ಕನ್ನಡದ ಜೊತೆ ಮಲಯಾಳಂನಲ್ಲೂ ಡಿಮ್ಯಾಂಡ್ ಹೆಚ್ಚಿಸಿಕೊಂಡಿರೋ ರಾಜ್ ಬಿ ಶೆಟ್ಟಿ, ಸಿಕ್ಕಾಪಟ್ಟೆ ಬ್ಯುಸಿ ಶೆಡ್ಯೂಲ್ ನಡುವೆ ಹೊಸ ಪ್ರತಿಭೆಗಳಿಗೆ ಚಿತ್ರ ನಿರ್ಮಾಣ ಮಾಡುವ ಜವಾಬ್ದಾರಿ ಮರೆತಿಲ್ಲ. ಸು ಫ್ರಮ್ ಸೋ ಅನ್ನೋ ಡಿಫರೆಂಟ್ ಟೈಟಲ್ ಇಟ್ಕೊಂಡು ಸದ್ದು ಮಾಡ್ತಿದ್ದ ಸಿನಿಮಾದ ಅಸಲಿ ಕಥೆ ರಿವೀಲ್ ಆಗಿದೆ. ಸೋಮೇಶ್ವರ ಸುಲೋಚನಾ ಮೇಲೆ ಶೆಟ್ರಿಗೆ ಲವ್ವಾಗಿರೋ ಲವ್ಲಿ ಸ್ಟೋರಿ ನೀವೇ ನೋಡಿ.
- ‘ಸೋಮೇಶ್ವರ ಸುಲೋಚನಾ’ ಮೇಲೆ ರಾಜ್ ಶೆಟ್ಟಿಗೆ ಲವ್
- ಹಳ್ಳಿ ಸೊಗಡಿನಲ್ಲಿ ಹಂಡ್ರೆಡ್ ಪರ್ಸೆಂಟ್ ಫನ್ ರೈಡ್ ಚಿತ್ರ
- ತುಳು ಕಲಾವಿದರ ಮಹಾದಂಡು.. ತುಮಿನಾಡ್ ಡೈರೆಕ್ಷನ್
- ಜು-25ಕ್ಕೆ ಸು ಫ್ರಮ್ ಸೋ.. ಎಕ್ಕ, ಜೂನಿಯರ್‌ಗೆ ಸಹಕಾರ
ಇತ್ತೀಚೆಗೆ ಸು ಫ್ರಮ್ ಸೋ ಅನ್ನೋ ಸಿನಿಮಾದ ಹಾಡೊಂದು ರಿಲೀಸ್ ಆಗಿತ್ತು. ಇದೀಗ ಅದ್ರ ಟ್ರೈಲರ್ ಕೂಡ ರಿವೀಲ್ ಆಗಿದೆ. ನೋಡುಗರ ಮೊಗದಲ್ಲಿ ಸಣ್ಣ ನಗು ತರಿಸೋ ಈ ಔಟ್ ಅಂಡ್ ಔಟ್ ಕಾಮಿಡಿ ಎಂಟರ್‌ಟೈನರ್ ಸಿನಿಮಾದ ಅಸಲಿ ಸೂತ್ರಧಾರ ರಾಜ್ ಬಿ ಶೆಟ್ಟಿ. ಯೆಸ್.. ಖ್ಯಾತ ನಟ ರಾಜ್ ಬಿ ಶೆಟ್ಟಿ ಹೋಮ್ ಬ್ಯಾನರ್ ಲೈಟರ್ ಬುದ್ಧ ಫಿಲಂಸ್ ಬ್ಯಾನರ್‌ನಡಿ ಶಶಿಧರ ಶೆಟ್ಟಿ ಬರೋಡಾ, ರವಿ ರೈ ಕಳಸ ನಿರ್ಮಾಣ ಮಾಡಿರೋ ಚಿತ್ರವಿದು. ಜೆ ಪಿ ತುಮಿನಾಡ್ ನಿರ್ದೇಶನದ ಸು ಫ್ರಮ್ ಸೋ ಚಿತ್ರದ ಡಾoಕ್ಸ್ ಆ್ಯಂಥಮ್ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ. ಇದೀಗ ಟ್ರೈಲರ್ ಅದೇ ಹಾದಿಯಲ್ಲಿದೆ.
ಕಾಮಿಡಿ ಹಾರರ್ ಜಾನರ್‌ನ ಈ ಚಿತ್ರ, ಇದೇ ಜುಲೈ 25 ರಂದು ತೆರೆಗೆ ಬರಲಿದೆ. ರಂಗಭೂಮಿಯಲ್ಲಿ ಸಾಕಷ್ಟು ಹೆಸರು ಮಾಡಿರೋ ಜೆ ಪಿ ತುಮಿನಾಡ್ ಚೊಚ್ಚಲ ನಿರ್ದೇಶನದ ಚಿತ್ರವಿದು. ಆರು ವರ್ಷಗಳ ಹಿಂದೆಯೇ ಅವರು ಸಿದ್ದ ಮಾಡಿಕೊಂಡಿದ್ದ ಈ ಕಥೆ ಈಗ ಸಿನಿಮಾ ರೂಪ ಪಡೆದುಕೊಂಡಿದೆ. “ಸು ಫ್ರಮ್ ಸೋ” ಎಂದರೆ ಸುಲೋಚನ ಹಾಗೂ ಸೋಮೇಶ್ವರ ಎಂಬ ಪಾತ್ರ ಹಾಗೂ ಸ್ಥಳದ ಹೆಸರು. ಬಹುತೇಕ ಹೊಸತಂಡವೇ ಸೇರಿ ಮಾಡಿರುವ ಈ ಚಿತ್ರಕ್ಕೆ ಬೆಳ್ತಂಗಡಿ, ವೇಣೂರು, ಕಕ್ಯಪದವು ಸುತ್ತಮುತ್ತ 50ದಿನಗಳ ಕಾಲ ಚಿತ್ರೀಕರಣ ನಡೆದಿದೆ.
ನಿರ್ದೇಶನ ಮಾಡೋದ್ರ ಜೊತೆಗೆ ಜೆಪಿ ತುಮಿನಾಡ್ ನಟಿಸಿದ್ದು, ಅವರೊಟ್ಟಿಗೆ ಶನೀಲ್ ಗೌತಮ್, ಪ್ರಕಾಶ್ ಕೆ ತುಮಿನಾಡ, ದೀಪಕ್ ರೈ ಪಣಜೆ, ಮೈಮ್ ರಾಮದಾಸ್, ಅರ್ಜುನ್ ಕಜೆ ಮುಂತಾದವರು ನಟಿಸಿದ್ದಾರೆ. ಚಂದ್ರಶೇಖರ್ ಛಾಯಾಗ್ರಹಣ, ಸುಮೇಧ್ ಕೆ ಸಂಗೀತ ಚಿತ್ರದ ಹೈಲೆಟ್. ಸಂದೀಪ್ ತುಳಸಿದಾಸ್ ಹಿನ್ನೆಲೆ ಸಂಗೀತ ನೀಡಿದ್ದು, ಸಿನಿಮಾ ಬಗ್ಗೆ ತುಂಬಾ ಪ್ರೀತಿಯಿಂದ ಮಾತನಾಡಿದ್ರು ನಿರ್ಮಾಪಕ ರಾಜ್ ಬಿ ಶೆಟ್ಟಿ.
ಸಿನಿಮಾ ನಿರ್ದೇಶಕನಾಗಬೇಕೆಂದು ಚಿತ್ರರಂಗಕ್ಕೆ ಬಂದ ನಾನು, ನಟನಾದೆ. ಈಗ ಕೆಲವು ವರ್ಷಗಳ ನಂತರ ಮೊದಲ ಚಿತ್ರವನ್ನು ನಿರ್ದೇಶನ ಮಾಡಿದ್ದೇನೆ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ. ಇದೊಂದು ಕಾಲ್ಪನಿಕ ಕಥೆ. ನೋಡುಗರನ್ನು ನಗೆಗಡಲಿನಲ್ಲಿ ತೇಲಿಸುವ ಕಥೆಯೂ ಹೌದು. ನೋಡಿ, ಹಾರೈಸಿ ಎಂದರು ನಿರ್ದೇಶಕ ಜೆಪಿ ತುಮಿನಾಡ.
ನೋಡುಗರನ್ನ ಹಳ್ಳಿಯೊಂದಕ್ಕೆ ಕರೆದೊಯ್ಯುವ ಈ ಸಿನಿಮಾ ನಗಿಸುತ್ತಲೆ ಸಣ್ಣದೊಂದು ಭಯ ಕೂಡ ಹುಟ್ಟಿಸುತ್ತೆ. ಸೋ.. ಮಕ್ಕಳು ಕೂಡ ಸೂಸು ಮಾಡಿಕೊಳ್ಳದೆ ನೋಡುಬಹುದಾದ ಹಾರರ್ ಸಿನಿಮಾ ಇದಾಗಿದೆ.
ಕೆಡಿ ಟೀಸರ್ ಲಾಂಚ್ ಇವೆಂಟ್ ವಿಚಾರ ನಮ್ಮಲ್ಲಿ ನಮ್ಮವರೇ ಕಾಲೆಳೆಯೋರು ಇದ್ದಾರೆ ಎಂದಿದ್ರು ಜೋಗಿ ಪ್ರೇಮ್. ಇದಕ್ಕೆ ಪ್ರತಿಕ್ರಿಯಿಸಿರೋ ರಾಜ್ ಬಿ ಶೆಟ್ಟಿ, ನನ್ನ ಕಾಲು ಯಾರೂ ಎಳೆದಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ, ಮೋಹಕತಾರೆ ರಮ್ಯಾರ ಚಿತ್ರರಂಗದ ಒಗ್ಗಟ್ಟಿನ ಹೇಳಿಕೆಗೂ ರಿಯಾಕ್ಟ್ ಮಾಡಿದ್ದಾರೆ. ಕಂಡಿತ ಒಗ್ಗಟ್ಟು ಬರೋಕೆ ಸಾಧ್ಯ ಇಲ್ಲ ಎಂದಿದ್ದಾರೆ ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ರಾಜ್ ಬಿ ಶೆಟ್ಟಿ. ಅದ್ಯಾಕೆ ಅಂತ ಅವ್ರ ಬಾಯಿಂದಲೇ ಕೇಳಿ.
ಒಟ್ಟಾರೆ ರಿಷಬ್ ಹಾಗೂ ರಕ್ಷಿತ್‌ರಂತೆ ರಾಜ್ ಬಿ ಶೆಟ್ಟಿ ಕೂಡ ಮಾಗಿರೋ ಪ್ರತಿಭೆ. ಸದಾ ಕಲಾ ಸೇವೆಗೆ ತಮ್ಮನ್ನು ಮುಡಿಪಾಗಿಸಿಕೊಂಡಿರೋ ರಾಜ್, ಸದ್ಯದಲ್ಲೇ ವೆಬ್ ಸೀರೀಸ್ ಶುರು ಮಾಡಲಿದ್ದಾರೆ. ಶಿವಣ್ಣ-ಉಪ್ಪಿ ಜೊತೆಗಿನ 45 ಸಿನಿಮಾ ಕೂಡ ರಿಲೀಸ್ ಹಂತಕ್ಕೆ ಬಂದಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್