ಯುವ ಪ್ರತಿಭೆಗಳ ಬೆನ್ನಿಗೆ ನಿಂತ ಕೆಆರ್‌ಜಿ: ‘ಗ್ರೀನ್ ಗರ್ಲ್‌’ಗೆ ಸಾಥ್!

ಯುವ ಪ್ರತಿಭೆಗಳಿಗೆ ಕೆಆರ್‌ಜಿ ಸಾಥ್!

1 (54)

ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ಕೆಆರ್‌ಜಿ ಸ್ಟುಡಿಯೋಸ್, ಹೊಸ ಪ್ರತಿಭೆಗಳಿಗೆ ಮತ್ತು ವಿಭಿನ್ನ ಕಥಾವಸ್ತುವಿನ ಸಿನಿಮಾಗಳಿಗೆ ಒತ್ತು ನೀಡುತ್ತಿದೆ. ‘ಎಕ್ಕ’ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ, ಕೆಆರ್‌ಜಿ ಸಂಸ್ಥೆ ಮತ್ತೊಂದು ವಿಶಿಷ್ಟ ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದೆ.

ಯುವ ನಿರ್ದೇಶಕ ಸಾರ್ಥಕ್ ಹೆಗ್ಡೆ ಅವರ ‘ಗ್ರೀನ್ ಗರ್ಲ್’ ಚಿತ್ರವನ್ನು ಕೆಆರ್‌ಜಿ ಸ್ಟುಡಿಯೋಸ್ ಬಿಡುಗಡೆ ಮಾಡುತ್ತಿದೆ. ಈ ಚಿತ್ರ ತನ್ನ ಟ್ರೈಲರ್ ಮೂಲಕ ಈಗಾಗಲೇ ಭಾರಿ ಕುತೂಹಲ ಮೂಡಿಸಿದೆ. ಅಂತರ್ಧರ್ಮೀಯ ಪ್ರೀತಿ, ನೈತಿಕ ಪೊಲೀಸ್‌ಗಿರಿ ಮತ್ತು ಸಮಾಜದ ಸೂಕ್ಷ್ಮ ವಿಷಯಗಳನ್ನು ಧೈರ್ಯದಿಂದ ಎತ್ತಿಕೊಂಡಿರುವ ಈ ಸಿನಿಮಾ, ಚಿತ್ರಮಂದಿರಗಳಿಗೆ ಬರಲು ಸಜ್ಜಾಗಿದೆ. ಕೆಆರ್‌ಜಿ ಸಂಸ್ಥೆಯ ಬೆಂಬಲದೊಂದಿಗೆ ಈ ಯುವ ಚಿತ್ರತಂಡಕ್ಕೆ ಮತ್ತಷ್ಟು ಉತ್ಸಾಹ ಬಂದಿದೆ.

ಕೆಆರ್‌ಜಿ ಸ್ಟುಡಿಯೋಸ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ, “ಕೆಲವು ಕಥೆಗಳನ್ನು ಜೋರಾಗಿ ಮತ್ತು ಧೈರ್ಯವಾಗಿ ಹೇಳಬೇಕು. ಕೆಆರ್‌ಜಿ ಸಂಸ್ಥೆ ಯಾವಾಗಲೂ ಯುವ ಪ್ರತಿಭೆಗಳಿಗೆ ಬೆಂಬಲವಾಗಿ ನಿಂತಿದೆ. ಸಾರ್ಥಕ್ ಹೆಗ್ಡೆ ಅವರ ‘ಗ್ರೀನ್ ಗರ್ಲ್’ ಚಿತ್ರವನ್ನು ಪ್ರಸ್ತುತಪಡಿಸಲು ನಾವು ಉತ್ಸುಕರಾಗಿದ್ದೇವೆ. ಈ ಚಿತ್ರ ಅಂತರ್ಧರ್ಮೀಯ ಪ್ರೀತಿ ಮತ್ತು ಸಮಾಜದ ಸೂಕ್ಷ್ಮ ವಿಷಯಗಳನ್ನು ಚರ್ಚಿಸುತ್ತದೆ. ಸಾರ್ಥಕ್ ಹೆಗ್ಡೆ ಖಂಡಿತವಾಗಿಯೂ ಕನ್ನಡ ಚಿತ್ರರಂಗದ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರಾಗಲಿದ್ದಾರೆ,” ಎಂದು ಹೇಳಿದ್ದಾರೆ.

ನಿರ್ದೇಶಕ ಸಾರ್ಥಕ್ ಹೆಗ್ಡೆ ಈ ಬಗ್ಗೆ ಮಾತನಾಡಿ, “ಕೆಆರ್‌ಜಿ ಸ್ಟುಡಿಯೋಸ್‌ನಿಂದ ‘ಗ್ರೀನ್ ಗರ್ಲ್’ ಬಿಡುಗಡೆಯಾಗುತ್ತಿರುವುದು ಖುಷಿಯ ವಿಚಾರ. ಪ್ರೀತಿ, ಧರ್ಮ ಮತ್ತು ದಂಗೆಯಂತಹ ವಿಷಯಗಳನ್ನು ಧೈರ್ಯದಿಂದ ತೆರೆಗೆ ತರುವ ಸಿನಿಮಾಗಳು ಕಡಿಮೆ. ‘ಗ್ರೀನ್ ಗರ್ಲ್’ ಖಂಡಿತವಾಗಿಯೂ ಅಂತಹದ್ದೊಂದು ಚಿತ್ರ,” ಎಂದು ತಿಳಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಜಾತಿ, ಧರ್ಮದಂತಹ ಸೂಕ್ಷ್ಮ ವಿಷಯಗಳನ್ನು ಆಧರಿಸಿ ಸಿನಿಮಾ ನಿರ್ಮಿಸುವುದು ವಿರಳ. ಆದರೆ, ‘ಗ್ರೀನ್ ಗರ್ಲ್’ ಚಿತ್ರದಲ್ಲಿ ಸಾರ್ಥಕ್ ಹೆಗ್ಡೆ ಈ ಧೈರ್ಯವನ್ನು ಮಾಡಿದ್ದಾರೆ. ಟ್ರೈಲರ್ ಈಗಾಗಲೇ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದು, ಸಿನಿಮಾದ ಕಥೆ ಮತ್ತು ನಿರೂಪಣೆಯ ಬಗ್ಗೆ ಭಾರಿ ನಿರೀಕ್ಷೆ ಹುಟ್ಟಿಸಿದೆ.

ಮಯೂರ್ ಗೌಡ, ಸುಚರಿತ, ಮತ್ತು ಸುದರ್ಶನ ಆಚಾರ್ಯ ಯೆಕ್ಕಾರ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ‘ಗ್ರೀನ್ ಗರ್ಲ್’ ಸಿನಿಮಾ ಸೆಪ್ಟೆಂಬರ್ 12, 2025ಕ್ಕೆ ಬಿಡುಗಡೆಯಾಗಲಿದೆ. ಈ ಹೊಸಬರ ಚಿತ್ರ ಟ್ರೈಲರ್‌ನಂತೆಯೇ ಪ್ರೇಕ್ಷಕರನ್ನು ರಂಜಿಸಲಿದೆಯೇ ಎಂಬುದು ಸೆಪ್ಟೆಂಬರ್ 12ರಂದು ತಿಳಿಯಲಿದೆ.

Exit mobile version