ಬೆಂಗಳೂರು: ಕನ್ನಡ ಚಿತ್ರರಂಗದ ದಿಗ್ಗಜ ನಟ ಡಾ. ವಿಷ್ಣುವರ್ಧನ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆಯಾದ ಸುದ್ದಿ ಕೇಳಿ, ನಟ ರಮೇಶ್ ಅರವಿಂದ್ ಸಂತೋಷ ವ್ಯಕ್ತಪಡಿಸಿದ್ದಾರೆ. ವಿಷ್ಣುವರ್ಧನ್ ಅವರ ಜೊತೆಗಿನ ಕ್ಷಣಗಳನ್ನು ಮೆಲಕು ಹಾಕಿರುವ ರಮೇಶ್, ಅವರ ಸರಳತೆ, ಕಲಾವಿದರಿಗೆ ಕೊಡುವ ಗೌರವ ಮತ್ತು ಕನ್ನಡ ಉಚ್ಚಾರಣೆಯ ಶೈಲಿಯ ಬಗ್ಗೆ ಭಾವುಕವಾಗಿ ಮಾತನಾಡಿದ್ದಾರೆ.
ವಿಷ್ಣುವರ್ಧನ್‌ರೊಂದಿಗಿನ ನೆನಪುಗಳು:
ರಮೇಶ್ ಅರವಿಂದ್, ವಿಷ್ಣುವರ್ಧನ್ ಜೊತೆಗೆ ಕೆಲಸ ಮಾಡಿದ ದಿನಗಳನ್ನು ನೆನಪಿಸಿಕೊಂಡು, “ವಿಷ್ಣುವರ್ಧನ್ ಅವರು ಪರದೆಯ ಮೇಲೆ ‘ಮೇಷ್ಟ್ರೇ’ ಎಂದು ಕೂಗುವ ರೀತಿಯೇ ಒಂದು ವಿಶಿಷ್ಟ ಶೈಲಿಯಾಗಿತ್ತು. ಅವರ ಚಿತ್ರಗಳು ಎಲ್ಲರಿಗೂ ಅದ್ಭುತ ಅನುಭವ ನೀಡಿದವು. ಅವರ ಜೊತೆಗೆ ಕಾಫಿ ಕುಡಿಯುತ್ತ ಮಾತನಾಡುವಾಗಲೇ ಒಂದು ದೊಡ್ಡ ಪಾಠ ಕಲಿತೆವು,” ಎಂದು ತಿಳಿಸಿದ್ದಾರೆ.
ವಿಷ್ಣುವರ್ಧನ್ ಅವರ ಸರಳತೆಯ ಬಗ್ಗೆ ಮಾತನಾಡಿದ ರಮೇಶ್, “ಅವರು ತಮ್ಮ ಪತ್ನಿ ಭಾರತಿ ಅವರಿಗೆ ಕೊಡುತ್ತಿದ್ದ ಗೌರವವನ್ನು ನಾವು ಕಲಿತೆವು. ಕಲಾವಿದರಿಗೆ ತೋರುತ್ತಿದ್ದ ಗೌರವ, ಒಡನಾಟದ ಸರಳತೆಯಿಂದ ಎಂದಿಗೂ ಕಹಿಯಾದ ಒಂದು ಕ್ಷಣವೂ ಇರಲಿಲ್ಲ,” ಎಂದು ಭಾವುಕರಾದರು.
ಕನ್ನಡಿಗರ ಹೃದಯದಲ್ಲಿ ವಿಷ್ಣುವರ್ಧನ್
ವಿಷ್ಣುವರ್ಧನ್ ಅವರ ಕನ್ನಡ ಉಚ್ಚಾರಣೆಯ ಶೈಲಿಯು ಕನ್ನಡಿಗರಿಗೆ ಎಂದಿಗೂ ಇಷ್ಟವಾಗಿತ್ತು. ಅವರ ಸ್ಟೈಲ್, ಡೈಲಾಗ್ ಡೆಲಿವರಿ ಮತ್ತು ಸರಳ ಸ್ವಭಾವವು ಅವರನ್ನು ಕನ್ನಡ ಚಿತ್ರರಂಗದ ಶಾಶ್ವತ ರತ್ನವನ್ನಾಗಿಸಿತು. ರಮೇಶ್ ಅರವಿಂದ್, “ವಿಷ್ಣುವರ್ಧನ್ ಸರ್‌ಗೆ ಕರ್ನಾಟಕ ರತ್ನ ಸಿಕ್ಕಿರುವುದು ನಿಜಕ್ಕೂ ಸಂತೋಷದ ಸಂಗತಿ. ಇದೇ ರೀತಿ ಡಾ. ರಾಜ್‌ಕುಮಾರ್ ಮತ್ತು ಸರೋಜದೇವಿ ಅವರಿಗೂ ಈ ಗೌರವ ಸಿಕ್ಕಿರುವುದು ಕನ್ನಡಿಗರಿಗೆ ಹೆಮ್ಮೆಯ ಕ್ಷಣ,” ಎಂದು ಹೇಳಿದ್ದಾರೆ.
