‘ಡೆವಿಲ್’ ಸಿನಿಮಾ ಯಶಸ್ವಿಯಾಗಲಿ: ದರ್ಶನ್‌ಗೆ ಶುಭ ಹಾರೈಸಿದ ಸುಮಲತಾ ಅಂಬರೀಶ್

Untitled design 2025 11 24T201945.833

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ಡಿಸೆಂಬರ್ 11 ರಂದು ಬಿಡುಗಡೆಯಾಗುತ್ತಿದೆ. ದರ್ಶನ್ ಜೈಲಿನಲ್ಲಿ ಇರುವುದರಿಂದ, ಸಿನಿಮಾ ತಂಡವೇ ಪ್ರಚಾರ ಕಾರ್ಯವನ್ನು ಮುನ್ನಡೆಸುತ್ತಿದೆ. ಈ ನಡುವೆ, ಮಾಜಿ ಸಂಸದೆ ಹಾಗೂ ನಟಿ ಸುಮಲತಾ ಅಂಬರೀಶ್ ಅವರು ಚಿತ್ರದ ಬಗ್ಗೆ ಹಾಗೂ ದರ್ಶನ್ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

“ಆಗಿ ಹೋಗಿರುವ ವಿಚಾರವನ್ನು ಮತ್ತೆ ಮತ್ತೆ ಚರ್ಚಿಸುವುದರಲ್ಲಿ ಅರ್ಥವಿಲ್ಲ. ಮುಂದೆ ಎಲ್ಲವೂ ಒಳ್ಳೆಯದಾಗಲಿ ಎಂದು ಹಾರೈಸೋಣ,” ಎಂದು ಅವರು ಹೇಳಿದ್ದಾರೆ. “ನಾನು ಸಾಮಾನ್ಯವಾಗಿ ಸಿನಿಮಾಗಳ ಪ್ರಚಾರ ಕಾರ್ಯಕ್ರಮಗಳಲ್ಲಿ ನೇರವಾಗಿ ಪಾಲ್ಗೊಳ್ಳುವುದಿಲ್ಲ. ಆದರೆ ದರ್ಶನ್ ನನ್ನ ಹಿತೈಶಿ. ಅವರ ಸಿನಿಮಾ ಯಶಸ್ವಿಯಾಗಲಿ ಎಂಬುದು ನನ್ನ ಮನದಾಳದ ಹಾರೈಕೆ,” ಎಂದಿದ್ದಾರೆ.

ದರ್ಶನ್ ಸವಾಲಿನ ಪರಿಸ್ಥಿತಿಯಲ್ಲಿ ಇದ್ದರೂ, ಅವರು ಭವಿಷ್ಯದಲ್ಲಿ ಒಳ್ಳೆಯದನ್ನು ಕಾಣಲಿ ಎಂಬ ವಿಶ್ವಾಸವನ್ನು ಸುಮಲತಾ ವ್ಯಕ್ತಪಡಿಸಿದ್ದಾರೆ. “ಸತ್ಯವನ್ನು ಯಾರೂ ಶಾಶ್ವತವಾಗಿ ಮರೆಮಾಡಲು ಸಾಧ್ಯವಿಲ್ಲ. ದೇವರ ನ್ಯಾಯದ ನಂಬಿಕೆ ಇದೆ. ಅಭಿಮಾನಿಗಳು ‘ದಿ ಡೆವಿಲ್’ ಸಿನಿಮಾವನ್ನೇ ಎದುರುನೋಡುತ್ತಿದ್ದು, ನಾವು ಕೂಡ ಕಾಯುತ್ತಿದ್ದೇವೆ,” ಎಂದು ಅವರು ಹೇಳಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆರೋಪಿಯಾಗಿ ಜೈಲಿನಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ, ದರ್ಶನ್ ಅವರ ಅನುಪಸ್ಥಿತಿಯಲ್ಲೇ ‘ದಿ ಡೆವಿಲ್’ ಸಿನಿಮಾ ಬಿಡುಗಡೆ ಮಾಡಲು ತಂಡ ಮುಂದಾಗಿದೆ.

ಚಿತ್ರದ ನಿರ್ದೇಶನವನ್ನು ಪ್ರಕಾಶ್ ವೀರ್ ಅವರು ನಿರ್ವಹಿಸಿದ್ದಾರೆ. ನಟಿ ರಚನಾ ರೈ, ದರ್ಶನ್ ಅವರ ಜೊತೆ ಜೋಡಿಯಾಗಿ ನಟಿಸಿದ್ದಾರೆ. ಜೊತೆಗೆ ಶರ್ಮಿಳಾ ಮಾಂಡ್ರೆ, ಮಹೇಶ್ ಮಂಜೇಕರ್, ಅಚ್ಯುತ್ ಕುಮಾರ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಂಗೀತವನ್ನು ಅಜನೀಶ್ ಬಿ. ಲೋಕನಾಥ್ ನೀಡಿದ್ದು, ಸಿನಿಮಾದ ಹಾಡುಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಜನಪ್ರಿಯತೆ ಪಡೆದಿವೆ.

ಚಿತ್ರದ ಟೀಸರ್ ಹಾಗೂ ಟ್ರೇಲರ್ ಬಿಡುಗಡೆಯಾಗಿ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿದ್ದು, ದರ್ಶನ್ ಅಭಿಮಾನಿಗಳು ನಿರೀಕ್ಷೆಯನ್ನಿಟ್ಟಿದ್ದಾರೆ.

ದರ್ಶನ್ ಜೈಲಿನಲ್ಲಿದ್ದರೂ ಡೆವಿಲ್ ಚಿತ್ರದ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಸಾಂಗ್ ರಿಲೀಸ್

ನಟ ದರ್ಶನ್ ತೂಗುದೀಪ ಅವರ ಅಭಿಮಾನಿಗಳಿಗೆ ಒಂದೆಡೆ ಸಂತೋಷವಾದರೆ, ಮತ್ತೊಂದೆಡೆ ಬೇಸರವೂ ಆಗಿರುವ ಸಂದರ್ಭವೊಂದು ಎದುರಾಗಿದೆ. ದರ್ಶನ್ ಅವರ ನೆಚ್ಚಿನ ಸಿನಿಮಾ ‘ದಿ ಡೆವಿಲ್’ನ ಮೊದಲ ಹಾಡು ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಬಿಡುಗಡೆಯಾಗಿದೆ.

ಈ ಹಾಡು ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿದ್ದು, ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಆದರೆ, ದರ್ಶನ್ ಅವರು ಕೊಲೆ ಆರೋಪದಡಿ ಜೈಲಿನಲ್ಲಿರುವ ಸಂದರ್ಭದಲ್ಲಿ ಈ ಹಾಡು ಬಿಡುಗಡೆಯಾಗಿರುವುದು ಫ್ಯಾನ್ಸ್‌ಗೆ ಖುಷಿಯೊಂದಿಗೆ ಒಂದಿಷ್ಟು ನೋವು ತಂದಿದೆ.

‘ದಿ ಡೆವಿಲ್’ ಚಿತ್ರದ ಪ್ರಚಾರದ ಮೊದಲ ಹಂತವಾಗಿ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ.  ದರ್ಶನ್ ಅವರಿಗೆ ಜಾಮೀನು ರದ್ದಾದ ಕಾರಣದಿಂದಾಗಿ ಈ ಹಾಡಿನ ಬಿಡುಗಡೆಯನ್ನು ಮುಂದೂಡಲಾಗಿತ್ತು. ಚಿತ್ರತಂಡವು ಈಗ ತಮ್ಮ ನಿರ್ಧಾರವನ್ನು ಮುಂದುವರಿಸಿ, ಹಾಡನ್ನು ಅಧಿಕೃತವಾಗಿ ರಿಲೀಸ್ ಮಾಡಿದೆ. ಈ ಹಾಡಿನ ಲಿರಿಕಲ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ಪಡೆಯುತ್ತಿದೆ.

‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡಿಗೆ ದೀಪಕ್ ಬ್ಲೂ ದನಿಯಾಗಿದ್ದಾರೆ. ಇವರು ಈ ಹಿಂದೆ ‘ಪುಷ್ಪಾ’ ಚಿತ್ರದ ಟೈಟಲ್ ಟ್ರ್ಯಾಕ್‌ಗೆ ಧ್ವನಿ ನೀಡಿದ್ದವರು. ದರ್ಶನ್ ಅವರ ಜೈಲುವಾಸದಿಂದಾಗಿ ಅಭಿಮಾನಿಗಳಿಗೆ ಈ ಹಾಡಿನ ಬಿಡುಗಡೆಯು ಒಂದು ಭಾವನಾತ್ಮಕ ಕ್ಷಣವಾಗಿದೆ. ಒಂದೆಡೆ ತಮ್ಮ ನೆಚ್ಚಿನ ನಟನ ಸಿನಿಮಾದ ಹಾಡು ಬಿಡುಗಡೆಯ ಸಂತಸವಿದ್ದರೆ, ಮತ್ತೊಂದೆಡೆ ದರ್ಶನ್ ಜೈಲಿನಲ್ಲಿರುವುದರಿಂದ ಬೇಸರವೂ ತಂದಿದೆ. ಆದರೂ, ಫ್ಯಾನ್ಸ್ ಈ ಹಾಡನ್ನು ತಮ್ಮದೇ ಆದ ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ.

Exit mobile version