ಬೆಂಗಳೂರು: ಕನ್ನಡ ಚಿತ್ರರಂಗದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಇತ್ತೀಚೆಗೆ ನೀಡಿದ ಹೇಳಿಕೆಗಳು ಚಂದನವನದಲ್ಲಿ ಸಂಚಲನ ಸೃಷ್ಟಿಸಿವೆ. ತಮ್ಮ ಹೊಸ ಚಿತ್ರ ‘ಕಾಟನ್ ಪೇಟೆ’ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಚಿತ್ರರಂಗದ ಸ್ಟಾರ್ ನಟರು ಹಾಗೂ ನಿರ್ದೇಶಕರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದರು.
ತಮ್ಮ ನಿರ್ಮಾಣದ ಸಿನಿಮಾಗಳು ಎದುರಿಸುತ್ತಿರುವ ಸಂಕಷ್ಟಗಳು ಹಾಗೂ ನಟ-ನಿರ್ದೇಶಕರ ಅಸಹಕಾರದ ಬಗ್ಗೆ ಮಾತನಾಡಲು ಆರಂಭಿಸಿದ ಕನಕಪುರ ಶ್ರೀನಿವಾಸ್, ಏಕವಚನದಲ್ಲಿ ಮಾತನಾಡಲು ಶುರುಮಾಡಿದರು. ದಿವಂಗತ ಪುನೀತ್ ರಾಜ್‌ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸೇರಿದಂತೆ ಖ್ಯಾತ ನಿರ್ದೇಶಕರಾದ ಜೋಗಿ ಪ್ರೇಮ್ ಮತ್ತು ಎ.ಪಿ. ಅರ್ಜುನ್ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಚಿತ್ರರಂಗದಾದ್ಯಂತ ಆಕ್ರೋಶ ವ್ಯಕ್ತವಾಗಿದೆ.
ಈ ಮಾತುಗಳಿಂದ ಕೆರಳಿರುವ ಜೋಗಿ ಪ್ರೇಮ್ ಅವರು ಶ್ರೀನಿವಾಸ್ ವಿರುದ್ಧ ಗರಂ ಆಗಿದ್ದಾರೆ. ಕನಕಪುರ ಶ್ರೀನಿವಾಸ್ ಅವರು ಅಮ್ಮನಿಗೆ ಹುಟ್ಟಿದವರಂತೆ ಮಾತನಾಡಿದ್ದಾರೆಯೇ ? ಅಷ್ಟು ವರ್ಸ್ಟ್ ಆಗಿ ಮಾತನಾಡಲು ಅವರಿಗೆ ಹೇಗೆ ಸಾಧ್ಯ ? ಅವಿದ್ಯಾವಂತರಂತೆ ವರ್ತಿಸಿರುವ ಅವರ ವಿರುದ್ಧ ನಾನು ಫಿಲ್ಮ್ ಚೇಂಬರ್ ಮತ್ತು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದು ಪ್ರೇಮ್ ತಿಳಿಸಿದ್ದಾರೆ.
ಇದೇ ವೇಳೆ ಹಳೆಯ ಆರ್ಥಿಕ ವ್ಯವಹಾರದ ಬಗ್ಗೆ ಸ್ಪಷ್ಟನೆ ನೀಡಿದ ಪ್ರೇಮ್, ಅವರು ಹೇಳುತ್ತಿರುವ ಹಣದ ವಿಚಾರಕ್ಕೆ ಸಂಬಂಧಿಸಿದಂತೆ, ಸಾರಾ ಗೋವಿಂದ್ ಅವರ ಸಮ್ಮುಖದಲ್ಲೇ ನಾನು ಹಣವನ್ನು ವಾಪಸ್ ಮಾಡಿದ್ದೇನೆ. ಹೀಗಿದ್ದರೂ ಅನಗತ್ಯವಾಗಿ ನನ್ನನ್ನು ಎಳೆತರುತ್ತಿದ್ದಾರೆ. ಅವರ ವಿರುದ್ಧ ಮಾನಹಾನಿ ಮೊಕದ್ದಮೆ ಹಾಕುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕನಕಪುರ ಶ್ರೀನಿವಾಸ್ ಅವರು ಸಿನಿ ತಾರೆಯರ ವಿರುದ್ದ ಕೆಟ್ಟದಾಗಿ ಮಾತನಾಡಿರುವುದು ಅವರ ಅಭಿಮಾನಿಗಳನ್ನು ಕೆರಳಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ನಿರ್ಮಾಪಕರ ವಿರುದ್ಧ ದೊಡ್ಡ ಮಟ್ಟದ ಅಭಿಯಾನ ಶುರುವಾಗಿದ್ದು, ಕ್ಷಮೆಯಾಚನೆಗೆ ಒತ್ತಾಯ ಕೇಳಿಬರುತ್ತಿದೆ.




