ಖ್ಯಾತ ಗಾಯಕ ಸೋನು ನಿಗಮ್, ಉಪ್ಪು ತಿಂದ ಮನೆಗೇ ದ್ರೋಹ ಬಗೆಯೋ ಕೆಲಸ ಮಾಡಿದ್ದಾರೆ. ಹತ್ತ ಏಣಿಯನ್ನೇ ಒದೆಯೋ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ತಾಳ್ಮೆ ಕಳೆದುಕೊಂಡ ಸೋನ, ವಿವಾದದ ಕಿಡಿ ಹೊತ್ತಿಸಿದ್ದಾರೆ. ಸದ್ಯ ಇಡೀ ಕರುನಾಡು ಬಾಯ್ಕಾಟ್ ಸೋನು ನಿಗಮ್ ಅಂತ ಅಭಿಯಾನ ಶುರು ಮಾಡಿದ್ದು, ಕ್ಷಮೆ ಯಾಚಿಸಲು ಒತ್ತಾಯಿಸಿದೆ.
ಸೋನು ನಿಗಮ್ ಅಂದಾಕ್ಷಣ ನಮ್ಮ ಕನ್ನಡದ ಗಾಯಕ ಅನ್ನೋ ಫೀಲ್ ಕೊಡ್ತಿತ್ತು. ಆತ ಹರಿಯಾಣದ ಹೈದ ಅನ್ನೋದನ್ನ ಕೂಡ ಮರೆತು, ಕನ್ನಡಿಗರು ಅಷ್ಟರ ಮಟ್ಟಿಗೆ ಆತನ ಕಂಠದ ಜೊತೆ ಆತನನ್ನೂ ಮೆಚ್ಚಿಕೊಂಡಿದ್ದರು. 90ರ ದಶಕದಲ್ಲೇ ಹಾಡೋದಿಕ್ಕೆ ಶುರುವಿಟ್ಟ ಸೋನು ನಿಗಮ್, ಬಾಲಿವುಡ್‌ನಲ್ಲಿ ಸೆಟಲ್ ಆಗಿದ್ದು 2000ನೇ ಇಸವಿ ನಂತರ. ಆದ್ರೆ ಕನ್ನಡಿಗರಿಗೆ ಈತ ನೈಂಟೀಸ್‌ನಲ್ಲಿ ಪರಿಚಿತರಾದ್ರು. ಚಿಕ್ಕಬಳ್ಳಾಪುರದ ಡಿ ರಾಜೇಂದ್ರ ಬಾಬು ಅನ್ನೋ ಡೈರೆಕ್ಟರ್ ವಿಷ್ಣುವರ್ಧನ್‌ರ ಜೀವನಧಿ ಸಿನಿಮಾದಲ್ಲಿ ಹಾಡಿಸಿದ್ರು. ನಂತ್ರ ಹಂಸಲೇಖ ಅವರ ಸ್ನೇಹಲೋಕ ಚಿತ್ರದ ಟೈಟಾನಿಕ್ ಹೀರೋಯಿನ್ ಸಾಂಗ್ ಹಾಡಿದ್ರು ಸೋನು.
ಅಲ್ಲಿಂದ ಕಿಚ್ಚ-ದಚ್ಚು ಮೊದಲ ಸಿನಿಮಾಗಳಾದ ಸ್ಪರ್ಶ, ಮೆಜೆಸ್ಟಿಕ್‌ನಿಂದ ಹಿಡಿದು, ಮುಂಗಾರು ಮಳೆ, ಚೆಲುವಿನ ಚಿತ್ತಾರ, ಮಿಲನ ಸಿನಿಮಾಗಳಿಂದ ಫೇಮಸ್ ಆದರು. ಅದರಲ್ಲೂ ಯೋಗರಾಜ್ ಭಟ್ ಸಿನಿಮಾಗಳು, ಮನೋಮೂರ್ತಿ ಸಂಗೀತದ ಹಾಡುಗಳಿಗೆ ಸೋನು ನಿಗಮ್ ಕಂಠವೇ ಫಿಕ್ಸ್. ಅಷ್ಟೇ ಯಾಕೆ ಯಶ್ ಚೊಚ್ಚಲ ಚಿತ್ರ ಮೊಗ್ಗಿನ ಮನಸ್ಸು ಚಿತ್ರದಲ್ಲೂ ಸೋನು ಕಂಠವಿದೆ. ಅಲ್ಲಿಂದ ಈಚೆಗೆ ಕನ್ನಡದಲ್ಲೇ ಸಾವಿರಾರು ಕನ್ನಡ ಹಾಡುಗಳನ್ನ ಹಾಡಿರೋ ಈತ, ಇತ್ತೀಚೆಗೆ ಮಾರ್ಟಿನ್ ಚಿತ್ರದ ಜೀವ ನೀನೆ ಹಾಗೂ ಕೃಷ್ಣ ಪ್ರಣಯಸಖಿ ಚಿತ್ರದ ಹೇಯ್ ಗಗನ ಹಾಡಿನವರೆಗೆ ಎಲ್ಲಿಲ್ಲದ ನೇಮು, ಫೇಮ್ ಮಾಡಿದ್ರು.
ಬಾಲಿವುಡ್ ಮಂದಿ ಇವ್ರನ್ನ ಕಡೆಗಣಿಸಿದಾಗ ಕೈ ಹಿಡಿದಿದ್ದು ವಿಶಾಲ ಹೃದಯದವರಾದ ನಾವುಗಳು ಅನ್ನೋದು ಸೋನು ನಿಗಮ್ ಮರೆತಂತಿದೆ. ಸಿಂಗಲ್ ಸಾಂಗ್‌ಗೆ ಲಕ್ಷಾಂತರ ರೂಪಾಯಿ ಸಂಭಾವನೆ ಪಡೆಯೋ ಈತ, ಇನ್ನು ನಮ್ಮ ಕನ್ನಡಿಗರ ಕನ್ನಡ ಗೀತೆಗಳಿಂದಲೇ ವಿಶ್ವದ ಮೂಲೆ ಮೂಲೆಯಲ್ಲಿ ಲೈವ್ ಕಾನ್ಸರ್ಟ್ ಗಳನ್ನ ಮಾಡ್ತಾ ದುಡಿದಿದ್ದು ಕೋಟಿ ಕೋಟಿ ರೂಪಾಯಿ. ಇಂತಹ ಸ್ಟಾರ್ ಸಿಂಗರ್‌ಗೆ ಬೆಳೆಸಿದ ಕನ್ನಡಿಗರ ಮೇಲೆ ಹಾಗೂ ಬೆಳೆದ ಕನ್ನಡ ಮಣ್ಣಿನ ಮೇಲೆ ಗೌರವ ಇಲ್ಲದಿರೋದು ದುರಂತ.
ಬೆಂಗಳೂರಿನ ಖಾಸಗಿ ಕಾಲೇಜು ಒಂದರಲ್ಲಿ ನಡೆದ ಇವೆಂಟ್‌ನಲ್ಲಿ ಸೋನು ನಿಗಮ್ ಲೈವ್ ಪರ್ಫಾರ್ಮ್ ಮಾಡಿದ್ದಾರೆ. ಆ ವೇಳೆ ಸ್ಟೂಡೆಂಟ್ ಒಬ್ರು ಕನ್ನಡ ಕನ್ನಡ ಅಂತ ಜೋರಾಗಿ ಹೇಳುವ ಮೂಲಕ ಕನ್ನಡ ಹಾಡನ್ನು ಹಾಡಿ ಎಂದಿದ್ದಾರೆ. ಅದಕ್ಕೆ ತಾಳ್ಮೆ ಕಳೆದುಕೊಂಡ ಸೋನು ನಿಗಮ್ ನಾಲಗೆ ಹರಿಬಿಟ್ಟಿದ್ದಾರೆ. ‘ಕನ್ನಡ ಕನ್ನಡ.. ಇದೇ ಕಾರಣ. ಪಹಲ್ಗಾಮ್‌ನಲ್ಲಿ ಆಗಿದ್ಯಲ್ಲ.. ಅದಕ್ಕೆ ಇದೇ ಕಾರಣ’ ಅಂತ ಉದ್ದಟತನ ಮೆರೆದಿದ್ದಾರೆ.
ನಾನು ಎಲ್ಲಾ ಭಾಷೆಗಳಲ್ಲೂ ಹಾಡುಗಳನ್ನ ಹಾಡಿದ್ದೇನೆ. ಆದರೆ ನಾನು ನನ್ನ ಜೀವನದಲ್ಲಿ ಹಾಡಿರುವ ಅತ್ಯದ್ಭುತ ಹಾಡುಗಳು ಕನ್ನಡದ ಹಾಡುಗಳು. ನಾನು ನಿಮ್ಮೆಲ್ಲರ ಮಧ್ಯೆ ಯಾವಾಗ ಬಂದ್ರೂ ತುಂಬಾ ಪ್ರೀತಿಯಿಂದ ಬರ್ತೇನೆ. ನಾವು ಪ್ರತಿದಿನ ಶೋಗಳನ್ನ ಮಾಡುತ್ತೇವೆ. ಕರ್ನಾಟಕದಲ್ಲಿ ನಾವು ಯಾವುದೇ ಶೋ ಮಾಡಿದಾಗ ನಾವು ಗೌರವದಿಂದ ಬರ್ತೇವೆ. ಯಾಕಂದ್ರೆ, ನಮ್ಮನ್ನ ನೀವು ನಿಮ್ಮ ಫ್ಯಾಮಿಲಿ ಅಂತ ಪರಿಗಣಿಸಿದ್ದೀರಿ. ನನಗೆ ಅದು ಇಷ್ಟವಾಗಲಿಲ್ಲ. ಕನ್ನಡ.. ಕನ್ನಡ ಅಂತ್ಹೇಳಿದ ಆ ಹುಡುಗ ಹುಟ್ಟೋಕೆ ಮುನ್ನವೇ ನಾನು ಕನ್ನಡ ಹಾಡು ಹಾಡೋಕೆ ಶುರುಮಾಡಿದ್ದೆ. ‘ಕನ್ನಡ.. ಕನ್ನಡ..’ ಅಂತ್ಹೇಳಿ ತುಂಬಾ ರೂಡ್ ಆಗಿ ನನಗೆ ಆ ಹುಡುಗ ಬೆದರಿಕೆ ಹಾಕಿದ. ಕನ್ನಡ.. ಕನ್ನಡ.. ಇದೇ ಕಾರಣ.. ಪಹಲ್ಗಾಮ್‌ನಲ್ಲಿ ಆಗಿದ್ಯಲ್ಲ.. ಅದಕ್ಕೆ ಇದೇ ಕಾರಣ. ಈಗ ನೀವು ಏನೋ ಮಾಡಿದ್ರಲ್ಲ.. ಅದೇ ಕಾರಣ. ನೋಡಿ ಮುಂದೆ ಯಾರಿದ್ದಾರೆ. ನಾನು ಕನ್ನಡಿಗರನ್ನು ಪ್ರೀತಿಸುತ್ತೇನೆ. ಐ ಲವ್ ಯು ಗಯ್ಸ್.
ನಾನು ಜಗತ್ತಿನಲ್ಲಿ ಎಲ್ಲೇ ಹೋದ್ರೂ ಸಹ.. 14 ಸಾವಿರ ಜನರ ಗುಂಪಿನಲ್ಲಿ ಒಬ್ಬರಾದ್ರೂ ‘ಕನ್ನಡ’ ಅಂತ ಹೇಳೇ ಹೇಳುತ್ತಾರೆ. ಹಾಗಾಗಿ ನಾನು ಆ ಒಬ್ಬ ಕನ್ನಡಿಗ ಅಭಿಮಾನಿಗಾಗಿ ಕನ್ನಡ ಹಾಡು ಹಾಡುತ್ತೇನೆ. ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ. ಆದ್ದರಿಂದ ನೀವು ಹೀಗೆ ಮಾಡಬಾರದು.
ಆ ಹುಡ್ಗ ಕನ್ನಡ ಹಾಡು ಕೇಳೋಕೆ ಈತ ಹೇಳ್ತಿರೋದಕ್ಕೆ ಏನು ಸಂಬಂಧ..? ಪಹಲ್ಗಾಮ್‌ಗೆ ಇದನ್ನ ಹೋಲಿಸಿ ಬಾಯಿ ಚಪಲ ತೀರಿಸಿಕೊಳ್ಳೋ ದರ್ದು ಏನಿತ್ತು ಅಂತ ಇಡೀ ಕರುನಾಡು ಸೋನು ನಿಗಮ್ ಮೇಲೆ ಕೆಂಡ ಕಾರುತ್ತಿದೆ. ಕೆಆರ್‌ಜಿ ಕಾರ್ತಿಕ್ ಗೌಡ, ಕರವೇ ನಾರಾಯಣ ಗೌಡ, ಚಿತ್ರೋದ್ಯಮ ಸೇರಿದಂತೆ ಖ್ಯಾತ ಸಂಭಾಷಣೆಕಾರ ಮಾಸ್ತಿ ಕೂಡ ಸೋನು ಮೇಲೆ ತುಂಬಾ ಖಾರವಾಗಿ ಆಕ್ರೋಶ ಹೊರಹಾಕಿದ್ದಾರೆ.
ಸೋನು ನಿಗಮ್ ಹೇಳಿಕೆ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿದೆ. ಕೂಡಲೇ ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಮುಂದಿನ ದಿನಗಳಲ್ಲಿ ಸೋನು ನಿಗಮ್‌ರನ್ನ ಕನ್ನಡ ಚಿತ್ರರಂಗದಿಂದ ಬಾಯ್ಕಾಟ್ ಮಾಡಬೇಕು ಅನ್ನೋ ಅಲೆ ಎದ್ದಿದೆ. ಕನ್ನಡಿಗರ ಗತ್ತು, ತಾಕತ್ತು ಏನು ಅನ್ನೋದನ್ನ ಸೋನು ನಿಗಮ್‌ಗೆ ಅರ್ಥೈಸಬೇಕಿದೆ ಕನ್ನಡಿಗರು ಹಾಗೂ ಚಿತ್ರೋದ್ಯಮ.