ಶ್ರೀಪಂಚಮಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಕುಮಾರ್ ಸಿ.ವಿ ನಿರ್ಮಾಣ ಮಾಡುವುದರ ಜೊತೆಗೆ ನಾಯಕನಾಗೂ ನಟಿಸಿರುವ ಹಾಗೂ ಶ್ರೀಮಂಜು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ “ಶಿವಗಂಗ” ಚಿತ್ರ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಹರ್ಷ ಕಾಗೋಡು ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಜನರ ಮನಸ್ಸಿಗೆ ಹತ್ತಿರವಾಗುತ್ತಿದೆ. ಸಿರಿ ಮ್ಯೂಸಿಕ್ ಮೂಲಕ ಹಾಡುಗಳು ಬಿಡುಗಡೆಯಾಗಿದೆ. ಧ್ವನಿಸುರುಳಿ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
“ಶಿವಗಂಗ” ಎರಡು ಪಾತ್ರಗಳ ಹೆಸರು ಎಂದು ಮಾತನಾಡಿದ ನಿರ್ದೇಶಕ ಶ್ರೀಮಂಜು, ಇದೊಂದು ಪ್ರೇಮಪ್ರಧಾನ ಚಿತ್ರ. ಜೊತೆಗೆ ಸಾಮಾಜಿಕ ಸಂದೇಶವಿರುವ ಚಿತ್ರವೂ ಹೌದು. ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ಕುಮಾರ್ ಸಿ.ವಿ ಅವರು ಚಿತ್ರದ ಕಥೆ ಒಪ್ಪಿಕೊಂಡು ನಿರ್ಮಾಣಕ್ಕೆ ಮುಂದಾದರು. ಅವರೆ ಈ ಚಿತ್ರದ ನಾಯಕನಾಗೂ ನಟಿಸಿದ್ದಾರೆ. ರಿವಾನ್ಸಿ ನಾಯಕಿಯಾಗಿ ಅಭಿನಯಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಸಂಗೀತ, ಪುಷ್ಪ, ಸುಧೀಂದ್ರ, ಶಿವಮೊಗ್ಗ ರಾಮಣ್ಣ, ನಟರಾಜು, ಭಾಗ್ಯಮ್ಮ, ನಾಗರಾಜ್ ಮುಂತಾದವರಿದ್ದಾರೆ.
ಹರ್ಷ ಕಾಗೋಡು ಸಂಗೀತ ನೀಡಿರುವ ನಾಲ್ಕು ಹಾಡುಗಳು ಸುಮಧುರವಾಗಿದೆ. ಸುನಯ್ ಜೈನ್ ಛಾಯಾಗ್ರಹಣ ಹಾಗೂ ಗುರುಮೂರ್ತಿ ಅವರ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ಚಿತ್ರೀಕರಣ ಪೂರ್ಣವಾಗಿದ್ದು, ತೆರೆಗೆ ಬರಲು ಸಿದ್ದವಾಗಿದೆ. ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡಿಲ್ಲ. ಆದರೆ ಕ್ಲೈಮ್ಯಾಕ್ಸ್ ಇದೆ. ಅದು ಏನು ಅಂತ ನೀವು ತೆರೆಯ ಮೇಲೆ ನೋಡಬೇಕು. “ಶಿವಗಂಗ” ನನ್ನ ನಿರ್ದೇಶನದ ಎಂಟನೇ ಚಿತ್ರ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.
ನಾನು ಮೂಲತಃ ರೈತ. ಜೊತೆಗೆ ರಿಯಲ್ ಎಸ್ಟೇಟ್ ಉದ್ಯಮಿ ಕೂಡ. ಸಿನಿಮಾ ನಟನಾಗುವುದು ನನ್ನ ಕನಸು. ಆ ಕನಸು ಈಗ ಈಡೇರಿದೆ. ನಿರ್ದೇಶಕ ಶ್ರೀಮಂಜು ಅವರು ಹೇಳಿದ ಕಥೆ ಇಷ್ಟವಾಯಿತು. ಕಥೆ ಇಷ್ಟವಾಗಿ ನಾನೇ ನಿರ್ಮಾಣ ಕೂಡ ಮಾಡಿದ್ದೀನಿ. ಚಿತ್ರತಂಡದ ಸದಸ್ಯರ ಸಹಕಾರದಿಂದ ಒಂದೊಳ್ಳೆ ಚಿತ್ರ ಸದ್ಯದಲ್ಲೇ ನಿಮ್ಮ ಮುಂದೆ ಬರಲಿದೆ. ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದು ನಿರ್ಮಾಪಕ ಹಾಗೂ ನಾಯಕ ಕುಮಾರ್ ಸಿ.ವಿ ತಿಳಿಸಿದರು.
ನಾಯಕಿ ರಿವಾನ್ಸಿ, “ಗಂಗ” ಪಾತ್ರಧಾರಿ ಸಂಗೀತ, ನಿರ್ಮಾಣ ನಿರ್ವಾಹಕ ಗುರುಮೂರ್ತಿ, ಸಂಗೀತ ನಿರ್ದೇಶಕ ಹರ್ಷ ಕಾಗೋಡು, ಛಾಯಾಗ್ರಾಹಕ ಸುನಯ್ ಜೈನ್, ಕಲಾವಿದರಾದ ಭಾಗ್ಯಮ್ಮ, ನಟರಾಜು ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.