ಬೆಂಗಳೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ರಾಕ್ಷಸ ಖ್ಯಾತಿಯ ಡಾಲಿ ಧನಂಜಯ್ ಅವರ ಮನೆಯಲ್ಲಿ ಹಬ್ಬದ ವಾತಾವರಣವಿದೆ. ಕಳೆದ ವರ್ಷವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ, ಇದೀಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಿಹಿ ಸುದ್ದಿಯನ್ನು ಸ್ವತಃ ಧನಂಜಯ್ ಅವರೇ ಕಾರ್ಯಕ್ರಮವೊಂದರಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.
ವೇದಿಕೆಯಲ್ಲೇ ಸಂಭ್ರಮ ಹಂಚಿಕೊಂಡ ಡಾಲಿ
ಇಂದು (ಜ.24) ಪ್ರಸಾರವಾಗುವ ಉದಯ ಕನ್ನಡಿಗ 2025 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಧನಂಜಯ್, ತಮ್ಮ ಈ ಸಂತಸವನ್ನು ಬಹಳ ಅಚ್ಚುಕಟ್ಟಾಗಿ ಹಂಚಿಕೊಂಡಿದ್ದಾರೆ. ವೇದಿಕೆಯ ಮೇಲೆ ಮಾತನಾಡುತ್ತಾ, ತಮ್ಮ ಕೈಲಿದ್ದ ಎರಡು ಗುಲಾಬಿ ಹೂವುಗಳನ್ನು ತೋರಿಸಿ ಮಾರ್ಮಿಕವಾಗಿ ಮಾತನಾಡಿದ ಅವರು, ಈ ಒಂದು ಗುಲಾಬಿ ನನ್ನ ಹೆಂಡತಿಗೆ, ಮತ್ತೊಂದು ಗುಲಾಬಿ ನನ್ನನ್ನು ‘ಅಪ್ಪ’ ಅಂತ ಕರೆಯಲು ಬರುತ್ತಿರುವ ಪುಟ್ಟ ಜೀವಕ್ಕೆ ಎಂದು ಹೇಳುವ ಮೂಲಕ ತಾವು ತಂದೆಯಾಗುತ್ತಿರುವ ವಿಚಾರವನ್ನು ಪರೋಕ್ಷವಾಗಿ ಖಚಿತಪಡಿಸಿದರು.
ಧನಂಜಯ್ ಅವರ ಈ ಮಾತುಗಳು ಕೇಳುತ್ತಿದ್ದಂತೆಯೇ ಸಭಾಂಗಣದಲ್ಲಿ ಚಪ್ಪಾಳೆಗಳ ಸುರಿಮಳೆಯಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು, ಅಭಿಮಾನಿಗಳು ನೆಚ್ಚಿನ ನಟನಿಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಡಾಲಿ ಧನಂಜಯ್ ಮತ್ತು ಡಾ. ಧನ್ಯತಾ ಅವರು ಕಳೆದ ವರ್ಷ ಫೆಬ್ರವರಿ 16, 2025 ರಂದು ಮೈಸೂರಿನಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ನಡೆದ ಈ ಮದುವೆಗೆ ಚಿತ್ರರಂಗದ ಗಣ್ಯರು ಹಾಗೂ ಸಾವಿರಾರು ಅಭಿಮಾನಿಗಳು ಸಾಕ್ಷಿಯಾಗಿದ್ದರು. ಧನ್ಯತಾ ಅವರು ವೃತ್ತಿಯಲ್ಲಿ ವೈದ್ಯೆಯಾಗಿದ್ದಾರೆ. ವಿವಾಹವಾದ ಕೇವಲ ಒಂದು ವರ್ಷದ ಒಳಗೇ ಈ ಜೋಡಿ ತಮ್ಮ ಮೊದಲ ಮಗುವನ್ನು ಬರಮಾಡಿಕೊಳ್ಳಲು ಸಿದ್ಧವಾಗುತ್ತಿರುವುದು ಕುಟುಂಬದಲ್ಲಿ ಸಡಗರ ತಂದಿದೆ.
ಸಿನಿಮಾ ರಂಗದಲ್ಲಿ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡುತ್ತಿರುವ ಧನಂಜಯ್, ಈಗ ವೈಯಕ್ತಿಕ ಜೀವನದ ಈ ಹೊಸ ಜವಾಬ್ದಾರಿಯನ್ನು ಹೊರಲು ಉತ್ಸುಕರಾಗಿದ್ದಾರೆ. ನಟ ರಾಕ್ಷಸ ಈಗ ರಿಯಲ್ ಲೈಫ್ ಅಪ್ಪ ಆಗುತ್ತಿರುವ ಕ್ಷಣಕ್ಕಾಗಿ ಕನ್ನಡಿಗರು ಕಾತರದಿಂದ ಕಾಯುತ್ತಿದ್ದಾರೆ.
ಹಲಗಲಿ ಬೇಡರ ನಾಯಕನಾಗಿ ಡಾಲಿ ಧನಂಜಯ್, ‘ಹಲಗಲಿ’ ಟೀಸರ್ ಬಿಡುಗಡೆ!
ಕರ್ನಾಟಕದ ಮೊದಲ ಸಶಸ್ತ್ರ ಸ್ವಾತಂತ್ರ್ಯ ಹೋರಾಟವಾದ ಹಲಗಲಿ ಬೇಡರ ಕತೆ ಇದೀಗ ಬೆಳ್ಳಿತೆರೆಗೆ ಬರುತ್ತಿದೆ. ಜನಪ್ರಿಯ ನಟ ಡಾಲಿ ಧನಂಜಯ್ ಈ ಚಿತ್ರದಲ್ಲಿ ಬೇಡರ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 79ನೇ ಸ್ವಾತಂತ್ರ್ಯ ದಿನಾಚರಣೆಯ (ಆಗಸ್ಟ್ 15) ಸಂದರ್ಭದಲ್ಲಿ ‘ಹಲಗಲಿ’ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದೆ, ಇದು ಭಾರೀ ಗಮನ ಸೆಳೆದಿದೆ.
ದುಹಾರಾ ಮೂವೀಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾದ ಈ ಟೀಸರ್, ಹಲಗಲಿ ಬೇಡರ ಸಮುದಾಯದ ಧೀರ ಹೋರಾಟವನ್ನು ರೋಚಕವಾಗಿ ಚಿತ್ರಿಸುತ್ತದೆ. ಟೀಸರ್‌ನಲ್ಲಿ ಬುಡಕಟ್ಟು ಸಮುದಾಯದವರು ಕೋಪಗೊಂಡು ಭರ್ಜಿ, ಕೊಡಲಿ, ಮಚ್ಚು, ಬಿಲ್ಲು-ಬಾಣಗಳನ್ನು ಹಿಡಿದುಕೊಂಡು ಬ್ರಿಟೀಷರ ಆಡಳಿತ ಭವನದ ಕಡೆಗೆ ದಾಳಿ ಮಾಡುವ ದೃಶ್ಯ ಕಾಣಿಸಿಕೊಳ್ಳುತ್ತದೆ. ನಾಯಕ ಜಡಗಣ (ಡಾಲಿ ಧನಂಜಯ್) ಭರ್ಜಿಯನ್ನು ಎಸೆದಾಗ ಬ್ರಿಟೀಷರ ಬಾವುಟ ತುಂಡಾಗಿ ಕೆಳಗೆ ಬೀಳುವ ದೃಶ್ಯ ಸಿನಿಮೀಯ ರೀತಿಯಲ್ಲಿ ರೋಮಾಂಚಕವಾಗಿದೆ. ಈ ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ.
1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರ ಬ್ರಿಟೀಷರು ಜಾರಿಗೊಳಿಸಿದ ನಿಶಸ್ತ್ರೀಕರಣ ಕಾಯ್ದೆಗೆ ವಿರೋಧವಾಗಿ, ಆಯುಧಗಳನ್ನು ಜೀವನ ಮತ್ತು ದೇವರಂತೆ ಪೂಜಿಸುತ್ತಿದ್ದ ಹಲಗಲಿ ಬೇಡರು ದಂಗೆ ಎದ್ದರು. ಈ ಐತಿಹಾಸಿಕ ಹೋರಾಟವನ್ನು ‘ಹಲಗಲಿ’ ಚಿತ್ರದ ಮೂಲಕ ಚಿತ್ರಿಸಲಾಗುತ್ತಿದೆ. ಡಾಲಿ ಧನಂಜಯ್ ಜಡಗಣನ ಪಾತ್ರದಲ್ಲಿ ತಮ್ಮ ಹೊಸ ಲುಕ್‌ನೊಂದಿಗೆ ಗಮನ ಸೆಳೆದಿದ್ದಾರೆ.
‘ಹಲಗಲಿ’ ಚಿತ್ರವನ್ನು ಸುಕೇಶ್ ನಾಯಕ್ ನಿರ್ದೇಶಿಸುತ್ತಿದ್ದಾರೆ. ಕಲ್ಯಾಣ್ ಚಕ್ರವರ್ತಿ ಡಿ. ಮತ್ತು ಯರಲಗಡ್ಡ ಲಕ್ಷ್ಮಿ ಶ್ರೀನಿವಾಸ್ ನಿರ್ಮಾಪಕರಾಗಿದ್ದಾರೆ. ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದು, ಶಿವೇಂದರ್ ಸಾಯಿ ಶ್ರೀರಾಮ್ ಛಾಯಾಗ್ರಹಣ ಮತ್ತು ರಾಮಾಂಜನೇಯಲು ಕಲಾ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಚಿತ್ರದಲ್ಲಿ ಡಾಲಿ ಧನಂಜಯ್ ಜೊತೆಗೆ ಸಪ್ತಮಿ ಗೌಡ, ಬಿ. ಸುರೇಶ್, ಶರತ್ ಲೋಹಿತಾಶ್ವ, ಬಿರಾದರ್, ವೀಣಾ ಸುಂದರ್ ಮತ್ತು ಇತರರು ನಟಿಸಿದ್ದಾರೆ.





