ರಾಕಿಂಗ್ ಸ್ಟಾರ್ ಯಶ್ ಅವರ ಬಹು ನಿರೀಕ್ಷಿತ ಚಿತ್ರ ‘ಟಾಕ್ಸಿಕ್ ಚಿತ್ರವನ್ನು ಮತ್ತೆ ಬಿಡುಗಡೆ ಮುಂದೂಡಲಾಗಿದೆ. ಮೊದಲಿಗೆ ಜೂನ್ 4ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿದ್ದ ಈ ಸಿನಿಮಾ ಈಗ ಅನಿವಾರ್ಯ ಕಾರಣಗಳಿಂದ ಬಿಡುಗಡೆ ಸ್ಥಗಿತಗೊಂಡಿದೆ. ಯಶ್ ಅವರು ತಮ್ಮ ಅಧಿಕೃತ ‘ಎಕ್ಸ್’ (ಟ್ವಿಟರ್) ಖಾತೆಯ ಮೂಲಕ ಈ ಮಾಹಿತಿಯನ್ನು ದೃಢಪಡಿಸಿದ್ದಾರೆ. ಈ ನಿರ್ಧಾರವು ಅಭಿಮಾನಿಗಳಿಗೆ ಸ್ವಲ್ಪ ನಿರಾಸೆ ತಂದಿದೆ.
ಚಿತ್ರತಂಡ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಇತ್ತೀಚೆಗೆ ನಡೆದ ‘ಸಿನಿಮಾಕಾನ್’ (CinemaCon) ಕಾರ್ಯಕ್ರಮದಲ್ಲಿ ‘ಟಾಕ್ಸಿಕ್’ ಸಿನಿಮಾಗೆ ಅಂತರಾಷ್ಟ್ರೀಯ ವಿತರಕರಿಂದ ಅತ್ಯಂತ ಭರ್ಜರಿ ಪ್ರತಿಕ್ರಿಯೆ ದೊರೆತಿದೆ. ಹಲವಾರು ದೇಶಗಳಿಂದ ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಆಸಕ್ತಿ ವ್ಯಕ್ತವಾಗಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ತಂಡವು ಬಿಡುಗಡೆ ದಿನಾಂಕವನ್ನು ಮರುಪರಿಶೀಲಿಸಿದೆ.
ಯಶ್ ತಮ್ಮ ಅಧಿಕೃತ ಹೇಳಿಕೆ ನೀಡಿದ್ದು, ‘ಟಾಕ್ಸಿಕ್ ನಮ್ಮ ಪಾಲಿಗೆ ಕೇವಲ ಸಿನಿಮಾ ಅಲ್ಲ, ಇದು ಒಂದು ಪಯಣ. ಸಿನಿಮಾಕಾನ್‌ನಲ್ಲಿ ಸಿಕ್ಕ ಪ್ರತಿಕ್ರಿಯೆ, ಈ ಚಿತ್ರವು ವಿಶ್ವಮಟ್ಟದಲ್ಲಿ ದೊಡ್ಡ ವೇದಿಕೆಯಲ್ಲಿ ಬಿಡುಗಡೆಯಾಗಬೇಕೆಂಬ ನಂಬಿಕೆಯನ್ನು ಹೆಚ್ಚಿಸಿದೆ’ ಎಂದು ತಿಳಿಸಿದ್ದಾರೆ. ಭಾರತೀಯ ಚಿತ್ರರಂಗ ಈಗ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ಈ ಸಮಯದಲ್ಲಿ, ಉತ್ತಮ ಗುಣಮಟ್ಟದ ಹಾಗೂ ಪರಿಣಾಮಕಾರಿ ಬಿಡುಗಡೆಯೇ ಮುಖ್ಯ ಎಂದು ಹೇಳಿದ್ದಾರೆ.
ಚಿತ್ರತಂಡವು ಈಗ ಜಾಗತಿಕ ವಿತರಣೆ ಮತ್ತು ಅಂತರಾಷ್ಟ್ರೀಯ ಸಹಭಾಗಿತ್ವಗಳ ಮೇಲೆ ಹೆಚ್ಚು ಗಮನ ಹರಿಸುತ್ತಿದೆ. ಈ ಕಾರಣದಿಂದಲೇ ಬಿಡುಗಡೆ ದಿನಾಂಕವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಹೊಸ ದಿನಾಂಕವನ್ನು ಶೀಘ್ರದಲ್ಲೇ ಅಧಿಕೃತವಾಗಿ ಘೋಷಿಸಲಾಗುವುದು ಎಂದು ತಿಳಿಸಲಾಗಿದೆ.
‘ಟಾಕ್ಸಿಕ್’ ಚಿತ್ರವನ್ನು ಗೀತು ಮೋಹನ್ ದಾಸ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಸೇರಿದಂತೆ ದೊಡ್ಡ ತಾರಾಬಳಗವೇ ನಟಿಸಿದೆ. ಚಿತ್ರವನ್ನು ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಿಸಲಾಗಿದ್ದು, ನಂತರ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಿಗೆ ಡಬ್ ಮಾಡಲಾಗುತ್ತಿದೆ.
ಸಿನಿಮಾ ಈಗ ಸಂಪೂರ್ಣ ಶೂಟಿಂಗ್ ಮುಗಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆ ತಯಾರಿಯ ಹಂತದಲ್ಲಿದೆ. ಚಿತ್ರತಂಡವು ವಿಶ್ವದಾದ್ಯಂತ ದೊಡ್ಡ ಮಟ್ಟದ ರಿಲೀಸ್ ಮಾಡುವ ಉದ್ದೇಶದಿಂದ ಮಾರ್ಕೆಟಿಂಗ್ ಮತ್ತು ವಿತರಣಾ ತಂತ್ರಗಳನ್ನು ರೂಪಿಸುತ್ತಿದೆ.
ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸ್ವಲ್ಪ ನಿರಾಸೆ ವ್ಯಕ್ತಪಡಿಸಿದರೂ, ಬಹುತೇಕರು ‘ಗುಣಮಟ್ಟಕ್ಕಾಗಿ ಕಾಯಲು ಸಿದ್ಧ’ ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ. ಯಶ್ ಕೂಡ ತಮ್ಮ ಹೇಳಿಕೆಯಲ್ಲಿ ಅಭಿಮಾನಿಗಳ ತಾಳ್ಮೆಗೆ ಧನ್ಯವಾದ ಹೇಳಿದ್ದು, ‘ನಿಮ್ಮ ನಿರೀಕ್ಷೆಗೆ ತಕ್ಕಂತೆ ಹೆಮ್ಮೆಪಡುವಂತಹ ಸಿನಿಮಾ ನೀಡುತ್ತೇವೆ’ ಎಂದು ಭರವಸೆ ನೀಡಿದ್ದಾರೆ.
