ಬೆಂಗಳೂರು (ಆಗಸ್ಟ್ 14): ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅಭಿನಯದ, ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ‘ರಾಮಾಯಣ: ಪಾರ್ಟ್ 1’ ಸಿನಿಮಾ ಈಗ ಜಾಗತಿಕ ಮಟ್ಟದಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾಗಿದೆ. ವಿಶ್ವದ ಎರಡನೇ ಅತಿದೊಡ್ಡ ಸಿನಿಮಾ ಮಾರುಕಟ್ಟೆಯಾದ ಚೀನಾದಲ್ಲೂ ಸಿನಿಮಾ ಬಿಡುಗಡೆಯಾಗಲಿದ್ದು, ಅಲ್ಲಿ ಹೊಸ ಶೀರ್ಷಿಕೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲಿದೆ.
ಚೀನಾದಲ್ಲೂ ಬಿಡುಗಡೆಯಾಗಲಿದೆ ರಾಮಾಯಣ: ಪಾರ್ಟ್ 1’
ಚೀನಾದಲ್ಲಿ ಚಿತ್ರದ ಹೊಸ ಹೆಸರು ‘The Legend of Prince’
ಸೋನಿ ಪಿಕ್ಚರ್ಸ್ ವಿತರಣೆಯ ಜವಾಬ್ದಾರಿ
ನವೆಂಬರ್ 6 ಜಾಗತಿಕ, ನವೆಂಬರ್ 8 ಭಾರತದಲ್ಲಿ ರಿಲೀಸ್
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಚೀನಾದಲ್ಲಿ ಈ ಚಿತ್ರವನ್ನು ‘The Legend of Prince’ ಹೆಸರಿನಲ್ಲಿ ಬಿಡುಗಡೆ ಮಾಡುವ ಯೋಜನೆ ಇದೆ. ಸೋನಿ ಪಿಕ್ಚರ್ಸ್ ಚೀನಾದಲ್ಲಿ ಚಿತ್ರದ ವಿತರಣೆಯ ಜವಾಬ್ದಾರಿ ವಹಿಸಿಕೊಳ್ಳಲಿದ್ದು, ನಿತೇಶ್ ತಿವಾರಿ ಅವರ ‘ದಂಗಲ್’ ಬಳಿಕ ಮತ್ತೊಮ್ಮೆ ಚೀನಾ ಮಾರುಕಟ್ಟೆಯಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.
ಚೀನಾದಲ್ಲಿ ಭರ್ಜರಿ ಪ್ರಚಾರ
ಚಿತ್ರದ ಪ್ರಚಾರಕ್ಕಾಗಿ ಸೆಪ್ಟೆಂಬರ್ 24ರಂದು ಚೀನಾದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಶೇಷ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆ ಇದೆ. ಬಳಿಕ ಅಕ್ಟೋಬರ್ 1ರಿಂದ ಆರಂಭವಾಗುವ ಗೋಲ್ಡನ್ ವೀಕ್ ವೇಳೆ ಬೀಜಿಂಗ್, ಶಾಂಘೈ ಸೇರಿದಂತೆ ಪ್ರಮುಖ ನಗರಗಳಲ್ಲಿ ನಿರ್ಮಾಪಕ ನಮಿತ್ ಮಲ್ಹೋತ್ರಾ ಮತ್ತು ಚಿತ್ರತಂಡ ಭರ್ಜರಿ ಪ್ರಚಾರ ಪ್ರವಾಸ ಕೈಗೊಳ್ಳಲಿದೆ.
ದೀಪಾವಳಿಗೆ ಭಾರತದಲ್ಲಿ ರಿಲೀಸ್
‘ರಾಮಾಯಣ: ಪಾರ್ಟ್ 1’ ಸಿನಿಮಾ ನವೆಂಬರ್ 6ರಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾಗಲಿದ್ದು, ಭಾರತದಲ್ಲಿ ದೀಪಾವಳಿ ಪ್ರಯುಕ್ತ ನವೆಂಬರ್ 8ರಂದು ತೆರೆಕಾಣಲಿದೆ. ವಿದೇಶದ ಪ್ರೇಕ್ಷಕರು ಭಾರತೀಯರಿಗಿಂತ ಎರಡು ದಿನ ಮುಂಚಿತವಾಗಿ ಚಿತ್ರ ವೀಕ್ಷಿಸುವ ಅವಕಾಶ ಪಡೆಯಲಿದ್ದಾರೆ.
VFX ಟೀಕೆಗೆ ರಣಬೀರ್ ತಿರುಗೇಟು
ಚಿತ್ರದ ಟೀಸರ್ ಬಿಡುಗಡೆಯಾದ ಬಳಿಕ VFX ಮತ್ತು CGI ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ರಣಬೀರ್ ಕಪೂರ್, “ಇತ್ತೀಚೆಗೆ ಇಂಟರ್ನೆಟ್‌ನಲ್ಲಿ CGI ವಿಮರ್ಶಕರು ಹೆಚ್ಚಾಗಿದ್ದಾರೆ. ವರ್ಷಗಟ್ಟಲೆ ಶ್ರಮಪಟ್ಟ ಕಲಾವಿದರ ಕೆಲಸವನ್ನು ಗೌರವಿಸಬೇಕು” ಎಂದು ಟ್ರೋಲ್‌ಗಳಿಗೆ ತಿರುಗೇಟು ನೀಡಿದ್ದಾರೆ.
ಭಾರತೀಯ ಮಹಾಕಾವ್ಯವನ್ನು ಜಾಗತಿಕ ಪ್ರೇಕ್ಷಕರಿಗೆ ತಲುಪಿಸುವ ಗುರಿಯೊಂದಿಗೆ ‘ರಾಮಾಯಣ’ ಸಿನಿಮಾ ಈಗ ಚೀನಾ ಮಾರುಕಟ್ಟೆಯಲ್ಲೂ ಭಾರಿ ನಿರೀಕ್ಷೆ ಹುಟ್ಟಿಸಿದೆ.
ಚೀನಾದಲ್ಲಿ ‘ದಂಗಲ್’ ಬಾಕ್ಸ್ ಆಫೀಸ್ ಯಶಸ್ಸು
ಡಿಸೆಂಬರ್ 23, 2016 ರಂದು ಭಾರತದಲ್ಲಿ ಬಿಡುಗಡೆಯಾದ ‘ದಂಗಲ್’, ಹಲವು ತಿಂಗಳ ನಂತರ ಮೇ 2017 ರಲ್ಲಿ ಚೀನಾದ ಚಿತ್ರಮಂದಿರಗಳಿಗೆ ಆಗಮಿಸಿತು ಮತ್ತು ಚೀನಾದಲ್ಲಿ ಸುಮಾರು 1,200-1,300 ಕೋಟಿ ರೂ. ಗಳಿಸಿತು, ಇದು 190 ಮಿಲಿಯನ್ ಯುಎಸ್ ಡಾಲರ್‌ಗಿಂತ ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ.
