ಕನ್ನಡ ಚಿತ್ರರಂಗದ ಸೂಪರ್ ಹಿಟ್ “ಸಲಗ” ಚಿತ್ರದ ತಮ್ಮ ಪಾತ್ರದ ಮೂಲಕ ಪರಿಚಿತರಾಗಿರುವ ಸೂರಿ ಅವರು ಸಲಗ ಸೂರಿ ಅಣ್ಣ ಎಂದೆ ಖ್ಯಾತರಾಗಿದ್ದಾರೆ. ಪ್ರಸ್ತುತ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನದೊಂದಿಗೆ ನಿರ್ಮಾಣವನ್ನೂ ಮಾಡಿರುವ ಚಿತ್ರ “ಸೂರಿ ಅಣ್ಣ”. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ನಿವೃತ್ತ ಪೊಲೀಸ್ ಅಧಿಕಾರಿ ಎಸ್ ಕೆ ಉಮೇಶ್, ಲಹರಿ ವೇಲು, ಎಚ್ ಎಂ ಕೃಷ್ಣಮೂರ್ತಿ(ಜೇಡ್ರಳ್ಳಿ ಕೃಷ್ಣಪ್ಪ), ಪಿ.ಮೂರ್ತಿ, ಗಡ್ಡ ನಾಗಣ್ಣ, ಜೀಬ್ರಾ, ಲಕ್ಕಿ ಅಣ್ಣ, ಶ್ರೀರಾಮಪುರ ಮೊಟ್ಟೆ ಕಣ್ಣ ಮುಂತಾದವರು ಸಮಾರಂಭಕ್ಕೆ ಆಗಮಿಸಿ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಆನಂತರ ಆಗಮಿಸಿದ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮಾತನಾಡಿದರು.
ನಾನು ಈ ಚಿತ್ರ ನಿರ್ಮಾಣ ಮಾಡಲು ಇಲ್ಲಿ ಬಂದಿರುವ ಸಾಕಷ್ಟು ಜನರು ಸ್ಪೂರ್ತಿ ಹಾಗೂ ನಮ್ಮ ತಂದೆ ಕೆ.ದೊರೈ ಹಾಗೂ ತಾಯಿ ಜ್ಯೋತಿಯಮ್ಮ ಅವರ ಆಶೀರ್ವಾದ ಮತ್ತು ಸಹಕಾರ ಕಾರಣ. ನನ್ನ ಸಹೋದರ ವಿಜಯ್ ಅವರು ಈ ಚಿತ್ರದ ಸಹ ನಿರ್ಮಾಪಕರು. ಹಿಂದೆ ರೌಡಿಸಂ ಕಥೆ ಆಧರಿಸಿದ “ಓಂ” ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. “ಸೂರಿ ಅಣ್ಣ” ಕೂಡ ರೌಡಿಸಂ ಕಥಾಹಂದರ ಹೊಂದಿರುವ ಚಿತ್ರವಾಗಿದೆ. ಆದರೆ ಯಾರು ರೌಡಿಸಂ ಮಾಡಬೇಡಿ. ಎಲ್ಲರಿಗೂ ಕುಟುಂಬ ಇರುತ್ತದೆ. ಎಲ್ಲದಕ್ಕಿಂತ ಅದು ಮುಖ್ಯ ಎಂಬ ಉತ್ತಮ ಸಂದೇಶವನ್ನು ಯುವಜನತೆಗೆ ನೀಡುತ್ತದೆ. ನನ್ನ ಹೆಸರು ದಿನೇಶ್. “ಸಲಗ” ಚಿತ್ರದ ನಂತರ “ಸೂರಿ ಅಣ್ಣ” ಎಂದೇ ಎಲ್ಲರೂ ಗುರುತಿಸುತ್ತಾರೆ. ನಾನೇ ಈ ಚಿತ್ರವನ್ನು ನಿರ್ದೇಶಿಸಿ, ನಿರ್ಮಾಣ ಮಾಡಿದ್ದೇನೆ. ನಾನೇ ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿ ಸಂಭ್ರಮಶ್ರೀ.
ರವಿ ಕಾಳೆ, ಹರೀಶ್ ರಾಯ್, ಕಾಕ್ರೋಜ್ ಸುಧೀ, ಪ್ರಕಾಶ್ ತುಮಿನಾಡ, ಎಸ್ ಕೆ.ಉಮೇಶ್, ಅಂತರರಾಷ್ಟ್ರೀಯ ದೇಹದಾರ್ಢ್ಯ ಪಟು ಪ್ರಸಾದ್, ವೇಡಿ ಅಣ್ಣ(ಭಾಷಾ ಭಾಯ್), ಚೈತ್ರಾಲ್ ರಂಗಸ್ವಾಮಿ, ಬೆನಕ ನಂಜಪ್ಪ, ಲೇಡಿಡಾನ್ ಯಶಸ್ವಿನಿ ಗೌಡ, ಬೇಬಿ ಮರಿಶಾ, ಪ್ರವೀಣ್ ರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಎಂ.ಬಿ.ಅಳಿಕಟ್ಟಿ ಛಾಯಾಗ್ರಹಣ, ಎನ್ ಎಂ ವಿಶ್ವ ಸಂಕಲನ, ಎನ್ ರಾಜ್ ನೃತ್ಯ ನಿರ್ದೇಶನ, ವಿಶ್ವ.ಜಿ ಕಲಾ ನಿರ್ದೇಶನ ಹಾಗೂ ಜಾಗ್ವಾರ್ ಸಣ್ಣಪ್ಪ ಸಾಹಸ ನಿರ್ದೇಶನವಿರುವ ಈ ಚಿತ್ರದಲ್ಲಿ ಐದು ಹಾಡುಗಳಿದ್ದು, ಕೆ.ಎಂ.ಇಂದ್ರ ಸಂಗೀತ ನೀಡಿದ್ದಾರೆ. ಶ್ರೀಧರ್ ಕಶ್ಯಪ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸೂರಿ ಅಣ್ಣ, ವಿಶ್ವ ಜಿ ಹಾಗೂ ಪ್ಯಾತೊ ಪ್ರಜ್ಜು ಅವರು ಗೀತರಚನೆ ಮಾಡಿದ್ದಾರೆ. ಕ್ರಿಯೇಟಿವ್ ಹೆಡ್ ಆಗಿ ಹಿರಿಯರಾದ ರಂಜಿತ್ ತಿಗಡಿ ಕಾರ್ಯ ನಿರ್ವಹಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದೆ. ಇನ್ನೆರಡು ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ನಿರ್ಮಾಪಕ, ನಿರ್ದೇಶಕ ಹಾಗೂ ನಾಯಕ ಸಲಗ ಸೂರಿ ಅಣ್ಣ ತಿಳಿಸಿದರು.
ಹೆರಿಗೆ ನೋವಿನ ಬಗ್ಗೆ ತಾಯಿ ಮಾತ್ರ ಹೇಳಲು ಸಾಧ್ಯ. ಬೇರೆ ಯಾರಿಂದಲೂ ಸಾಧ್ಯವಿಲ್ಲ. ಹಾಗೆ ರೌಡಿಸಂ ಮಾಡಿದವರು ಅನುಭವಿಸಿದ ನೋವುಗಳನ್ನು ಅವರೆ ಹೇಳಬೇಕು. ಹಾಗೆ ಹೇಳುವುದರ ಜೊತೆಗೆ ಯಾರು ಕೂಡ ಈ ಕೆಲಸ ಮಾಡಬೇಡಿ ಎಂದು ಸಂದೇಶ ನೀಡುವ ಪ್ರಯತ್ನವನ್ನು ಈ ಚಿತ್ರದಲ್ಲಿ ಸೂರಿ ಮತ್ತು ಚಿತ್ರತಂಡದವರು ಮಾಡಿದ್ದಾರೆ ಎಂದು ನಟ ಕಾಕ್ರೋಜ್ ಸುಧೀ ಹೇಳಿದರು.
ನಾಯಕಿ ಸಂಭ್ರಮಶ್ರೀ, ಲೇಡಿ ಡಾನ್ ಯಶಸ್ವಿನಿ ಗೌಡ, “ಐ” ಚಿತ್ರದ ಖ್ಯಾತಿಯ ನಟ ಕಾಮರಾಜ್, ಅಂತರರಾಷ್ಟ್ರೀಯ ದೇಹದಾರ್ಢ್ಯ ಪಟು ಪ್ರಸಾದ್, ಸಂಗೀತ ನಿರ್ದೇಶಕ ಕೆ.ಎಂ.ಇಂದ್ರ ಮುಂತಾದ ಚಿತ್ರತಂಡದ ಸದಸ್ಯರು “ಸೂರಿ ಅಣ್ಣ” ಚಿತ್ರದ ಕುರಿತು ಮಾತನಾಡಿದರು.