ಯೋಗರಾಜ್ ಸಿನಿಮಾಸ್ ಮತ್ತು ರವಿ ಶಾಮನೂರು ಫಿಲಂಸ್ ಅಡಿಯಲ್ಲಿ ನಿರ್ಮಾಣವಾಗಿರುವ “ಉಡಾಳ” ಚಿತ್ರವು ನವೆಂಬರ್ 14 ರಂದು ರಾಜ್ಯಾದ್ಯಂತದ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. “ಪದವಿ ಪೂರ್ವ” ಚಿತ್ರದ ನಂತರ ಮತ್ತೆ ಯೋಗರಾಜ್ ಭಟ್ ಮತ್ತು ರವಿ ಶಾಮನೂರು ಜೋಡಿಯಿಂದ ನಿರ್ಮಾಣವಾಗಿರುವ ಈ ಚಿತ್ರವನ್ನು ಅಮೋಲ್ ಪಾಟೀಲ್ ನಿರ್ದೇಶಿಸಿದ್ದಾರೆ.
“ಪದವಿ ಪೂರ್ವ” ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮ ಗುರುತು ಮಾಡಿಕೊಂಡ ಪೃಥ್ವಿ ಶಾಮನೂರು ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ನಾಯಕಿಯಾಗಿ ಹೃತಿಕ ಶ್ರೀನಿವಾಸ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಟೀಸರ್ ಇತ್ತೀಚೆಗೆ ‘ಸರಿಗಮ’ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಅಪಾರ ಆಸಕ್ತಿ ಮೂಡಿಸಿದೆ.
ಯೋಗರಾಜ್ ಭಟ್ ,ಚಿತ್ರಕ್ಕಾಗಿ ಐದು ಹಾಡುಗಳನ್ನು ರಚಿಸಿದ್ದು, ಚೇತನ್ ಡ್ಯಾವಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಉತ್ತರ ಕರ್ನಾಟಕದ ಜನಪ್ರಿಯ ಗಾಯಕರಾದ ಮಾಳು ನಿಪ್ನಾಳು, ಬಾಳು ಬೆಳಗುಂದಿ, ಕರಿಬಸವ, ಸೃಷ್ಟಿ ಶಾಮನೂರು ಸೇರಿದಂತೆ ಹಲವಾರು ಕಲಾವಿದರು ಚಿತ್ರದ ಹಾಡುಗಳನ್ನ ಹಾಡಿದ್ದಾರೆ. ಚಿತ್ರದ ಮೊದಲ ಹಾಡು “ಹೊಡಿ ಶ್ಯಾವಿಗ್ಯಾಗ ಮಜ್ಗಿ” ಪದದಿಂದ ಶುರುವಾಗುತ್ತದೆ ಮತ್ತು ಇದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ಪೃಥ್ವಿ ಶಾಮನೂರು ಮತ್ತು ಹೃತಿಕ ಶ್ರೀನಿವಾಸ್ ಅವರ ಜೊತೆಗೆ ಬಲ ರಾಜ್ವಾಡಿ, ಮಾಳು ನಿಪ್ನಾಳ್, ಹರೀಶ್ ಹಿರಿಯೂರು, ಬಿರಾದರ್, ಗೋವಿಂದೇಗೌಡ, ಸುಮಿತ್ ಸಂಕೋಜಿ, ವಾದಿರಾಜ ಬಬ್ಲಾದಿ, ಪ್ರವೀಣ್ ಗಸ್ತಿ, ದಯಾನಂದ ಬೀಳಗಿ, ರೇಣುಕ, ಶ್ರೀಧರ್, ದಾನಪ್ಪ, ಶಿಲ್ಪ ಶಾಂತಕುಮಾರ್, ಸೋನಿಯಾ ಸೇರಿದಂತೆ ಹಲವಾರು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.
ಚಿತ್ರದ ಛಾಯಾಗ್ರಹಣ ಶಿವಶಂಕರ್ ನೂರಂಬಡ ಅವರದ್ದಾಗಿದ್ದು, ಮಧು ತುಂಬಕೆರೆ ಸಂಕಲನ ಮಾಡಿದ್ದಾರೆ. ಅರ್ಜುನ್ ರಾಜ್ ಕಲಾ ನಿರ್ದೇಶನ ಮಾಡಿದ್ದರೆ, ವಿನೋದ್ ಸಾಹಸ ನಿರ್ದೇಶನದ ಜವಾಬ್ದಾರಿ ವಹಿಸಿದ್ದಾರೆ. ಭಜರಂಗಿ ಮೋಹನ್ ಮತ್ತು ರಘು ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ.
ಚಿತ್ರದ ಬಹುಭಾಗದ ಚಿತ್ರೀಕರಣ ವಿಜಯಪುರದಲ್ಲಿ ನಡೆದಿದ್ದು, ಉತ್ತರ ಕರ್ನಾಟಕದ ಸಂಸ್ಕೃತಿ ಮತ್ತು ಜೀವನಶೈಲಿಯನ್ನು ಚಿತ್ರವು ಪ್ರತಿಬಿಂಬಿಸುತ್ತದೆ. ಲವ್, ಕಾಮಿಡಿ, ಸಸ್ಪೆನ್ಸ್ ಸೇರಿದಂತೆ ಎಲ್ಲಾ ರೀತಿಯ ಮನರಂಜನೆಯನ್ನ ಚಿತ್ರ ಒಳಗೊಂಡಿದೆ. ಯೋಗರಾಜ್ ಭಟ್ ಅವರು ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವುದು ಈ ಚಿತ್ರದ ವಿಶೇಷ ಅಂಶವಾಗಿದೆ.