ಯೋಧರ ತ್ಯಾಗ, ಬಲಿದಾನ & ಶ್ರಮದ ನೆತ್ತರು ಸ್ವಾತಂತ್ರ್ಯ!

ಇತಿಹಾಸದ ಪುಟಗಳಲ್ಲಿ ಹುದುಗಿ ಹೋದ ಹೀರೋಗಳು..!

1 (49)

ಯೋಧರ ತ್ಯಾಗ, ಬಲಿದಾನ & ಶ್ರಮದ ನೆತ್ತರು ಸ್ವಾತಂತ್ರ್ಯ. ಇತಿಹಾಸದ ಪುಟಗಳಲ್ಲಿ ಹುದುಗಿ ಹೋದ ಹೀರೋಗಳು..! ತೆರೆಮೇಲೆ ರಾರಾಜಿಸಿದ ದೇಶಭಕ್ತಿ ಸಾರುವ ನಗ್ನ ಸತ್ಯಗಳು. ಇಂಡಿಯಾದ ಟಾಪ್-10 ಪೇಟ್ರಿಯಾಟಿಕ್ ಮೂವೀಸ್..! ಗ್ಯಾರಂಟಿ ನ್ಯೂಸ್‌‌ನಲ್ಲಿ ಸಾರ್ವಕಾಲಿಕ ಭಾರತಾಂಬೆ ಪುತ್ರರು. ಇದೇ ಈ ಹೊತ್ತಿನ ವಿಶೇಷ, ಭಾರತಾಂಬೆ ನಿನ್ನ ಜನುಮ ದಿನ.

ಇಂದು ದೇಶದ 145 ಕೋಟಿ ಮಂದಿ ಜನ ನಿಶ್ಚಿಂತೆಯಿಂದ ನೆಮ್ಮದಿಯ ಜೀವನ ನಡೆಸ್ತಿದ್ದಾರೆ ಅಂದ್ರೆ ಅದಕ್ಕೆ ಕಾರಣ 21 ಲಕ್ಷ ಸೈನಿಕರು. ಯೋಧರು ಹಗಲಿರುಳು ದೇಶ ಕಾಯೋಕೂ ಮುನ್ನ, ಸಹಸ್ರಾರು ಮಂದಿ ನೆತ್ತರು ಹರಿಸಿ, ಪ್ರಾಣ ತ್ಯಜಿಸಿ, ಭಾರತಕ್ಕೆ ಸ್ವತಂತ್ರ ತಂದುಕೊಟ್ಟಿದ್ದಾರೆ. ಹೀಗೆ ದೇಶಪ್ರೇಮ ಹಾಗೂ ದೇಶಭಕ್ತಿಯ ಕಿಚ್ಚನ್ನ ಹೆಚ್ಚಿಸೋ ಒಂದಷ್ಟು ನೈಜ ಘಟನೆ ಆಧಾರಿತ ಸಿನಿಮಾಗಳ ಮಾಹಿತಿ ಇಲ್ಲಿದೆ.

ಸಿನಿಮಾ ಅಂದ್ರೆ ಬರೀ ಮನರಂಜನೆ ಮಾತ್ರ ಅಲ್ಲ. ಅದೊಂದು ಪವರ್​ಫುಲ್ ಮಾಧ್ಯಮ. ಸಮಾಜದ ಆಗು ಹೋಗುಗಳ ಜೊತೆಗೆ ನ್ಯೂನ್ಯತೆಗಳನ್ನ ಎತ್ತಿ ಹಿಡಿಯಬಲ್ಲಂತಹ ಮೀಡಿಯಂ. ಎಲ್ಲೋ ದೇಶದ ಒಂದು ಮೂಲೆಯಲ್ಲಾದ ಒಂದೊಂದು ಘಟನೆಯನ್ನ ಕೂಡ ಸಿನಿಮಾ ಮೂಲಕ ಇಡೀ ದೇಶಕ್ಕಷ್ಟೇ ಅಲ್ಲ, ವಿಶ್ವಕ್ಕೆ ತೋರಿಸೋ ಶಕ್ತಿ ಇರೋ ಅಂತಹ ಸಾಧನ.

ಫಿಲ್ಮ್ ಇಂಡಸ್ಟ್ರಿ ಬರೀ ಉದ್ಯಮವಾಗಿ ಉಳಿಯದೆ, ಅದೆಷ್ಟೋ ನೈಜ ಘಟನೆಗಳನ್ನ ಬಿತ್ತರಿಸೋಕೆ ವೇದಿಕೆ ಆಗಿದೆ. ಅಷ್ಟೇ ಅಲ್ಲ, ಸಾಧಕರ, ಸಂತರ ಕುರಿತ ಸಿನಿಮಾಗಳು ಹೊರಬಂದಿವೆ. ಇನ್ನು ಇತಿಹಾಸದ ಪುಟಗಳಲ್ಲಿ ಹುದುಗಿ ಹೋಗಿರೋ ಸ್ವತಂತ್ರಪೂರ್ವ ಯೋಧರ ತ್ಯಾಗ- ಬಲಿದಾನಗಳು, ಬೆಳ್ಳಿ ಪರದೆ ಆವರಿಸಿಕೊಂಡು, ದೇಶಪ್ರೇಮ ಹೆಚ್ಚಿಸಿವೆ.

1947ರಲ್ಲಿ ನಮ್ಮ ಭಾರತ, ಬ್ರಿಟಿಷರ ಸಂಕೋಲೆಯಿಂದ ಮುಕ್ತವಾಗಿ, ಸ್ವತಂತ್ರ ಪಡೆದ ಬಳಿಕವೂ ಸಹಸ್ರಾರು ಘಟನೆಗಳು ನಡೆದುಹೋಗಿವೆ. ಚೀನಾ, ಪಾಕಿಸ್ತಾನ್ ಜೊತೆ ಯುದ್ಧಗಳು ನಡೆದಿವೆ. ಇಂದಿಗೂ ನಡೆಯುತ್ತಿವೆ. ಎಂಟೆದೆಯ ಬಂಟರಂತೆ ಲಕ್ಷಾಂತರ ಮಂದಿ ಸೈನಿಕರು ಭರತ ಖಂಡವನ್ನ ಮನೆಯಂತೆ ಕಾವಲು ಕಾಯ್ತಿದ್ದಾರೆ. ಕದನಗಳಲ್ಲಿ ತಮ್ಮ ಉಸಿರು ನೀಡಿ, ದೇಶವನ್ನ ಹಸಿರಾಗಿಟ್ಟಿದ್ದಾರೆ.

ಅಂತಹ ವೀರ ಯೋಧರ ದಿಟ್ಟ ನಿರ್ಧಾರಗಳು, ಅವರಿಟ್ಟ ಹೆಜ್ಜೆಗಳು, ನೂರಾರು ಸಿನಿಮಾಗಳ ರೂಪದಲ್ಲಿ ಬೆಳ್ಳಿ ಪರದೆ ಆವರಿಸಿವೆ. ಇಂದಿನ ಜನರೇಷನ್​ಗೆ ಸಿನಿಮಾ ಅನ್ನೋ ಮಾಧ್ಯಮದ ಮೂಲಕ ದೇಶಪ್ರೇಮದ ಕಿಚ್ಚನ್ನ ಪರಿಚಯಿಸಿವೆ.

ಇಂಡಿಯಾದ ಟಾಪ್ ಟೆನ್ ಪೇಟ್ರಿಯಾಟಿಕ್ ಮೂವೀಸ್ ಲಿಸ್ಟ್​ನಲ್ಲಿ ಮೊದಲಿಗೆ ಕಾಣೋದೇ ಬಾರ್ಡರ್. ಹೌದು.. 1971ರ ಇಂಡೋ ಪಾಕ್ ವಾರ್​ನ ನೆನಪಿಸೋ ಈ ಸಿನಿಮಾ 1997ರಲ್ಲಿ ತೆರೆಕಂಡಿತ್ತು. ರಾಜಸ್ತಾನ ಮರುಭೂಮಿಯ ಲಾಂಜ್​​ವಾಲಾದಲ್ಲಿ ನಡೆದ ಕದನ ಇದಾಗಿದ್ದು, 120 ಭಾರತೀಯ ಸೈನಿಕರ ಮೇಲೆ ಸುಮಾರು ಎರಡ್ಮೂರು ಸಾವಿರ ಪಾಕ್ ಸೈನಿಕರು ದಾಳಿ ನಡೆಸಿದ್ರು.

ಮೇಜರ್ ಕುಲದೀಪ್ ಸಿಂಗ್ ಚಾಂದ್​ಪುರಿ, ವಿಂಗ್ ಕಮಾಂಡರ್ ಆನಂದ್, ಬಿಎಸ್​​ಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಬೈರಾನ್ ಸಿಂಗ್ ಆ ಯುದ್ಧವನ್ನ ಹೇಗೆ ಗೆಲ್ತಾರೆ ಅನ್ನೋದನ್ನ ಬಾರ್ಡರ್ ಚಿತ್ರದ ಮೂಲಕ ತೋರಿಸಲಾಗಿತ್ತು. ಈ ಪಾತ್ರಗಳಲ್ಲಿ ಸನ್ನಿ ಡಿಯೋಲ್, ಜಾಕಿ ಶ್ರಾಫ್ ಹಾಗೂ ನಮ್ಮ ಕನ್ನಡಿಗ ಸುನೀಲ್ ಶೆಟ್ಟಿ ಲೀಡ್​ನಲ್ಲಿ ಕಾಣಿಸಿಕೊಂಡಿದ್ರು. ಇಂದಿಗೂ ಇದು ಸಿಕ್ಕಾಪಟ್ಟೆ ಕಿಕ್ ಕೊಡುತ್ತೆ.

ದಿ ಲೆಜೆಂಡ್ ಆಫ್ ಭಗತ್ ಸಿಂಗ್.. ಗಾಂಧೀಜಿಯ ಶಾಂತಿ ಮಂತ್ರಕ್ಕೆ ವಿರುದ್ಧ, ಕ್ರಾಂತಿಯಿಂದಲೇ ದೇಶಕ್ಕೆ ಸ್ವತಂತ್ರ ದೊರಕಿಸಿಕೊಡೋ ಮನಸ್ಸು ಮಾಡಿದ್ದ ಕ್ರಾಂತಿಕಾರಿ ಯೋಧ ಭಗತ್ ಸಿಂಗ್ ಜೀವನಾಧಾರಿತ ಸಿನಿಮಾ. ರಾಜ್​ಕುಮಾರ್ ಸಂತೋಷಿ ನಿರ್ದೇಶನದ ಈ ಚಿತ್ರದಲ್ಲಿ ಭಗತ್ ಸಿಂಗ್ ಪಾತ್ರದಲ್ಲಿ ಅಜಯ್ ದೇವಗನ್ ಮಿಂಚಿದ್ರು. 2002ರಲ್ಲಿ ತೆರೆಕಂಡ ಈ ಚಿತ್ರದಿಂದ ಅದೆಷ್ಟೋ ಮಂದಿಗೆ ಭಗತ್ ಸಿಂಗ್ ಹೇಗಿದ್ರು, ಅವ್ರ ನಿಲುವುಗಳೇನು, ಮನದ ನೋವು ಎಂಥದ್ದು ಅನ್ನೋದ್ರ ಅರಿವಾಯ್ತು.

ರಂಗ್ ದೇ ಬಸಂತಿ.. ಬಾಲಿವುಡ್ ಎವರ್​ಗ್ರೀನ್ ಸಿನಿಮಾಗಳಲ್ಲೊಂದಾದ ಈ ಚಿತ್ರದ ಕಥೆ ಬಲು ರೋಚಕ ಹಾಗೂ ರೋಮಾಂಚಕ. ಕ್ರಾಂತಿಕಾರಿ ಸ್ವತಂತ್ರ ಯೋಧರ ಕುರಿತು ಡಾಕ್ಯುಮೆಂಟರಿ ಮಾಡೋಕೆ ಅಂತ ಇಂಡಿಯಾಗೆ ಬರೋ ಇಂಗ್ಲಿಷ್ ಮಹಿಳೆಗೆ, ಯುವಕರ ತಂಡವೊಂದು ಸಾಥ್ ಕೊಡೋ ಥ್ರಿಲ್ಲಿಂಗ್ ಕಥಾನಕ. ಇದ್ರಲ್ಲಿ ಆಮೀರ್ ಖಾನ್, ಸಿದ್ಧಾರ್ಥ್, ಮಾಧವನ್, ಅತುಲ್ ಕುಲಕರ್ಣಿ, ಶರ್ಮನ್ ಜೋಶಿ ಮುಖ್ಯಭೂಮಿಕೆಯಲ್ಲಿದ್ದರು. ಇದೊಂದು ಮನಮಿಡಿಯೋ ಎಮೋಷನಲ್ ಜರ್ನಿ ಆಗಿತ್ತು.

ಹೌ ಈಸ್ ದ ಜೋಶ್..? ಹೈ ಸರ್..! ಈ ಡೈಲಾಗ್ ಕೇಳಿದ್ರೆ ಇದು ಇಂಥದ್ದೇ ಸಿನಿಮಾದು ಅಂತ ಹೇಳಬಹುದು. ಯೆಸ್, ಉರಿ ಸರ್ಜಿಕಲ್ ಸ್ಟ್ರೈಕ್ ಕುರಿತ ಸಿನಿಮಾ. 2016ರಲ್ಲಿ ಸುಮಾರು 19 ಮಂದಿ ಭಾರತೀಯ ಸೈನಿಕರನ್ನ ಕೊಂದ ಉಗ್ರರಿಗೆ ತಿರುಗೇಟು ನೀಡುತ್ತೆ ನಮ್ಮ ಸೇನೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ತಂಗಿದ್ದ 30ರಿಂದ 35 ಮಂದಿ ಟೆರರಿಸ್ಟ್​ಗಳ ಅಡಗುತಾಣಗಳಿಗೆ ಲಗ್ಗೆ ಇಟ್ಟು, ಆ ಆಪರೇಷನ್​ನ ಹೇಗೆ ಕಂಪ್ಲೀಟ್ ಮಾಡುತ್ತೆ ಅನ್ನೋ ನೈಜ ಕಥಾನಕವಿದು. ವಿಕ್ಕಿ ಕೌಶಲ್ ಮೇಜರ್ ವಿಹಾನ್ ಸಿಂಗ್ ಶೆರ್ಗಿಲ್ ಆಗಿ ಮಿಂಚು ಹರಿಸಿದ್ರು. ಇಂದಿಗೂ ಇದು ನೋಡುಗರ ರಕ್ತ ಕುದಿಯುವಂತೆ ಮಾಡುತ್ತೆ.

ದಿ ಘಾಜಿ ಅಟ್ಯಾಕ್.. 1971ರ ಇಂಡೋ ಪಾಕ್ ವಾರ್​ನ ಮತ್ತೊಂದು ಪರ್ವವಿದು. ಆಂಧ್ರದ ವಿಶಾಖಪಟಂ ಮಾರ್ಗದಲ್ಲಿ ಇಂಡಿಯಾದ ನೌಕಾಸೇನೆಯ ಐಎನ್​ಎಸ್ ವಿಕ್ರಾಂತ್​ನ ಬಗ್ಗು ಬಡಿಯಲು ಯತ್ನಿಸಿದ ಪಾಕಿಸ್ತಾನದ ಘಾಜಿ ಪ್ಲಾನ್ ಕುರಿತ ಸಿನಿಮಾ. ಇದು ಇಂಡಿಯಾದ ಮೊದಲ ಅಂಡರ್​ ವಾಟರ್​ ಸಿನಿಮಾ ಆಗಿದ್ದು, ಲೆಫ್ಟಿನೆಂಟ್ ಕಮಾಂಡರ್ ಅರ್ಜುನ್ ವರ್ಮಾ ಪಾತ್ರದಲ್ಲಿ ರಾಣಾ ದಗ್ಗುಬಾಟಿ ಕಮಾಲ್ ಮಾಡಿದ್ರು. ಇಂದಿಗೂ ಇದೊಂದು ವಿಶಿಷ್ಟ ಪ್ರಯೋಗಗಳ ಲಿಸ್ಟ್​ನಲ್ಲಿ ರಾರಾಜಿಸ್ತಿದೆ.

1857ರ ಸಿಪಾಯಿ ದಂಗೆಯೇ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ. ಬ್ರಿಟಿಷರು ಹಾಗೂ ಅವ್ರ ಈಸ್ಟ್ ಇಂಡಿಯಾ ಕಂಪೆನಿ ವಿರುದ್ಧ ಅದೆಷ್ಟೋ ಮಂದಿ ಭಾರತೀಯರು ಏಕಾಏಕಿ ತಿರುಗಿಬಿದ್ದರು. ಅದರಲ್ಲಿ ಮಂಗಲ್ ಪಾಂಡೆ ಕೂಡ ಒಬ್ರು. ಸೈನ್ಯದಲ್ಲಿ ಇದ್ದುಕೊಂಡೇ ಅವ್ರನ್ನ ಎದುರಿಸಿ, ಹುತಾತ್ಮನಾದ ಮೊದಲ ಸ್ವಾತಂತ್ರ್ಯ ಯೋಧ. ಮಂಗಲ್ ಪಾಂಡೆ ಹೆಸ್ರಲ್ಲಿ ಸಿನಿಮಾ ಮಾಡೋ ಮೂಲಕ ಆಮೀರ್ ಖಾನ್ ಮಗದೊಮ್ಮೆ ದೇಶಭಕ್ತಿಯ ಕಿಡಿ ಹಚ್ಚಿದ್ರು.

ದೇಶ ಭಕ್ತಿ ಕುರಿತ ಒಂದಷ್ಟು ಸಿನಿಮಾಗಳನ್ನು ತೆಗೆದುಕೊಂಡ್ರೆ, ಅದ್ರಲ್ಲಿ ಸಿಂಹಪಾಲು ಆಮೀರ್ ಖಾನ್​ರದ್ದೇ ಇವೆ. ಭಾರತದ ವಸಾಹತುಶಾಹಿ ಬ್ರಿಟಿಷ್ ರಾಜ್‍ನ ವಿಕ್ಟೋರಿಯನ್ ಅವಧಿಯ ಹಿನ್ನೆಲೆ ಈ ಲಗಾನ್ ಚಿತ್ರಕ್ಕಿದೆ. ಹೆಚ್ಚಿನ ತೆರಿಗೆಗಳಿಂದ ಪೀಡಿತರಾಗಿದ್ದ ಒಂದು ಕುಗ್ರಾಮವದು. ಅಹಂಕಾರಿ ಅಧಿಕಾರಿಗೆ ನೀಡೋ ತೆರಿಗೆಗಳನ್ನ ತಪ್ಪಿಸಲು ಪಣವಾಗಿ ಅವರಿಗೆ ಕ್ರಿಕೆಟ್ ಆಟವಾಡುವ ಸವಾಲೊಡ್ಡುತ್ತಾನೆ ಆ ಊರಿನ ಒಬ್ಬ ಯುವಕ. ಇದರಿಂದ ಊರಿನ ನಿವಾಸಿಗಳು ಒಂದು ಅಸಾಧಾರಣ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ತಾರೆ. ಗ್ರಾಮಸ್ಥರು ಈ ವಿದೇಶಿ ಆಟ ಕ್ರಿಕೆಟ್‌‌ನ ಕಲಿಯೋ ಪರಿ, ಹಳ್ಳಿಯ ಪರಿಸ್ಥಿತಿ ಬದಲಿಸೋಕೆ ಪಡೋ ಆ ಪರಿಪಾಟಲು ನಿಜಕ್ಕೂ ಕಣ್ಣಲ್ಲಿ ನೀರು ತರಿಸುತ್ತೆ.

Exit mobile version