ಮಂಡ್ಯ, ನ.12: ‘ತಿಥಿ’ ಸಿನಿಮಾದ ಮೂಲಕ ಖ್ಯಾತಿ ಪಡೆದಿದ್ದ ನೊದೆಕೊಪ್ಪಲು ಗ್ರಾಮದ “ಗಡ್ಡಪ್ಪ” ಎಂದೇ ಜನಮನ ಗೆದ್ದ ಹಿರಿಯ ಕಲಾವಿದ ಚನ್ನೇಗೌಡ (89) ಬುಧವಾರ ನಿಧನ ಹೊಂದಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.
ಮಂಡ್ಯ ಜಿಲ್ಲೆಯ ನೊದೆಕೊಪ್ಪಲು ಎಂಬ ಸಣ್ಣ ಹಳ್ಳಿಯ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ್ದ ಚನ್ನೇಗೌಡರು, ಚಿತ್ರರಂಗದಲ್ಲಿ ಕಾಲಿಡುವ ಮೊದಲು ಸಂಪೂರ್ಣವಾಗಿ ಕೃಷಿಕರಾಗಿದ್ದರು. ನಿರ್ದೇಶಕ ರಾಮ್ ರೆಡ್ಡಿ ನಿರ್ದೇಶನದಲ್ಲಿ ಮೂಡಿಬಂದ ತಿಥಿ ಸಿನಿಮಾದ ಮೂಲಕ ಖ್ಯಾತಿ ಪಡೆದಿದ್ದರು. ಈ ಸಿನಿಮಾದಲ್ಲಿ ಗಡ್ಡ, ಬಿಳಿ ವಸ್ತ್ರ ಮತ್ತು ನಿರಾಳ ನಗು ಮುಖದಿಂದ “ಗಡ್ಡಪ್ಪ” ಪಾತ್ರದಲ್ಲಿ ಅವರು ಕಾಣಿಸಿಕೊಂಡು ಪ್ರೇಕ್ಷಕರ ಹೃದಯ ಗೆದ್ದಿದ್ದರು.
ಆರೋಗ್ಯ ಸಮಸ್ಯೆ ಮತ್ತು ಕೊನೆಯ ದಿನಗಳು
ಕಳೆದ ಕೆಲ ವರ್ಷಗಳಿಂದ ಗಡ್ಡಪ್ಪ ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ತಿಂಗಳ ಹಿಂದೆ ಬಿದ್ದು ಸೊಂಟಕ್ಕೆ ಪೆಟ್ಟಾಗಿದ್ದು, ಆಪರೇಷನ್ ಕೂಡಾ ಮಾಡಲಾಗಿತ್ತು. ಆದರೆ ಶರೀರ ಚೇತರಿಸಿಕೊಳ್ಳದ ಕಾರಣದಿಂದ ಅವರ ಆರೋಗ್ಯ ಹದಗೆಟ್ಟಿತು. ಕೊನೆಗೆ ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನ ಹೊಂದಿದ್ದಾರೆ.
ಮೃತರ ಪುತ್ರಿ ಶೋಭಾ ಅವರು ಸುದ್ದಿಯನ್ನು ದೃಢಪಡಿಸಿದ್ದಾರೆ. ಸಂಜೆ ಅವರ ಸ್ವಗ್ರಾಮ ನೊದೆಕೊಪ್ಪಲುಯಲ್ಲೇ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
‘ತಿಥಿ’ ಚಿತ್ರದ ನಂತರ, ಗಡ್ಡಪ್ಪ ಅವರು ‘ತರ್ಲೆ ವಿಲೇಜ್’, ‘ಏನ್ ನಿನ್ ಪ್ರಾಬ್ಲಮ್ಮು?’, ‘ಹಳ್ಳಿ ಪಂಚಾಯಿತಿ’, ‘ಜಾನಿ ಮೇರಾ ನಾಮ್’ ಸೇರಿದಂತೆ ಸುಮಾರು 8 ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರೆಲ್ಲಾ ಚಿತ್ರಗಳಲ್ಲಿ ಅವರ ಕಾಮಿಡಿ ಜೋಡಿ ಮತ್ತು ಡಬಲ್ ಮೀನಿಂಗ್ ಸಂಭಾಷಣೆಗಳು ಪ್ರೇಕ್ಷಕರನ್ನು ನಗಿಸಿದವು.
