ಜನನಾಯಗನ್ ಎಂಟ್ರಿಗೆ ಬಾಕ್ಸ್ ಆಫೀಸ್ ಬ್ಲಾಸ್ಟ್.. ನಿರೀಕ್ಷೆಗೂ ಮೀರಿದ ಕ್ರೇಜಿ ರೆಸ್ಪಾನ್ಸ್!

1600 900 (18)

ತಮಿಳು ಚಿತ್ರಪ್ರೇಮಿಗಳ ಪಾಲಿಗೆ ಇಂದೇ ಪೊಂಗಲ್. ಯೆಸ್.. ಏಳು ತಿಂಗಳ ಕಾಯುವಿಕೆ ನಂತ್ರ ತೆರೆಗಪ್ಪಳಿಸಿರೋ ಜನನಾಯಗನ್, ಅಕ್ಷರಶಹ ಬಾಕ್ಸ್ ಆಫೀಸ್‌‌ ಬ್ಲಾಸ್ಟ್ ಮಾಡಿದೆ. ಯೆಸ್.. ಅಂದು ಸೆನ್ಸಾರ್ ಸಮಸ್ಯೆಯಾಗಿ ದಳಪತಿ ವಿಜಯ್‌ಗೆ ಸಿಕ್ಕಾಪಟ್ಟೆ ಅವಮಾನ ಆಗಿತ್ತು. ಆದ್ರೆ ಅದರ ಎರಡರಷ್ಟು ದೊಡ್ಡ ಮಟ್ಟದಲ್ಲಿಉ ಇಂದು ಸಿಎಂ ವಿಜಯ್‌ಗೆ ಸನ್ಮಾನಗಳು ನಡೆಯುತ್ತಿವೆ. ಹಾಗಾದ್ರೆ ಫಸ್ಟ್ ಡೇ ಫಸ್ಟ್ ಶೋ ಹೇಗಿತ್ತು..? ಚಿತ್ರಪ್ರೇಮಿಗಳು ಏನಂದ್ರು..? ಸೆಲೆಬ್ರೇಷನ್ ಸಮೇತ ಇಲ್ಲಿದೆ ಕಂಪ್ಲೀಟ್ ಕಹಾನಿ.

ದಿ ವೆಯ್ಟ್ ಈಸ್ ಓವರ್.. ಲೇಟ್ ಆದ್ರೂ ಸಿಕ್ಕಾಪಟ್ಟೆ ಲೇಟೆಸ್ಟ್ ಆಗಿ ಎಂಟ್ರಿ ಕೊಟ್ಟಿದ್ದಾರೆ ಜನನಾಯಗನ್ ವಿಜಯ್. ಯೆಸ್.. ಅಂದು ರೀಲ್ ಜನನಾಯಕ ಆಗಿದ್ದ ದಳಪತಿ ವಿಜಯ್, ಇಂದು ರಿಯಲ್ ಜನನಾಯಕನಾಗಿಯೇ ಬೆಳ್ಳಿತೆರೆಗೆ ಕಾಲಿಟ್ಟಿರೋದು ಅವ್ರ ಫ್ಯಾನ್ಸ್‌ಗೆ ಎಲ್ಲಿಲ್ಲದ ಖುಷಿ ಕೊಟ್ಟಿದೆ. ನಮ್ಮ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಜನನಾಯಗನ್ ಸಿನಿಮಾದಲ್ಲಿ ವಿಜಯ್ ಪೊಲೀಸ್ ಕಾಪ್ ಆಗಿ ಪೊಲಿಟಿಷಿಯನ್ಸ್ ಹುಟ್ಟಡಗಿಸೋ ಖದರ್ ಹಾಗೂ ಖಾಕಿ ಪವರ್ ಜೋರಿದೆ.

ಸೆನ್ಸಾರ್ ಸಮಸ್ಯೆಯಾಗಿ ಜನವರಿಯಲ್ಲಿ ಪೊಂಗಲ್ ಹಬ್ಬಕ್ಕೇನೇ ತೆರೆಗಪ್ಪಳಿಸಬೇಕಿದ್ದ ಜನನಾಯಗನ್ ಚಿತ್ರ, ಏಳು ತಿಂಗಳ ಬಳಿಕ ಸಾಕಷ್ಟು ಕಾನೂನು ಹೋರಾಟ, ವಿವಾದಗಳ ಸುಳಿಗೆ ಸಿಲುಕಿ, ಫೈನಲಿ ಬಿಗ್‌‌ಸ್ಕ್ರೀನ್‌ಗೆ ಬಂದಿದೆ. ವಿಜಯ್ ಹೀರೋ ಆಗಿ ನಟಿಸ್ತಿರೋ ಕಟ್ಟ ಕಡೆಯ ಸಿನಿಮಾ ಎನ್ನಲಾಗ್ತಿರೋ ಜನನಾಯಗನ್‌ಗೆ ವಿಶ್ವದ ಮೂಲೆ ಮೂಲೆಗಳಲ್ಲಿ ಭರ್ಜರಿ ಓಪನಿಂಗ್ ಸಿಕ್ಕಿದೆ. ಮುಂಜಾನೆಯಿಂದಲೇ ಜನನಾಯಕನನ್ನ ತೆರೆ ಮೇಲೆ ಕಣ್ತುಂಬಿಕೊಂಡ ಫ್ಯಾನ್ಸ್ ಹಾಗೂ ಪ್ರೇಕ್ಷಕರು ಅಕ್ಷರಶಃ ಭಾವುಕರಾಗಿದ್ದಾರೆ.

ಇಷ್ಟು ದಿನ ಕಾಯಿಸಿ ಸಿಲ್ವರ್ ಸ್ಕ್ರೀನ್‌ ಮೇಲೆ ಕೊನೆ ಆಟ ಆಡ್ತಿರೋ ವಿಜಯ್‌ಗೆ ಇದು ನಿರೀಕ್ಷೆಗೂ ಮೀರಿದ ಮೈಲೇಜ್ ಕೊಡ್ತಿದೆ. ಅದಕ್ಕೆ ಕಾರಣ ಅವ್ರು ಸಿಎಂ ಅನ್ನೋದು. ಮತ್ತೊಂದು ಮಾಸ್‌‌ಪ್ರಿಯರ ಅಚ್ಚುಮೆಚ್ಚಿನ ನಟ ಆಗಿರೋದು. ಹೌದು.. ವಿಜಯ್‌‌ ಸ್ವ್ಯಾಗ್, ಸ್ಟೈಲು ಸಖತ್ ಕಿಕ್ ಕೊಡ್ತಿದೆ. ಅದ್ರಲ್ಲೂ ಮುಟ್ಟಿ ನೋಡಿಕೊಳ್ಳುವಂತಹ ಒಂದೊಂದು ಡೈಲಾಗ್ ಕೂಡ ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಕರ್ನಾಟಕದಲ್ಲಿ ತಮಿಳುನಾಡಿಗಿಂತ ಸೆಲೆಬ್ರೇಷನ್ ಜೋರಿದ್ದು, ಬೆಂಗಳೂರು, ಆನೇಕಲ್, ಎಲೆಕ್ಟ್ರಾನಿಕ್ ಸಿಟಿ, ಕೆರ್ ಪುರಂ, ಹೊಸೂರು ಕಡೆಗಳಲ್ಲೆಲ್ಲಾ ನೆಕ್ಸ್ಟ್ ಲೆವೆಲ್ ಸೆಲೆಬ್ರೇಷನ್ ಮೂಲಕ ಜನನಾಯಗನ್‌ಗೆ ವೆಲ್ಕಮ್ ಸಿಕ್ಕಿದೆ.

ಚಿತ್ರಮಂದಿರಗಳನ್ನ ದೇವಾಲಯಗಳಂತೆ ಅಲಂಕರಿಸಿದ್ದು, ಫ್ಲೆಕ್ಸ್, ಬ್ಯಾನರ್‌‌ಗಳಿಂದ ತುಂಬಿ ತುಳುಕುತ್ತಿವೆ. ಇನ್ನೂ ಪ್ರತಿ ಥಿಯೇಟರ್ ಮುಂದೆಯೂ ಕಟೌಟ್‌‌ಗಳು ಮುಗಿಲೆತ್ತರಕ್ಕೆ ತಲೆ ಎತ್ತಿವೆ. ಅದೂ ಜನನಾಯಗನ್ ಸಿನಿಮಾದಷ್ಟೇ ಅಲ್ಲ, ವಿಜಯ್‌ರ ಬೇರೆ ಬೇರೆ ಕಟೌಟ್‌‌ಗಳು, ಅವುಗಳಿಗೆ ಹಾಲಿನ ಅಭಿಷೇಕ, ದುಬಾರಿ ಹೂವಿನ ಅಲಂಕಾರ, ಪಟಾಕಿ ಸಿಡಿಸೋದು, ತೆಂಗಿನಕಾಯಿ ಒಡೆಯೋದು, ದೀಪ ಬೆಳಗೋದು.. ಹೀಗೆ ಹಿಂದೆಂದೂ ಕಂಡು ಕೇಳರಿಯದ ರೇಂಜ್‌‌ನಲ್ಲಿ ಸಂಭ್ರಮಾಚರಣೆ ನಡೆದಿರೋದು ವಿಶೇಷ.

ಒಂದು ಕೊನೆ ಸೆಲೆಬ್ರೇಷ್, ಒಂದು ಕೊನೆ ಡ್ಯಾನ್ಸ್ ಅಂತೆಲ್ಲಾ ಫ್ಯಾನ್ಸ್ ಕ್ರೇಜಿ ಸೆಲೆಬ್ರೇಷನ್ ಜೊತೆ ಕುಣಿದು ಕುಪ್ಪಳಿಸಿದ್ದಾರೆ. ಬರೀ ಯೂತ್ ಅಷ್ಟೇ ಅಲ್ಲದೆ, ಫ್ಯಾಮಿಲಿ ಆಡಿಯೆನ್ಸ್, ಮಕ್ಕಳು-ಮುದುಕರು ಸಮೇತ ಚಿತ್ರಮಂದಿರಗಳು ತುಂಬಿ ತುಳುಕಿತ್ತಿರೋದು ವಿಶೇಷ. ಇದು ವಿಜಯ್ ಸಹಜವಾಗಿಯೇ ಪಡೆದುಕೊಂಡ ಜನರ ಪ್ರೀತಿ, ಗೌರವ ಹಾಗೂ ಬೆಲೆ ಕಟ್ಟಲಾಗದ ಅಭಿಮಾನವೇ ಸರಿ.

ಬೆಂಗಳೂರಿನ ಊರ್ವಶಿ ಥಿಯೇಟರ್‌ನಲ್ಲಿ ಗ್ಯಾರಂಟಿ ನ್ಯೂಸ್ ವಿಜಯ್ ಫ್ಯಾನ್ಸ್ ಸೆಲೆಬ್ರೇಷನ್ ಹಾಗೂ ಆ ಖುಷಿಯ ಕ್ಷಣಗಳಿಗೆ ಸಾಕ್ಷಿ ಆಯ್ತು. ವಿಜಯ್ ಫೋಟೋ ಹಿಡಿದು ಥಿಯೇಟರ್‌ಗೆ ಬಂದಂತಹ ಫ್ಯಾನ್ಸ್, ಸಿನಿಮಾದ ಪ್ಲೈಮ್ಯಾಕ್ಸ್ ನೋಡಿ ಕಣ್ಣೀರು ಹಾಕಿದ್ರು. ಟಿವಿಕೆ ಟಿವಿಕೆ ಅಂತ ಅಭಿಮಾನದಿಂದ ಕೂಗುತ್ತಾ ಡ್ಯಾನ್ಸ್ ಮಾಡಿದ್ದು ಹೈಲೈಟ್.

ಇದು ದಳಪತಿ ವಿಜಯ್ ಕೊನೆಯ ಸಿನಿಮಾ. ದಯವಿಟ್ಟು ಯಾರೂ ಮಿಸ್ ಮಾಡ್ಕೋಬೇಡಿ ಎಂದ್ರು ಡೈ ಹಾರ್ಡ್ ಫ್ಯಾನ್ಸ್. ಅದ್ರಲ್ಲೂ ಮಹಿಳಾ ಅಭಿಮಾನಿಗಳು ಡೈಲಾಗ್ ಹೊಡೆದು, ವಿಜಲ್ ಹೊಡೆಯುತ್ತಾ ರಿವ್ಯೂ ನೀಡಿದ್ರು. ಪೈರಸಿ ಆಗಿಯೂ ಸಹ ಜನನಾಯಗನ್ ಸಿನಿಮಾ ಇಷ್ಟೆಲ್ಲಾ ಬಿಗ್ ಓಪನಿಂಗ್ ಪಡೆದಿರೋದು ಗ್ರೇಟ್.

ಜನನಾಯಗನ್‌ ಚಿತ್ರದಲ್ಲಿ ಬಾಬಿ ಡಿಯೋಲ್, ಪ್ರಕಾಶ್ ರೈ, ಪೂಜಾ ಹೆಗಡೆ ಅಂತಹ ಅದ್ಭುತ ಕಲಾವಿದರ ದಂಡಿದೆ. ಅನಿರುದ್ದ್ ರವಿಚಂದರ್ ಸಂಗೀತ ಮಸ್ತ್ ಕಿಕ್ ಕೊಡ್ತಿದೆ. ಬ್ಲಾಸ್ಟ್ ಬ್ಲಾಸ್ಟ್ ಸಾಂಗ್‌ಗೆ ಚಿತ್ರಪ್ರೇಮಿಗಳು ಥಿಯೇಟರ್‌‌ ಸೀಟ್‌‌ನಲ್ಲೇ ಹುಚ್ಚೆದ್ದು ಕುಣಿಯುವಂತಾಗಿದೆ. ಅದ್ರಲ್ಲೂ ಸಿನಿಮಾದಲ್ಲಿ ನೆಗೆಟೀವ್ ಶೇಡ್‌‌ನಲ್ಲಿ ಬಣ್ಣ ಹಚ್ಚಿರೋ ನಟ ಧನುಷ್ ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಕೆವಿಎನ್ ಮೂಲಕ ಅವಕಾಶ ಪಡೆದ ಧನುಷ್, ನಟ ವಿಜಯ್ ಒಂದು ದಿನ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ ಟಾಪ್ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.

ಮಲೇಷ್ಯಾದಲ್ಲಿ ಜನನಾಯಗನ್ ಚಿತ್ರದ ಪ್ರೀ ರಿಲೀಸ್ ಇವೆಂಟ್ ಜರುಗಿತ್ತು. ಆದ್ರೀಗ ಅಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದು, ಅಡ್ವಾನ್ಸ್ ಬುಕ್ಕಿಂಗ್ಸ್‌ನಿಂದ ಸಾರ್ವಕಾಲಿಕ ದಾಖಲೆ ಬರೆದಿದೆ. ಇಲ್ಲಿಯ ತನಕ ಯಾವುದೇ ಚಿತ್ರ ಮಾಡದೇ ಇರೋ ದಾಖಲೆಯನ್ನ ವಿಜಯ್‌ರ ಈ ಜನನಾಯಗನ್ ಮಾಡಿದೆ ಅನ್ನೋದು ಅಚ್ಚರಿ. ಅಲ್ಲದೆ ವರ್ಲ್ಡ್‌ವೈಡ್ 8 ಸಾವಿರಕ್ಕೂ ಅಧಿಕ ಸ್ಕ್ರೀನ್ಸ್‌ನಲ್ಲಿ ಈ ಚಿತ್ರ ರಿಲೀಸ್ ಆಗಿದ್ದು, ಇಂಡಿಯಾದಲ್ಲಿ 3500ಕ್ಕೂ ಪ್ಲಸ್ ಸ್ಕ್ರೀನ್ಸ್‌ನಲ್ಲಿ ವಿಜಯ್ ಅಬ್ಬರ ಜೋರಿದೆ.

ಕರ್ನಾಟಕದಲ್ಲಿ ಜನನಾಯಗನ್ ಸಿನಿಮಾ ಮೊದಲ ದಿನ 7 ರಿಂದ 10 ಕೋಟಿ ಗ್ರಾಸ್ ಕಲೆಕ್ಷನ್ ಆಗಿದೆ ಎನ್ನಲಾಗ್ತಿದೆ. ಇನ್ನೂ ತಮಿಳುನಾಡಿನಲ್ಲಿ 40  ರಿಂದ 50 ಕೋಟಿಯ ಗಡಿ ಮುಟ್ಟಿದ್ದು, ವರ್ಲ್ಡ್‌ವೈಡ್ ಮೊದಲ ದಿನವೇ 100 ಕೋಟಿ ಕ್ಲಬ್ ಸೇರಿಕೊಂಡಿದೆ ಜನನಾಯಗನ್. ಪ್ರೀ ರಿಲೀಸ್ ಬ್ಯುಸಿನೆಸ್‌‌ನಿಂದ 350 ಪ್ಲಸ್ ಕೋಟಿ ಬ್ಯುಸಿನೆಸ್ ಮಾಡಿದ್ದ ಈ ಚಿತ್ರ ಒಂದೇ ಸಲೀಸಾಗಿ ಸಾವಿರ ಕೋಟಿ ಕ್ಲಬ್ ಸೇರಲಿದೆ ಅನ್ನೋದು ಸಿನಿಪಂಡಿತರ ಲೆಕ್ಕಾಚಾರವಾಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

Exit mobile version