ಯಶಸ್ವಿ ನಿರ್ಮಾಪಕ, ಮಾಜಿ ಎಂ.ಎಲ್.ಸಿ ಸಂದೇಶ್ ನಾಗರಾಜ್ ಈಗ 80ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಹೌದು. ಆಗಸ್ಟ್ 16, ಸಂದೇಶ ನಾಗರಾಜ್ ಅವರು 79 ಪೂರೈಸುತ್ತಿದ್ದು, 80ನೇ ವಸಂತಕ್ಕೆ ಕಾಲಿಡಲಿದ್ದಾರೆ. ಸಂದೇಶ್ ನಾಗರಾಜ್ ಅವರ 80ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಅವರ ಕುಟುಂಬ ಮುಂದಾಗಿದೆ. ಆಗಸ್ಟ್ 31ರಂದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ದೊಡ್ಡಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಮಾಹಿತಿ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂದೇಶ ನಾಗರಾಜ್ ಅವರ ಮಕ್ಕಳಾದ ಸಂದೇಶ್, ಬೃಂದಾ, ಮಂಜೇಶ್ ಮಾಹಿತಿ ನೀಡಿದರು.
‘ನಮ್ಮ ತಂದೆಯವರ ಹುಟ್ಟುಹಬ್ಬದ ಪ್ರಯುಕ್ತ ಆಗಸ್ಟ್ 31ರಂದು ಮೈಸೂರಿನಲ್ಲಿ ದೊಡ್ಡ ಕಾರ್ಯಕ್ರಮ ಮಾಡಲು ಯೋಜನೆ ಮಾಡಲಾಗಿದೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ನಟರಾದ ಶಿವರಾಜಕುಮಾರ್, ಸುದೀಪ್ ಸೇರಿದಂತೆ ಚಿತ್ರರಂಗದ ಹಲವಾರು ಕಲಾವಿದರು, ತಂತ್ರಜ್ಞರು ಹಾಗೂ ರಾಜಕೀಯ ಮುಖಂಡರು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಆಗಸ್ಟ್ 31ರಂದು ಮುಂಜಾನೆ 11 ಗಂಟೆಗೆ ಆರಂಭವಾಗುವ ಕಾರ್ಯಕ್ರಮದಲ್ಲಿ ಅರ್ಜುನ್ ಜನ್ಯ ಅವರಿಂದ ಮನರಂಜನಾ ಕಾರ್ಯಕ್ರಮ ಇರಲಿದೆ. ಇದೇ ಸಂದರ್ಭದಲ್ಲಿ ನಮ್ಮ ತಂದೆಯ ಲೈಫ್ ಜರ್ನಿ ಬಗ್ಗೆ ಒಂದು ಡಾಕ್ಯುಮೆಂಟರಿ ಕೂಡ ಪ್ರದರ್ಶನ ಮಾಡಲಾಗುತ್ತದೆ. ಅಂದು ಸುಮಾರು 50,000 ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಸಂದೇಶ ಕಂಬೈನ್ಸ್ ಹಾಗೂ ಸಂದೇಶ್ ಪ್ರೊಡಕ್ಷನ್ಸ್ ಮೂಲಕ ನಮ್ಮ ತಂದೆ ಹಲವಾರು ಯಶಸ್ವಿ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಈಗ ನಾನು ಒಂದಿಷ್ಟು ಸಿನಿಮಾ ನಿರ್ಮಿಸುತ್ತಿದ್ದು. ಕಳೆದ 30 ವರ್ಷಗಳಲ್ಲಿ 34 ಸಿನಿಮಾ ನಿರ್ಮಿಸಲಾಗಿದೆ. ‘ಮಣ್ಣಿನ ದೋಣಿ’ ಚಿತ್ರದಿಂದ ಶುರುವಾದ ನಮ್ಮ ಸಿನಿಮಾ ಜರ್ನಿಗೆ ತಂದೆಯವರ ಕೊಡುಗೆ ತುಂಬಾ ಇದೆ. ಹಾಗೆಯೇ ಅವರು ರಾಜಕೀಯ, ಉದ್ಯಮದಲ್ಲೂ ಯಶಸ್ಸಿನ ಮೆಟ್ಟಿಲು ಏರಿದ್ದಾರೆ. ಮಕ್ಕಳಾದ ನಾವು ಅವರಿಂದ ತುಂಬಾ ಕಲೆತಿದ್ದೇವೆ. ಮುಖ್ಯವಾಗಿ ತಂದೆಯವರು ನನಗೆ ಬಡ್ಡಿಗೆ ಹಣ ಕೊಡಬೇಡ, ಬೇಕಾದರೆ ಸಾಲ ಮಾಡು ಅದು ನಿನಗೆ ಕೆಲಸ ಮಾಡುವಂತೆ ಮಾಡುತ್ತದೆ ಎಂದು ಯಾವಾಗಲೂ ಹೇಳುತ್ತಿರುತ್ತಾರೆ’ ಎಂದು ಸಂದೇಶ್ ಹೇಳಿದರು.
ನಂತರ ಸಂದೇಶ್ ನಾಗರಾಜ್ ಅವರ ಮಗಳು ಬೃಂದಾ ಮಾತನಾಡಿ, ‘ನಮ್ಮ ತಂದೆಗೆ 80 ವರ್ಷವಾದರೂ ಆಕ್ಟಿವ್ ಆಗಿ ಕೆಲಸ ಮಾಡತಾ ಇರುತ್ತಾರೆ. ಅವರು ಖುಷಿಯಾಗಿರುವುದು ನಮಗೆ ಮುಖ್ಯ. ಅಪ್ಪ ಯಾವಾಗಲೂ ಜನರ ಜೊತೆ ಇರಬೇಕು ಹಾಗೆ ನಡೆದುಕೊಂಡಿದ್ದಾರೆ. ಆಗಸ್ಟ್ 16 ಅವರ ಹುಟ್ಟುಹಬ್ಬ. ಅಂದು ನಾವೆಲ್ಲಾ ಫ್ಯಾಮಿಲಿ ಸೇರಿ ಆಚರಣೆ ಮಾಡುತ್ತೇವೆ. ಅಂದು ಪೂಜೆ, ಹೋಮ ಇರುವುದರಿಂದ ಆಗಸ್ಟ್ 31ರಂದು ಸಾರ್ವಜನಿಕವಾಗಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ. ತಂದೆ ನಮಗೆಲ್ಲಾ ಕಷ್ಟ ಪಡುವುದನ್ನು ಕಲಿಸಿದ್ದಾರೆ ಎಂದರು.