ಬಾಲಿವುಡ್ ಬಾದ್‌ಷಾ.. ಕಿಂಗ್ ಖಾನ್ ಶಾರೂಖ್‌ಗೆ ಅದ್ಯಾಕೋ ಕನ್ನಡ ಚಿತ್ರರಂಗ, ನಮ್ಮ ಕನ್ನಡದ ಸ್ಟಾರ್ಸ್ ಅಂದ್ರೆ ಅಷ್ಟಕ್ಕಷ್ಟೇ. ಅದನ್ನ ಪದೇ ಪದೆ ಪ್ರೂವ್ ಮಾಡ್ತಿದ್ದಾರೆ. ಈ ಹಿಂದೆ ಕೆಜಿಎಫ್ ವಿರುದ್ಧ ಕಾಲ್ಕೆರೆದುಕೊಂಡು ಬಂದು ಝೀರೋ ಅನಿಸಿಕೊಂಡಿದ್ದ ಶಾರೂಖ್, ಈ ಬಾರಿ ಕಾಂತಾರ ಮೇಲೆ ಸಮರ ಸಾರುವ ಮುನ್ಸೂಚನೆ ನೀಡಿದ್ದಾರೆ. ಏನಿದರ ಅಸಲಿ ಮರ್ಮ ಅಂತೀರಾ..? ಜಸ್ಟ್ ವಾಚ್.
- ಕಾಂತಾರ ವಿರುದ್ಧ ಕಿಂಗ್ ಸಮರ.. ಮತ್ತೆ ಖಾನ್ ಕಿರಿಕ್ !
- ಗಾಂಧಿ ಜಯಂತಿ ಡೇಟ್ ಮೇಲೆ ಕಿಂಗ್ ಶಾರೂಖ್ ಕಣ್ಣು
- ಅಂದು ಯಶ್ ಕೆಜಿಎಫ್ ಮೇಲೆ ಝೀರೋ ಆಗಿದ್ದ ಖಾನ್
- ಮತ್ತೆ ಹಿಸ್ಟರಿ ರಿಪೀಟ್..? ಈ ಬಾರಿ ಎಚ್ಚೆತ್ತುಕೊಳ್ತಾರಾ..?!
ಸಾಲು ಸಾಲು ಸಿನಿಮಾಗಳಿಂದ ಸೋತು ಸುಣ್ಣವಾಗಿದ್ದ ಬಾಲಿವುಡ್ ಬಾದ್ ಷಾ ಶಾರೂಖ್ ಖಾನ್, ಕೊರೋನಾ ಬಳಿಕ ಇಡೀ ಹಿಂದಿ ಚಿತ್ರರಂಗಕ್ಕೆ ಒಂದಲ್ಲ ಎರಡೆರಡು ಬ್ಲಾಕ್ ಬಸ್ಟರ್ ಹಿಟ್ಸ್ ನೀಡಿದ್ರು. ಯೆಸ್.. ಪಠಾಣ್ ಹಾಗೂ ಜವಾನ್ ಎರಡೂ ಚಿತ್ರಗಳು ಸಾವಿರಕ್ಕೂ ಅಧಿಕ ಕೋಟಿ ಕಲೆಕ್ಷನ್‌ನಿಂದ ಅಕ್ಷರಶಃ ಬಾಲಿವುಡ್‌ಗೆ ಬೂಸ್ಟರ್ ಡೋಸ್ ನೀಡಿತ್ತು.
ಅವು ಬರೀ ಶಾರೂಖ್ ಗೆಲುವಾಗದೆ, ಸೌತ್ ಮುಂದೆ ಡಲ್ ಹೊಡೀತಿದ್ದ ಬಾಲಿವುಡ್‌ಗೂ ಗೆಲುವು ಅನಿಸಿತ್ತು. ಕೋಟ್ಯಂತರ ಅಭಿಮಾನಿಗಳಿರೋ ಶಾರೂಖ್ ಖಾನ್ ಸಿನಿಮಾಗಳು ಕೂಡ ಕಂಟೆಂಟ್ ಮಜಾ ಇಲ್ಲ ಅಂದ್ರೆ ಫ್ಲಾಪ್ ಆಗುತ್ವೆ ಅನ್ನೋದು ಪ್ರೂವ್ ಆಗಿತ್ತು. ಕಂಟೆಂಟೇ ಕಿಂಗ್ ಅನ್ನೋದು ಶಾರೂಖ್‌ಗೂ ಮನದಟ್ಟಾಯ್ತು. ಆದ್ರೆ ಸೌತ್ ಟೆಕ್ನಿಷಿಯನ್ಸ್‌ನಿಂದಲೇ ಗೆಲ್ತಿರೋ ಶಾರೂಖ್‌ಗೆ ಸೌತ್ ಸಿನಿಮಾಗಳು ಅಂದ್ರೆ ಅಷ್ಟಕ್ಕಷ್ಟೇ. ಅದೂ ನಮ್ಮ ಕನ್ನಡ ಚಿತ್ರಗಳ ಮೇಲೆ ಸಿಕ್ಕಾಪಟ್ಟೆ ಅಸಡ್ಡೆ.
ಈ ಹಿಂದೆ 2018ರಲ್ಲಿ ಯಶ್-ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಪ್ರಯತ್ನದ ಮೊದಲ ಪ್ಯಾನ್ ಮೂವಿ ಕೆಜಿಎಫ್ ಚಾಪ್ಟರ್-1 ಸಿನಿಮಾ ಟೀಸರ್‌ನಿಂದ ಒಂದೊಳ್ಳೆ ಬಝ್ ಕ್ರಿಯೇಟ್ ಮಾಡಿತ್ತು. ಅದರಂತೆ ಸಿನಿಮಾ ಕೂಡ ದೇಶದಾದ್ಯಂತ ಬಾಲಿವುಡ್ ಸಿನಿಮಾಗಳ ರೀತಿ ಎಲ್ಲರ ದಿಲ್ ದೋಚಿತ್ತು. ಇನ್ನು ಕೆಜಿಎಫ್ ಚಿತ್ರದಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗ್ತಿದ್ದ ಯಶ್‌ರನ್ನ ತುಂಬಾ ಹಗುರವಾಗಿ ಪರಿಗಣಿಸಿದ್ರು ಶಾರೂಖ್. ಅದೇ ಕಾರಣದಿಂದ ಕೆಜಿಎಫ್-1 ಎದುರು ತನ್ನ ಝೀರೋ ಸಿನಿಮಾನ ರಿಲೀಸ್ ಮಾಡಿದ್ರು.
ಆದ್ರೆ ಬಿಡುಗಡೆ ಬಳಿಕ ಅಕ್ಷರಶಃ ಯಶ್ ಹೀರೋ ಆದ್ರೆ ಶಾರೂಖ್ ಝೀರೋ ಆದ್ರು. 2018ರ ಡಿಸೆಂಬರ್ 21ರಂದು ತೆರೆಕಂಡ ಕೆಜಿಎಫ್, ಝೀರೋ ಸಿನಿಮಾನ ಪಾತಾಳಕ್ಕೆ ತುಳಿದಿತ್ತು. ಅಂದಿನಿಂದ ಶಾರೂಖ್‌ಗೆ ಯಶ್, ಕೆಜಿಎಫ್ ಫ್ರಾಂಚೈಸ್, ನೀಲ್, ಹೊಂಬಾಳೆ ಅಂದ್ರೆ ಅಷ್ಟಕ್ಕಷ್ಟೇ. ಅದೇ ಜಿದ್ದು, ದ್ವೇಷ ಈಗಲೂ ಮುಂದುವರೆಸ್ತಿದ್ದಾರೆ ಕಿಂಗ್ ಖಾನ್. ಅಂದು ಝೀರೋ ಸಿನಿಮಾನ ಕೆಜಿಎಫ್ ವಿರುದ್ಧ ಬೇಕು ಅಂತಲೇ ರಿಲೀಸ್ ಮಾಡಿದ್ದ ಶಾರೂಖ್, ಈಗಲೂ ಅದೇ ಮನಸ್ಥಿತಿಯಲ್ಲಿದ್ದಾರೆ.
ಹೌದು.. ಅಕ್ಟೋಬರ್ 2ರಂದು ಗಾಂಧಿ ಜಯಂತಿ ವಿಶೇಷ ಹೊಂಬಾಳೆ ಫಿಲಂಸ್ ನಿರ್ಮಾಣದ, ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸ್ತಿರೋ ಕಾಂತಾರ ಚಿತ್ರದ ಪ್ರೀಕ್ವೆಲ್ ಕಾಂತಾರ-1 ತೆರೆಗೆ ಬರೋಕೆ ಸಜ್ಜಾಗ್ತಿದೆ. ಕಾಂತಾರ-1 ರಿಲೀಸ್ ಡೇಟ್ ಅನೌನ್ಸ್ ಮಾಡಿ ಬಹಳ ದಿನಗಳೇ ಆಗಿದೆ. ಆದ್ರೀಗ ಅದೇ ಡೇಟ್‌ಗೆ ಮತ್ತೊಮ್ಮೆ ಕಾಲ್ಕೆರೆದು ಜಗಳಕ್ಕೆ ಬರುವ ಮುನ್ಸೂಚನೆ ನೀಡಿದ್ದಾರೆ ಶಾರೂಖ್. ಖಾನ್ ನಟನೆಯ ಕಿಂಗ್ ಸಿನಿಮಾ ಅಕ್ಟೋಬರ್ 2ರಂದೇ ವರ್ಲ್ಡ್‌ವೈಡ್ ತೆರೆಗೆ ಬರಲಿದೆ ಎನ್ನಲಾಗ್ತಿದೆ.
ಟಾಕ್ಸಿಕ್ ಸಿನಿಮಾಗಾಗಿ ಕಾಯ್ತಿದ್ದೀವಿ ಎಂದಿದ್ದ ಶಾರೂಖ್ ಮಾತುಗಳು ನಾಟಕೀಯ ಅನ್ನೋದು ಇದ್ರಿಂದ ಅರ್ಥವಾಗ್ತಿದೆ. ಅಂದು ಕೆಜಿಎಫ್ ವಿರುದ್ಧ, ಇಂದು ಕಾಂತಾರ ಎದುರು ಅದೇನು ಜಿದ್ದೋ ಗೊತ್ತಿಲ್ಲ. ಆದ್ರೆ ದೈವಬಲದಿಂದ ಬರ್ತಿರೋ ಕಾಂತಾರ ಈಗಾಗ್ಲೇ ವಿಶ್ವದ ಮೂಲೆ ಮೂಲೆಗೆ ತಲುಪಿದೆ. ವಿಜಯ್ ಕಿರಗಂದೂರು ವಿಜಯ ಯಾತ್ರೆಯ ಎದುರು ಯಾವುದೇ ಖಾನ್ ಸಿನಿಮಾ ಬಂದರೂ ಸಹ ನಿಲ್ಲಲ್ಲ ಅನ್ನೋದು ಮತ್ತೊಮ್ಮೆ ಖಾನ್‌ಗೆ ಮನದಟ್ಟು ಮಾಡಬೇಕೋ ಏನೋ. ಶಾರೂಖ್ ಸಿನಿಮಾ ಹೆಸರು ಕಿಂಗ್ ಇರಬಹುದು. ಆದ್ರೆ ಕಾಂತಾರ ಕಂಟೆಂಟೇ ಕಿಂಗ್ ಅನ್ನೋದು ಬಹುಶಃ ಅವರಿಗೆ ಗೊತ್ತಿಲ್ಲ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್