ಬೆಂಗಳೂರು: ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ‘ಕೆಡಿ’ ಚಿತ್ರದ ‘ಸರ್ಸೆ ನಿನ್ನ ಸೆರಗ’ ಹಾಡು ಈಗ ರಾಷ್ಟ್ರಮಟ್ಟದ ವಿವಾದವಾಗಿ ಮಾರ್ಪಟ್ಟಿದೆ. ಅಶ್ಲೀಲ ಸಾಹಿತ್ಯದ ಆರೋಪದ ಮೇಲೆ ಕೇಂದ್ರ ಸರ್ಕಾರ ಈ ಹಾಡನ್ನು ನಿಷೇಧಿಸಿದ ಬೆನ್ನಲ್ಲೇ, ಹಾಡಿನಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್ ನಟಿ ನೋರಾ ಫತೇಹಿ ಈಗ ನಿರ್ದೇಶಕ ಜೋಗಿ ಪ್ರೇಮ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ನನ್ನ ಗೌರವದ ಪ್ರಶ್ನೆ ಎಂದು ಎಚ್ಚರಿಸಿದರೂ ನಿರ್ದೇಶಕರು ಕೇಳಲಿಲ್ಲ ಎಂದು ನೋರಾ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ನೋರಾ, ತಮಗಾದ ಮುಜುಗರದ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದಾರೆ. ನಾನು ಈ ಹಾಡನ್ನು ಮೂರು ವರ್ಷಗಳ ಹಿಂದೆ ಚಿತ್ರೀಕರಿಸಿದ್ದೆ. ಸಂಜಯ್ ದತ್ ಅವರಂತಹ ದಿಗ್ಗಜ ನಟರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಒಪ್ಪಿಕೊಂಡಿದ್ದೆ. ನನಗೆ ಕನ್ನಡ ಭಾಷೆ ಅರ್ಥವಾಗುವುದಿಲ್ಲ, ಹಾಗಾಗಿ ಸೆಟ್‌ನಲ್ಲಿ ಚಿತ್ರತಂಡದವರು ಹೇಳಿದ ಅನುವಾದವನ್ನೇ ನಂಬಿದ್ದೆ. ಆಗ ಅವರು ಹೇಳಿದ ಸಾಹಿತ್ಯದಲ್ಲಿ ಯಾವುದೇ ಅಶ್ಲೀಲತೆ ಇರಲಿಲ್ಲ. ಆದರೆ ಈಗ ನನ್ನ ಅನುಮತಿಯಿಲ್ಲದೆ ಹಿಂದಿಗೆ ಡಬ್ ಮಾಡುವಾಗ ಅತ್ಯಂತ ಕೀಳುಮಟ್ಟದ ಸಾಹಿತ್ಯ ಬಳಸಲಾಗಿದೆ ಎಂದು ನೋರಾ ಅಸಮಾಧಾನ ಹೊರಹಾಕಿದ್ದಾರೆ.
ಹಾಡಿನ ಬಿಡುಗಡೆ ಸಮಾರಂಭದಲ್ಲಿ ತಮಗಾದ ಕಹಿ ಅನುಭವವನ್ನು ಹಂಚಿಕೊಂಡ ಅವರು, ಕಾರ್ಯಕ್ರಮದಲ್ಲಿ ನನ್ನ ಅರಿವಿಗೆ ಬಾರದೆ ನನ್ನ ಅಸಹ್ಯಕರ ಫೋಟೋಗಳನ್ನು ಬಳಸಲಾಗಿತ್ತು. ಅಷ್ಟೇ ಅಲ್ಲದೆ, ನನ್ನ ಮತ್ತು ಸಂಜಯ್ ದತ್ ಅವರ ‘AI ಜನರೇಟೆಡ್’ ಚಿತ್ರಗಳನ್ನು ಬಳಸಿರುವುದು ನನಗೆ ತುಂಬಾ ಕಿರಿಕಿರಿ ಉಂಟುಮಾಡಿತು. ನಾನು ಮೊದಲಿನಿಂದಲೂ AI ಬಳಕೆಯ ವಿರುದ್ಧ ಇದ್ದೇನೆ. ಹಿಂದಿ ಹಾಡನ್ನು ಕೇಳಿದ ತಕ್ಷಣವೇ ಇದು ದೊಡ್ಡ ವಿವಾದವಾಗುತ್ತದೆ ಎಂದು ನಾನು ನಿರ್ದೇಶಕರಿಗೆ ಎಚ್ಚರಿಕೆ ನೀಡಿದ್ದೆ. ಆದರೆ ಅವರು ನನ್ನ ಮಾತಿಗೆ ಬೆಲೆ ಕೊಡಲಿಲ್ಲ ಎಂದು ನೋರಾ ದೂರಿದ್ದಾರೆ.
ಬಳಿಕ ನೋರಾ ಮಾತನಾಡುತ್ತಾ , ನಾನೇನು ಗಾಡ್‌ಫಾದರ್ ಇರುವ ‘ನೆಪೋ ಕಿಡ್’ ಅಲ್ಲ. ಚಿತ್ರರಂಗದಲ್ಲಿ ನಮಗೆ ಕೆಲವು ಬಾರಿ ನಿಯಂತ್ರಣ ಇರುವುದಿಲ್ಲ. ಕೆಲವು ಚಿತ್ರೋದ್ಯಮಗಳಲ್ಲಿ ಕಲಾವಿದರ ಅಭಿಪ್ರಾಯಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಇರುವುದಿಲ್ಲ ಎಂದು ಹೇಳುವ ಮೂಲಕ ಸ್ಯಾಂಡಲ್‌ವುಡ್ ಮತ್ತು ನಿರ್ದೇಶಕ ಪ್ರೇಮ್ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ವಿವಾದದ ಕಾರಣದಿಂದಲೇ ತಾವು ಚಿತ್ರದ ಪ್ರಚಾರದಿಂದ ದೂರ ಉಳಿದಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಹಾಡನ್ನು ನಿಷೇಧಿಸುವಂತೆ ಒತ್ತಾಯಿಸಿದ ಸಾರ್ವಜನಿಕರಿಗೆ ಧನ್ಯವಾದ ತಿಳಿಸಿರುವ ನೋರಾ, ಮಾಧ್ಯಮಗಳಿಗೆ ಒಂದು ವಿಶೇಷ ವಿನಂತಿ ಮಾಡಿದ್ದಾರೆ. ಇಂತಹ ವಿವಾದಗಳು ಬಂದಾಗ ಕೇವಲ ಕಲಾವಿದರ ಹೆಸರನ್ನು ಬಳಸಬೇಡಿ. ಇಂತಹ ಕಂಟೆಂಟ್ ಸೃಷ್ಟಿಸುವ ನಿರ್ದೇಶಕರು ಮತ್ತು ನಿರ್ಮಾಪಕರನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಿ. ಆಗ ಮಾತ್ರ ಅವರಿಗೆ ಜವಾಬ್ದಾರಿ ಬರುತ್ತದೆ ಎಂದು ಅವರು ಹೇಳಿದ್ದಾರೆ. ಸದ್ಯ ನೋರಾ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದು, ಜೋಗಿ ಪ್ರೇಮ್ ಈ ಬಗ್ಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಕುತೂಹಲ ಮೂಡಿದೆ.
