ಉಡುಪಿ: ಖ್ಯಾತ ರಂಗಭೂಮಿ ಕಲಾವಿದ ಹಾಗೂ ‘ಕಾಂತಾರ’ ಚಿತ್ರದಲ್ಲಿ ಲಾಯರ್ ಪಾತ್ರದ ಮೂಲಕ ಜನಪ್ರಿಯರಾಗಿದ್ದ ನಟ ಟಿ. ಪ್ರಭಾಕರ ಕಲ್ಯಾಣಿ ಅವರು ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು.
ಇಂದು ಬೆಳಗ್ಗೆ 8:30 ರ ಸುಮಾರಿಗೆ ಉಡುಪಿಯ ಹಿರಿಯಡ್ಕದ ತಮ್ಮ ಸ್ವಗೃಹದಲ್ಲಿ ಟಿ. ಪ್ರಭಾಕರ ಕಲ್ಯಾಣಿ ಅವರು ತಮ್ಮ ಪತ್ನಿಗೆ ದೇಹದಲ್ಲಿ ಮೈ-ಕೈ ನೋವು ಇದೆ ಎಂದು ತಿಳಿಸಿದ ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದರು. ಮೂರು ದಿನಗಳ ಹಿಂದೆ ಹಿರಿಯಡ್ಕ ಪೇಟೆಯಲ್ಲಿ ತಲೆಸುತ್ತಿನಿಂದ ಬಿದ್ದಿದ್ದರು ಎಂದು ತಿಳಿದುಬಂದಿದೆ. ಐದು ವರ್ಷಗಳ ಹಿಂದೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರಿಗೆ ಸ್ಟೆಂಟ್ ಅಳವಡಿಸಲಾಗಿತ್ತು.
ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದಲ್ಲಿ ಕೊಡುಗೆ
ಬ್ಯಾಂಕ್ ಆಫ್ ಬರೋಡಾದ ನಿವೃತ್ತ ನೌಕರರಾಗಿದ್ದ ಟಿ. ಪ್ರಭಾಕರ ಕಲ್ಯಾಣಿ ಅವರು ರಂಗಭೂಮಿಯಲ್ಲಿ ಗಣನೀಯ ಕೊಡುಗೆ ನೀಡಿದ್ದರು. ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದ ಅವರು, ‘ಕಾಂತಾರ’ ಚಿತ್ರದಲ್ಲಿ ಲಾಯರ್ ಪಾತ್ರದ ಮೂಲಕ ವ್ಯಾಪಕ ಗಮನ ಸೆಳೆದಿದ್ದರು. ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದಲ್ಲಿ ಅವರ ಕೊಡುಗೆಯನ್ನು ಕಲಾಪ್ರೇಮಿಗಳು ಶ್ಲಾಘಿಸಿದ್ದಾರೆ.
ಟಿ. ಪ್ರಭಾಕರ ಕಲ್ಯಾಣಿ ಅವರ ಅಂತಿಮ ವಿಧಿವಿಧಾನವು ಶುಕ್ರವಾರ ಬೀಡಿನಗುಡ್ಡೆಯ ಸ್ಮಶಾನದಲ್ಲಿ ನಡೆಯಲಿದೆ. ಅವರ ಅಕಾಲಿಕ ನಿಧನಕ್ಕೆ ರಂಗಭೂಮಿ ಮತ್ತು ಚಿತ್ರರಂಗದ ಕಲಾವಿದರು, ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.