ಕೊನೆಗೂ ಮಗನ ಹೆಸರು ರಿವೀಲ್ ಮಾಡಿದ ವಿಕ್ಕಿ-ಕತ್ರಿನಾ ಜೋಡಿ.!

Untitled design 2026 01 07T232217.596

ಮುಂಬೈ, ಜ. 7: ಬಾಲಿವುಡ್‌ನ ಅತ್ಯಂತ ಕ್ಯೂಟ್ ಜೋಡಿಗಳಲ್ಲಿ ಒಂದಾದ ನಟ ವಿಕ್ಕಿ ಕೌಶಲ್ ಮತ್ತು ನಟಿ ಕತ್ರಿನಾ ಕೈಫ್ ಅವರ ಪುತ್ರನ ಹೆಸರನ್ನು ಅಂತಿಮವಾಗಿ ಬಹಿರಂಗಪಡಿಸಿದ್ದಾರೆ.

ಇತ್ತೀಚೆಗಷ್ಟೇ ಗಂಡು ಮಗುವಿಗೆ ಪೋಷಕರಾದ ವಿಕ್ಕಿ–ಕತ್ರಿನಾ ದಂಪತಿ, ಮಗುವಿನ ಹೆಸರು ಯಾವುದು ಎಂಬುದನ್ನು ಬಹಿರಂಗಪಡಿಸದೇ ಅಭಿಮಾನಿಗಳನ್ನು ಕಾತುರದಲ್ಲೇ ಇಟ್ಟಿದ್ದರು. ಮಗು ಜನಿಸಿ ಎರಡು ತಿಂಗಳು ಕಳೆದರೂ ಹೆಸರಿನ ಬಗ್ಗೆ ಯಾವುದೇ ಮಾಹಿತಿ ನೀಡದ ಕಾರಣ, ‘ಜ್ಯೂನಿಯರ್ ವಿಕ್ಕಿ ಹೆಸರು ಏನು?’ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿತ್ತು. ಇದೀಗ ಆ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ.

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ತಮ್ಮ ಮಗುವಿಗೆ ‘ವಿಹಾನ್ ಕೌಶಲ್’ (Vihaan Kaushal) ಎಂದು ಹೆಸರು ಇಟ್ಟಿರುವುದಾಗಿ ಸ್ವತಃ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಘೋಷಿಸಿದ್ದಾರೆ. ಮಗುವಿನ ಪುಟ್ಟ ಕೈಯನ್ನು ಇಬ್ಬರೂ ಒಟ್ಟಿಗೆ ಹಿಡಿದಿರುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ಜೋಡಿ, ಭಾವನಾತ್ಮಕ ಕ್ಯಾಪ್ಶನ್ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.

“ನಮ್ಮ ಜೀವನದ ಬೆಳಕಿನ ಕಿರಣ ವಿಹಾನ್ ಕೌಶಲ್. ನಮ್ಮ ಪ್ರಾರ್ಥನೆಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ. ಜೀವನ ಸುಂದರವಾಗಿದೆ. ನಮ್ಮ ಜಗತ್ತು ಕ್ಷಣಾರ್ಧದಲ್ಲಿ ಬದಲಾಗಬಹುದು ಎಂಬುದಕ್ಕೆ ಈ ಸುಮಧುರ ಕ್ಷಣವೇ ಸಾಕ್ಷಿ. ನಮಗೆ ಶುಭ ಕೋರಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು” ಎಂದು ಅವರು ಬರೆದಿದ್ದಾರೆ. ಈ ಸಾಲುಗಳು ಅನೇಕ ಅಭಿಮಾನಿಗಳ ಹೃದಯ ಮುಟ್ಟಿದ್ದು, ಪೋಸ್ಟ್ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದೆ.

2025ರ ನವೆಂಬರ್ 7ರಂದು ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ದಂಪತಿಗೆ ಗಂಡು ಮಗು ಜನಿಸಿದ್ದು, ಆ ಸಂತಸದ ಸುದ್ದಿಯನ್ನು ಅವರೇ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಇದೀಗ ಮಗುವಿನ ಹೆಸರು ಬಹಿರಂಗ ಪಡಿಸಿದ್ದಾರೆ..

ಈ ಪೋಸ್ಟ್‌ಗೆ ನಟಿ ಪರಿಣಿತಿ ಚೋಪ್ರಾ ಸೇರಿದಂತೆ ಹಲವು ಸ್ಟಾರ್ ಸೆಲೆಬ್ರಿಟಿಗಳು ಕಮೆಂಟ್ ಮೂಲಕ ಶುಭ ಹಾರೈಸಿದ್ದಾರೆ. ನೆಟ್ಟಿಗರು ಕೂಡ “ವಿಹಾನ್ ಹೆಸರು ತುಂಬಾ ಮುದ್ದಾಗಿದೆ”, “ಮುಂದೆ ತಂದೆಯಂತೆ ಸ್ಟಾರ್ ಆಗ್ತಾನೆ” ಎಂದು ಹಾರೈಸುತ್ತಿದ್ದಾರೆ. ಕೆಲವರು ಈ ಮಗುವನ್ನು ‘ಜ್ಯೂನಿಯರ್ ವಿಕ್ಕಿ ಕೌಶಲ್’ ಎಂದು ಈಗಾಗಲೇ ಕರೆಯಲು ಆರಂಭಿಸಿದ್ದಾರೆ.

ಇತ್ತ, ಕತ್ರಿನಾ ಕೈಫ್ ಮದುವೆಯ ನಂತರ ಹಾಗೂ ಗರ್ಭಧಾರಣೆಯ ಕಾರಣದಿಂದ ಚಿತ್ರರಂಗದಿಂದ ಸ್ವಲ್ಪ ದೂರ ಉಳಿದಿದ್ದಾರೆ. 2024ರಲ್ಲಿ ‘ಮೇರಿ ಕ್ರಿಸ್ಮಸ್’ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಅವರು, ಇದೀಗ ಕುಟುಂಬಕ್ಕೆ ಹೆಚ್ಚಿನ ಸಮಯ ಮೀಸಲಿಟ್ಟಿದ್ದಾರೆ.

ಮತ್ತೊಂದೆಡೆ, ವಿಕ್ಕಿ ಕೌಶಲ್ ತಮ್ಮ ಮುಂದಿನ ಮಹತ್ವಾಕಾಂಕ್ಷಿ ಸಿನಿಮಾ ‘ಲವ್ ಆ್ಯಂಡ್ ವಾರ್’ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರವು 2026ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

Exit mobile version