40ರ ಹರೆಯದಲ್ಲಿ 2ನೇ ಬಾರಿ ತಾಯಿ ಆಗ್ತಿದ್ದಾರೆ ಸೋನಂ ಕಪೂ‌ರ್; ಸೀಮಂತ ಶಾಸ್ತ್ರದ ಫೋಟೋ ವೈರಲ್

Untitled design 2026 02 09T140908.337

ಸಾಮಾನ್ಯವಾಗಿ ಮದುವೆಯ ನಂತರ ನಾಯಕಿಯರು ಚಿತ್ರರಂಗದಿಂದ ನಿಧಾನವಾಗಿ ದೂರವಾಗುತ್ತಾರೆ ಎನ್ನುವುದು ನಮ್ಮ ಚಿತ್ರರಂಗದಲ್ಲಿ ಸಾಮಾನ್ಯವಾಗಿ ಕಾಣುವ ವಿಚಾರ. ಮದುವೆಯಾದ ಮೇಲೆ ಹೊಸ ಬದುಕಿನ ಜವಾಬ್ದಾರಿಗಳು, ಕುಟುಂಬದ ಒತ್ತಡ, ಮಕ್ಕಳ ಪಾಲನೆ ಈ ಎಲ್ಲ ಕಾರಣಗಳಿಂದಾಗಿ ಅನೇಕ ನಟಿಯರು ಸಿನಿಮಾ ಲೋಕವನ್ನು ಹಿಂಬಿಟ್ಟು ತಮ್ಮ ವೈಯಕ್ತಿಕ ಜೀವನಕ್ಕೆ ಹೆಚ್ಚು ಸಮಯ ನೀಡುತ್ತಾರೆ. ಇದಕ್ಕೆ ಸಾಕ್ಷಿಯೆಂಬಂತೆ ಭಾಗ್ಯಶ್ರೀ, ಟ್ವಿಂಕಲ್ ಖನ್ನಾ, ಆಯೇಶ್ ಟಾಕಿಯಾ, ಆಸಿನ್ ಸೇರಿದಂತೆ ಹಲವು ಜನಪ್ರಿಯ ನಾಯಕಿಯರ ಉದಾಹರಣೆಗಳು ನಮ್ಮ ಮುಂದೆ ಇವೆ. ಈ ಸಾಲಿನಲ್ಲಿ ಬಾಲಿವುಡ್‌ ನಟಿ ಸೋನಂ ಕಪೂರ್ ಕೂಡ ಒಬ್ಬರು.

ಬಾಲಿವುಡ್‌ನ ಖ್ಯಾತ ನಟ ಅನಿಲ್ ಕಪೂರ್ ಅವರ ಮುದ್ದಿನ ಮಗಳು ಸೋನಂ ಕಪೂರ್, 2007ರಲ್ಲಿ ರಣ್‌ಬೀರ್ ಕಪೂರ್ ಜೊತೆಗೆ ಚಿತ್ರರಂಗಕ್ಕೆ ಪ್ರವೇಶಿಸಿದರು. ತಮ್ಮ ವಿಭಿನ್ನ ಶೈಲಿ, ಫ್ಯಾಷನ್ ಸೆನ್ಸ್ ಮತ್ತು ಅಭಿನಯದಿಂದ ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿದ್ದರು. “ನೀರ್ಜಾ” ಚಿತ್ರದಲ್ಲಿನ ಅಭಿನಯಕ್ಕಾಗಿ ಅವರು ಸಾಕಷ್ಟು ಪ್ರಶಂಸೆಗೂ ಪಾತ್ರರಾದರು.

ಆದರೆ 2017ರ ನಂತರ ಸೋನಂ ಕಪೂರ್ ಚಿತ್ರರಂಗದಿಂದ ಸ್ವಲ್ಪ ದೂರ ಸರಿದರು. 2018ರ ಮೇ 8ರಂದು ತಮ್ಮ ಜೀವನ ಸಂಗಾತಿ ಆನಂದ್ ಅಹುಜಾ ಅವರನ್ನು ವಿವಾಹವಾದ ಬಳಿಕ ಮುಂಬೈಗೆ ಗುಡ್‌ಬೈ ಹೇಳಿ ಲಂಡನ್‌ನಲ್ಲಿ ನೆಲೆಸಿದರು.

ಲಂಡನ್ ಜೀವನದ ನಡುವೆ ಕೆಲವೊಮ್ಮೆ ಮಾತ್ರ ಸಿನಿಮಾಗಳಲ್ಲಿ ಕಾಣಿಸಿಕೊಂಡ ಸೋನಂ, ಹೆಚ್ಚಿನ ಸಮಯವನ್ನು ಕುಟುಂಬ ಜೀವನಕ್ಕೆ ಮೀಸಲಿಟ್ಟಿದ್ದಾರೆ.

ಈಗ ಸೋನಂ ಕಪೂರ್ ತಮ್ಮ 40ನೇ ವಯಸ್ಸಿನಲ್ಲಿ ಎರಡನೇ ಬಾರಿ ಗರ್ಭಿಣಿಯಾಗಿರುವ ಸುದ್ದಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಫೆಬ್ರವರಿ 8ರಂದು ಸೋನಂ ಅವರ ಅದ್ಧೂರಿ ಸೀಮಂತ ಶಾಸ್ತ್ರ ನೆರವೇರಿದ್ದು, ಅದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸಂಭ್ರಮದ ಕ್ಷಣಗಳನ್ನು ಕಂಡ ಅಭಿಮಾನಿಗಳು ಶುಭಾಶಯಗಳ ಸುರಿಮಳೆಗೈದಿದ್ದಾರೆ.

ಸೀಮಂತ ಶಾಸ್ತ್ರದ ದಿನ ಸೋನಂ ನಿಂಬೆ ಹಸಿರು ಬಣ್ಣದ ಲೆಹೆಂಗಾ ಹಾಗೂ ಅದಕ್ಕೆ ಹೊಂದುವ ಬ್ರೌಸ್ ಧರಿಸಿ ಮಿಂಚಿದರು. ಚಿನ್ನದ ನೆಕ್ಲೀಸ್, ಭಾರವಾದ ಜುಮುಕಿಗಳು, ಕಿವಿಯೋಲೆ, ಕಾಕ್‌ಟೈಲ್ ರಿಂಗ್, ಚೈನ್ ರಿಂಗ್ ಹಾಗೂ ಚಿನ್ನದ ಬಳೆಗಳೊಂದಿಗೆ ಸೋನಂ ಅವರ ಲುಕ್ ಎಲ್ಲರ ಗಮನ ಸೆಳೆಯಿತು.

ಈ ವಿಶೇಷ ಕಾರ್ಯಕ್ರಮದಲ್ಲಿ ಅನಿಲ್ ಕಪೂರ್, ಅರ್ಜುನ್ ಕಪೂರ್, ಅಂಶುಲಾ ಕಪೂರ್, ಖುಷಿ ಕಪೂರ್, ಮಹೀಪ್ ಕಪೂರ್ ಸೇರಿದಂತೆ ಇಡೀ ಕಪೂರ್ ಕುಟುಂಬ ಹಾಜರಿದ್ದು ಸಂಭ್ರಮಕ್ಕೆ ಸಾಕ್ಷಿಯಾದರು. ಹಿರಿಯ ನಟ ಅನುಪಮ್ ಖೇರ್ ಕೂಡ ಆಗಮಿಸಿ ದಂಪತಿಗೆ ಆಶೀರ್ವಾದ ನೀಡಿದರು.

ಕರೀನಾ ಕಪೂರ್, ಭೂಮಿ ಪೆಡ್ನೇಕರ್, ಅಲೇಖಾ ಅಡ್ವಾಣಿ, ಮಸಬಾ ಗುಪ್ತಾ, ಶಬಾನಾ ಅಜ್ಜಿ, ಡಿಸೈನರ್ ಸಂದೀಪ್ ಖೋಸ್ಲಾ ಸೇರಿದಂತೆ ಹಲವು ಬಾಲಿವುಡ್ ತಾರೆಯರು ಈ ಸಂಭ್ರಮದಲ್ಲಿ ಭಾಗವಹಿಸಿದ್ದರು. ಜೊತೆಗೆ ಸೋನಂ ಅವರ ಆಪ್ತ ಸ್ನೇಹಿತೆ ಮಿಹೀಕಾ ಬಜಾಜ್ ಕೂಡ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು.

ಸೋನಂ ಕಪೂರ್ ಅವರು 2022ರ ಆಗಸ್ಟ್ 20ರಂದು ಮೊದಲ ಮಗುವಿಗೆ ಜನ್ಮ ನೀಡಿದ್ದರು. ಗಂಡು ಮಗುವಿಗೆ “ವಾಯು” ಎಂದು ನಾಮಕರಣ ಮಾಡಿದ್ದು ಅಭಿಮಾನಿಗಳ ಗಮನ ಸೆಳೆದಿತ್ತು. ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಸೋನಂ ಮತ್ತು ಆನಂದ್ ಅಹುಜಾ ದಂಪತಿಗೆ ಅಭಿಮಾನಿಗಳು ಹಾರೈಸುತ್ತಿದ್ದಾರೆ.

Exit mobile version