ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಹೊಸ ಸಂಚಲನ ಮೂಡಿಸಿರುವ ‘ಜೀ ಪವರ್’ ವಾಹಿನಿಯ ಅದ್ಧೂರಿ ರಿಯಾಲಿಟಿ ಶೋ ‘ಹಳ್ಳಿ ಪವರ್’ ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ನಗರದ ಐಷಾರಾಮಿ ಜೀವನಕ್ಕೆ ಒಗ್ಗಿಕೊಂಡಿದ್ದ ಯುವತಿಯರು ಹಳ್ಳಿಯ ಮಣ್ಣಿನ ಸೊಗಡಿಗೆ ಮಾರುಹೋಗಿ, ಕಠಿಣ ಸವಾಲುಗಳನ್ನು ಎದುರಿಸಿ ಇಲ್ಲಿಯವರೆಗೆ ಬಂದಿದ್ದಾರೆ. ಈಗ ಎಲ್ಲರ ಕಣ್ಣು ಸೀಸನ್ 1 ರ ವಿಜೇತರು ಯಾರು ಎಂಬುದರ ಮೇಲಿದೆ.
ಈ ವಿಶಿಷ್ಟ ರಿಯಾಲಿಟಿ ಶೋ ಉತ್ತರ ಕರ್ನಾಟಕದ ಐತಿಹಾಸಿಕ ಭೂಮಿ ‘ಸಂಗೊಳ್ಳಿ’ಯಲ್ಲಿ ನಡೆದಿದೆ. ಕೇವಲ ಮನರಂಜನೆ ಮಾತ್ರವಲ್ಲದೆ, ಹಳ್ಳಿಯ ಸಂಸ್ಕೃತಿ ಮತ್ತು ಕೃಷಿ ಕಾಯಕದ ಮಹತ್ವವನ್ನು ಸಾರುವ ಉದ್ದೇಶದಿಂದ ಈ ಶೋ ಅನ್ನು ರೂಪಿಸಲಾಗಿತ್ತು. ನಗರದ ಕಂಫರ್ಟ್ ಝೋನ್‌ನಿಂದ ಬಂದಿದ್ದ ಸುಕುಮಾರಿ ಯುವತಿಯರು ಇಲ್ಲಿ ಬೆವರು ಸುರಿಸಿ ಕೆಲಸ ಮಾಡಿದ್ದಾರೆ. ಜಾನುವಾರುಗಳ ಆರೈಕೆ, ಗದ್ದೆ ಕೆಲಸ, ವ್ಯವಸಾಯದ ಟಾಸ್ಕ್ ಹಾಗೂ ಮೈ ನಡುಗಿಸುವ ಫಿಸಿಕಲ್ ಟಾಸ್ಕ್‌ಗಳನ್ನು ಯಶಸ್ವಿಯಾಗಿ ಪೂರೈಸಿರುವುದು ಈ ಶೋನ ಯಶಸ್ಸಿಗೆ ಮುಖ್ಯ ಕಾರಣ.
ರಿಯಾಲಿಟಿ ಶೋಗಳ ಕಿಂಗ್ ಅಕುಲ್ ಬಾಲಾಜಿ ತಮ್ಮ ವಿಶಿಷ್ಟ ನಿರೂಪಣೆಯ ಮೂಲಕ ಶೋಗೆ ಕಳೆ ತಂದಿದ್ದಾರೆ. ಹಳ್ಳಿ ಜನರ ಜೊತೆ ಬೆರೆತು, ಸ್ಪರ್ಧಿಗಳನ್ನು ಹುರಿದುಂಬಿಸುತ್ತಾ ಅವರು ನಡೆಸಿಕೊಟ್ಟ ರೀತಿ ವೀಕ್ಷಕರ ಮನ ಗೆದ್ದಿದೆ. ಅಕುಲ್ ಅವರ ಹಾಸ್ಯ ಪ್ರಜ್ಞೆ ಮತ್ತು ಗಂಭೀರ ಟಾಸ್ಕ್‌ಗಳ ನಡುವಿನ ಸಮತೋಲನ ‘ಹಳ್ಳಿ ಪವರ್’ ಅನ್ನು ನಂಬರ್ 1 ರೇಟಿಂಗ್‌ಗೆ ಕೊಂಡೊಯ್ದಿದೆ.
ಹಲವು ವಾರಗಳ ಕಠಿಣ ಪೈಪೋಟಿಯ ನಂತರ 5 ಜನ ಅಂದರೆ, ರಗಡ್ ರಶ್ಮಿ, ಸಕ್ಕತ್ ಸೋನಿಯಾ, ಘಾಟಿ ಗಾನವಿ, ಮಿಲ್ಕಿ ಬ್ಯೂಟಿ ಮೋನಿಷಾ, ಫರೀನ್ ಫೈನಲಿಸ್ಟ್‌ಗಳು ಫಿನಾಲೆ ವೇದಿಕೆ ಏರಿದ್ದಾರೆ. ಇವರಲ್ಲಿ ಹಳ್ಳಿಯ ಅಸಲಿ ‘ಪವರ್’ ತೋರಿಸಿ ಕಿರೀಟ ಮುಡಿಗೇರಿಸಿಕೊಳ್ಳುವ ಸುಂದರಿ ಯಾರು ಎಂಬ ಕುತೂಹಲ ಸೃಷ್ಟಿಯಾಗಿದೆ.
ಬಹುನಿರೀಕ್ಷಿತ ‘ಹಳ್ಳಿ ಪವರ್’ ಗ್ರಾಂಡ್ ಫಿನಾಲೆ ಎಪಿಸೋಡ್‌ಗಳು ಇದೇ ಡಿಸೆಂಬರ್ 27 (ಶನಿವಾರ) ಮತ್ತು ಡಿಸೆಂಬರ್ 28 (ಭಾನುವಾರ) ರಂದು ಪ್ರಸಾರವಾಗಲಿವೆ. ರಾತ್ರಿ 8:30 ರಿಂದ 10:30 ರವರೆಗೆ ಜೀ ಪವರ್ ವಾಹಿನಿಯಲ್ಲಿ ಪ್ರೇಕ್ಷಕರು ಈ ರೋಚಕ ಕ್ಷಣಗಳನ್ನು ಸವಿಯಬಹುದು. ಫಿನಾಲೆ ಸಂಚಿಕೆಗಳು ಭಾವನಾತ್ಮಕ ಕ್ಷಣಗಳು, ಅದ್ಧೂರಿ ನೃತ್ಯ ಪ್ರದರ್ಶನಗಳೂ ಸ್ಪರ್ಧೆಯಿಂದ ಕೂಡಿರಲಿವೆ. ಹಳ್ಳಿ ಜೀವನದ ನೈಜತೆಯನ್ನು ನಗರದ ಜನರಿಗೆ ತಲುಪಿಸುವಲ್ಲಿ ಜೀ ಪವರ್ ಯಶಸ್ವಿಯಾಗಿದೆ. ಈ ವಾರಾಂತ್ಯದಲ್ಲಿ ತಪ್ಪದೇ ವೀಕ್ಷಿಸಿ, ನಿಮ್ಮ ನೆಚ್ಚಿನ ಸ್ಪರ್ಧಿ ವಿಜೇತರಾಗುತ್ತಾರಾ ಎಂದು ನೋಡಿ.





