ಈ ವರ್ಷ ಇಂಡಿಯನ್ ಸಿನಿದುನಿಯಾನ ಅವಲೋಕಿಸಿದ್ರೆ ಕನ್ನಡದ ಜೊತೆ ತಮಿಳು ಇಂಡಸ್ಟ್ರಿ ಕೂಡ ಡಲ್ ಹೊಡೆದಿತ್ತು. ಆದ್ರೆ ಹೊಸ ವರ್ಷಕ್ಕೆ ಸ್ಯಾಂಡಲ್‌ವುಡ್‌ನಂತೆ ಪರಭಾಷೆಗಳಲ್ಲೂ ಒಳ್ಳೊಳ್ಳೆಯ ಸಿನಿಮಾಗಳ ಲೈನಪ್ ಇದೆ. ಸಂಕ್ರಾಂತಿ-ಪೊಂಗಲ್‌ನಿಂದಲೇ ಸಿನಿಮೋತ್ಸವ ಶುರುವಾಗ್ತಿದ್ದು, ಯಾವ್ಯಾವ ಸೂಪರ್ ಸ್ಟಾರ್ ಬಕೆಟ್‌ನಲ್ಲಿ ಎಷ್ಟೆಷ್ಟು ಚಿತ್ರಗಳಿವೆ..? ರಶ್ಮಿಕಾ-ವಿಜಯ್ ವೆಡ್ಡಿಂಗ್ ಅಪ್ಡೇಟ್ಸ್ ಸಹ ಇಲ್ಲಿದೆ ನೋಡಿ.
ದಳಪತಿ-ಪ್ರಭಾಸ್ ಫೈಟ್.. ಸಂಕ್ರಾಂತಿ-ಪೊಂಗಲ್ ದಂಗಲ್
ವಿಜಯ್ ಕಟ್ಟ ಕಡೆಯ ಸಿನಿಮಾ ‘ಜನ ನಾಯಗನ್’ ತೆರೆಗೆ
ಯೆಸ್.. ನಮ್ಮ ಕನ್ನಡ ಚಿತ್ರರಂಗದ ರೀತಿ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲೂ ಒಳ್ಳೊಳ್ಳೆಯ ಸಿನಿಮಾಗಳ ಲೈನಪ್ ಇದೆ. ಟೀಸರ್, ಫಸ್ಟ್‌ಲುಕ್‌ಗಳಿಂದ ಸಿಕ್ಕಾಪಟ್ಟೆ ಕಿಕ್ ಕೊಡ್ತಿವೆ. ಅದೂ ಸಂಕ್ರಾಂತಿ ಹಾಗೂ ಪೊಂಗಲ್‌ನಿಂದಲೇ ಈ ಸಿನಿಮಾಗಳ ಉತ್ಸವ ಶುರುವಾಗ್ತಿರೋದು ವಿಶೇಷ.
ಡಾರ್ಲಿಂಗ್ ಪ್ರಭಾಸ್ ನಟನೆಯ ಮೊದಲ ಹಾರರ್ ಮೂವಿ ರಾಜಾಸಾಬ್. ಈ ಚಿತ್ರ ಸಂಕ್ರಾಂತಿ ವಿಶೇಷ ಜನವರಿ 9ಕ್ಕೆ ವರ್ಲ್ಡ್‌ವೈಡ್ ತೆರೆಗೆ ಬರ್ತಿದೆ. ಸಂಜಯ್ ದತ್ ಹಾಗೂ ಪ್ರಭಾಸ್ ತಾತಾ-ಮೊಮ್ಮಗನಾಗಿ ಕಮಾಲ್ ಮಾಡಿದ್ದು, ಟ್ರೈಲರ್ ನೆಕ್ಸ್ಟ್ ಲೆವೆಲ್‌ಗಿದೆ. ವೆರೈಟಿ ಜಾನರ್ ಆಫ್ ಸಿನಿಮಾಗಳಲ್ಲಿ ನಟಿಸ್ತಿರೋ ಡಾರ್ಲಿಂಗ್ ನಿಮ್ಮನ್ನ ಭಯ ಪಡಿಸೋಕೆ ಬರ್ತಿದ್ದಾರೆ.
‘ರಾಜಾಸಾಬ್’ ಡಾರ್ಲಿಂಗ್ ಪ್ರಭಾಸ್ ಹಾರರ್ ಪ್ರಭಾವಳಿ
ತಾತಾ-ಮೊಮ್ಮಗನಾಗಿ ಸಂಜಯ್ ದತ್-ಪ್ರಭಾಸ್ ಕಾದಾಟ
ಇನ್ನೂ ತಮಿಳಿನ ದಳಪತಿ ವಿಜಯ್ ಕಟ್ಟ ಕಡೆಯ ಸಿನಿಮಾ ಜನ ನಾಯಗನ್ ಪೊಂಗಲ್ ವಿಶೇಷ ಜನವರಿ 9ರಂದೇ ಥಿಯೇಟರ್‌ಗೆ ಎಂಟ್ರಿ ಕೊಡ್ತಿದೆ. ರಾಜಕಾರಣದಲ್ಲಿ ಸಕ್ರಿಯರಾಗುವ ಹಿನ್ನೆಲೆಯಲ್ಲಿ ನಟನಾ ವೃತ್ತಿಗೆ ನಿವೃತ್ತಿ ಘೋಷಿಸಿರೋ ವಿಜಯ್, ಇತ್ತೀಚೆಗೆ ಮಲೇಷ್ಯಾದಲ್ಲಿ ಆಡಿಯೋ ಲಾಂಚ್ ಫಂಕ್ಷನ್ ಮಾಡಿ, ಹಾಡು ಹಾಡಿ, ಕುಣಿದು, ಭಾವುಕ ಮಾತುಗಳಿಂದ ರಿಟೈರ್ಮೆಂಟ್ ಹೇಳಿದ್ರು. ಇಂಟರೆಸ್ಟಿಂಗ್ ಅಂದ್ರೆ ಈ ಜನ ನಾಯಗನ್ ಸಿನಿಮಾಗೆ ನಮ್ಮ ಕನ್ನಡದ ಕೆವಿಎನ್ ಸಂಸ್ಥೆ ಬಂಡವಾಳ ಹೂಡಿದೆ.
ಶಾರೂಖ್-ಸಲ್ಲೂ ಸೌಂಡಿಂಗ್.. ‘ಕಿಂಗ್’ ಆಗಿ ಕಮಾಲ್..?
ಗೆಲ್ಲಲೇಬೇಕು ಗಲ್ವಾನ್.. ಇಲ್ಲಾಂದ್ರೆ ಸಲ್ಲು ಕರಿಯರ್ ಖತಂ
ಶಾರೂಖ್ ಖಾನ್ ತಮ್ಮ ಬಿರುದಿನ ಟೈಟಲ್‌ನಲ್ಲೇ ಕಿಂಗ್ ಅನ್ನೋ ಸಿನಿಮಾ ಮಾಡ್ತಿದ್ದು, ಫಸ್ಟ್ ಲುಕ್‌ನಿಂದ ಅಭಿಮಾನಿಗಳಲ್ಲಿ ಕ್ರೇಜ್ ದುಪ್ಪಟ್ಟು ಮಾಡಿದ್ದಾರೆ. ಅತಿ ಶ್ರೀಮಂತ ನಟ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿರೋ ಶಾರೂಖ್ ಕಿಂಗ್ ಆಗಿ ಬಾಕ್ಸ್ ಆಫೀಸ್ ದೋಚುವುದಕ್ಕೆ 2026ರಲ್ಲಿ ಬರೋದು ಪಕ್ಕಾ ಆಗಿದೆ.
ಸಾಲು ಸಾಲು ಸಿನಿಮಾಗಳ ಸೋಲಿನಿಂದ ಸಿಕ್ಕಾಪಟ್ಟೆ ಕಂಗೆಟ್ಟಿರೋ ನಟ ಸಲ್ಮಾನ್ ಖಾನ್, ಈ ಬಾರಿ ಗಲ್ವಾನ್ ಚಿತ್ರದಿಂದ ಗೆದ್ದೇ ಗೆಲ್ಲುವೆ ಅನ್ನೋ ಭರವಸೆಯೊಂದಿಗೆ ಪ್ರೇಕ್ಷಕರ ಮುಂದೆ ಅದೃಷ್ಠ ಪರೀಕ್ಷೆಗೆ ಬರ್ತಿದ್ದಾರೆ. ಅಂದಹಾಗೆ ಇದು ಇಂಡೋ-ಚೈನಾದ ಗಲ್ವಾನ್ ಕದನದ ಕಥಾನಕವಾಗಿದ್ದು, ದೇಶಪ್ರೇಮದ ಕಿಚ್ಚ ಹೆಚ್ಚಿಸೋ ಚಿತ್ರವಾಗಿ ಹೊರಹೊಮ್ಮಲಿದೆ. ಟೀಸರ್ ರಿಲೀಸ್ ಆಗಿದ್ದು, ನಮ್ಮ ಯಶ್ ಟಾಕ್ಸಿಕ್ ಎದುರು ಬರೋಕೆ ಹೆದರಿ ರಿಲೀಸ್ ಡೇಟ್ ಬದಲಿಸಿಕೊಂಡಿದ್ದಾರೆ ಸಲ್ಲು.
ರಾಕಿಭಾಯ್ ಟಾಕ್ಸಿಕ್ ಎದುರು ಧುರಂಧರ್-2 ಕಮಿಂಗ್
ಜೂನ್‌ಗೆ ಜೈಲರ್-2.. ತಲೈವಾ ರಜನಿ ವಿತ್ ಮಲ್ಟಿಸ್ಟಾರ್ಸ್
ಹೌದು.. 2026ರ ಮಾರ್ಚ್ 19ಕ್ಕೆ ನಮ್ಮ ಹೆಮ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರದ ಎದುರು ರಣ್‌ವೀರ್ ಸಿಂಗ್ ನಟನೆಯ ಧುರಂಧರ್-2 ಬರ್ತಿದೆ. ರಣ್‌ವೀರ್ ಬೇರಾರೂ ಅಲ್ಲ, ನಮ್ಮ ಕರ್ನಾಟಕರ ಅಳಿಯ. ಆದ್ರೆ ಧುರಂಧರ್ ಸಿನಿಮಾ ಸಾವಿರ ಕೋಟಿ ಕಮಾಯಿ ಮಾಡೋದ್ರ ಮೂಲಕ ಈ ವರ್ಷದ ಅತಿಹೆಚ್ಚು ಗಳಿಸಿದ ಸಿನಿಮಾಗಳ ಲಿಸ್ಟ್ ಸೇರಿದೆ. ಕ್ರೇಜ್ ಕಾ ಬಾಪ್ ಆಗಿದೆ. ಹೀಗಾಗಿ ಇದು ಹೊಸ ವರ್ಷದ ಬಿಗ್ಗೆಸ್ಟ್ ಬಾಕ್ಸ್ ಆಫೀಸ್ ಕ್ಲ್ಯಾಶ್ ಕೂಡ ಆಗಲಿದೆ.
