ಉದ್ಯಮಿ ಕಂ ನಿರ್ಮಾಪಕರಿಗೆ ನಟಿ ಕೃಷಿ ತಾಪಂಡ ಬಾಯ್‌ಫ್ರೆಂಡ್‌ನಿಂದ ಬ್ಲಾಕ್‌ಮೇಲ್..!

ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಕೃಷಿ ತಾಪಂಡ ಅವರ ಬಾಯ್‌ಫ್ರೆಂಡ್‌ ವೈಶಾಖ್ ಬಂಧನದ ಬಿಗ್ ಸುದ್ದಿ. ಉದ್ಯಮಿ ಅರವಿಂದ್ ರೆಡ್ಡಿ (AVR) ಅವರಿಗೆ ಬ್ಲ್ಯಾಕ್‌ಮೇಲ್ ಪತ್ರ ಕಳಿಸಿದ ಆರೋಪದ ಮೇಲೆ HAL ಪೊಲೀಸರು ವೈಶಾಖ್ ಅವರನ್ನು ಬಂಧಿಸಿದ್ದಾರೆ. ಇದು ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಸಂಚಲನ ಮೂಡಿಸಿದೆ.

ಬೆಂಗಳೂರಿನ HAL ಪೊಲೀಸ್ ಸ್ಟೇಷನ್‌ನಲ್ಲಿ ದಾಖಲಾದ ಪ್ರಕರಣದ ಪ್ರಕಾರ, ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ (AVR) ಅವರಿಗೆ ಜನವರಿ 24ರಂದು ಅನಾಮಧೇಯ ಬೆದರಿಕೆ ಪತ್ರ ಬಂದಿತ್ತು. ಈ ಪತ್ರವನ್ನು ಬ್ಲೂಡಾರ್ಟ್ ಕೊರಿಯರ್ ಮೂಲಕ ಕಳುಹಿಸಲಾಗಿತ್ತು. ಪತ್ರದಲ್ಲಿ ಅಡ್ರೆಸ್ ಅಥವಾ ಸಹಿ ಇಲ್ಲದೆ, ಒಬ್ಬ ಯುವತಿಗೆ ಸಂಬಂಧಿಸಿದ ವಿಷಯವನ್ನು ಬಗೆಹರಿಸಿಕೊಳ್ಳುವಂತೆ ಒತ್ತಾಯಿಸಿ, 6 ರಿಂದ 7 ಕೋಟಿ ರೂಪಾಯಿ ಹಣ ಕೊಡುವಂತೆ ಡಿಮ್ಯಾಂಡ್ ಮಾಡಲಾಗಿತ್ತು. ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆಯೂ ಇತ್ತು. ಹಣವನ್ನು ಜನವರಿ 25ರಂದು ನಿಗದಿತ ಸ್ಥಳಕ್ಕೆ ಕಳುಹಿಸಬೇಕೆಂದು ಸೂಚಿಸಲಾಗಿತ್ತು.

ಉದ್ಯಮಿ AVR ಅವರು ತಕ್ಷಣ HAL ಪೊಲೀಸ್ ಸ್ಟೇಷನ್‌ನಲ್ಲಿ ದೂರು ದಾಖಲಿಸಿದರು. ತನಿಖೆಯಲ್ಲಿ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ. ಬೆದರಿಕೆ ಪತ್ರ ಕಳುಹಿಸಿದ್ದು ವೈಶಾಖ್ ಎಂಬ ಯುವಕನೇ, ಈ ವೈಶಾಖ್ ಸ್ಯಾಂಡಲ್‌ವುಡ್ ನಟಿ ಕೃಷಿ ತಾಪಂಡ ಅವರ ಬಾಯ್‌ಫ್ರೆಂಡ್ ಎಂದು ಹೇಳಿಕೊಂಡಿದ್ದಾನೆ. ಹಲವು ಫೋಟೋಗಳಲ್ಲಿ ಕೃಷಿ ತಾಪಂಡ ಜೊತೆಗೆ ಕಾಣಿಸಿಕೊಂಡಿರುವ ವೈಶಾಖ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಏಕೆ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ವೈಶಾಖ್?

ಪ್ರಕರಣದ ತನಿಖೆಯಲ್ಲಿ ವೈಶಾಖ್ AVR ಮೇಲೆ ಸೇಡು ತೀರಿಸಿಕೊಳ್ಳಲು ಇಂತಹ ಸಂಚು ರೂಪಿಸಿದ್ದಾನೋ ಎಂಬ ಅನುಮಾನ ವ್ಯಕ್ತವಾಗಿದೆ. ಈ ಹಿಂದೆ ಕೃಷಿ ತಾಪಂಡ ಅವರು AVR ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು (ಕಿರುಕುಳ, ಸ್ಟಾಕಿಂಗ್ ಇತ್ಯಾದಿ). ಆ ಪ್ರಕರಣಕ್ಕೂ ಈಗಿನ ಬ್ಲ್ಯಾಕ್‌ಮೇಲ್ ಕೇಸ್‌ಗೂ ಸಂಬಂಧ ಇರಬಹುದು ಎಂಬ ಶಂಕೆಯಿದೆ. ವೈಶಾಖ್ ಮನೆಯಲ್ಲಿ ಕೃಷಿ ತಾಪಂಡ ಅವರ ಮೊಬೈಲ್ ಸಿಕ್ಕಿರುವುದರಿಂದ ಪೊಲೀಸರು ನಟಿಗೂ ನೋಟಿಸ್ ಜಾರಿ ಮಾಡಿದ್ದಾರೆ. ನಟಿ ಕೃಷಿ ತಾಪಂಡಗೆ ಈ ಬೆದರಿಕೆ ಪತ್ರದ ಬಗ್ಗೆ ಗೊತ್ತಿತ್ತಾ ಎಂಬುದನ್ನು ತನಿಖೆಯಲ್ಲಿ ಬಹಿರಂಗಪಡಿಸಲಾಗುತ್ತಿದೆ.

ಪೊಲೀಸರು ವೈಶಾಖ್ ಅವರನ್ನು ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ಪ್ರಕರಣದ ಸಂಪೂರ್ಣ ತನಿಖೆಯನ್ನು HAL ಪೊಲೀಸ್ ತಂಡ ನಡೆಸುತ್ತಿದೆ. ಈ ಬೆದರಿಕೆ ಪತ್ರದ ಹಿಂದೆ ಕೇವಲ ವೈಶಾಖ್ ಸಂಚು ರೂಪಿಸಿದರಾ? ಅಥವಾ ನಟಿ ಕೃಷಿ ತಾಪಂಡ ಅವರಿಗೂ ಇದರ ಬಗ್ಗೆ ಗೊತ್ತಿತ್ತಾ? ಎಂಬ ಪ್ರಶ್ನೆಗಳಿಗೆ ಉತ್ತರ ತನಿಖೆಯ ನಂತರವೇ ಸಿಗಲಿದೆ.

ಈ ಪ್ರಕರಣ ಸ್ಯಾಂಡಲ್‌ವುಡ್ ಜೊತೆಗೆ ಉದ್ಯಮ ವಲಯದಲ್ಲಿ ಸದ್ಯ ಭಾರಿ ಚರ್ಚೆಗೆ ಕಾರಣವಾಗಿದೆ.

Exit mobile version