದು ವಿಷ್ಣುವರ್ಧನ್ ಮೈಸೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ತೀರಿಕೊಂಡಾಗ ಅವ್ರನ್ನ ಅಲ್ಲಿಯೇ ಮಣ್ಣು ಮಾಡಬಹುದಿತ್ತು. ಆದ್ರೆ ಬೆಂಗಳೂರಿಗೆ ಅವ್ರ ಪಾರ್ಥಿವ ಶರೀರ ತಂದು, ತಕರಾರು ಇರೋ ಅಂತಹ ಹಿರಿಯ ದಿವಂಗತ ನಟ ಬಾಲಕೃಷ್ಣ ಅವರಿಗೆ ನೀಡಿದ್ದಂತಹ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುದಾದಾ ಅಂತ್ಯಕ್ರಿಯೆ ತರಾತುರಿಯಲ್ಲಿ ಮಾಡಿದ್ದೇಕೆ ಸರ್ಕಾರ..? ಹೋಗಲಿ, ಆ ವ್ಯಾಜ್ಯವನ್ನು ಬಗೆಹರಿಸಿ, ಅಲ್ಲೇ ಸ್ಮಾರಕ ಮಾಡುವ ಕಾರ್ಯ ಏಕೆ ಮಾಡಲಿಲ್ಲ. ಪುಣ್ಯಭೂಮಿ ಒಂದ್ಕಡೆ, ಸ್ಮಾರಕ ಒಂದ್ಕಡೆ ಆಗೋಕೆ ಕಾರಣ ಯಾರು..? ಒನ್ಸ್ ಅಗೈನ್ ವಿಷ್ಣುದಾದಾ ಕುಟುಂಬಸ್ಥರು ಹಾಗೂ ಸರ್ಕಾರ.

ಸರ್ಕಾರವೇ ನೀಡಿದ್ದ ಅಭಿಮಾನ್ ಸ್ಟುಡಿಯೋ ಜಾಗವನ್ನು ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡಿದ್ದ ಬಾಲಕೃಷ್ಣ ಮಕ್ಕಳು, ಮೊಮ್ಮಕ್ಕಳು, ಕಾನೂನಿನಾತ್ಮಕ ಹೋರಾಟಕ್ಕೆ ಸಜ್ಜಾದ್ರು. ಸಮಾಧಿ ಇರೋ ಸುತ್ತಮುತ್ತ ಆರು ಗುಂಟೆ ಜಮೀನು ಬಿಟ್ಟುಕೊಡೋಕೂ ಮುಂದಾಗಲಿಲ್ಲ. ಇದ್ರಿಂದ ಬೇಸರಗೊಂಡ ಭಾರತಿ ವಿಷ್ಣುವರ್ಧನ್, ಆ ಕುಟುಂಬದ ಭಿಕ್ಷೆ ನನಗೆ ಬೇಕಿಲ್ಲ ಅಂತ ಮೈಸೂರಿನಲ್ಲಿ ಸ್ಮಾರಕಕ್ಕೆ ಜಾಗ ಮಂಜೂರು ಮಾಡಿಸಿಕೊಂಡರು.

ಆದ್ರೆ ಅಂತ್ಯಕ್ರಿಯೆ ಮಾಡಿದ ಪುಣ್ಯಭೂಮಿಯೇ ನಿಜವಾದ ಸ್ಮಾರಕ. ಅದು ಎಷ್ಟು ಕೋಟಿ ಆದ್ರೂ ಪರವಾಗಿಲ್ಲ. ನಾವು ಅಭಿಮಾನಿಗಳೇ ಹಣ ಕೊಟ್ಟು ಕೊಂಡುಕೊಂಡು ಅದನ್ನ ಉಳಿಸಿಕೊಳ್ತೇವೆ ಅಂತ ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಹಾಗೂ ವಿಷ್ಣು ಸೇನಾ ಸಂಘಟನೆಯ ಅಧ್ಯಕ್ಷ ರಾಜು ಗೌಡ ಕೋಟ್ಯಂತರ ರೂಪಾಯಿ ಹಣ ವ್ಯಯಿಸಿ, ವಕೀಲರನ್ನ ನೀಮಿಸಿದ್ರು. ಬಾಲಕೃಷ್ಣ ಕುಟುಂಬಸ್ಥರ ವಿರುದ್ಧ ಕಾನೂನು ಹೋರಾಟ ಮಾಡಿದ್ರು. ಒಂದೂವರೆ ದಶಕದಿಂದ ಅಭಿಮಾನಿಗಳು ಮಾಡಿದ ಆ ಹೋರಾಟಕ್ಕೆ ವಿಷ್ಣುವರ್ಧನ್‌ರ ಪತ್ನಿ ಭಾರತಿ ವಿಷ್ಣುವರ್ಧನ್ ಅವರು ಸಾಥ್ ನೀಡಲೇ ಇಲ್ಲ.

ಅಭಿಮಾನಿಗಳು ಪ್ರತಿ ಬಾರಿ ವಿಷ್ಣುವರ್ಧನ್‌ರ ಹುಟ್ಟು ಹಬ್ಬ, ಪುಣ್ಯ ಸ್ಮರಣೆ ದಿನ ಬಂದು ಅಭಿಮಾನ್ ಸ್ಟುಡಿಯೋದಲ್ಲಿದ್ದ ಪುಣ್ಯಭೂಮಿಗೆ ಪೂಜೆ, ಪುನಸ್ಕಾರ ಮಾಡಿಕೊಂಡು ಹೋಗ್ತಿದ್ರು. ಆದ್ರೆ ಕುಟುಂಬಸ್ಥರು ಅಲ್ಲಿ ಪೂಜೆ ಸಲ್ಲಿಸೋದು ಕೂಡ ನಿಲ್ಲಿಸಿದ್ರು. ಅದನ್ನೇ ಬಂಡವಾಳ ಆಗಿಸಿಕೊಂಡಂತಹ ಬಾಲಕೃಷ್ಣ ಕುಟುಂಬಸ್ಥರು, ಕೋರ್ಟ್‌ ಮೂಲಕ ರಾತ್ರೋರಾತ್ರಿ ಕುಟುಂಬಸ್ಥರು ಹಾಗೂ ಅಭಿಮಾನಿಗಳ ಗಮನಕ್ಕೆ ಬಾರದೆ ಸಮಾಧಿಯನ್ನ ನೆಲಸಮ ಮಾಡಿಬಿಟ್ಟಿದ್ದಾರೆ. ಇದು ನಿಜಕ್ಕೂ ಬಹುದೊಡ್ಡ ಅನ್ಯಾಯ.

ಈ ವಿಷಯ ತಿಳಿಯುತ್ತಿದ್ದಂತೆ ಅಭಿಮಾನ್ ಸ್ಟುಡಿಯೋ ಬಳಿ ದೊಡ್ಡ ಮಟ್ಟದಲ್ಲಿ ಫ್ಯಾನ್ಸ್ ಜಮಾಯಿಸಿದ್ದಾರೆ. ಪೊಲೀಸರ ಉಪಸ್ಥಿತಿಯಲ್ಲೂ ಪ್ರತಿಭಟಿಸಿದ್ದಾರೆ. ಕಣ್ಣೀರು ಹಾಕಿದ್ದಾರೆ. ಸಿಕ್ಕಾಪಟ್ಟೆ ಭಾವುಕರಾಗಿ ಇಂತಹ ಅನ್ಯಾಯ ಯಾರಿಗೆ ಹೇಳೋಣ ಅಂತ ಸಿಕ್ಕಾಪಟ್ಟೆ ಕೊರಗುತ್ತಿದ್ದಾರೆ.

ಫಿಲ್ಮ್ ಚೇಂಬರ್, ಕಲಾವಿದರ ಸಂಘ, ಚಿತ್ರರಂಗ ಎಲ್ಲಾ ಕೂಡ ವಿಷ್ಣು ಸಮಾಧಿ ನೆಲಸಮ ಅನ್ಯಾಯವನ್ನು ಕಂಡು ಕಾಣದಂತೆ ಕುರುಡಾಗಿದೆ. ತುಟಿ ಬಿಚ್ಚಿ ಮಾತನಾಡದೇ ಇರೋಕೆ ಕಾರಣ ವಿಷ್ಣು ಕುಟುಂಬ. ಹೌದು.. ಕುಟುಂಬಸ್ಥರ ವಿರುದ್ಧವಾಗಿ ನಡೆಯೋಕೆ ಯಾರೂ ಸಿದ್ಧರಿಲ್ಲ. ಆದ್ರೆ ಅಭಿಮಾನಿಗಳು ಕಾನೂನಿನಾತ್ಮಕವಾಗಿ ಸೋತಿದ್ದಾರೆ. ಮಾನಸಿಕವಾಗಿ ಸೋತಿದ್ದಾರೆ. ಎರಡು ಕಡೆ ಸ್ಮಾರಕಕ್ಕೆ ಸರ್ಕಾರ ಒಪ್ಪಲ್ಲ. ಅಭಿಮಾನಿಗಳಿಗೆ ಧ್ವನಿ ಆಗೋಕೆ ಕುಟುಂಬಕ್ಕೆ ಇಷ್ಟವಿಲ್ಲ. ಇನ್ನು ಸ್ಮಾರಕ ಇರಬೇಕು ಅಂದ್ರೆ ಹೇಗೆ ಸಾಧ್ಯ ನೀವೇ ಹೇಳಿ.

ಇಷ್ಟೆಲ್ಲಾ ಆದ ಬಳಿಕ ಈಗ ವಿಷ್ಣುವರ್ಧನ್‌ರ ಅಳಿಯ ಅನಿರುದ್ಧ್ ಸುದ್ದಿಗೋಷ್ಠಿ ನಡೆಸಿ ಮೊಸಳೆ ಕಣ್ಣೀರು ಹಾಕೋದ್ರಿಂದ ಏನಾದ್ರೂ ಲಾಭ ಇದೆಯೇ..? ಅಭಿಮಾನಿಗಳನ್ನ ನಾವು ಎಂಂದೂ ಬಿಟ್ಟುಕೊಟ್ಟಿಲ್ಲ. ಅಮ್ಮ, ನಾನು ಅದೆಷ್ಟು ಕಚೇರಿಗಳಿಗೆ ಓಡಾಡಿದ್ದೇವೋ ಗೊತ್ತಿಲ್ಲ. ಅದು ಮಣ್ಣು ಮಾಡಿರೋ ಜಾಗ ಅಲ್ಲ. ದಹನ ಮಾಡಿರೋ ಜಾಗ. ಅಸ್ಥಿಯನ್ನು ಅಮ್ಮ ಕಲಶದಲ್ಲಿ ಎತ್ತಿಟ್ಟಿದ್ದರು. ಆ ಅಸ್ಥಿಯನ್ನು ಮೈಸೂರಿನಲ್ಲಿ ಪ್ರತಿಷ್ಠಾಪನೆ ಮಾಡಿದ್ದೇವೆ. ನಮ್ಮ ಗಮನಕ್ಕೆ ಬಾರದೆ ಸಮಾಧಿ ತೆರವು ಮಾಡಿದ್ದಾರೆ. ಈ ವಿಷಯ ನಮಗೆ ಗೊತ್ತೇಯಿಲ್ಲ ಅಂತ ಭಾವುಕರಾಗಿದ್ದಾರೆ ಅನಿರುದ್ದ್.

ಅದೇನೇ ಇರಲಿ, ವಿಘ್ನ ಮಾಡಿ ಆಗಿದೆ. ಈಗ ಏನೇ ಮಾಡಿದ್ರೂ ಆದ ಅವಮಾನವನ್ನು ಸರಿ ಮಾಡೋಕೆ ಸಾಧ್ಯವಿಲ್ಲ. ಅಭಿಮಾನಿಗಳು ಮುಂದೆ ಏನು ಮಾಡ್ತಾರೆ ಅನ್ನೋದು ಕಾದು ನೋಡಬೇಕಿದೆ. ಆದ್ರೆ ‘ನಾನು ನಿರಾಕಾರ, ಅಮೂರ್ತವನ್ನು ನಂಬುತ್ತೇನೆ. ರೂಪ-ಸ್ಥಾವರಗಳ ದಾಟಿ ಮನುಷ್ಯ ರೂಪಕವಾಗಬೇಕು’ ಅನ್ನೋ ವಿಷ್ಣುವರ್ಧನ್‌ರ ಮಾತನ್ನ ಅವ್ರ ಒಂದಷ್ಟು ಅಭಿಮಾನಿ ವೃಂದ ಮೌನವಾಗಿ ಅಂಗೀಕರಿಸಿ, ಜ್ವಾಲಾಮುಖಿಯಂತೆ ಕೊತ ಕೊತು ಕುದಿಯುತ್ತಿರುವ ತಮ್ಮ ಭಾವನೆಗಳನ್ನ ತಾಯಿ ಮಗುವನ್ನು ಗರ್ಭದಲ್ಲಿ ಹುದುಗಿಟ್ಟುಕೊಂಡಂತೆ ತಮ್ಮ ಹೃದಯಗಳಲ್ಲೇ ಅವಿತಿಟ್ಟುಕೊಂಡಿದ್ದಾರೆ. ಅಭಿಮಾನಿಗಳ ಹೃದಯಗಳೇ ವಿಷ್ಣುದಾದಾರ ನಿಜವಾದ ಪುಣ್ಮ ಭೂಮಿ ಅನ್ನೋದನ್ನ ಎಲ್ಲರೂ ಒಪ್ಪಿಕೊಳ್ಳಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

Exit mobile version