ಕನ್ನಡ ಚಿತ್ರರಂಗದ ಜನಪ್ರಿಯ ನಟ ಅಜಯ್ ರಾವ್ ಅವರ ವೈಯಕ್ತಿಕ ಜೀವನದಲ್ಲಿ ಬಿರುಕು ಮೂಡಿದೆ. ಅವರ ಪತ್ನಿ ಸಪ್ನಾ ರಾವ್ ಅವರು ಡಿವೋರ್ಸ್ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಅಜಯ್ ರಾವ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆದರೆ ವಿವರಗಳನ್ನು ಖಾಸಗಿಯಾಗಿ ಉಳಿಸಿಕೊಳ್ಳಲು ಮನವಿ ಮಾಡಿದ್ದಾರೆ.
ಅಜಯ್ ರಾವ್ ಅವರ ಪ್ರತಿಕ್ರಿಯೆಯು ಭಾವುಕವಾಗಿದ್ದು, ಅವರು ಹೀಗೆ ಬರೆದಿದ್ದಾರೆ. “ಎಲ್ಲಾ ಅಭಿಮಾನಿಗಳಿಗೆ, ಮಾಧ್ಯಮಗಳಿಗೆ, ಸ್ನೇಹಿತರಿಗೆ ಮತ್ತು ಹಿತೈಷಿಗಳಿಗೆ, ಈ ಸೂಕ್ಷ್ಮ ಸಮಯದಲ್ಲಿ ನಮ್ಮ ಕುಟುಂಬದ ಖಾಸಗಿತನವನ್ನು ಗೌರವಿಸುವಂತೆ ಹಾಗೂ ವೈಯಕ್ತಿಕ ವಿಷಯಗಳಿಗೆ ಸಂಬಂಧಿಸಿದ ಯಾವುದೇ ಸುದ್ದಿಯನ್ನು ಹಂಚಿಕೊಳ್ಳುವುದನ್ನು ಅಥವಾ ಹರಡುವುದನ್ನು ದೂರವಿಡುವಂತೆ ತಮ್ಮನ್ನು ವಿನಮ್ರವಾಗಿ ವಿನಂತಿಸುತ್ತೇನೆ. ಪ್ರತಿಯೊಂದು ಕುಟುಂಬವೂ ಸವಾಲುಗಳನ್ನು ಎದುರಿಸುತ್ತದೆ, ಅವುಗಳನ್ನು ಖಾಸಗಿಯಾಗಿ ಉಳಿಯುವಂತೆ ಸಹಕರಿಸಿ ಎಂದು ಎಲ್ಲರಲ್ಲಿ ಹೃತ್ಪೂರ್ವಕ ವಿನಂತಿ. ನಿಮ್ಮ ಮನವೊಲಿಕೆ, ಬೆಂಬಲ ಮತ್ತು ವಿವೇಕ ನಮಗೆ ಅತ್ಯಂತ ಮುಖ್ಯ.” ಈ ಪೋಸ್ಟ್ ಮೂಲಕ ಅವರು ತಮ್ಮ ಕುಟುಂಬದ ಸವಾಲುಗಳನ್ನು ಒಪ್ಪಿಕೊಂಡಿದ್ದಾರೆ. ಆದರೆ ಅದನ್ನು ಸಾರ್ವಜನಿಕ ಚರ್ಚೆಯಾಗಿ ಮಾಡದಂತೆ ಕೋರಿದ್ದಾರೆ. ಇದು ಅಭಿಮಾನಿಗಳಿಗೆ ಆಘಾತ ನೀಡಿದ್ದು, ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಈ ವಿಷಯದ ಬಗ್ಗೆ ಮೊದಲು ಮಾಧ್ಯಮಗಳು ಅಜಯ್ ರಾವ್ ಅವರನ್ನು ಸಂಪರ್ಕಿಸಿದಾಗ, ಅವರು “ನನಗೆ ಗೊತ್ತಿಲ್ಲ. ಪತ್ನಿ ಹತ್ತಿರ ಮಾತನಾಡ್ತೀನಿ, ಆಮೇಲೆ ಹೇಳ್ತೀನಿ” ಎಂದು ಹೇಳಿದ್ದರು. ಆದರೆ ಅದಾದ ಬಳಿಕ ಸಪ್ನಾ ಅವರ ಫೋನ್ ಸ್ವಿಚ್ ಆಫ್ ಆಗಿತ್ತು, ಮತ್ತು ಅಜಯ್ ಕೂಡ ತಮ್ಮ ಫೋನ್ ಅನ್ನು ಆಫ್ ಮಾಡಿಕೊಂಡಿದ್ದರು. ಇದು ಸುದ್ದಿಯನ್ನು ಇನ್ನಷ್ಟು ರಹಸ್ಯಮಯಗೊಳಿಸಿತ್ತು. ಕೊನೆಗೆ ಸೋಶಿಯಲ್ ಮೀಡಿಯಾ ಮೂಲಕ ಅಜಯ್ ಸ್ಪಷ್ಟನೆ ನೀಡಿದ್ದು, ಆದರೆ ಡಿವೋರ್ಸ್ ಬಗ್ಗೆ ನೇರವಾಗಿ ಉಲ್ಲೇಖಿಸಿಲ್ಲ.
ಅಜಯ್ ರಾವ್ ಮತ್ತು ಸಪ್ನಾ ಅವರ ದಾಂಪತ್ಯವು ಪ್ರೀತಿಯ ಮದುವೆಯಾಗಿತ್ತು. 2014ರಲ್ಲಿ ಅವರು ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರ ನಡುವೆ ಆರು ವರ್ಷದ ಮುದ್ದಾದ ಮಗಳಿದ್ದಾಳೆ. ಕಳೆದ ವರ್ಷವಷ್ಟೇ ಅವರು ಹೊಸ ಮನೆಗೆ ಕಾಲಿಟ್ಟಿದ್ದರು. ಆ ಸಂದರ್ಭದಲ್ಲಿ ಸ್ಯಾಂಡಲ್‌ವುಡ್‌ನ ಹಲವು ಸೆಲೆಬ್ರಿಟಿಗಳು ಆಗಮಿಸಿ ಶುಭ ಹಾರೈಸಿದ್ದರು. ಆದರೆ ಈಗ ಸ್ಥಿತಿ ಬದಲಾಗಿದೆ. ಸಪ್ನಾ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹೆಸರಿನ ಮುಂದಿದ್ದ ಅಜಯ್ ರಾವ್ ಹೆಸರನ್ನು ತೆಗೆದು ಹಾಕಿದ್ದಾರೆ. ಸಪ್ನಾ ಎಚ್ ಎನ್ ಎಂದು ಬದಲಾಯಿಸಿದ್ದಾರೆ. ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿಕೊಂಡಿದ್ದಾರೆ. ಇದು ಅವರ ನಡುವಿನ ಬಿರುಕನ್ನು ಸ್ಪಷ್ಟಪಡಿಸಿದೆ.