ಕಾಟೇರ ಡೈರೆಕ್ಟರ್ ತರುಣ್ ಸುಧೀರ್ ಸೈಲೆಂಟ್ ಆಗಿದ್ದಾರೆ ಅಂದ್ರೆ ಬೇರೇನೂ ಕೆಲಸಕ್ಕೆ ಕೈ ಹಾಕಿರ್ತಾರೆ ಅನ್ನೋದು ಪಕ್ಕಾ. ಅದಕ್ಕೆ ಇತ್ತೀಚೆಗೆ ಮೆಚ್ಚುಗೆಗೆ ಪಾತ್ರವಾದ ಏಳುಮಲೆ ಸಿನಿಮಾನೇ ಜ್ವಲಂತ ಸಾಕ್ಷಿ. ಇದೀ ಗ ಮತ್ತೊಂದು ಮಹತ್ವದ ಕಾರ್ಯಕ್ಕೆ ಜೈ ಅಂದಿರೋ ತರುಣ್, ಪ್ರೇಕ್ಷಕರಿಗೆ ಬಿಗ್ ಸರ್‌ಪ್ರೈಸ್ ಕೊಡ್ತಿದ್ದಾರೆ.
ಇತ್ತೀಚೆಗೆ ರಾಕ್ಷಸ ಟ್ರೈಲರ್ ಬಿಡುಗಡೆಯಾಗಿ ಪ್ರೇಕ್ಷಕರಿಗೆ ಕುತೂಹಲ ಮೂಡಿಸಿದ್ದಾರೆ. ಅರೇ.. ಪ್ರಜ್ವಲ್ ದೇವರಾಜ್ ಈಗಾಗ್ಲೇ ರಾಕ್ಷಸ ಸಿನಿಮಾ ಮಾಡಿದ್ದಾರಲ್ವಾ..? ಮತ್ತೊಂದು ಸಿನಿಮಾನಾ ಅಂತ ಹುಬ್ಬೇರಿಸಬೇಡಿ. ಯಾಕಂದ್ರೆ ಇದು ಸಿನಿಮಾ ಅಲ್ಲ.. ವೆಬ್ ಸೀರೀಸ್. ಉತ್ತರ ಕರ್ನಾಟಕ ಭಾಗದ ಮೊಟ್ಟ ಮೊದಲ ವೆಬ್ ಸೀರೀಸ್ ಇದಾಗಿದ್ದು, 7 ಸಂಚಿಕೆಗಳ ಕಥಾನಕ ಆಗಿರಲಿದೆ. ಟ್ರೈಲರ್ ಸಖತ್ ಇಂಪ್ರೆಸ್ಸೀವ್ ಆಗಿದ್ದು, ಸಿನಿ ಪ್ರೇಮಿಗಳ ಗಮನ ಸೆಳೆದಿದೆ.
ಕಾಟೇರ ಡೈರೆಕ್ಟರ್‌ನಿಂದ ವೆಬ್ ಸೀರೀಸ್.. ‘ರಾಕ್ಷಸ’ ಕಮಿಂಗ್
ಉತ್ತರ ಕರ್ನಾಟಕ ಭಾಗದ ಮೊದಲ ಸೀರೀಸ್.. ಕ್ರೈಂ ಥ್ರಿಲ್ಲರ್
ಇದೇ ಫೆಬ್ರವರಿ 20ರಿಂದ ಜೀ5ನಲ್ಲಿ ಪ್ರಸಾರಗೊಳ್ಳಲಿರುವ ಈ ವೆಬ್ ಸರಣಿ ಕ್ರೈಂ ಥ್ರಿಲ್ಲರ್ ಜಾನರ್‌ನದ್ದಾಗಿದ್ದು, ಮಲಪ್ರಭಾ ನದಿಯ ದಂಡೆಯ ಸುತ್ತ ನಡೆಯುವ ಆಶ್ಚರ್ಯಕರ ಘಟನೆಗಳನ್ನ ಆಧರಿಸಿದೆ. ಸವದತ್ತಿಯ ಎಲ್ಲಮ್ಮನ ಗುಡಿಯ ಬಳಿ ಮೊಸಳೆ ದಾಳಿಗೆ ಒಳಗಾಗುವ ಸರಣಿ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ಸಬ್ ಇನ್ಸ್‌ಪೆಕ್ಟರ್ ಹನುಮಪ್ಪ ಬರುತ್ತಾನೆ. ಈ ಚಕ್ರವ್ಯೂಹವನ್ನು ಭೇದಿಸಲು ಬರುವ ಹನುಮಪ್ಪನಿಗೆ ಆಗುವ ತಳಮಳ, ಎದುರಾಗುವ ಸಮಸ್ಯೆಗಳು, ಇದು ಕೇವಲ ಒಂದು ಅಪರಾಧವಾ ಅಥ್ವಾ ಬೇರೆ ಯಾವುದಾದರೂ ಮರ್ಮ ಅಡಗಿದೆಯೇ ಅನ್ನೋ ಕುತೂಹಲ ಹುಟ್ಟಿಸಿದೆ ಟ್ರೈಲರ್.
ಸುಹಾನ್ ಪ್ರಸಾದ್ ಹಾಗೂ ಅಪೂರ್ವ ಬರವಣಿಗೆಯಲ್ಲಿ ಮೂಡಿ ಬಂದಿರೋ ಈ ವೆಬ್ ಸೀರೀಸ್‌ಗೆ ಸುಹಾನ್ ಅವರೇ ಆ್ಯಕ್ಷನ್ ಕಟ್ ಹೇಳಿದ್ದು, ಲೀಡ್‌ನಲ್ಲಿ ವಿಜಯ್ ರಾಘವೇಂದ್ರ ಮಗದೊಮ್ಮೆ ಖಾಕಿ ಖದರ್ ತೋರಲಿದ್ದಾರೆ. ನಾಯಕನಟಿ ಮಯೂರಿ ಚಿನ್ನಾರಿ ಮುತ್ತನ ಜೊತೆ ಪತ್ಮಿ ರೋಲ್ ಮಾಡಿದ್ದು, ಅವಿನಾಶ್, ಮಾಳವಿಕಾ, ಅಪ್ಪಣ್ಣ, ಅಭಿಜೀತ್, ಜಹಾಂಗೀರ್ ಮುಂತಾದವರು ಕಾಣಸಿಗಲಿದ್ದಾರೆ. ಇದಕ್ಕೆ ಸುಹಾನ್ ಪ್ರಸಾದ್ ಆಕ್ಷನ್ ಕಟ್ ಹೇಳಿದ್ದಾರೆ. ಖ್ಯಾತ ನಿರ್ದೇಶಕ ತರುಣ್ ಸುಧೀರ್ ಅವರ ತರುಣ್ ಸುಧೀರ್ ಕ್ರಿಯೇಟಿವ್ಸ್ ಬ್ಯಾನರ್‌ನಡಿ ಈ ಸೀರೀಸ್ ನಿರ್ಮಾಣಗೊಂಡಿದೆ. ಇದು ತರುಣ್ ಸುಧೀರ್ ಅವರ ಮೊದಲ ವೆಬ್ ಸರಣಿಯೂ ಹೌದು.
ಸವದತ್ತಿ ಎಲ್ಲಮ್ಮ ಗುಡಿ ಬಳಿ ಮೊಸಳೆ ದಾಳಿಯ ಮಿಸ್ಟರಿ ಕಥೆ..!
7 ಸಂಚಿಕೆಗಳ ಸೀರೀಸ್.. ಚಿನ್ನಾರಿ ಮುತ್ತ ಮತ್ತೆ ಖಾಕಿ ಖದರ್
ಡಿಬಾಸ್ ದರ್ಶನ್ ಜೊತೆ ಕಾಟೇರ ಸಿನಿಮಾದ ಬಳಿಕ ಮತ್ತೆ ದರ್ಶನ್ ಅವರೊಟ್ಟಿಗೇನೇ ಮತ್ತೊಂದು ಸಿನಿಮಾ ಮಾಡೋಕೆ ತರುಣ್ ಸುಧೀರ್ ಪ್ಲ್ಯಾನ್ ಮಾಡಿದ್ರು. ಅದಕ್ಕಾಗಿ ಕಥೆ, ಚಿತ್ರಕಥೆಯ ತಯಾರಿಯಲ್ಲಿ ತೊಡಗಿಸಿಕೊಂಡಿದ್ರು. ಆದ್ರೆ ದಚ್ಚು ಜೈಲಿಗೆ ಹೋದ ಹಿನ್ನೆಲೆ ತಮ್ಮ ಪ್ರೊಡಕ್ಷನ್ ಬ್ಯಾನರ್‌ನಡಿ ಸಿನಿಮಾ, ಸೀರೀಸ್‌ಗಳ ನಿರ್ಮಾಣಕ್ಕೆ ಮುಂದಾಗ್ತಿದ್ದಾರೆ. ಇತ್ತೀಚೆಗೆ ಏಳುಮಲೆ ಸಿನಿಮಾನ ಮಾಡಿ ಎಲ್ಲರ ಹುಬ್ಬೇರಿಸಿದ್ರು. ಇದೀಗ ರಾಕ್ಷಸ ಸರಣಿಯ ಸರದಿ.
