ವಂಡರ್ ಕಿಡ್.. ಅಪ್ಪು ಕನಸು ಪುತ್ರಿ ವಂದಿತಾರಿಂದ ನನಸು..!

ಕೃಷ್ಣ (18)

ತಂದೆಯಂತೆ ಮಕ್ಕಳು ಕೂಡ ಅದೇ ಹಾದಿ ಹಿಡಿಯುತ್ತಾರೆ ಅನ್ನೋದಕ್ಕೆ ನಗುಮುಖದ ಒಡೆಯ, ರಾಜರತ್ನ ಅಪ್ಪು ಹಾಗೂ ಅವ್ರ ಮುದ್ದಿನ ಕಿರಿಮಗಳು ವಂದಿತಾ ಪುನೀತ್ ರಾಜ್‌ಕುಮಾರ್ ಸಾಕ್ಷಿ ಆಗಿದ್ದಾರೆ. ನಟನೆ ಜೊತೆಗೆ ಸದಾ ಬ್ಯುಸಿನೆಸ್ ಐಡಿಯಾಗಳನ್ನೇ ನೀಡ್ತಿದ್ದ, ಒಳ್ಳೆಯ ಬ್ಯುಸಿನೆಸ್ ಮ್ಯಾನ್ ಆಗಿ ಗುರ್ತಿಸಿಕೊಂಡಿದ್ದ ಪುನೀತ್ ಕನಸನ್ನ ಅವ್ರ ಮಗಳು ನನಸಾಗಿಸ್ತಿರೋದು ಖುಷಿಯ ವಿಚಾರ. ಹತ್ತು ಮಂದಿಗೆ ಮಾದರಿ ಆಗುವಂತಹ ವಂದಿತಾ ಮಾಡಿದ್ದೇನು ಗೊತ್ತಾ?

ಪುನೀತ್ ರಾಜ್‌‌ಕುಮಾರ್.. ನಗುಮುಖದ ಒಡೆಯ, ರಾಜರತ್ನ, ಕರ್ನಾಟಕ ರತ್ನ, ದೊಡ್ಮನೆ ಹುಡ್ಗ, ರಿಯಲ್ ರಾಜಕುಮಾರ ಇಂದು ನಮ್ಮೊಂದಿಗೆ ಇಲ್ಲ. ಹಾಗಂತ ಅವ್ರನ್ನ ನೆನೆಸಿಕೊಳ್ಳದ ದಿನವೂ ಇಲ್ಲ. ನಟನೆ ಜೊತೆ ಸದಾ ಬ್ಯುಸಿನೆಸ್ ಐಡಿಯಾಗಳಿಂದ ಸಾಕಷ್ಟು ಉದ್ಯಮಗಳಲ್ಲಿ ತೊಡಗಿಸಿಕೊಂಡು, ಬ್ಯುಸಿನೆಸ್‌‌ಮ್ಯಾನ್‌‌ಗಳನ್ನೇ ಆಪ್ತ ಮಿತ್ರರನ್ನಾಗಿಸಿಕೊಂಡಿದ್ದ ಅಪ್ಪು ಗುಣಗಳು ಅವ್ರ ಮಕ್ಕಳಿಗೂ ಬಂದಂತಿದೆ. ಲೈಕ್ ಡ್ಯಾಡ್ ಲೈಕ್ ಕಿಡ್ಸ್ ಅಂತ ಅಷ್ಟಿಲ್ಲದೆ ದೊಡ್ಡವರು ಹೇಳಿಲ್ಲ.

ಸದ್ಯ ಪುನೀತ್ ರಾಜ್‌‌ಕುಮಾರ್ ಕಿರಿ ಮಗಳು ವಂದಿತಾ ಹೋಮ್ ಬೇಕರ್ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಅದಕ್ಕೆ ನುಕಾಸ್ ಕೆಫೆ ಅಂತಲೂ ನಾಮಕರಣ ಮಾಡಿದ್ದಾರೆ. ಅಂದಹಾಗೆ ಈ ರೀತಿಯ ಒಂದು ಕಮರ್ಷಿಯಲ್ ಉದ್ಯಮ ಆರಂಭಿಸೋದು ರಾಜರತ್ನ ಅಪ್ಪು ಅವ್ರ ಕನಸಾಗಿತ್ತು. ಇನ್‌‌ಫ್ಯಾಕ್ಟ್ ಅದನ್ನ ಗೀತಾ ಶಿವರಾಜ್‌ಕುಮಾರ್ ಜೊತೆ ಅಪ್ಪು ಒಮ್ಮೆ ಪ್ರಸ್ತಾಪ ಕೂಡ ಮಾಡಿದ್ರಂತೆ. ನೀವು ಹೇಗೋ ಬೇಕಿಂಗ್ ತುಂಬಾ ಚೆನ್ನಾಗಿ ಮಾಡ್ತೀರಿ. ನುಕ್ಕಿ ವಂದಿತಾ ಕೂಡ ಚೆನ್ನಾಗಿ ಬೇಕಿಂಗ್ ಮಾಡ್ತಾಳೆ. ಇಬ್ಬರೂ ಸೇರಿ ಅದನ್ನ ಯಾಕೆ ಕಮರ್ಷಿಯಲ್ ಆಗಿ ಮಾಡಬಾರದು ಎಂದಿದ್ರಂತೆ ಅಪ್ಪು. ಅದನ್ನ ಗೀತಕ್ಕಾನೇ ಒಮ್ಮೆ ವೇದಿಕೆಯೊಂದರಲ್ಲಿ ಹೇಳಿಕೊಂಡಿದ್ರು. ಆದ್ರೀಗ ಅಪ್ಪುವಿನ ಆ ಕನಸನ್ನ ಮಗಳು ಇದೀಗ ನನಸು ಮಾಡಿದ್ದಾರೆ.

ಅಂದಹಾಗೆ ವಂದಿತಾ ಅದಕ್ಕಾಗಿ ಯಾವುದೇ ಔಟ್‌ಲೆಟ್ ಮಾಡಿಲ್ಲ. ವೆಬ್‌ಸೈಟ್ ಒಂದನ್ನ ಆರಂಭಿಸಿ, ಅದ್ರಲ್ಲಿ ಆನ್‌ಲೈನ್ ಆರ್ಡರ್‌‌ಗಳನ್ನ ತೆಗೆದುಕೊಂಡು, ಮನೆಯಲ್ಲೇ ತಯಾರಿಸಿ ಕೊಡೋಕೆ ಮುಂದಾಗಿದ್ದಾರೆ. ಬೇಕರಿ ತಿನಿಸುಗಳನ್ನ ಮನೆಯಲ್ಲಿ ತನ್ನ ಕೈಯ್ಯಾರೆ ತಾವೇ ತಯಾರಿಸಿ, ಡೆಲಿವರಿ ಮಾಡಲಿದ್ದಾರೆ. ಇವೆಂಟ್‌‌ಗಳ ಥೀಮ್‌ಗೆ ತಕ್ಕನಾದ ಕೇಕ್, ಕುಕ್ಕೀಸ್, ಕಸ್ಟಮೈಸ್ಡ್ ಸಿಹಿ ತಿನಿಸುಗಳನ್ನ ತಯಾರಿಸಿ ಕೊಡ್ತಾರಂತೆ. ತಿರಮಿಸುನಂತಹ ಡೆಸರ್ಟ್‌‌, ತರಹೇವಾರಿ ಕುಕ್ಕೀಸ್, ಬ್ರೌನಿ ಚಾಕೋಲೆಟ್ಸ್, ಕೇಕ್‌‌ಗಳನ್ನ ವಂದಿತಾ ತಯಾರಿಸ್ತಾರಂತೆ. ಜೊತೆಗೆ ಆರ್ಡರ್ ಕೊಟ್ಟ ಬಳಿಕ ಕೊಂಚ ಕಾಲಾವಕಾಶ ಕೂಡ ನೀಡಬೇಕಂತೆ. ರಾಮಾಯಣ ಚಿತ್ರದ ಸಕ್ಸಸ್‌‌ ಸಂಭ್ರಮಕ್ಕೆ ವಂದಿತಾ ತಯಾರಿಸಿದ ಹೋಮ್ ಮೇಡ್ ಕೇಕ್‌‌ ಸಾಕ್ಷಿಯಾಗಿದ್ದು ವಿಶೇಷ. ಒಟ್ಟಾರೆ ಅಪ್ಪು ಮಗಳ ಈ ನಡೆಗೆ ಎಲ್ಲೆಡೆಯಿಂದ ಪ್ರಶಂಸೆ, ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬರ್ತಿದೆ. ಕೆಲಸ ಇಲ್ಲ.. ನನಗೆ ಕೆಲಸವೇ ಸಿಗ್ತಿಲ್ಲ ಅಂತ ಕುಂಟು ನೆಪ ಹೇಳೋರಿಗೆ ವಂದಿತಾ ಸ್ಟೆಪ್ ಹಂಡ್ರೆಡ್ ಪರ್ಸೆಂಟ್ ಸ್ಫೂರ್ತಿ ಆಗಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್ 

Exit mobile version