ಮೂರನೇ ಮದುವೆಯ ಬೆನ್ನಲ್ಲೇ ಬಾಲಿವುಡ್‌ ನಟ ಆಮಿರ್‌ಗೆ ಕೊ*ಲೆ ಬೆದರಿಕೆ

Untitled design (89)

ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಈಗ ತೀವ್ರ ಸಂಕಷ್ಟದಲ್ಲಿದ್ದಾರೆ. ಮೂರನೇ ಮದುವೆಯ ಬೆನ್ನಲ್ಲೇ ಅವರ ತಲೆಗೆ 5 ಕೋಟಿ ಬೆಲೆ ಕಟ್ಟಲಾಗಿದೆ. ‘ಲವ್ ಜಿಹಾದ್’ ಆರೋಪದ ಕೆನ್ನಾಲಗೆಯಲ್ಲಿ ಅಮಿರ್ ಸುಟ್ಟು ಕರಕಲಾಗುತ್ತಿದ್ದು, ಅಯೋಧ್ಯೆಯ ಧಾರ್ಮಿಕ ಮುಖಂಡರೊಬ್ಬರು ನೇರವಾಗಿ ಕೊಲೆ ಬೆದರಿಕೆ ಹಾಕಿದ್ದಾರೆ. ಇಷ್ಟಕ್ಕೂ ಈ ವಿವಾದದ ಹಿಂದಿರುವ ಅಸಲಿ ರಹಸ್ಯವೇನು?

ಬಾಲಿವುಡ್ ಅಂಗಳದಲ್ಲಿ ಲವ್ ಬರ್ಡ್ಸ್ ಹಾರಾಟ ಹೊಸದೇನಲ್ಲ, ಆದರೆ ಆಮಿರ್ ಖಾನ್ ಅವರ ಮೂರನೇ ಮದುವೆ ಮಾತ್ರ ಬಾಂಬ್ ಬ್ಲಾಸ್ಟ್‌ನಂತೆ ಸದ್ದು ಮಾಡಿದೆ. ಜುಲೈ 5ರಂದು ಬೆಂಗಳೂರಿನ ಬ್ಯೂಟಿ ಎಂಟರ್‌ಪ್ರೆನ್ಯೂರ್ ಗೌರಿ ಸ್ಪ್ರ್ಯಾಟ್ ಅವರ ಕೈಹಿಡಿದ ಆಮಿರ್ ಖಾನ್, ಸದ್ದಿಲ್ಲದೆ ಹೊಸ ಬಾಳಿನ ಹಾದಿ ತುಳಿದಿದ್ದರು. ಆದರೆ ಈ ಮದುವೆ ವೈಯಕ್ತಿಕ ಸಂಭ್ರಮವಾಗಿ ಉಳಿಯದೆ, ರಾಷ್ಟ್ರಮಟ್ಟದ ವಿವಾದದ ಕೇಂದ್ರಬಿಂದುವಾಗಿ ಬದಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಶುರುವಾದ ಟೀಕೆಗಳು ಈಗ ಸಾಂವಿಧಾನಿಕ ಮಿತಿಗಳನ್ನು ಮೀರಿ ಬೆದರಿಕೆಯ ಹಂತಕ್ಕೆ ತಲುಪಿದ್ದು, ಆಮಿರ್ ಸುತ್ತಲೂ ಕಪ್ಪು ಮೋಡಗಳು ಕವಿದಿವೆ.

ನಟನ ಈ ಮದುವೆಗೆ ಬಲಪಂಥೀಯ ಸಂಘಟನೆಗಳು ತೀವ್ರವಾಗಿ ವಿರೋಧ ವ್ಯಕ್ತಪಡಿಸುತ್ತಿವೆ. ಅದರಲ್ಲೂ ಮಹಾರಾಷ್ಟ್ರದ ಸಚಿವ ನಿತೇಶ್ ರಾಣೆ, ಆಮಿರ್ ಖಾನ್ ಅವರನ್ನು ‘ಲವ್ ಜಿಹಾದ್‌ನ ಬ್ರಾಂಡ್ ಅಂಬಾಸಿಡರ್’ ಎಂದು ಹೇಳಿದ್ದು, ಈ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಆಮಿರ್ ಖಾನ್ ಅವರ ಹಿಂದಿನ ಇತಿಹಾಸವನ್ನು ಕೆದಕುತ್ತಾ, ಅವರು ಮದುವೆಯಾದ ಮಹಿಳೆಯರ ಧರ್ಮ ಮತ್ತು ನಟನ ಉದ್ದೇಶಗಳ ಬಗ್ಗೆ ಕಟು ಟೀಕೆಗಳು ವ್ಯಕ್ತವಾಗುತ್ತಿವೆ. ಬಜರಂಗದಳದ ಪ್ರತಿಭಟನೆಗಳ ಮೂಲಕ ಶುರುವಾದ ಈ ಕಿಚ್ಚು, ಈಗ ಖಾನ್ ಅವರ ವೃತ್ತಿ ಜೀವನ ಮತ್ತು ವೈಯಕ್ತಿಕ ಭದ್ರತೆಯ ಮೇಲೆ ತೂಗುಗತ್ತಿಯಾಗಿ ಪರಿಣಮಿಸಿದೆ.

ವಿವಾದದ ತೀವ್ರತೆ ಎಷ್ಟಿದೆಯೆಂದರೆ, ಅಯೋಧ್ಯೆಯ ತಪಸ್ವಿ ಛಾವಣಿಯ ಪೀಠಾಧೀಶ ಜಗದ್ಗುರು ಪರಮಹಂಸ ಆಚಾರ್ಯ ಅವರು ಅಕ್ಷರಶಃ ಆಮಿರ್ ಖಾನ್ ತಲೆಗೆ ಬೆಲೆ ಕಟ್ಟಿದ್ದಾರೆ. “ಆಮಿರ್ ಖಾನ್ ಸಮಾಜದಲ್ಲಿ ವಿಷಬೀಜ ಬಿತ್ತುತ್ತಿದ್ದಾರೆ, ಅವರನ್ನು ಸದೆಬಡಿಯುವವರಿಗೆ 5 ಕೋಟಿ ರೂಪಾಯಿ ಬಹುಮಾನ ನೀಡುತ್ತೇನೆ, ಅಷ್ಟೇ ಅಲ್ಲದೆ ಅವರ ಮೇಲಾಗುವ ಎಲ್ಲಾ ಕಾನೂನು ಪ್ರಕರಣಗಳ ಜವಾಬ್ದಾರಿಯೂ ನನ್ನದೇ” ಎಂದು ಬಹಿರಂಗವಾಗಿ ಘೋಷಿಸಿ ಬಾಲಿವುಡ್‌ಗೆ ಶಾಕ್ ನೀಡಿದ್ದಾರೆ. ಪವಿತ್ರ ಅಯೋಧ್ಯೆಯ ಹೆಸರಿನಲ್ಲಿ ಬಂದ ಈ ಹೇಳಿಕೆ, ಈಗ ದೇಶಾದ್ಯಂತ ಸಂಚಲನ ಮೂಡಿಸಿದೆ.

ಸುತ್ತಲೂ ಬೆಂಕಿ ಹತ್ತಿಕೊಂಡಿದ್ದರೂ, ಆಮಿರ್ ಖಾನ್ ಈ ಬಾರಿ ಮೌನ ಮುರಿಯಲೇಬೇಕಾದ ಪರಿಸ್ಥಿತಿ ಬಂದಿದೆ. “ನನ್ನ ಮೂವರು ಪತ್ನಿಯರು ತಮ್ಮ ಧರ್ಮ ಬದಲಾಯಿಸಿಲ್ಲ, ನಾವೆಲ್ಲರೂ ಸಿವಿಲ್ ಕಾನೂನಿನ ಅಡಿಯಲ್ಲಿ ಮದುವೆಯಾಗಿದ್ದೇವೆ” ಎಂದು ಖಾನ್ ಸ್ಪಷ್ಟನೆ ನೀಡಿದ್ದಾರೆ. ವಿಶೇಷವಾಗಿ ತಮ್ಮ ಹೊಸ ಪತ್ನಿ ಗೌರಿ ಸ್ಪ್ರ್ಯಾಟ್ ಬಗ್ಗೆ ಮಾತನಾಡಿ, ಅವರು ಹಿಂದೂ ಅಲ್ಲ, ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರು ಎಂದು ವಾದಗಳಿಗೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ. ಆದರೆ, ಅವರ ಈ ಸ್ಪಷ್ಟನೆ ವಿವಾದವನ್ನು ತಣ್ಣಗಾಗಿಸುತ್ತಾ ಅಥವಾ ಮತ್ತೆ ಕೆರಳಿಸುತ್ತಾ ಎಂಬುದೇ ಈಗ ಮಿಲಿಯನ್ ಡಾಲರ್ ಪ್ರಶ್ನೆ

ರೀನಾ ದತ್ತಾ, ಕಿರಣ್ ರಾವ್ ಬಳಿಕ ಈಗ ಗೌರಿ ಸ್ಪ್ರ್ಯಾಟ್ ಜೀವನಕ್ಕೆ ಬಂದಿದ್ದಾರೆ. ಆಮಿರ್ ಖಾನ್ ಅವರ ಈ ಮದುವೆ ವಿವಾದವು ಕೇವಲ ಅವರ ವೈಯಕ್ತಿಕ ವಿಚಾರವಾಗಿ ಉಳಿದಿಲ್ಲ. ಬಾಲಿವುಡ್‌ನ ಸೂಪರ್‌ಸ್ಟಾರ್‌ಗಳು ಧರ್ಮದ ವಿಷಯದಲ್ಲಿ ಹೇಗೆ ಸಿಲುಕಿಕೊಳ್ಳುತ್ತಾರೆ ಎಂಬುದಕ್ಕೆ ಇದು ಜ್ವಲಂತ ಉದಾಹರಣೆಯಾಗಿದೆ. ಒಂದು ಕಡೆ ಕಾನೂನು ಹೋರಾಟ, ಇನ್ನೊಂದು ಕಡೆ ಪ್ರಾಣ ಬೆದರಿಕೆ, ಮತ್ತೊಂದೆಡೆ ಸಾರ್ವಜನಿಕರ ಆಕ್ರೋಶ. ಒಟ್ಟಾರೆಯಾಗಿ ಹೇಳಬೇಕೆಂದರೆ, ಆಮಿರ್ ಖಾನ್ ಅವರ ಕೌಟುಂಬಿಕ ಬದುಕಿನ ಈ ಹೊಸ ಅಧ್ಯಾಯ, ಬಾಲಿವುಡ್‌ನಲ್ಲೇ ಅತಿ ದೊಡ್ಡ ವಿವಾದದ ಮೈಲಿಗಲ್ಲಾಗಿ ಉಳಿಯಲಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version