ಹೊಸವರ್ಷದ ಆರಂಭದಲ್ಲಿ ನಟ ಸಿದ್ದು ಮೂಲಿಮನಿ ಅಭಿನಯದ ‘ಸೀಟ್ ಎಡ್ಜ್’ ಚಿತ್ರ ತೆರೆಗೆ

Untitled design 2025 11 27T132210.797

ಬೆಂಗಳೂರು: ಇತ್ತೀಚೆಗಷ್ಟೇ ನಟ ಸಿದ್ದು ಮೂಲಿಮನಿ ನಾಯಕ ನಟನಾಗಿ ಅಭಿನಯಿಸಿದ್ದ ‘ಲವ್ ಯು ಮುದ್ದು’ ಚಿತ್ರ ತೆರೆಗೆ ಬಂದಿದೆ. ನೈಜ ಘಟನೆ ಆಧರಿಸಿ ತಯಾರಾದ ‘ಲವ್ ಯು ಮುದ್ದು’ ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದರ ಬೆನ್ನಲ್ಲೇ ನಾಯಕ ನಟ ಸಿದ್ದು ಮೂಲಿಮನಿ ಮತ್ತೊಂದು ನೈಜ ಘಟನೆ ಆಧರಿಸಿದ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ.

ಹೌದು, ‘ಲವ್ ಯು ಮುದ್ದು’ ಚಿತ್ರದ ಬಳಿಕ ನಟ ಸಿದ್ದು ಮೂಲಿಮನಿ ನಾಯಕನಾಗಿ ಅಭಿನಯಿಸಿರುವ ‘ಸೀಟ್ ಎಡ್ಜ್’ ಚಿತ್ರ ಬಿಡುಗಡೆಗೆ ತಯಾರಾಗುತ್ತಿದೆ. ಅಂದಹಾಗೆ, ‘ಸೀಟ್ ಎಡ್ಜ್’ ಕನ್ನಡದ ಮತ್ತೊಂದು ನೈಜ ಘಟನೆಯಿಂದ ಪ್ರೇರಿತವಾದ ಚಿತ್ರ ಎಂಬುದು ಚಿತ್ರತಂಡದ ಮಾತು. ಯುವ ನಿರ್ದೇಶಕ ಚೇತನ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದಿರುವ ‘ಸೀಟ್ ಎಡ್ಜ್’ ಚಿತ್ರದಲ್ಲಿ ನಾಯಕ ನಟ ಸಿದ್ದು ಮೂಲಿಮನಿ ಯು-ಟ್ಯೂಬರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‘ಇಂಡಿಯನ್ ಪ್ಯಾರಾನಾರ್ಮಲ್ ಇನ್ವೆಸ್ಟಿಗೇಟರ್’ ಉತ್ತರ ಭಾರತದ ‘ಘೋಸ್ಟ್ ಹಂಟರ್’ ಖ್ಯಾತಿಯ ಗೌರವ್ ತಿವಾರಿ ಅವರ ಜೀವನದಲ್ಲಿ ನಡೆದ ಕೆಲ ನೈಜ ಘಟನೆಗಳನ್ನು ಆಧರಿಸಿ ‘ಸೀಟ್ ಎಡ್ಜ್’ ಚಿತ್ರ ತಯಾರಾಗಿದೆ. ಚಿತ್ರದಲ್ಲಿ ನಿಗೂಢ ಸ್ಥಳವೊಂದಕ್ಕೆ ‘ಘೋಸ್ಟ್ ಹಂಟಿಂಗ್’ ವಿಡಿಯೋ ಮಾಡಲು ತೆರಳುವ ಯು-ಟ್ಯೂಬರ್ ಹುಡುಗನೊಬ್ಬ ಅಲ್ಲಿ ಏನೆಲ್ಲ ತೊಂದರೆ ಮತ್ತು ತಾಪತ್ರಯಗಳನ್ನು ಅನುಭವಿಸುತ್ತಾನೆ? ಎಂಬ ಎಳೆಯ ಸುತ್ತ ‘ಸೀಟ್ ಎಡ್ಜ್’ ಚಿತ್ರದ ಕಥಾಹಂದರ ಸಾಗುತ್ತದೆ. ಕನ್ನಡದ ಮಟ್ಟಿಗೆ ಇದೊಂದು ಹೊಸರೀತಿಯ ಪ್ರಯೋಗದ ಚಿತ್ರವಾಗಿದ್ದು, ಹೆಸರಿಗೆ ತಕ್ಕಂತೆ ಚಿತ್ರ ಪ್ರೇಕ್ಷಕರನ್ನು ‘ಸೀಟ್ ಎಡ್ಜ್’ನಲ್ಲಿ ಕೂರಿಸುತ್ತದೆ ಎಂಬುದು ‘ಸೀಟ್ ಎಡ್ಜ್’ ನಾಯಕ ನಟ ಸಿದ್ದು ಮೂಲಿಮನಿ ಮಾತು.

ಈಗಾಗಲೇ ‘ಸೀಟ್ ಎಡ್ಜ್’ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಈಗಾಗಲೇ ಚಿತ್ರತಂಡ ‘ಸೀಟ್ ಎಡ್ಜ್’ನ ಎರಡು ಹಾಡುಗಳು ಮತ್ತು ‘ಲೂಪ್ -1’ ಹೆಸರಿನಲ್ಲಿ ಚಿತ್ರದ ಮೊದಲ ಟೀಸರ್ ಅನ್ನು ಬಿಡುಗಡೆ ಮಾಡಿದೆ. ‘ಸೀಟ್ ಎಡ್ಜ್’ ಚಿತ್ರದ ಹಾಡುಗಳು ಮತ್ತು ಟೀಸರಿಗೆ ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಮತ್ತು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ ಶೀಘ್ರದಲ್ಲಿಯೇ ಚಿತ್ರದ ಮತ್ತೊಂದು ಹಾಡು ಮತ್ತು ಟ್ರೇಲರ್ ಅನ್ನು ಬಿಡುಗಡೆ ಮಾಡುವ ಯೋಚನೆಯಲ್ಲಿದೆ.

‘ಸೀಟ್ ಎಡ್ಜ್’ ಚಿತ್ರವನ್ನು ಗಿರಿಧರ ಟಿ. ವಸಂತಪುರ ಬಂಡವಾಳ ಹೂಡಿ ನಿರ್ಮಿಸುತ್ತಿದ್ದು, ಚೇತನ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ರವೀಕ್ಷಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಾಘು ರಾಮನಕೊಪ್ಪ, ಗಿರೀಶ್ ಶಿವಣ್ಣ ಮೊದಲಾದ ಕಲಾವಿದರ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಸದ್ಯ ‘ಸೀಟ್ ಎಡ್ಜ್’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿದ್ದು, ಹೊಸ ವರ್ಷದ ಆರಂಭದಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ.

Exit mobile version