ಮುಂಬೈ, ಜ.22: ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧನಾ ಅವರ ವೈಯಕ್ತಿಕ ಜೀವನ ಕಳೆದ ವರ್ಷ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಮದುವೆಗೆ ಸಿದ್ಧತೆಗಳು ನಡೆಯುತ್ತಿದ್ದಾಗಲೇ, ಪತಿಯಾಗಬೇಕಿದ್ದ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಾಲ್ ಅವರೊಂದಿಗಿನ ಸಂಬಂಧವನ್ನು ಕಡಿದುಕೊಂಡಿದ್ದರು. ಈ ಘಟನೆ ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು. ಇದೀಗ ಪಲಾಶ್ ಮುಚ್ಚಾಲ್ ವಿರುದ್ಧ ಆರ್ಥಿಕ ವಂಚನೆ ಆರೋಪ ಕೇಳಿ ಬಂದಿದ್ದು, ಸಾಂಗ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಾಂಗ್ಲಿಯ ನಿವಾಸಿ ಹಾಗೂ ಸ್ಮೃತಿ ಮಂಧನಾ ಅವರ ಬಾಲ್ಯದ ಗೆಳೆಯ ವಿಜ್ಞಾನ್ ಮಾನೆ ಅವರು, ಪಲಾಶ್ ಮುಚ್ಚಾಲ್ ವಿರುದ್ಧ 40 ಲಕ್ಷ ರೂಪಾಯಿಗಳ ಆರ್ಥಿಕ ವಂಚನೆ ನಡೆಸಿದ್ದಾರೆಂದು ಆರೋಪಿಸಿ, ಸಾಂಗ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಪ್ರಕರಣ ಇದೀಗ ಮಹಾರಾಷ್ಟ್ರದಲ್ಲೇ ಸಂಚಲನ ಮೂಡಿಸಿದೆ.
ಏನಿದು ಪ್ರಕರಣ?
ವಿಜ್ಞಾನ್ ಮಾನೆ ಸಾಂಗ್ಲಿಯಲ್ಲಿ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಯುವಕ. ಅವರ ದೂರಿನ ಪ್ರಕಾರ, ಪಲಾಶ್ ಮುಚ್ಚಾಲ್ ಅವರು ‘ನಜರಿಯಾ’ ಎಂಬ ಹಿಂದಿ ಚಿತ್ರವನ್ನು ನಿರ್ದೇಶಿಸುವುದಾಗಿ ಹೇಳಿ, ಅದರ ನಿರ್ಮಾಣದಲ್ಲಿ ಹೂಡಿಕೆ ಮಾಡುವಂತೆ ಮನವಿ ಮಾಡಿದ್ದರು. ಈ ಚಿತ್ರ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾದ ಬಳಿಕ ಉತ್ತಮ ಲಾಭವಾಗುತ್ತದೆ ಎಂದು ಭರವಸೆ ನೀಡಿ, 25 ಲಕ್ಷ ರೂಪಾಯಿಗಳ ಹೂಡಿಕೆಯಲ್ಲಿ 12 ಲಕ್ಷ ರೂಪಾಯಿಗಳಷ್ಟು ಲಾಭ ನೀಡುವುದಾಗಿ ಭರವಸೆ ನೀಡಿದ್ದರು.
ಇದಲ್ಲದೆ, ವಿಜ್ಞಾನ್ ಮಾನೆಗೆ ಈ ಚಿತ್ರದಲ್ಲಿ ಪ್ರಮುಖ ಕೆಲಸ ನೀಡುವುದಾಗಿ ಹೇಳಿದ್ದರು. ಪಲಾಶ್ ಮುಚ್ಚಾಲ್ ಅವರ ಮಾತುಗಳನ್ನು ನಂಬಿದ ವಿಜ್ಞಾನ್ ಮಾನೆ, ಹಂತ ಹಂತವಾಗಿ ಒಟ್ಟು 40 ಲಕ್ಷ ರೂಪಾಯಿಗಳನ್ನು ನೀಡಿದ್ದರು. ಆದರೆ ನಂತರ ಚಿತ್ರ ನಿರ್ಮಾಣವೇ ಸರಿಯಾಗಿ ನಡೆಯದೇ, ಹಣ ಮರಳಿ ಸಿಗದೇ ಮೋಸವಾಗಿದೆ ಎಂಬುದು ಗೊತ್ತಾಗಿದೆ ಎಂದು ಅವರು ಆರೋಪಿಸಿದ್ದಾರೆ.
ನಂಬಿಕೆಗೆ ದ್ರೋಹ ಆರೋಪ
ತಮ್ಮ ದೂರಿನಲ್ಲಿ ವಿಜ್ಞಾನ್ ಮಾನೆ, “ಪಲಾಶ್ ಮುಚ್ಚಾಲ್ ನನ್ನಿಂದ ವಿವಿಧ ಹಂತಗಳಲ್ಲಿ ಹಣ ಪಡೆದು, ನನ್ನ ನಂಬಿಕೆಗೆ ದ್ರೋಹ ಮಾಡಿದ್ದಾರೆ. ಸಿನಿಮಾದ ಬಗ್ಗೆ ನೀಡಿದ ಯಾವುದೇ ಭರವಸೆಗಳು ಈಡೇರಿಲ್ಲ. ಹೂಡಿದ ಹಣವೂ ಮರಳಿ ಸಿಕ್ಕಿಲ್ಲ” ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆ (IPC) ಯ 406 (ವಿಶ್ವಾಸಭಂಗ) ಮತ್ತು 420 (ವಂಚನೆ) ಕಲಂಗಳ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಸದ್ಯ ಪೊಲೀಸ್ ವರಿಷ್ಠಾಧಿಕಾರಿಗಳು ದೂರು ಸ್ವೀಕರಿಸಿದ್ದು, ಪ್ರಕರಣ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸ್ಮೃತಿ ಮಂಧನಾ ಮದುವೆ ವಿವಾದದ ಬಳಿಕ ಮತ್ತೊಂದು ಶಾಕ್
ಸ್ಮೃತಿ ಮಂಧನಾ ಮತ್ತು ಪಲಾಶ್ ಮುಚ್ಚಾಲ್ ಅವರ ಮದುವೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆಯಬೇಕಿತ್ತು. ಆದರೆ ಮದುವೆಯ ದಿನವೇ ಸ್ಮೃತಿ ಮಂಧನಾ ಅವರ ತಂದೆಗೆ ಹೃದಯಾಘಾತ ಸಂಭವಿಸಿ ಅವರನ್ನು ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಘಟನೆಯ ಬಳಿಕ ಮದುವೆ ಮುಂದೂಡಲಾಗಿದ್ದು, ಕೆಲವೇ ದಿನಗಳಲ್ಲಿ ಸ್ಮೃತಿ ಮಂಧನಾ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ವಿವಾಹ ಮುರಿದುಬಿದ್ದಿರುವುದನ್ನು ಅಧಿಕೃತವಾಗಿ ಘೋಷಿಸಿದ್ದರು.
ಈ ಸುದ್ದಿ ಅಭಿಮಾನಿಗಳಿಗೆ ಮಾತ್ರವಲ್ಲದೆ ಕ್ರೀಡಾ ಹಾಗೂ ಚಿತ್ರರಂಗಕ್ಕೂ ಭಾರೀ ಆಘಾತ ನೀಡಿತ್ತು. ಮದುವೆ ಮುರಿತದ ನಿಜವಾದ ಕಾರಣವನ್ನು ಇಬ್ಬರೂ ಬಹಿರಂಗಪಡಿಸಿರಲಿಲ್ಲ. ಇದೀಗ ಪಲಾಶ್ ಮುಚ್ಚಾಲ್ ವಿರುದ್ಧ ಆರ್ಥಿಕ ವಂಚನೆ ಆರೋಪ ದಾಖಲಾಗಿರುವುದು, ಆ ವಿವಾದಕ್ಕೆ ಮತ್ತೊಂದು ಹೊಸ ಆಯಾಮ ನೀಡಿದೆ.
ಈ ಪ್ರಕರಣದಲ್ಲಿ ಪೊಲೀಸ್ ತನಿಖೆ ಮುಂದುವರಿದಿದ್ದು, ದಾಖಲೆಗಳು ಹಾಗೂ ಹಣದ ವ್ಯವಹಾರಗಳ ಕುರಿತು ಪರಿಶೀಲನೆ ನಡೆಯುತ್ತಿದೆ. ಆರೋಪ ಸಾಬೀತಾದಲ್ಲಿ ಪಲಾಶ್ ಮುಚ್ಚಾಲ್ ಅವರಿಗೆ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಿದೆ.
