ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶನ ಮಾಡಿರುವ ಬಹು ನಿರೀಕ್ಷಿತ ಚಿತ್ರ `ವೀರ ಕಂಬಳ’. ಕಂಬಳ ಎಂಬುದು ತುಳುನಾಡಿನ ನೆಲಮೂಲದ ಸಂಸ್ಕೃತಿಯ ಸೆಲೆಯಂಥಾ ಕ್ರೀಡೆ. ಅದಕ್ಕೆ ಎಂಟುನೂರು ವರ್ಷಗಳಿಗೂ ಹೆಚ್ಚಿನ ಸಮೃದ್ಧವಾದ ಇತಿಹಾಸವಿದೆ. ಕಾಲ ಕಳೆದಂತೆ ಒಂದಷ್ಟು ಕಾನೂನು ತೊಡಕುಗಳೆದುರಾಗುವ ಮೂಲಕ ಕಂಬಳ ಒಂದಷ್ಟು ರೂಪಾಂತರಗಳನ್ನು ಹೊಂದಿದೆ. ಅದರ ನಿಖರ ಇತಿಹಾಸದ ಜಾಡಿನಲ್ಲಿ ಹೆಜ್ಜೆಯಿಡುವ ಮೂಲಕ ರಾಜೇಂದ್ರ ಸಿಂಗ್ ಬಾಬು, ಕನ್ನಡ ಹಾಗೂ ತುಳು ಭಾಷೆಗಳಲ್ಲಿ ಈ ಚಿತ್ರವನ್ನು ರೂಪಿಸಿದ್ದಾರೆ. ಆರಂಭದಿಂದಲೂ ಸುದ್ದಿ ಕೇಂದ್ರದಲ್ಲಿರುವ ವೀರ ಕಂಬಳ ಚಿತ್ರವನ್ನು ಇದೇ ಫೆಬ್ರವರಿ ತಿಂಗಳಿನಲ್ಲಿ ತೆರೆಗಾಣಿಸಲು ಚಿತ್ರತಂಡ ನಿರ್ಧರಿಸಿದೆ.
ಕಂಬಳವನ್ನು ಕೇಂದ್ರವಾಗಿಟ್ಟುಕೊಂಡು ಈ ಕಥೆ, ಚಿತ್ರಕಥೆ ಸಿದ್ಧಪಡಿಸಲು ನಿರ್ದೇಶಕರು ಎರಡು ವರ್ಷಗಳ ಕಾಲ ಶ್ರಮ ವಹಿಸಿದ್ದಾರೆ. ತುಳು ರಂಗಭೂಮಿಯ ಪ್ರಸಿದ್ಧ ನಿರ್ದೇಶಕ ವಿಜಯ್ ಕೊಡಿಯಾಲ್ ಬೈಲ್ ಚಿತ್ರಕಥೆ ಮತ್ತು ಸಂಭಾಷಣೆಯ ಮೂಲಕ ಈ ಚಿತ್ರಕ್ಕೆ ಜೊತೆಯಾಗಿದ್ದಾರೆ. ಡೆಡ್ಲಿ ಸೋಮ ಖ್ಯಾತಿಯ ಆದಿತ್ಯ ನಾಯಕನಾಗಿ ಸವಾಲಿನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಪ್ರತಿಯೊಂದು ಸೂಕ್ಷ್ಮ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು, ತುಳುನಾಡಿನ ಪ್ರಾಜ್ಞರ ಮಾರ್ಗದರ್ಶನದಲ್ಲಿ ಯಾವುದೇ ತೊಡಕಿಲ್ಲದಂತೆ ವೀರ ಕಂಬಳವನ್ನು ಅಣಿಗೊಳಿಸಿರುವುದಾಗಿ ರಾಜೇಂದ್ರ ಸಿಂಗ್ ಬಾಬು ಹೇಳಿಕೊಂಡಿದ್ದಾರೆ.
ದಕ್ಷಿಣ ಕನ್ನಡದ ಮೂಡುಬಿದರೆಯ ಬಳಿಯಲ್ಲಿ ವಿಶಾಲವಾದ ಕಂಬಳದ ಗದ್ದೆಯನ್ನು ಸಿದ್ಧಪಡಿಸಿ, ಅಲ್ಲಿ ಪ್ರಧಾನ ದೃಷ್ಯಗಳನ್ನು ಸೆರೆಹಿಡಿಯಲಾಗಿದೆ. ಪ್ರತೀ ದಿನವೂ ಇಪ್ಪತ್ತು ಜೊತೆ ಕೋಣಗಳು ಹಾಗೂ ಐನೂರಕ್ಕೂ ಅಧಿಕ ಮಂದಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದರಂತೆ. ವಿಶೇಷವೆಂದರೆ, ಕಂಬಳದಲ್ಲಿ ಕೋಣಗಳನ್ನು ಓಡಿಸೋದರಲ್ಲಿ ದಾಖಲೆ ಬರೆದಿರುವ ಶ್ರೀನಿವಾಸ್ ಗೌಡ ಇಲ್ಲಿಯೂ ಅದೇ ಪಾತ್ರವನ್ನು ನಿರ್ವಹಿಸಿದ್ದಾರೆ. ಸ್ವರಾಜ್ ಶೆಟ್ಟಿ ಅವರಿಗೆ ಜೊತೆಯಾಗಿದ್ದಾರೆ. ದುಬೈನಲ್ಲಿಯೂ ಚಿತ್ರೀಕರಣ ನಡೆಸಲಾಗಿದೆ. ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳ ಅಂತಿಮ ಘಟ್ಟದಲ್ಲಿರುವ ಚಿತ್ರತಂಡ ಇಷ್ಟರಲ್ಲಿಯೇ ಬಿಡುಗಡೆಯ ನಿಖರ ದಿನಾಂಕ ಘೋಷಿಸಲಿದೆ.
ಈ ಚಿತ್ರವನ್ನು ಬಾಬಾ’ಸ್ ಬ್ಲೆಸಿಂಗ್ ಫಿಲ್ಮ್ಸ್ ಬ್ಯಾನರಿನಡಿಯಲ್ಲಿ ಡಾ. ವಿನಿತ ವಿಜಯ್ ಕುಮಾರ್ ರೆಡ್ಡಿ ಹಾಗೂ ಅರುಣ್ ರೈ ತೊಡಾರ್ ನಿರ್ಮಾಣ ಮಾಡಿದ್ದಾರೆ. ಪ್ರಕಾಶ್ ರೈ, ರವಿಶಂಕರ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದರೆ, ರಾಧಿಕಾ ಚೇತನ್ ವಿಶೇಷ ಪಾತ್ರಕ್ಕೆ ಜೀವ ತುಂಬಿದ್ದಾರೆ. ತುಳು ಭಾಷೆಯಲ್ಲಿಯೂ ಬಿಡುಗಡೆಗೊಳ್ಳಲಿರುವ ಸದರಿ ಚಿತ್ರದಲ್ಲಿ ನವೀನ್ ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಂಜೂರು ಸೇರಿದಂತೆ ಪ್ರಸಿದ್ಧ ತುಳು ರಂಗಭೂಮಿ ಹಿನ್ನೆಲೆಯ ನಟರು ನಟಿಸಿದ್ದಾರೆ. ವಿಜಯ್ ಕೊಡಿಯಾಲ್‌ಬೈಲ್ ಚಿತ್ರಕಥೆ ಸಂಭಾಷಣೆ, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಆರ್.ಗಿರಿ ಛಾಯಾಗ್ರಹಣ, ಶ್ರೀನಿವಾಸ್ ಎಸ್ ಬಾಬು ಸಂಕಲನ, ಚಂದ್ರಶೇಖರ್ ಸುವರ್ಣ ಮುಲ್ಕಿ ಕಲಾ ನಿರ್ದೇಶನ, ಕಾಂತ ಪ್ರಸಾದನ ಹಾಗೂ ಭಾಷಾ ಅವರ ವಸ್ತ್ರವಿನ್ಯಾಸದೊಂದಿಗೆ ವೀರ ಕಂಬಳ ಕಳೆಗಟ್ಟಿಕೊಂಡಿದೆ.
