ಬೆಳಗಾವಿಯ ಪ್ರಭು ಯತ್ನಟ್ಟಿಯವರು ತಮ್ಮ ಪಿ.ಆರ್. ಅಸೋಸಿಯೇಟ್ಸ್ ಸಂಸ್ಥೆಯಿಂದ ನಿರ್ಮಾಣ ಮಾಡಿ ಬರಗೂರು ರಾಮಚಂದ್ರಪ್ಪನವರು ನಿರ್ದೇಶನ ಮಾಡಿರುವ `ಮಹಾಕವಿ’ ಕನ್ನಡ ಸಿನಿಮಾ, ಇದೇ ತಿಂಗಳು 18 ರಂದು ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ.
`ಮಹಾಕವಿ’ ಸಿನಿಮಾವನ್ನು ಆದಿಕವಿ ಪಂಪನ ಎರಡು ಕಾವ್ಯಗಳನ್ನು ಆಧರಿಸಿ ಚಿತ್ರಿಸಲಾಗಿದೆ. ಪಂಪ ಮಹಾಕವಿಯ ಜೀವನ ಮತ್ತು ಆಶಯಗಳನ್ನು ಅಳವಡಿಸಲಾಗಿದೆ. ಪಂಪ ಮಹಾಕವಿಯು ಕನ್ನಡ ಸಾಹಿತ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಜಾತಿ ಪದ್ಧತಿಯನ್ನು ವಿರೋಧಿಸಿದ್ದು ಒಂದು ಚಾರಿತ್ರಿಕ ದಾಖಲೆ. ಪಂಪನ `ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಮಾತು ಸಾರ್ವಕಾಲಿಕ ಸಂದೇಶವಾಗಿದೆ. ರಾಜನ ಆಸ್ಥಾನದಲ್ಲಿದ್ದೂ ತನ್ನ ಸೃಜನಶೀಲ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು ಪ್ರತಿನಾಯಕತ್ವದ ಪರಿಕಲ್ಪನೆಯನ್ನು ನೀಡಿದ ಹೆಗ್ಗಳಿಕೆಗೆ ಪಾತ್ರನಾದ ಕವಿ ನಮ್ಮ ಪಂಪ.
`ಮಹಾಕವಿ’ ಸಿನಿಮಾದಲ್ಲಿ ಪಂಪ ಮಹಾಕವಿಯ ಆಶಯಗಳ ಜೊತೆಗೆ ಆತನ ಕಾವ್ಯಗಳ ಕೆಲವು ಪ್ರಸಂಗಗಳನ್ನು ಚಿತ್ರಿಸಲಾಗಿದೆ. `ಆದಿಪುರಾಣ’ದ ಭರತ-ಬಾಹುಬಲಿ ಪ್ರಸಂಗ ಮತ್ತು `ವಿಕ್ರಮಾರ್ಜುನ ವಿಜಯಂ’ನ ಕರ್ಣನ ಸನ್ನಿವೇಶಗಳನ್ನು ಪ್ರಮುಖವಾಗಿ ತೋರಿಸಲಾಗಿದೆ. ಪಂಪನ ಕೆಲವು ಪದ್ಯಗಳನ್ನು ಅಳವಡಿಸಲಾಗಿದೆ. ನಾಡಿನ ಹೆಮ್ಮೆಯಾದ `ಕನ್ನಡ ಸಾಹಿತ್ಯ ಸಂಸ್ಕøತಿ’ಯನ್ನು ಬಿಂಬಿಸುವ ಅಪರೂಪದ ಪ್ರಯತ್ನವನ್ನು ಈ ಸಿನಿಮಾದಲ್ಲಿ ಕಾಣಬಹುದು.
ಈ ಚಿತ್ರದಲ್ಲಿ ಬಹುಭಾಷಾ ಕಲಾವಿದ ಕಿಶೋರ್ ಕುಮಾರ್, ಅನುಷಾ ರೈ, ಸುಂದರರಾಜ್, ಪ್ರಮೀಳಾ ಜೋಷಾಯ್, ಕುಮಾರ್ ಗೊವಿಂದ್, ಶೀಲಾ, ಆಕಾಂಕ್ಷ್ ಬರಗೂರ್, ಸುಂದರರಾಜ ಅರಸು, ರಾಜಪ್ಪ ದಳವಾಯಿ, ರಾಘವ್, ವತ್ಸಲಾ ಮೋಹನ್ ಮುಂತಾದವರು ಅಭಿನಯಿಸಿದ್ದಾರೆ.
ಸುರೇಶ್ ಅರಸು ಸಂಕಲನ, ನಾಗರಾಜ ಆದವಾನಿ ಛಾಯಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿದೇರ್ಶನ, ತ್ರಿಭುವನ್ ನೃತ್ಯ ಸಂಯೋಜನೆ, ಹೊಸ್ಮನೆ ಮೂರ್ತಿ ಕಲಾವಿನ್ಯಾಸಗಳು ಈ ಚಿತ್ರಕ್ಕಿವೆ.
ಬರಗೂರು ರಾಮಚಂದ್ರಪ್ಪನವರು ಚಿತ್ರಕತೆ, ಗೀತೆ, ಸಂಭಾಷಣೆಗಳನ್ನು ರಚಿಸಿ ನಿರ್ದೇಶನ ಮಾಡಿದ್ದಾರೆ. ಇದು ಬರಗೂರು ರಾಮಚಂದ್ರಪ್ಪನವರ ನಿರ್ದೇಶನದ 25ನೇ ಸಿನಿಮಾ ಎನ್ನುವುದು ಒಂದು ವಿಶೇಷ.
