ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳ ಜಾಮೀನು ರದ್ದು ಮಾಡಿದ ಸುಪ್ರೀಂ ಕೋರ್ಟ್

Untitled design 2025 08 14t114455.816

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು ಏಳು ಆರೋಪಿಗಳ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ರಾಜ್ಯ ಸರ್ಕಾರವು ದರ್ಶನ್ ಅವರ ಜಾಮೀನು ರದ್ದುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ಜಸ್ಟೀಸ್ ಜೆ.ಬಿ. ಪರ್ದಿವಾಲಾ ಮತ್ತು ಜಸ್ಟೀಸ್ ಮಹದೇವನ್ ಅವರ ಪೀಠವು ನಡೆಸಿ, ಈ ಮಹತ್ವದ ತೀರ್ಪನ್ನು ನೀಡಿದೆ.

ಪ್ರಕರಣದ ಮುಖ್ಯ ಆರೋಪಿಗಳಾದ, ಎ1 ಪವಿತ್ರಾ ಗೌಡ, ಎ2 ದರ್ಶನ್ ತೂಗುದೀಪ, ಎ6 ಜಗದೀಶ್ (ಅಲಿಯಾಸ್ ಜಗ್ಗ), ಎ7 ಅನುಕುಮಾರ್ (ಅಲಿಯಾಸ್ ಅನು), ಎ11 ನಾಗರಾಜು (ಅಲಿಯಾಸ್ ನಾಗ), ಎ12 ಲಕ್ಷ್ಮಣ್, ಎ14 ಪ್ರದೋಶ್ ಇವರ ಜಾಮೀನನ್ನು ಸುಪ್ರೀಂ ಕೋರ್ಟ್ ಮಾಡಿದೆ

ಪ್ರಕರಣದ ಹಿನ್ನೆಲೆ

ರೇಣುಕಾಸ್ವಾಮಿ ದರ್ಶನ್ ಅವರ ಅಭಿಮಾನಿಯಾಗಿದ್ದರು. ಆರೋಪಿ ಪವಿತ್ರಾ ಗೌಡ ಜೊತೆ ದರ್ಶನ್ ಲಿವ್-ಇನ್ ಸಂಬಂಧದಲ್ಲಿದ್ದರು. ರೇಣುಕಾಸ್ವಾಮಿ, ಪವಿತ್ರಾ ಗೌಡರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದರು ಎಂದು ಆರೋಪಿಸಲಾಗಿದೆ. ಇದರಿಂದ ಕೋಪಗೊಂಡ ಆರೋಪಿಗಳು ರೇಣುಕಾಸ್ವಾಮಿಯನ್ನು ಅಪಹರಿಸಿ, ಬೆಂಗಳೂರಿನ ಒಂದು ಶೆಡ್‌ನಲ್ಲಿ ಕೊಲೆಗೈದಿದ್ದಾರೆ. ತನಿಖೆಯಲ್ಲಿ ಆರೋಪಿಗಳು ಕೊಲೆ ಸ್ಥಳದಲ್ಲಿದ್ದರು ಎಂಬುದು ದೃಢಪಟ್ಟಿದೆ.

ಕೊಲೆ ಸ್ಥಳದ ಮಣ್ಣಿನ ಮಾದರಿ: ದರ್ಶನ್, ರಾಘವೇಂದ್ರ (ಎ4), ನಂದೀಶ್, ಮತ್ತು ನಾಗರಾಜು ಅವರ ಪಾದರಕ್ಷೆಗಳ ಮೇಲಿನ ಮಣ್ಣಿನ ಮಾದರಿಗಳು ಕೊಲೆ ಸ್ಥಳದ ಮಾದರಿಯೊಂದಿಗೆ ಹೊಂದಾಣಿಕೆಯಾಗಿವೆ.

ಡಿಎನ್‌ಎ ಪುರಾವೆ: ಮೃತನ ರಕ್ತದ ಕಲೆಗಳು ಕೆಲವು ಆರೋಪಿಗಳ ಬಟ್ಟೆಗಳ ಮೇಲೆ ಕಂಡುಬಂದಿವೆ.

ಕೊಲೆಯ ಸಮಯದಲ್ಲಿ ಸ್ಥಳದಲ್ಲಿದ್ದ ಮಾಹಿತಿ: ಪವಿತ್ರಾ ಗೌಡ ಮತ್ತು ದರ್ಶನ್ ಕೊಲೆಯ ಸಮಯದಲ್ಲಿ ಸ್ಥಳದಲ್ಲಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಸರ್ಕಾರದ ವಾದವೇನು?

ಹೈಕೋರ್ಟ್ ಜಾಮೀನು ನೀಡಿದ್ದು ಸರಿಯಲ್ಲ, ದಾಖಲೆಗಳಿಗೆ ವಿರುದ್ಧವಾಗಿದೆ. ಕೊಲೆಯಲ್ಲಿ ಬಳಸಿದ ಆಯುಧಗಳು ಮಾರಕವಲ್ಲ ಎಂದು ತೀರ್ಪಿನಲ್ಲಿ ತಿಳಿಸಿರುವುದು ತಪ್ಪು. ಮೃತನ ದೇಹದ ಮೇಲಿನ ಗಾಯಗಳು ಈ ವಾದವನ್ನು ಸುಳ್ಳಾಗಿಸುತ್ತವೆ. ಸಾಕ್ಷಿಗಳ ಹೇಳಿಕೆ ತಡವಾಗಿ ದಾಖಲಿಸಲಾಗಿದೆ ಎಂಬ ಅನುಮಾನವನ್ನು ಸರ್ಕಾರ ತಳ್ಳಿಹಾಕಿತು.  ಎಫ್‌ಎಸ್‌ಎಲ್, ಎಲೆಕ್ಟ್ರಾನಿಕ್, ಮತ್ತು ಸಿಡಿಆರ್ ಪುರಾವೆಗಳನ್ನು ಹೈಕೋರ್ಟ್ ಸರಿಯಾಗಿ ಪರಿಗಣಿಸಿಲ್ಲ. ದರ್ಶನ್‌ಗೆ ಈ ಹಿಂದೆಯೂ ಅಪರಾಧದ ಇತಿಹಾಸವಿದೆ. ಬೆನ್ನುನೋವಿನ ಕಾರಣಕ್ಕೆ ಕೋರ್ಟ್‌ಗೆ ಹಾಜರಾಗದೆ ವಿನಾಯಿತಿ ಪಡೆದಿದ್ದರೂ, ಮರುದಿನ ಚಲನಚಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸುಪ್ರೀಂ ಕೋರ್ಟ್‌ನ ತೀರ್ಪು :

ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರದ ವಾದವನ್ನು ಒಪ್ಪಿಕೊಂಡು, ಹೈಕೋರ್ಟ್‌ನ ಜಾಮೀನು ಆದೇಶವನ್ನು ರದ್ದುಗೊಳಿಸಿತು. ಹೈಕೋರ್ಟ್‌ನಿಂದ ನಡೆದ “ಮಿನಿ ಟ್ರಯಲ್” ಸರಿಯಲ್ಲ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಕೊಲೆಯ ಗಂಭೀರತೆ, ಆರೋಪಿಗಳ ಭಾಗಿತ್ವ, ಮತ್ತು ದಾಖಲಾದ ಪುರಾವೆಗಳ ಆಧಾರದ ಮೇಲೆ ಈ ತೀರ್ಪು ನೀಡಲಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣವು ಕರ್ನಾಟಕದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಸುಪ್ರೀಂ ಕೋರ್ಟ್‌ನ ಈ ತೀರ್ಪು, ಆರೋಪಿಗಳ ವಿರುದ್ಧ ಕಾನೂನು ಕ್ರಮವನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಪ್ರಕರಣದ ತನಿಖೆ ಮುಂದುವರಿಯುತ್ತಿದ್ದು, ಇದರ ಮುಂದಿನ ಹಂತದ ವಿಚಾರಣೆಯ ಮೇಲೆ ಸಾರ್ವಜನಿಕರ ಕಣ್ಣು ನೆಟ್ಟಿದೆ.

Exit mobile version