ಚಂದ್ರು ಜರ್ನಿಗೆ 17 ವರ್ಷ.. ಗ್ಲೋಬಲ್ ಪ್ರಾಜೆಕ್ಟ್‌ಗೆ ಸಿಗ್ನಲ್

ಅಜಯ್- ಪೂಜಾಗಾಂಧಿ ತಾಜ್‌‌ಮಹಲ್‌ಗೆ 17ರ ಸಂಭ್ರಮ

Untitled design 2025 07 25t172426.047

ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ, ಸೂಪರ್ ಸ್ಟಾರ್‌ಗಳ ಡಾರ್ಲಿಂಗ್ ಆರ್ ಚಂದ್ರು ಸಿನಿ ಜರ್ನಿಗೆ 17 ವರ್ಷಗಳ ಸಂಭ್ರಮ. ಯೆಸ್.. ತಾಜ್‌ ಮಹಲ್ ತೆರೆಕಂಡು ಇಂದಿಗೆ ಹದಿನೇಳು ವರುಷ. ಈ ಸುದೀರ್ಘ ಪಯಣದಲ್ಲಿ ಬರೋಬ್ಬರಿ 12 ಚಿತ್ರಗಳನ್ನ ನಿರ್ದೇಶಿಸಿ, ನಿರ್ಮಾಣ ಮಾಡಿದ ಗರಿಮೆ ಅವರದ್ದು. ಸದ್ಯ ಫಾದರ್ ರಿಲೀಸ್‌ಗೆ ಸಜ್ಜಾಗ್ತಿದ್ದು, ಗ್ಲೋಬಲ್ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡುವ ಸೂಚನೆ ನೀಡಿದ್ದಾರೆ.

ಆರ್ ಚಂದ್ರು.. ಸ್ಯಾಂಡಲ್‌ವುಡ್‌ನ ಮೋಸ್ಟ್ ಹಂಬಲ್ & ಪ್ಯಾಷನೇಟ್ ಫಿಲ್ಮ್ ಮೇಕರ್‌‌. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಪಕ್ಕದಲ್ಲೇ ಇರೋ ಕೇಶವರ ಅನ್ನೋ ಹಳ್ಳಿಯಿಂದ ಮಾಯಾನಗರಿ ಬೆಂಗಳೂರಿಗೆ ಬಂದು, ಬಹುದೊಡ್ಡ ಸಾಮ್ರಾಜ್ಯ ಕಟ್ಟಿದ್ದಾರೆ. ಹೊಂಬಾಳೆ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ರೇಂಜ್‌ಗೆ ಆರ್‌‌ಸಿ ಸ್ಟುಡಿಯೋಸ್ ಸಂಸ್ಥೆ ಕಟ್ಟಿ, ಅದನ್ನ ಸಿಎಂ ಸಿದ್ದರಾಮಯ್ಯರಿಂದ ಲಾಂಚ್ ಮಾಡಿಸಿ, ಒಂದಲ್ಲ ಎರಡಲ್ಲ ಐದೈದು ಸಿನಿಮಾಗಳನ್ನ ಒಟ್ಟೊಟ್ಟಿಗೆ ಅನೌನ್ಸ್ ಮಾಡಿದ ಗಡಿನಾಡ ಕನ್ನಡಿಗ.

ಆರ್ ಚಂದ್ರು ಚೊಚ್ಚಲ ನಿರ್ದೇಶನದ ತಾಜ್ ಮಹಲ್ ಸಿನಿಮಾ ತೆರೆಕಂಡು ಇಂದಿಗೆ 17 ವರ್ಷ. ಅವ್ರ ಸಿನಿಯಾನಕ್ಕೂ ಹದಿನೇಳರ ಸಂಭ್ರಮ. ಹೌದು.. ಅಜಯ್ ರಾವ್, ಪೂಜಾ ಗಾಂಧಿ ಜೋಡಿಯ ತಾಜ್‌‌ಮಹಲ್ ಏಲ್ಲರನ್ನ ಮನಸೂರೆಗೊಂಡಿತ್ತು. ಮ್ಯೂಸಿಕಲಿ ಬಹುದೊಡ್ಡ ಹಿಟ್ವ ಆಗಿತ್ತು. ಇಂದಿಗೂ ಆ ಸಿನಿಮಾ ಎವರ್‌‌ಗ್ರೀನ್. ಅದೇ ಕಾರಣಕ್ಕೆ ಚಂದ್ರು ಅವರನ್ನ ತಾಜ್‌‌ಮಹಲ್ ಚಂದ್ರು ಅಂತ ಜನ ಗುರ್ತಿಸ್ತಾರೆ.

ಅದಾದ ಬಳಿಕ ಪ್ರೇಮ್ ಕಹಾನಿ, ಚಾರ್‌‌ಮಿನಾರ್, ಕೋಕೋ, ಮಳೆ ಹೀಗೆ ಸಾಕಷ್ಟು ಸಿನಿಮಾಗಳನ್ನ ಮಾಡಿದ್ರು. ಬರೀ ನಿರ್ದೇಶನಕ್ಕಷ್ಟೇ ಸೀಮಿತ ಆಗದ ಚಂದ್ರು ಅವರು ನಿರ್ಮಾಣ ಕೂಡ ಮಾಡಿದ್ರು. ತಮ್ಮದೇ ಬ್ಯಾನರ್‌‌ನಡಿ ಬೇರೆ ನಿರ್ದೇಶಕರಿಗೂ ಅವಕಾಶ ಮಾಡಿಕೊಟ್ರು. ಶಿವಣ್ಣ, ಉಪೇಂದ್ರ, ಸುದೀಪ್, ದುನಿಯಾ ವಿಜಯ್ ಅಂತಹ ಸ್ಟಾರ್ ನಟರ ಫೇವರಿಟ್ ಫಿಲ್ಮ್ ಮೇಕರ್ ಅನಿಸಿಕೊಂಡ್ರು.

ಶಿವಣ್ಣನಿಗೆ ಮೈಲಾರಿ, ಉಪೇಂದ್ರ ಜೊತೆ ಬ್ರಹ್ಮ, ಐ ಲವ್ ಯೂ ಹಾಗೂ ಕಬ್ಜ ಸಿನಿಮಾಗಳನ್ನ ಮಾಡಿದ್ರು. ಇಂದಿಗೂ ಸ್ಯಾಂಡಲ್‌ವುಡ್‌ನ ಸ್ಟಾರ್ ತ್ರಯರಾದ ಉಪ್ಪಿ, ಶಿವಣ್ಣ, ಸುದೀಪ್‌‌ಗೆ ಚಂದ್ರು ಅತ್ಯಾಪ್ತ ಗೆಳೆಯರು. ಸೋಲು ಗೆಲುವುಗಳನ್ನ ಸಮಾನವಾಗಿ ಸ್ವೀಕರಿಸೋ ಚಂದ್ರು ಅವರಂತೆ, ಅವರೊಟ್ಟಿಗಿರೋ ಸ್ಟಾರ್‌‌ಗಳು ಕೂಡ ಚಂದ್ರು ಅವರ ಒಳ್ಳೆಯ ಗುಣಕ್ಕೆ ಅದೇ ವಿಶ್ವಾಸದಲ್ಲಿದ್ದಾರೆ. ಚಂದ್ರುನ ಕಂಡ್ರೆ ಸಹೋದರನಂತೆ ಕಾಣ್ತಾರೆ ಕಿಚ್ಚ, ಶಿವಣ್ಣ ಹಾಗೂ ಉಪೇಂದ್ರ.

ಪಕ್ಕದ ಟಾಲಿವುಡ್‌‌ನಲ್ಲಿ ಕೂಡ ಛಾಪು ಮೂಡಿಸಿರೋ ಚಂದ್ರು, ಪ್ರಿನ್ಸ್ ಮಹೇಶ್ ಬಾಬು ಕಸಿನ್‌ಗೆ ಸಿನಿಮಾ ಮಾಡಿದ ಗರಿಮೆಯಿದೆ. ಸದ್ಯ ಡಾರ್ಲಿಂಗ್ ಕೃಷ್ಣ- ಪ್ರಕಾಶ್ ರೈ ಜೊತೆ ಫಾದರ್ ಅನ್ನೋ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದು, ರಿಲೀಸ್‌ಗೆ ಸಜ್ಜಾಗಿದೆ. ಇನ್ನು ಇಷ್ಟು ದಿನ ಸೈಲೆಂಟ್ ಆಗಿದ್ದ ಚಂದ್ರು ಅವರು ಸದ್ಯದಲ್ಲೇ ಆ ಮೌನಕ್ಕೆ ತಕ್ಕ ಉತ್ತರ ಕೊಡೋಕೆ ಸಜ್ಜಾಗಿದ್ದಾರೆ. ಇಡೀ ದೇಶವೇ ನಿಬ್ಬೆರಗಾಗುವಂತಹ ಗ್ಲೋಬಲ್ ಪ್ರಾಜೆಕ್ಟ್ ಒಂದನ್ನ ಅನೌನ್ಸ್ ಮಾಡಲಿದ್ದಾರೆ ಆರ್ ಚಂದ್ರು.

ತನ್ನದೇ ವಿಭಿನ್ನ ಶೈಲಿಯ ಫಿಲ್ಮ್ ಮೇಕಿಂಗ್‌ನಿಂದ ಕನ್ನಡಿಗರ ಮನಸ್ಸು ಗೆದ್ದಿರೋ ಆರ್ ಚಂದ್ರು, ಹತ್ತು ಹಲವು ಪ್ರಯೋಗಗಳನ್ನ ಕೂಡ ಮಾಡಿದ್ದಾರೆ. ಆ ಆಗಸದ ಚಂದ್ರನ ಬೆಳದಿಂಗಳಂತೆ ಈ ಆರ್ ಚಂದ್ರು ಬತ್ತಳಿಕೆಯ ಸಿನಿಮಾಗಳ ಬೆಳಕು ಸದಾ ಬೆಳ್ಳಿತೆರೆ ಬೆಳಗುತ್ತಿರಲಿ ಅಂತ ಹಾರೈಸೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version