ಬೆಂಗಳೂರು, ಅಕ್ಟೋಬರ್ 29: ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಇತ್ತೀಚೆಗೆ ತೆಲುಗು ಚಿತ್ರರಂಗದಲ್ಲಿ ಅವಕಾಶಗಳ ಕೊರತೆಯ ಬಗ್ಗೆ ಮಾತನಾಡಿದ್ದರು. ಕೆಲ ತಿಂಗಳ ಹಿಂದಿನವರೆಗೂ ಅವರ ಕೈಯಲ್ಲಿ ಒಂದೇ ಒಂದು ಸಿನಿಮಾ ಯೋಜನೆ ಇರಲಿಲ್ಲ. ಆದರೆ, ಈಗ ಸಮಂತಾ ತಾವೇ ನಿರ್ಮಾಪಕಿಯಾಗಿ ‘ಮಾ ಇಂಟಿ ಬಂಗಾರಂ’ ಎಂಬ ತೆಲುಗು ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಈ ಸಿನಿಮಾದ ಮುಹೂರ್ತ ಇತ್ತೀಚೆಗಷ್ಟೇ ನೆರವೇರಿದೆ. ವಿಶೇಷವೆಂದರೆ, ಈ ಚಿತ್ರದಲ್ಲಿ ಸಮಂತಾ ಜೊತೆಗೆ ಇಬ್ಬರು ಕನ್ನಡ ನಟರಾದ ದಿಗಂತ್ ಮತ್ತು ಗುಲ್ಷನ್ ದೇವಯ್ಯ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
‘ಮಾ ಇಂಟಿ ಬಂಗಾರಂ’ ಸಿನಿಮಾದಲ್ಲಿ ಕನ್ನಡ ಚಿತ್ರರಂಗದ ‘ದೂದ್‌ಪೇಡ’ ಖ್ಯಾತಿಯ ದಿಗಂತ್ ನಟಿಸುತ್ತಿದ್ದಾರೆ. ದಿಗಂತ್‌ಗೆ ಇದು ಎರಡನೇ ತೆಲುಗು ಸಿನಿಮಾವಾಗಿದೆ. ಈ ಹಿಂದೆ ‘ಮುಂಗಾರು ಮಳೆ’ ಚಿತ್ರದ ತೆಲುಗು ರೀಮೇಕ್ ‘ವಾನ’ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಒಂದು ದಶಕದ ಹಿಂದೆಯೇ ದಿಗಂತ್ ತೆಲುಗು ಚಿತ್ರರಂಗಕ್ಕೆ ಕಾಲಿಡಲು ಮುಂದಾಗಿದ್ದರು. ವಿಜಯ್ ದೇವರಕೊಂಡ ಜೊತೆಗೆ ಬೈಕರ್‌ಗಳ ಕಥೆಯ ಒಂದು ಸಿನಿಮಾಕ್ಕೆ ಸಹಿ ಹಾಕಿದ್ದರು. ಚೆನ್ನೈನಲ್ಲಿ ಈ ಚಿತ್ರಕ್ಕಾಗಿ ತರಬೇತಿಯನ್ನೂ ಪಡೆದಿದ್ದರು. ಆದರೆ, ಆ ಯೋಜನೆ ಕೈಗೂಡಲಿಲ್ಲ. ಈಗ, ‘ಮಾ ಇಂಟಿ ಬಂಗಾರಂ’ ಮೂಲಕ ದಿಗಂತ್ ತೆಲುಗು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಚಿತ್ರದಲ್ಲಿ ಮತ್ತೊಬ್ಬ ಕನ್ನಡಿಗ ನಟ ಗುಲ್ಷನ್ ದೇವಯ್ಯ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್‌ನಲ್ಲಿ ‘ಗೊಲಿಯೋಂ ಕಿ ರಾಸ್‌ಲೀಲಾ ರಾಮ್-ಲೀಲಾ’, ‘ಶಿಕಾರಿ’ ಮತ್ತು ‘ಮರ್ದಾನಿ’ನಂತಹ ಚಿತ್ರಗಳಲ್ಲಿ ಹಾಗೂ ವಿವಿಧ ವೆಬ್ ಸರಣಿಗಳಲ್ಲಿ ಗಮನಾರ್ಹ ಅಭಿನಯ ನೀಡಿರುವ ಗುಲ್ಷನ್, ಇತ್ತೀಚೆಗೆ ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ಕುಲಶೇಖರನ ಪಾತ್ರದ ಮೂಲಕ ಮಿಂಚಿದ್ದಾರೆ. ಈಗ ‘ಮಾ ಇಂಟಿ ಬಂಗಾರಂ’ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
‘ಮಾ ಇಂಟಿ ಬಂಗಾರಂ’ ಚಿತ್ರವನ್ನು ಖ್ಯಾತ ನಿರ್ದೇಶಕಿ ನಂದಿನಿ ರೆಡ್ಡಿ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಸಮಂತಾ ನಟಿಸಿದ್ದ ‘ಓಹ್ ಬೇಬಿ’ ಚಿತ್ರವನ್ನೂ ಇವರೇ ನಿರ್ದೇಶಿಸಿದ್ದರು. ನಂದಿನಿ ರೆಡ್ಡಿ ಮತ್ತು ಸಮಂತಾ ಒಳ್ಳೆಯ ಗೆಳೆಯರಾಗಿದ್ದು, ಈ ಸಿನಿಮಾಕ್ಕೆ ಸಮಂತಾ ಸ್ವತಃ ಬಂಡವಾಳ ಹೂಡಿದ್ದಾರೆ. ಚಿತ್ರದ ಪೋಸ್ಟರ್ ಕೆಲವು ತಿಂಗಳುಗಳ ಹಿಂದೆ ಬಿಡುಗಡೆಯಾಗಿತ್ತು. ಪೋಸ್ಟರ್‌ನಲ್ಲಿ ಸೀರೆಯುಟ್ಟ ಸಮಂತಾ ಕೈಯಲ್ಲಿ ಬಂದೂಕು ಹಿಡಿದು ರೆಬಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು.
ನಿರ್ಮಾಪಕಿಯಾಗಿ ಸಮಂತಾಗೆ ಇದು ಎರಡನೇ ಚಿತ್ರವಾಗಿದೆ. ಈ ಮೊದಲು ‘ಶುಭಂ’ ಎಂಬ ಕಡಿಮೆ ಬಜೆಟ್‌ನ ಚಿತ್ರವನ್ನು ನಿರ್ಮಿಸಿದ್ದರು, ಆದರೆ ಆ ಚಿತ್ರವು ಸಾಧಾರಣ ಯಶಸ್ಸನ್ನು ಮಾತ್ರ ಗಳಿಸಿತ್ತು. ಈಗ ‘ಮಾ ಇಂಟಿ ಬಂಗಾರಂ’ಗೆ ದೊಡ್ಡ ಬಂಡವಾಳವನ್ನು ಹೂಡಿಕೆ ಮಾಡಿ, ಗುಣಮಟ್ಟದ ಸಿನಿಮಾವನ್ನು ಒಡ್ಡಲು ಸಮಂತಾ ಸಿದ್ಧರಾಗಿದ್ದಾರೆ. ನಮ್ಮ ನಿರ್ಮಾಣ ಸಂಸ್ಥೆಯ ಗುರಿಯೇ ಒಳ್ಳೆಯ ಕಥೆಯಿರುವ ಸಿನಿಮಾಗಳನ್ನು ಜನರಿಗೆ ಒಡ್ಡುವುದು ಎಂದು ಸಮಂತಾ ಹೇಳಿದ್ದಾರೆ. ಈ ಯೋಜನೆಯಲ್ಲಿ ರಾಜ್ ನಿಧಿಮೋರು ಕೂಡ ಅವರೊಂದಿಗೆ ಕೈ ಜೋಡಿಸಿದ್ದಾರೆ.





