ಹೈದರಾಬಾದ್: ಸದಾ ವಿಭಿನ್ನ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಸಂಚಲನ ಮೂಡಿಸುವ ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಅವರ ಬಹುನಿರೀಕ್ಷಿತ ಮುಂದಿನ ಚಿತ್ರದ ಶೀರ್ಷಿಕೆ ಅಧಿಕೃತವಾಗಿ ಅನಾವರಣಗೊಂಡಿದೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ಮತ್ತು ಶಿರೀಶ್ ನಿರ್ಮಿಸುತ್ತಿರುವ ಈ ಬಿಗ್ ಬಜೆಟ್ ಸಿನಿಮಾಗೆ ‘ರೌಡಿ ಜನಾರ್ದನ’ ಎಂದು ಹೆಸರಿಡಲಾಗಿದ್ದು, ಚಿತ್ರದ ಮೊದಲ ಝಲಕ್ ಪ್ರೇಕ್ಷಕರಲ್ಲಿ ರೋಮಾಂಚನ ಮೂಡಿಸಿದೆ.
ಸೋಮವಾರ ಹೈದರಾಬಾದ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಚಿತ್ರದ ಗ್ಲಿಂಪ್ಸ್ ಬಿಡುಗಡೆ ಮಾಡಲಾಯಿತು. ಈ ಗ್ಲಿಂಪ್ಸ್‌ನಲ್ಲಿ ವಿಜಯ್ ದೇವರಕೊಂಡ ಹಿಂದೆಂದೂ ಕಾಣದಂತಹ ಮಾಸ್ ಅವತಾರದಲ್ಲಿ ಮಿಂಚಿದ್ದಾರೆ. ಮೈಯೆಲ್ಲಾ ರಕ್ತ, ಕೈಯಲ್ಲಿ ಮಚ್ಚು ಹಿಡಿದು ಅಬ್ಬರಿಸುತ್ತಿರುವ ವಿಜಯ್ ಲುಕ್ ಸಿನಿಮಾ ಪಕ್ಕಾ ಆಕ್ಷನ್ ಓರಿಯೆಂಟೆಡ್ ಎಂಬುದನ್ನು ಸಾರುತ್ತಿದೆ.
‘ರಾಜಾ ವಾರು ರಾಣಿ ಗಾರು’ ಚಿತ್ರದ ಮೂಲಕ ಗಮನ ಸೆಳೆದಿದ್ದ ರವಿ ಕಿರಣ್ ಕೋಲಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶೇಷವೆಂದರೆ, ಈ ಸಿನಿಮಾದ ಕಥೆಯು 1980ರ ಕಾಲಘಟ್ಟದಲ್ಲಿ ನಡೆಯಲಿದ್ದು, ಪೂರ್ವ ಗೋದಾವರಿ ಜಿಲ್ಲೆಯ ಹಿನ್ನೆಲೆಯನ್ನು ಹೊಂದಿದೆ. ವಿಜಯ್ ದೇವರಕೊಂಡ ಈ ಚಿತ್ರಕ್ಕಾಗಿ ಪ್ರಾದೇಶಿಕ ಗೋದಾವರಿ ಭಾಷೆಯ ಶೈಲಿಯನ್ನು (Slang) ಕಲಿತುಕೊಂಡಿದ್ದಾರೆ.
ಈ ಚಿತ್ರದಲ್ಲಿ ವಿಜಯ್ ದೇವರಕೊಂಡಗೆ ಜೋಡಿಯಾಗಿ ನ್ಯಾಷನಲ್ ಅವಾರ್ಡ್ ವಿನ್ನರ್ ಕೀರ್ತಿ ಸುರೇಶ್ ನಟಿಸುತ್ತಿರುವುದು ಚಿತ್ರದ ತೂಕವನ್ನು ಹೆಚ್ಚಿಸಿದೆ. ತಾಂತ್ರಿಕವಾಗಿ ಸಿನಿಮಾ ಅತ್ಯಂತ ಬಲಿಷ್ಠವಾಗಿದ್ದು, ಆನೆಂಡ್ ಸಿ. ಚಂದ್ರನ್ ಅವರ ಛಾಯಾಗ್ರಹಣ ಕಣ್ಣಿಗೆ ಹಬ್ಬ ನೀಡಲಿದೆ. ಕ್ರಿಸ್ಟೋ ಕ್ಸೇವಿಯರ್ ಅವರ ಸಂಗೀತ ಮತ್ತು ಸುಪ್ರೀಂ ಸುಂದರ್ ಅವರ ಸಾಹಸ ನಿರ್ದೇಶನವು ಪ್ರತಿ ಫ್ರೇಮ್‌ನಲ್ಲೂ ರೋಚಕತೆ ತುಂಬಲಿದೆ. ಜನಾರ್ದನ್ ಪಸುಮರ್ತಿ ಅವರು ಹೆಚ್ಚುವರಿ ಚಿತ್ರಕಥೆ ಬರೆಯುವ ಮೂಲಕ ತಂಡಕ್ಕೆ ಸಾಥ್ ನೀಡಿದ್ದಾರೆ.
‘ರೌಡಿ ಜನಾರ್ದನ’ ಚಿತ್ರವು ಕೇವಲ ತೆಲುಗಿಗೆ ಸೀಮಿತವಾಗದೆ, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. 2026ರ ಡಿಸೆಂಬರ್‌ನಲ್ಲಿ ವಿಶ್ವದಾದ್ಯಂತ ಈ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ಸದ್ಯ ಬಿಡುಗಡೆಯಾಗಿರುವ ಶೀರ್ಷಿಕೆ ಗ್ಲಿಂಪ್ಸ್ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದ್ದು, ವಿಜಯ್ ದೇವರಕೊಂಡ ಅಭಿಮಾನಿಗಳು ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ.
