ಕ್ಯಾಮೆರಾ ಮುಂದೆ ಸದಾ ನಗುತ್ತಾ, ಪ್ರೀತಿಯ ಸಾಗರದಲ್ಲಿ ತೇಲುತ್ತಿದ್ದ ಆ ಸ್ಟಾರ್ ಜೋಡಿಯ ಸಂಸಾರಕ್ಕೆ ಈಗ ದಿಢೀರ್ ಗ್ರಹಣ ಹಿಡಿದಿದೆ. ಇದುವರೆಗೆ ಸ್ಯಾಂಡಲ್‌ವುಡ್‌ನ ಮೋಸ್ಟ್ ಅಡೋರಬಲ್ ಕಪಲ್ ಅಂತಾನೇ ಗುರುತಿಸಿಕೊಂಡಿದ್ದ ಶುಭ ಪೂಂಜಾ-ಸುಮಂತ್ ಜೋಡಿಯ ಮಧ್ಯೆ, ಕೇವಲ ನಾಲ್ಕೇ ವರ್ಷಕ್ಕೆ ವಿಚ್ಛೇದನದಂತಹ ಬಿರುಗಾಳಿ ಏಳುತ್ತೆ ಅಂತ ಯಾರೂ ಊಹಿಸಿರಲಿಲ್ಲ. ಅಷ್ಟಕ್ಕೂ ಈ ದಾಂಪತ್ಯದಲ್ಲಿ ಅಂಥದ್ದೇನಾಯ್ತು..? ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ…
- ಪ್ರೀತಿಸಿ, ಮದುವೆಯಾಗಿದ್ದ ಜೋಡಿಗೆ ವಿಚ್ಚೇದನದ ಗ್ರಹಣ..!!
- ಫ್ಯಾಮಿಲಿ ಕೋರ್ಟ್‌ನಲ್ಲಿ ಶುಭ ಪೂಂಜಾ-ಸುಮಂತ್ ದಂಪತಿ
- ಲೈಫ್ ಜೊತೆ ಇನ್ಸ್ಟಾದಿಂದ್ಲೂ ಪತಿ ಫೋಟೋಸ್ ಡಿಲೀಟ್
- 4 ವರ್ಷಗಳ ದಾಂಪತ್ಯ ಜೀವನಕ್ಕೆ ಫುಲ್ಸ್ಟಾಪ್ ಇಡ್ತಾರಾ..?!
ಕನ್ನಡ ಚಿತ್ರರಂಗದಲ್ಲಿ ಗ್ಲಾಮರ್, ಸ್ಟಾರ್‌ಡಮ್ ಎಷ್ಟು ಸತ್ಯವೋ, ಅಷ್ಟೇ ಸತ್ಯ ಇಲ್ಲಿನ ಬಾಂಧವ್ಯಗಳ ಏರುಪೇರು ಕೂಡ. ಬೆಳ್ಳಿತೆರೆಯ ಮೇಲೆ ನೂರು ವರ್ಷ ಸುಖವಾಗಿ ಬಾಳಿ ಎಂದು ಹರಸುವ ಜೋಡಿಗಳು, ರಿಯಲ್ ಲೈಫ್‌ನಲ್ಲಿ ಮಾತ್ರ ಹ್ಯಾಪಿ ಎಂಡಿಂಗ್ ಕಾಣದೆ ಅರ್ಧಕ್ಕೇ ದಾರಿ ಬದಲಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ದೊಡ್ಡ ಟ್ರೆಂಡ್ ಆಗಿಬಿಟ್ಟಿದೆ. ಲವ್, ಅಫೇರ್, ಲಿವ್-ಇನ್ ರಿಲೇಷನ್‌ಶಿಪ್ ಎನ್ನುತ್ತಾ ಸಪ್ತಪದಿ ತುಳಿಯುವ ಸೆಲೆಬ್ರಿಟಿಗಳು, ಇಗೋ ಕ್ಲಾಶ್ ಅಥವಾ ಹೊಂದಾಣಿಕೆಯ ಕೊರತೆಯಿಂದಾಗಿ ಕೇವಲ ನಾಲ್ಕೇ ಗೋಡೆಗಳ ಮಧ್ಯೆ ತಮ್ಮ ಮುದ್ದಾದ ಸಂಸಾರವನ್ನು ಮುರಿದುಕೊಳ್ಳುತ್ತಿದ್ದಾರೆ. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಕೇಳಿಬರುತ್ತಿರುವ ನಟಿ ಶುಭಾ ಪೂಂಜಾ ಡೈವೋರ್ಸ್ ಇಡೀ ಗಾಂಧಿನಗರವನ್ನು ಅಚ್ಚರಿ ಮೂಡಿಸಿದೆ.
ಹೌದು, ಸ್ಯಾಂಡಲ್‌ವುಡ್‌ನ ಮುಗ್ಧ ಹಾಗೂ ಹಸನ್ಮುಖಿ ನಟಿ ಶುಭಾ ಪೂಂಜಾ ಮತ್ತು ಉಡುಪಿ ಮೂಲದ ಉದ್ಯಮಿ ಕಮ್ ಕನ್ನಡಪರ ಹೋರಾಟಗಾರ ಸುಮಂತ್ ಬಿಲ್ಲವ ಅವರ ಸಂಸಾರದಲ್ಲಿ ಈಗ ಬಿರುಗಾಳಿ ಎದ್ದಿದೆ. 2022ರ ಜನವರಿ 5 ರಂದು ಪ್ರೀತಿಸಿ, ಮದುವೆಯಾಗಿದ್ದ ಈ ಜೋಡಿ ಈಗ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಕೋರಿ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದೆ. ಇದುವರೆಗೆ ಸೋಷಿಯಲ್ ಮೀಡಿಯಾದಲ್ಲಿ ಸದಾ ರೋಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಳ್ಳುತ್ತಾ ಲವ್ಲಿ ಕಪಲ್ ಎನಿಸಿಕೊಂಡಿದ್ದ ಈ ಜೋಡಿ, ಈಗ ಮದುವೆಯಾದ ಕೇವಲ ನಾಲ್ಕೇ ವರ್ಷಕ್ಕೆ ಕೋರ್ಟ್ ಮೆಟ್ಟಿಲೇರಿರುವುದು ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲೂ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕೂ ಇಬ್ಬರ ನಡುವೆ ಮೂರನೇ ವ್ಯಕ್ತಿಯ ಪ್ರವೇಶವಾಗಿದೆಯೇ ಅಥವಾ ವೈಯಕ್ತಿಕ ಭಿನ್ನಾಭಿಪ್ರಾಯವೇ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.
ನಟಿ ಶುಭಾ ಪೂಂಜಾ ಚಿತ್ರರಂಗಕ್ಕೆ ಕಾಲಿಟ್ಟು ಸರಿಸುಮಾರು 22 ವರ್ಷಗಳೇ ಕಳೆದಿವೆ 2004ರಲ್ಲಿ ಮಚ್ಚಿ ತಮಿಳು ಚಿತ್ರದ ಮೂಲಕ ಎಂಟ್ರಿ ಕೊಟ್ಟಿದ್ರು. ನಂತರ ಮೊಗ್ಗಿನ ಮನಸು, ಚಂಡ, ಸ್ಲಂ ಬಾಲಾ, ಪರಾರಿ ನಂತಹ ಸೂಪರ್ ಹಿಟ್ ಸಿನಿಮಾಗಳ ಮೂಲಕ ಕನ್ನಡ ಪ್ರೇಕ್ಷಕರ ಮನಸ್ಸು ಗೆದ್ದಿದ್ದ ಶುಭಾ, ನಂತರ ಬಿಗ್ ಬಾಸ್ ಸೀಸನ್ 8 ಕಂಟೆಂಸ್ಟಂಟ್ ಆಗಿ ಸಿನಿಪ್ರಿಯರಿಗೆ ಸಿಕ್ಕಾಪಟ್ಟೆ ಇಷ್ಟವಾದ್ರು. ಇದೀಗ ವಿಚ್ಛೇದನದಂತಹ ವೈಯಕ್ತಿಕ ಟಫ್ ಟೈನಲ್ಲೂ ತಮ್ಮ ಪ್ರಬುದ್ಧತೆ ಮೆರೆದಿದ್ದಾರೆ.
ಇಷ್ಟು ವರ್ಷಗಳ ಚಿತ್ರರಂಗದ ಜರ್ನಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ, ಸದಾ ಪಾಸಿಟಿವ್ ಆಗಿ ಗುರುತಿಸಿಕೊಂಡಿರುವ ಅವರು, ಈ ಮದುವೆ ಮುರಿದುಬೀಳುವ ಹಂತಕ್ಕೆ ಬಂದರೂ ಎಲ್ಲೂ ಪತಿಯ ತೇಜೋವಧೆ ಮಾಡದೆ ಸೈಲೆಂಟ್ ಆಗಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಶುಭಾ ಅವರ ಈ ಸ್ಟ್ರಾಂಗ್ ಮತ್ತು ಪಾಸಿಟಿವ್ ನಡೆಗೆ ಅವರ ಅಭಿಮಾನಿಗಳು ಹಾಗೂ ಚಿತ್ರರಂಗದ ಆಪ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರ ಬೆಂಬಲಕ್ಕೆ ನಿಂತಿದ್ದಾರೆ.
ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ, ಶುಭಾ ಪೂಂಜಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ಪತಿ ಸುಮಂತ್ ಜೊತೆಗಿದ್ದ ಎಲ್ಲಾ ಫೋಟೋಗಳು ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡುವ ಮೂಲಕ ಡಿವೋರ್ಸ್ ವದಂತಿಗೆ ಅಧಿಕೃತ ಮುದ್ರೆ ಒತ್ತಿದ್ದಾರೆ. ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಪರಸ್ಪರ ಅನ್‌ಫಾಲೋ ಕೂಡ ಮಾಡಿಕೊಂಡಿದ್ದಾರೆ. ಫ್ಯಾಮಿಲಿ ಕೋರ್ಟ್‌ನಲ್ಲಿ ಕೌನ್ಸಿಲಿಂಗ್ ಪ್ರಕ್ರಿಯೆಗಳು ಮುಗಿದಿದ್ದು, ಮುಂದಿನ ವಿಚಾರಣೆಯ ದಿನದಂದು ಈ ಜೋಡಿ ಕೋರ್ಟ್‌ಗೆ ಖುದ್ದಾಗಿ ಹಾಜರಾಗಲಿದ್ದಾರೆ. ಇಬ್ಬರೂ ಪರಸ್ಪರ ಒಪ್ಪಿಗೆಯಿಂದಲೇ ಬೇರೆಯಾಗುತ್ತಿರುವುದರಿಂದ ಕೋರ್ಟ್ ಶೀಘ್ರದಲ್ಲೇ ಡಿವೋರ್ಸ್ ನೀಡುವ ಸಾಧ್ಯತೆಯಿದೆ. ಈ ಇಬ್ಬರ ಡಿವೋರ್ಸ್‌ನ ಅಸಲಿ ಇನ್‌ಸೈಡ್ ಸ್ಟೋರಿ ಏನು ಎಂಬುದು ಮುಂದಿನ ದಿನಗಳಲ್ಲಿ ಹೊರಬರಬೇಕಿದೆ. ಆದ್ರೆ ತಾಯಿ ಹಾಗೂ ಅತ್ತಿಗೆಯನ್ನ ಕಳೆದುಕೊಂಡಿರೋ ಶುಭ ಪೂಂಜಾ ದಾಂಪತ್ಯ ಕೋರ್ಟ್ ಮೂಲಕ ಸರಿ ಆಗಲಿ ಅನ್ನೋದು ನಮ್ಮ ಆಶಯ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
