ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಅಭಿನೇತ್ರಿ

ಚಿತ್ರರಂಗ, ರಾಜಕೀಯ ರಂಗದ ಗಣ್ಯರಿಂದ ಅಂತಿಮ ನಮನ

Untitled design 2025 07 14t195328.459

ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಬಿ. ಸರೋಜಾದೇವಿ, ತಮ್ಮ ಎರಡೂ ನಯನಗಳನ್ನು ಡಾ. ರಾಜ್‌ಕುಮಾರ್ ಆಶಯದಂತೆ ದಾನ ಮಾಡಿದ್ದಾರೆ. ಇನ್ನು ಅಭಿನೇತ್ರಿಯ ನಿಧನಕ್ಕೆ ಇಡೀ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದ್ದು, ರಾಜಕಾರಣಿಗಳು ಹಾಗೂ ಚಿತ್ರರಂಗದ ಸಾಕಷ್ಟು ಮಂದಿ ಕಲಾವಿದರು ಬಂದು ಅಂತಿಮ ದರ್ಶನ ಪಡೆದರು. ಅಷ್ಟೇ ಅಲ್ಲ, ಅವರೊಟ್ಟಿಗಿನ ಅವಿಸ್ಮರಣೀಯ ಕ್ಷಣಗಳನ್ನು ಸಹ ಹಂಚಿಕೊಂಡರು.

ಇಂದು ಬೆಳಗ್ಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ ಸರೋಜಾದೇವಿ ಅವರ ಪಾರ್ಥಿವ ಶರೀರವನ್ನು ಮಲ್ಲೇಶ್ವರಂನ ನಿವಾಸಕ್ಕೆ ತರಲಾಯಿತು. ಇಡೀ ದಿನ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಚಿತ್ರರಂಗದ ಸಾಕಷ್ಟು ಮಂದಿ ಗಣ್ಯರು, ತಾರೆಯರು, ತಂತ್ರಜ್ಞರು ಬಂದು ಅಂತಿಮ ದರ್ಶನ ಪಡೆದು, ಸಂತಾಪ ಸೂಚಿಸಿದರು. ರಾಜಕಾರಣಿಗಳು ಕೂಡ ಬಂದು ಅಪರೂಪದ ಅಭಿನೇತ್ರಿಗೆ ಪುಷ್ಪ ನಮನ ಸಲ್ಲಿಸಿದರು.

ಸಾವಿನಲ್ಲೂ ಸಾರ್ಥಕತೆ ಮೆರೆದ ಸರೋಜಾದೇವಿ, ಅಣ್ಣಾವ್ರ ಆಶಯದಂತೆ ತಮ್ಮ ಎರಡೂ ನಯನಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದ್ರು. ಇದು ನಿಜಕ್ಕೂ ಶ್ಲಾಘನೀಯ. ಅಂದಹಾಗೆ ಸರೋಜಾದೇವಿ ಪುತ್ರ ಗೌತಮ್ ಹೇಳಿದಂತೆ ಜುಲೈ 15ರ ಬೆಳಗ್ಗೆ 11.30ರ ನಂತರ ಮಲ್ಲೇಶ್ವರಂ ನಿವಾಸದಿಂದ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನಡೆಸಲಾಗುತ್ತದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಕಣ್ವ ಡ್ಯಾಮ್‌‌ ಪಕ್ಕದಲ್ಲಿರೋ ದಶಾವರದಲ್ಲಿ ವಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಗುವುದು.

ಇನ್ನು ಸಿನಿಮಾ ಹಾಗೂ ರಾಜಕಾರಣದ ಯಾರೆಲ್ಲಾ ಗಣ್ಯರು ಬಂದು ಅಂತಿಮ ನಮನ ಸಲ್ಲಿಸಿದ್ರು..? 

ನಟ ಡಾ. ಶಿವರಾಜ್‌ಕುಮಾರ್, ನಟ ರಾಘವೇಂದ್ರ ರಾಜ್‌‌ಕುಮಾರ್, ನಟಿ ಶ್ರುತಿ, ನಟಿ ಡಾ. ತಾರಾ, ನಟಿ ಸುಧಾರಾಣಿ, ನಟಿ ಮಾಳವಿಕಾ ಅವಿನಾಶ್, ನಟ ಉಪೇಂದ್ರ, ನಟ ಜಗ್ಗೇಶ್, ನಟಿ ಮಾಲಾಶ್ರೀ, ರಾಕ್‌ಲೈನ್ ವೆಂಕಟೇಶ್, ಯೋಗರಾಜ್ ಭಟ್, ನಟ ಸಿಹಿಕಹಿ ಚಂದ್ರು, ವಿಜಯಲಕ್ಷ್ಮೀ ಸಿಂಗ್, ನಿರ್ಮಾಪಕ ಸಾರಾ ಗೋವಿಂದು, ನಿರ್ದೇಶಕ ನಾಗಣ್ಣ, ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು, ನಿರ್ಮಾಪಕ ಎನ್.ಎಂ. ಸುರೇಶ್, ನಟ ಉಮೇಶ್, ನಟ ಯುವರಾಜ್‌‌ಕುಮಾರ್, ಹಿರಿಯ ನಟಿ ಬಿಕೆ ಸುಮಿತ್ರಾ, ನಿರ್ದೇಶಕ ಪವನ್ ಒಡೆಯರ್, ನಟ ಶಣ್ಮುಖ, ನಟ ಅವಿನಾಶ್, ಮಾಜಿ ಡಿಸಿಎಂ ಆರ್ ಅಶೋಕ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ,  ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲ, ಶಾಸಕ ಜನಾರ್ದನ ರೆಡ್ಡಿ, ಎಂಎಲ್‌ಸಿ ಟಿ. ಎ. ಶರವಣ ಗಣ್ಯರು ಅಂತಿಮ ನಮನ ಸಲ್ಲಿಸಿದ್ರು.

ಒಟ್ಟಾರೆ ಶತಮಾನದ ಹೆಣ್ಣಾಗಿ ಭಾರತೀಯ ಚಿತ್ರರಂಗದಲ್ಲಿ ಬಹುದೊಡ್ಡ ಛಾಪು ಮೂಡಿಸಿದ ಬಿ ಸರೋಜಾದೇವಿ ಇನ್ನಿಲ್ಲ ಅನ್ನೋದನ್ನ ಊಹಿಸಿಕೊಳ್ಳೋಕೂ ಸಾಧ್ಯವಾಗ್ತಿಲ್ಲ. ಜಯಂತಿ, ಲೀಲಾವತಿ ನಂತ್ರ ಸರೋಜಾದೇವಿ ಕೂಡ ಇಲ್ಲವಾಗಿರೋದು ಕನ್ನಡ ಚಿತ್ರರಂಗದ ಬಹುದೊಡ್ಡ ಕೊಂಡಿ ಕಳಚಿದಂತಾಗಿದೆ. ಭಗವಂತ ಈ ನೋವನ್ನು ಸಹಿಸೋ ಶಕ್ತಿ ಅವರ ಕುಟುಂಬಕ್ಕೆ ನೀಡಲಿ, ಅಭಿನೇತ್ರಿಯ ಆತ್ಮಕ್ಕೆ ಶಾಂತಿ ಸಿಗಲಿ. ಮತ್ತೆ ಇದೇ ಕನ್ನಡ ನೆಲದಲ್ಲಿ ಅವರು ಹುಟ್ಟಿ ಬರಲಿ ಅನ್ನೋದು ನಮ್ಮ ಆಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version