ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ತೂಗುದೀಪ ಅವರು ಮತ್ತೊಮ್ಮೆ ಜೈಲು ಸೇರಿದ್ದಾರೆ. ಈ ಬಾರಿ ಅವರ ಜೈಲು ವಾಸ ಸಾಕಷ್ಟು ಸುದೀರ್ಘವಾಗಿ ಕಾಣುತ್ತಿದೆ. ದರ್ಶನ್ ಅಲ್ಲದೆ, ಅವರ ಗೆಳತಿ ಪವಿತ್ರಾ ಗೌಡ ಹಾಗೂ ಇತರ ಕೆಲವು ಆರೋಪಿಗಳ ಜಾಮೀನು ರದ್ದುಗೊಂಡಿದ್ದು, ಎಲ್ಲರೂ ಪರಪ್ಪನ ಅಗ್ರಹಾರ ಕೇಂದ್ರೀಯ ಕಾರಾಗೃಹದಲ್ಲಿ ಬಂಧಿತರಾಗಿದ್ದಾರೆ.
ಗುರುವಾರ ರಾತ್ರಿ ದರ್ಶನ್ ಜೈಲು ಸೇರಿದ ನಂತರ, ಕೇವಲ ಎರಡೇ ದಿನಗಳಲ್ಲಿ ಅವರು ತಮ್ಮ ಅಭಿಮಾನಿಗಳಿಗೆ ಒಂದು ಭಾವುಕ ಸಂದೇಶವನ್ನು ಕಳುಹಿಸಿದ್ದಾರೆ. ಈ ಸಂದೇಶವನ್ನು ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ.
ವಿಜಯಲಕ್ಷ್ಮಿ ಅವರು ತಮ್ಮ ಪೋಸ್ಟ್‌ನಲ್ಲಿ, “ಎಲ್ಲರಿಗೂ ನಮಸ್ಕಾರ, ನಾನು ವಿಜಯಲಕ್ಷ್ಮಿ ದರ್ಶನ್. ನಿಮ್ಮ ಪ್ರೀತಿಯ ದರ್ಶನ್ ರವರು ನಿಮಗೆ ಕಳಿಸಿರುವ ಸಂದೇಶ” ಎಂದು ಬರೆದು, ದರ್ಶನ್ ಅವರ ಮಾತುಗಳನ್ನು ಪ್ರಕಟಿಸಿದ್ದಾರೆ. ದರ್ಶನ್ ಅವರ ಸಂದೇಶ ಹೀಗಿದೆ.
“ಕನ್ನಡ ಕಲಾಭಿಮಾನಿಗಳಿಗೆ ಹಾಗೂ ನನ್ನ ಸೆಲೆಬ್ರಿಟಿಗಳಿಗೆ ಈ ನಿಮ್ಮ ಪ್ರೀತಿಯ ದಾಸನ ಶಿರ ಸಾಷ್ಟಾಂಗ ನಮಸ್ಕಾರಗಳು. ನನ್ನ ಸುಖದಲ್ಲಿ ಭಾಗಿಯಾಗಿ, ಕಷ್ಟದಲ್ಲಿ ಬೆನ್ನೆಲುಬಾಗಿ ನಿಂತ ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಜೀವನ ಪರ್ಯಂತ ಆಭಾರಿ. ನಾನು ಎಲ್ಲೆ ಇದ್ದರೂ ಹೇಗೆ ಇದ್ದರೂ ನಿಮ್ಮಗಳ ಶ್ರೇಯೋಭಿಲಾಷೆಯನ್ನೇ ಬಯಸುತ್ತೇನೆ. ಪ್ರಸಕ್ತ ವಿದ್ಯಮಾನ ಏನೇ ಇದ್ದರೂ, ನನ್ನ ನಂಬಿ ಕನಸು ಕಂಡಿರುವ ನಿರ್ದೇಶಕರ ಹಾಗೂ ನನ್ನ ಮೇಲೆ ಕೊಟ್ಯಂತರ ಹಣ ಹೂಡಿರುವ ನಿರ್ಮಾಪಕರ ಬೆಂಬಲವಾಗಿ ನಿಲ್ಲಬೇಕಾಗಿದ್ದು ನನ್ನ ಆದ್ಯ ಕರ್ತವ್ಯ. ಹಾಗಾಗಿ ನನ್ನ ‘ದಿ ಡೆವಿಲ್’ ಚಿತ್ರದ ಎಲ್ಲಾ ಕೆಲಸ ಕಾರ್ಯಗಳು ಯಾವುದೇ ಅಡೆತಡೆ ಇಲ್ಲದೆ ಸಾಗಲಿ ಎಂಬುದು ನನ್ನ ಆಶಯ. ಹಾಗಾಗಿ ಅದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ ಎಂದು ಈ ಮೂಲಕ ತಿಳಿಸುತ್ತೇನೆ. ಹಾಗೂ ಇದಕ್ಕೆ ನನ್ನ ಸೆಲೆಬ್ರಿಟಿಗಳ ಸಹಮತವಿದೆಯೆಂದು ಧೃಡವಾಗಿ ನಂಬಿದ್ದೇನೆ. ಸಿನಿಮಾ ಒಂದು ಮನರಂಜನೆಯ ಮಾಧ್ಯಮ ಅದನ್ನು ಕೇವಲ ಮನರಂಜನೆಯ ದೃಷ್ಟಿಯಿಂದ ಮಾತ್ರ ನೋಡಬೇಕು. ನಿಮ್ಮ ಪ್ರೀತಿಯ ದಾಸ.”
ಈ ಸಂದೇಶದ ಮೂಲಕ ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ಮಾತ್ರವಲ್ಲದೆ, ಚಿತ್ರರಂಗದ ಸಹೋದ್ಯೋಗಿಗಳಿಗೂ ಒಂದು ಸ್ಪಷ್ಟ ಸಂದೇಶ ನೀಡಿದ್ದಾರೆ. ಅವರ ಮುಂಬರುವ ಚಿತ್ರ ‘ದಿ ಡೆವಿಲ್’ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಲಿದ್ದು, ಈ ಸಮಯದಲ್ಲಿ ದರ್ಶನ್ ಜೈಲಿನಲ್ಲಿಯೇ ಇರಬಹುದು ಎಂಬ ಸಾಧ್ಯತೆ ಹೆಚ್ಚಿದೆ. ಆದರೆ, ನಿರ್ಮಾಪಕರು ಹಾಗೂ ನಿರ್ದೇಶಕರು ವರ್ಷಗಳಿಂದಲೂ ಚಿತ್ರಕ್ಕಾಗಿ ಕಾಯುತ್ತಿದ್ದು, ಬಂಡವಾಳ ಹೂಡಿಕೆ ಮಾಡಿದ್ದರಿಂದ, ನಿಗದಿತ ದಿನಾಂಕದಂತೆ ಬಿಡುಗಡೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ದರ್ಶನ್ ಅವರು ತಮ್ಮ ಸಂದೇಶದಲ್ಲಿ ಚಿತ್ರದ ಕೆಲಸಗಳು ಅಡೆತಡೆಯಿಲ್ಲದೆ ಮುಂದುವರಿಯಲಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಅಭಿಮಾನಿಗಳಿಗೆ ಸಿನಿಮಾವನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
ಇದಲ್ಲದೆ, ದರ್ಶನ್ ಅವರ ಚಿತ್ರರಂಗದ ಇತಿಹಾಸವನ್ನು ನೆನಪಿಸಿಕೊಳ್ಳುವುದು ಸೂಕ್ತ. ಹಿಂದೆಯೂ ಒಮ್ಮೆ ದರ್ಶನ್ ಜೈಲು ಸೇರಿದ್ದ ಸಂದರ್ಭದಲ್ಲಿ ಅವರ ನಟನೆಯ ‘ಸಾರಥಿ’ ಚಿತ್ರ ಬಿಡುಗಡೆಯಾಗಿತ್ತು. ಆ ಸಮಯದಲ್ಲಿ ಅವರು ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದರು. ಬಂಧನದ ಮರುದಿನವೇ ಚಿತ್ರ ಬಿಡುಗಡೆಯಾಗಿ, ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಅಭಿಮಾನಿಗಳ ಬೆಂಬಲದಿಂದಾಗಿ ಚಿತ್ರ ಯಶಸ್ವಿಯಾಗಿತ್ತು. ಇದೀಗ ‘ಡೆವಿಲ್’ ಚಿತ್ರಕ್ಕೂ ಅಂತಹದ್ದೇ ಬೆಂಬಲ ಬೇಕು ಎಂಬುದು ದರ್ಶನ್ ಅವರ ಆಶಯವಾಗಿದೆ.